ಶಿವಮೊಗ್ಗ: ಜಿಲ್ಲೆಯ ಸಾಗರದ ಕಲ್ಮನೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಲ್ಲಿ ಭಾರೀ ಹಗರಣವೇ ನಡೆದಿದೆ ಎನ್ನುವ ಆರೋಪ ಕೇಳಿ ಬಂದಿತ್ತು. ಈ ಹಿನ್ನಲೆಯಲ್ಲಿ ಇಂದು ಕಲ್ಮನೆ ಗ್ರಾಮ ಪಂಚಾಯ್ತಿಗೆ ಭೇಟಿ ನೀಡಿದಂತ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳು, ಇಂಚಿಂಚೂ ತನಿಖೆಯನ್ನು ನಡೆಸಿದರು.
ನಿಮ್ಮ ಕನ್ನಡ ನ್ಯೂಸ್ ನೌ ಸೆಪ್ಟೆಂಬರ್.10ರ ನಿನ್ನೆಯಷ್ಟೇ ರಾಜ್ಯದಲ್ಲೊಂದು ಬಹುದೊಡ್ಡ ಹಗರಣ: ಇಲ್ಲಿ ಸತ್ತವರು, ಅನಾರೋಗ್ಯ ಪೀಡಿತರ ಹೆಸರಿಗೂ ‘ನರೇಗಾ ಹಣ’ ಜಮಾ ಎಂಬುದಾಗಿ ಸುದ್ದಿಯನ್ನು ಪ್ರಕಟಿಸಿತ್ತು. ಶಿವಮೊಗ್ಗ ಜಿಲ್ಲೆಯ ಸಾಗರದ ಕಲ್ಮನೆ ಗ್ರಾಮ ಪಂಚಾಯ್ತಿಯ ನರೇಗಾ ಯೋಜನೆಯಲ್ಲಿ ನಡೆದಿದೆ ಎನ್ನಲಾದಂತ ಹಗರಣದ ಬಗ್ಗೆ ಇಲಾಖೆಯ ಗಮನವನ್ನು ಸೆಳೆದಿತ್ತು.
ಈ ಸುದ್ದಿ ವೈರಲ್ ಆಗುತ್ತಿದ್ದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳು ಸಚಿವ ಪ್ರಿಯಾಂಕ್ ಖರ್ಗೆ ಗಮನಕ್ಕೆ ತಂದಿದ್ದರು. ಹೀಗಾಗಿ ಸಚಿವ ಪ್ರಿಯಾಂಕ್ ಖರ್ಗೆ ಸೂಕ್ತ ತನಿಖೆ ನಡೆಸಿ, ವರದಿ ನೀಡುವಂತೆಯೂ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳಿಗೆ ಸೂಚಿಸಿದ್ದರು. ಈ ಬಗ್ಗೆಯೂ ಕನ್ನಡ ನ್ಯೂಸ್ ನೌ ಸಾಗರದ ಕಲ್ಮನೆ ಗ್ರಾಮ ಪಂಚಾಯ್ತಿಯಲ್ಲಿ ನರೇಗಾ ಹಗರಣ: ತನಿಖೆ ನಡೆಸಿ ವರದಿ ನೀಡಲು ಸಚಿವ ಪ್ರಿಯಾಂಕ್ ಖರ್ಗೆ ಸೂಚನೆ ಎಂದು ಸುದ್ದಿಯನ್ನು ಪ್ರಕಟಿಸಿತ್ತು.
ಸಚಿವ ಪ್ರಿಯಾಂಕ್ ಖರ್ಗೆ ಅವರ ಸೂಚನೆಯ ಮೇರೆಗೆ ಇಂದು ಶಿವಮೊಗ್ಗ ಜಿಲ್ಲಾ ಪಂಚಾಯ್ತಿಯ ನರೇಗಾ ಯೋಜನಾ ನಿರ್ದೇಶಕರಾದಂತ ನಂದಿನಿ, ಒಬಡ್ಸಮನ್ ಗಣಪತಿ ಅವರನ್ನೊಳಗೊಂಡ ತನಿಖಾಧಿಕಾರಿಗಳ ತಂಡವು ಕಲ್ಮನೆ ಗ್ರಾಮ ಪಂಚಾಯ್ತಿಗೆ ಭೇಟಿ ನೀಡಿತು. ಕಲ್ಮನೆ ಗ್ರಾಮ ಪಂಚಾಯ್ತಿಯಲ್ಲಿ ಬೆಳಗ್ಗೆಯಿಂದ ಸಂಜೆಯವರೆಗೆ ದೂರುದಾರರ ದೂರಿನ ಅನುಸಾರ ದಾಖಲೆಗಳನ್ನು ಪರಿಶೀಲನೆ ನಡೆಸಿದರು. ಜೊತೆಗೆ ನರೇಗಾ ಯೋಜನೆಯಡಿ ನಡೆದಿದ್ದಂತ ಕಾಮಗಾರಿ ಸ್ಥಳಕ್ಕೂ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ವೇಳೆ ಕನ್ನಡ ನ್ಯೂಸ್ ನೌ ಜೊತೆಗೆ ಪ್ರತಿಕ್ರಿಯಿಸಿದಂತ NREGA ಪಿಡಿ ನಂದಿನಿ ಅವರು ಕಲ್ಮನೆ ಗ್ರಾಮ ಪಂಚಾಯ್ತಿಯಲ್ಲಿನ ನರೇಗಾ ಯೋಜನೆಯ ಹಗರಣದ ಬಗ್ಗೆ ದೂರು ಬಂದ ಹಿನ್ನಲೆಯಲ್ಲಿ ಇಂದು ಭೇಟಿ ನೀಡಿ, ಪರಿಶೀಲನೆ ನಡೆಸಲಾಗುತ್ತಿದೆ. ದೂರುದಾರರಿಂದಲೂ ದೂರಿಗೆ ಸಂಬಂಧಿಸಿದಂತ ದಾಖಲೆಗಳನ್ನು ಪಡೆಯಲಾಗಿದೆ. ಪರಿಶೀಲಿಸಿ ಇಲಾಖೆಗೆ ವರದಿಯನ್ನು ಸಲ್ಲಿಸಲಾಗುವುದು ಎಂದರು.
ಇನ್ನೂ ಕಲ್ಮನೆ ಗ್ರಾಮ ಪಂಚಾಯ್ತಿ ಅಧ್ಯಕ್ಷ ಅಮರನಾಥ್ ಮಾತನಾಡಿ ನಾನು ಅಧಿಕಾರ ವಹಿಸಿಕೊಂಡು 7 ತಿಂಗಳು ಕಳೆದಿವೆ. ನರೇಗಾ ಯೋಜನೆಯ ಅಡಿಯಲ್ಲಿ ಕಾಲುವೆ, ಕೆರೆ, ಹಳೇ ಚರಂಡಿ ದುರಸ್ಥಿ ಸೇರಿದಂತೆ ವಿವಿಧ ಕಾಮಗಾರಿಯನ್ನು ನಡೆಸಲಾಗಿದೆ. ದೂರುದಾರ ಆರೋಪಿಸಿದಂತೆ ಎಲ್ಲಿಯೂ ಹಗರಣ ನಡೆದಿಲ್ಲ. ಇಲಾಖಾ ಮಟ್ಟದ ತನಿಖೆಗೆ 11 ಸದಸ್ಯರ ಸಹಕಾರವಿದೆ. 5 ವರ್ಷಗಳಲ್ಲಿ ಕಲ್ಮನೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ 8 ರಿಂದ 10 ಲಕ್ಷದಷ್ಟು ನರೇಗಾ ಯೋಜನೆಯಡಿ ಕಾಮಗಾರಿ ನಡೆದಿದೆ ಎಂದು ಹೇಳಿದರು.
ಕಲ್ಮನೆ ಗ್ರಾಮ ಪಂಚಾಯ್ತಿ ಸದಸ್ಯ ಮಹಾಬಲೇಶ್ವರ ಮಾಪು ಮಾತನಾಡಿ ಹಳೇ ಇಕ್ಕೇರಿ ವ್ಯಾಪ್ತಿಯಲ್ಲಿ 8 ರಿಂದ 10 ಕಾಮಗಾರಿಯನ್ನು 5 ವರ್ಷದಲ್ಲಿ ನರೇಗಾ ಯೋಜನೆಯಡಿ ನಡೆಸಲಾಗಿದೆ. ದೂರುದಾರ ಆರೋಪಿಸಿದಂತೆ ಮೃತರು, ಅಂಗವಿಕಲರು, ಅನಾರೋಗ್ಯ ಪೀಡಿತರ ಹೆಸರಿಗೆ ನರೇಗಾ ಹಣ ಜಮಾ ಮಾಡಿಲ್ಲ. ಗ್ರಾಮೀಣಾಭಿವೃದ್ಧಿ ಇಲಾಖೆಯ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ತನಿಖೆಯ ನಂತ್ರ ಸತ್ಯಾಸತ್ಯತೆ ಜನರಿಗೆ ತಿಳಿಯಲಿ ಎಂದರು.
ದೂರುದಾರ ಪ್ರದೀಪ್ ಕುಮಾರ್ ಅವರು ಮಾತನಾಡಿ ಕಲ್ಮನೆ ಗ್ರಾಮ ಪಂಚಾಯ್ತಿಯಲ್ಲಿ ನರೇಗಾ ಯೋಜನೆಯಲ್ಲಿ ಹಗರಣ ನಡೆದಿರುವುದು ಸತ್ಯ. ಅದಕ್ಕೆ ಸಂಬಂಧಿಸಿದಂತೆ ನನ್ನ ಬಳಿ ಎಲ್ಲಾ ದಾಖಲೆಗಳಿದ್ದಾವೆ. ಹಳೆಯ ಕಾಲುವೆಯನ್ನೇ ಸರಿ ಮಾಡಿ, ಹೊಸದಾಗಿ ನರೇಗಾ ಯೋಜನೆಯಡಿ ಕಾಮಗಾರಿ ನಡೆಸಲಾಗಿದೆ ಎಂದು ತೋರಿಸಲಾಗಿದೆ. ಗ್ರಾಮ ಪಂಚಾಯ್ತಿಯ ಸದಸ್ಯರೊಬ್ಬರು ಮೇಟಿಯಾಗಿ ಕೆಲಸ ಮಾಡಿ, ನರೇಗಾ ಕೂಲಿಯಾಳುಗಳ ಹಾಜರಾತಿ ತೆಗೆದುಕೊಂಡ ಬಗ್ಗೆ ದಾಖಲೆಯಲ್ಲೇ ನಮೂದಾಗಿದೆ. ಕೆಲಸ ಮಾಡದವರಿಗೆ, ಕೆಲಸಕ್ಕೆ ಬಾರದವರಿಗೂ ನರೇಗಾ ಕೂಲಿ ಹಣ ಜಮಾ ಮಾಡಲಾಗಿದೆ. ಈ ಎಲ್ಲಾ ದಾಖಲೆಗಳನ್ನು ತನಿಖಾಧಿಕಾರಿಗಳಿಗೆ ನೀಡಿರುವುದಾಗಿ ತಿಳಿಸಿದರು.
ಒಟ್ಟಾರೆ ಇಂದು ಕಲ್ಮನೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ನಡೆದಿದೆ ಎನ್ನಲಾದಂತ ನರೇಗಾ ಯೋಜನೆ ಹಗರಣ ಕುರಿತಂತೆ ಶಿವಮೊಗ್ಗದಿಂದ ಆಗಮಿಸಿದ್ದಂತ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳು ಇಂಚಿಂಚೂ ದಾಖಲೆಗಳನ್ನು ಪರಿಶೀಸಿದರು. ಅಲ್ಲದೇ ಕಲ್ಮನೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ನರೇಗಾ ಕಾಮಗಾರಿ ಹಗರಣ ಕುರಿತಂತೆ ಕೆಲ ಕಾಮಗಾರಿ ನಡೆದಿದ್ದಂತ ಸ್ಥಳಗಳಿಗೂ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು. ಈ ತನಿಖಾ ವರದಿಯನ್ನು ಇಲಾಖೆಗೆ ತನಿಖಾಧಿಕಾರಿಗಳು ವರದಿ ಸಲ್ಲಿಸಲಿದ್ದಾರೆ. ಆ ಬಳಿಕ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಆಗಲಿದೆ ಎಂದು ಹೇಳಲಾಗುತ್ತಿದೆ. ಆ ಬಗ್ಗೆ ಕಾದು ನೋಡಬೇಕಿದೆ.
ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು
ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್: ನೇರ ನೇಮಕಾತಿ ಪುನಾರಂಭಕ್ಕೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್