ಬೆಂಗಳೂರು: NWKRTC ವ್ಯಾಪ್ತಿಯ ಘಟಕ/ ವಿಭಾಗಗಳು, ಕಾರ್ಯಾಗಾರ ಮತ್ತು ಬಸ್ ನಿಲ್ದಾಣಗಳಲ್ಲಿ 1000 ಸಿಸಿಟಿವಿ ಅಳವಡಿಕೆ ಮಾಡಿರುವ ರಾಜ್ಯದ ಮೊದಲ ರಸ್ತೆ ಸಾರಿಗೆ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಮೂಲಕ ಸಾರಿಗೆ ಬಸ್ ಪ್ರಯಾಣಿಕರ ಸುರಕ್ಷತೆಗೆ ಸಚಿವ ರಾಮಲಿಂಗಾರೆಡ್ಡಿ ಮಹತ್ವದ ಕ್ರಮ ಕೈಗೊಂಡಿದ್ದಾರೆ.
ಈ ಕುರಿತಂತೆ ಮಾಹಿತಿ ಹಂಚಿಕೊಂಡಿರುವಂತ ಅವರು, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯಾಪ್ತಿಯಲ್ಲಿ ಪ್ರಯಾಣಿಕರ, ವಿಶೇಷವಾಗಿ ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಗಾಗಿ ಸುಮಾರು 141 ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ ಎಂದಿದ್ದಾರೆ.
ಧಾರವಾಡ, ಬೆಳಗಾವಿ, ಹಾವೇರಿ, ಗದಗ, ಬಾಗಲಕೋಟೆ ಹಾಗೂ ಉತ್ತರ ಕನ್ನಡ ಸೇರಿದಂತೆ ಆರು ಜಿಲ್ಲೆಗಳು ಮತ್ತು ಒಂಬತ್ತು ವಿಭಾಗೀಯ ಕೇಂದ್ರಗಳನ್ನು ಒಳಗೊಂಡಿದೆ. ಸಾವಿರಾರು ಪ್ರಯಾಣಿಕರು ಪ್ರತಿದಿನ ಸಾರಿಗೆ ಸೇವೆಯನ್ನು ಬಳಸುತ್ತಿದ್ದಾರೆ. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣವನ್ನು ಸರ್ಕಾರ ಒದಗಿಸಿದ ನಂತರ ಮಹಿಳಾ ಪ್ರಯಾಣಿಕರ ಸಂಖ್ಯೆ ಸಹಜವಾಗಿ ಹೆಚ್ಚಾಗಿದೆ.ಇದಲ್ಲದೆ, ಕೆಲವು ಬಸ್ ನಿಲ್ದಾಣಗಳಲ್ಲಿ ಕಳ್ಳತನ, ಮೊಬೈಲ್ ಕಳವು, ಸರಕು ನಾಪತ್ತೆ ಕುರಿತು ದೂರುಗಳು ದಾಖಲಾಗಿದ್ದವು. ಈ ಹಿನ್ನೆಲೆಯಲ್ಲಿ ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಗಾಗಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವ ಪ್ರಕ್ರಿಯೆಗೆ ವೇಗ ನೀಡಲಾಯಿತು ಎಂದು ತಿಳಿಸಿದ್ದಾರೆ.
ಎಲ್ಲಾ ರೀತಿಯ ಅಹಿತಕರ ಚಟುವಟಿಕೆಗಳ ಬಗ್ಗೆ ನಿಗಾವಹಿಸಲು, ಎನ್‍ಡಬ್ಲ್ಯೂಕೆಆರ್‍ಟಿಸಿ ವ್ಯಾಪ್ತಿಯ ಆರು ಜಿಲ್ಲೆಗಳು ಹಾಗೂ ಒಂಬತ್ತು ವಿಭಾಗಗಳಲ್ಲಿ 141 ಸ್ಥಳಗಳಲ್ಲಿ 1,000ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿದ್ದಾರೆ ಎಂದು ಹೇಳಿದ್ದಾರೆ.
ಇದು ತನ್ನ ಎಲ್ಲಾ ಬಸ್ ನಿಲ್ದಾಣಗಳಲ್ಲಿ ಸಿಸಿಟಿವಿ ಅಳವಡಿಸಿರುವ ಮೊದಲ ನಿಗಮವಾಗಿದೆ. ಸಿಬ್ಬಂದಿ ಮೇಲ್ವಿಚಾರಣೆ ಮತ್ತು ಡಿಪೋದಿಂದ ಬಸ್ಸುಗಳ ಚಲನವಲನವನ್ನು ಗಮನಿಸಲು ಡಿಪೋಗಳಲ್ಲಿಯೂ ಸಹ ಸಿಸಿಟಿವಿಗಳನ್ನು ಅಳವಡಿಸಲಾಗಿದ್ದು, ಪ್ರತಿಯೊಂದು ವಿಭಾಗದ ಭದ್ರತಾ ಅಧಿಕಾರಿಗಳು ಸಿಸಿಟಿವಿ ಮೇಲ್ವಿಚಾರಣೆ ಮಾಡುತ್ತಿದ್ದು, ಸಂಶಯಾಸ್ಪದ ಚಲನೆಗಳು ಅಥವಾ ಇತತೆ ಅಹಿತಕರ ಘಟನೆಗಳನ್ನು ತಕ್ಷಣವೇ ಮೇಲಾಧಿಕಾರಿಗಳ ಗಮನಕ್ಕೆ ತರುತ್ತಾರೆ. ಇದೊಂದು ಅತ್ಯುತ್ತಮ ಪ್ರಯಾಣಿಕ ಸ್ನೇಹಿ ಉಪಕ್ರಮವಾಗಿದೆ ಎಂದಿದ್ದಾರೆ.
ಹಿಂದೆ ಕೆಲವೆಡೆ ಮಾತ್ರ ಸಿಸಿಟಿವಿ ಇದ್ದು, ಅವುಗಳಲ್ಲಿ ಕೆಲವು ಕಾರ್ಯನಿರ್ವಹಿಸುತ್ತಿರಲಿಲ್ಲ. ಇಂತಹ ಹಳೆಯ ಸಿಸಿಟಿವಿಗಳನ್ನು , ಹೊಸ ಸಿಸಿಟಿವಿಗಳಿಂದ ಬದಲಾಯಿಸಲಾಗಿದೆ. ಇದಕ್ಕಾಗಿ ಸುಮಾರು ರೂ.1.5 ಕೋಟಿ ವೆಚ್ಚ ಮಾಡಲಾಗಿದೆ. ಇದು ಕಳ್ಳತನ, ಕಿರುಕುಳ, ಗಲಾಟೆ ಅಥವಾ ಬೇರೆ ಯಾವುದೇ ಪ್ರಕರಣಗಳ ತನಿಖೆಗೆ ಪೊಲೀಸರಿಗೂ ಸಹ ಸಹಾಯವಾಗುತ್ತದೆ ಎಂದು ತಿಳಿಸಿದ್ದಾರೆ.
ಮುಂದಿನ ದಿನಗಳಲ್ಲಿ ಬಸ್‌ಗಳ ಒಳಗೆಯೂ ಸಿಸಿಟಿವಿಗಳನ್ನು ಅಳವಡಿಸುವ ಯೋಜನೆಯಿದ್ದು, ಮೊದಲ ಹಂತದಲ್ಲಿ, ದೂರ ಪ್ರಯಾಣದ ಪ್ರೀಮಿಯಂ ಬಸ್‌ಗಳಲ್ಲಿ ಸಿಸಿಟಿವಿ ಅಳವಡಿಸಲಾಗುವುದು. ಬಸ್‌ಗಳು ಊಟಕ್ಕಾಗಿ ನಿಲ್ಲುವ ಡಾಬಾಗಳ ಬಗ್ಗೆ ಸಹ ಪ್ರಯಾಣಿಕರಿಂದ ಕೆಲವು ದೂರುಗಳು ಬಂದಿದ್ದು, ಅದನ್ನೂ ನಿಗಾ ವಹಿಸುವ ವ್ಯವಸ್ಥೆ ಮಾಡಲಾಗುವುದು. ಪ್ರಯಾಣಿಕರ ಸುರಕ್ಷತೆ ಪ್ರಥಮ ಆದ್ಯತೆ ನೀಡಲಾಗಿದೆ ಎಂದಿದ್ದಾರೆ.
ಬೆಳಗಾವಿಯಲ್ಲಿ ವಸತಿ ಶಾಲೆಯಲ್ಲಿ ಉಪ್ಪಿಟ್ಟು ತಿಂದು 50ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ, ಇಬ್ಬರ ಸ್ಥಿತಿ ಗಂಭೀರ
300 ವರ್ಷಗಳ ನಂತರ ಮಾನವ ದೇಹದಲ್ಲಿ ಕ್ಯಾನ್ಸರ್ ಚಿಕಿತ್ಸೆಯನ್ನು ಬದಲಾಯಿಸಬಲ್ಲ ಹೊಸ ಅಂಗ ಪತ್ತೆ