ಹಾವೇರಿ : ರಾಜ್ಯದಲ್ಲಿ ಮತ್ತೊಂದು ಬೆಚ್ಚಿ ಬೀಳಿಸುವ ಕೃತ್ಯ ನಡೆದಿದ್ದು, ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದಾಳೆಂದು ಪ್ರಿಯಕರನೊಂದಿಗೆ ಸೇರಿ ಹೆತ್ತ ಮಗುವನ್ನೇ ಉಸಿರುಗಟ್ಟಿಸಿ ತಾಯಿ ಕೊಲೆ ಮಾಡಿರುವ ಘಟನೆ ಹಾವೇರಿ ಜಿಲ್ಲೆಯಲ್ಲಿ ನಡೆದಿದೆ.
ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ಗುಡ್ಡದ ಆನ್ವೇರಿ ಗ್ರಾಮದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮೃತ ಮಗುವನ್ನು ಪ್ರಿಯಾಂಕಾ (4) ಎಂದು ಗುರುತಿಸಲಾಗಿದೆ.
ರಾಣೇಬೆನ್ನೂರು ನಗರದ ಎಕೆಜಿ ಕಾಲನಿ ಗಂಗಮ್ಮ ಗುತ್ತಲ (36) ಹಾಗೂ ಗೌರಿಶಂಕರ ನಗರದ ಅಣ್ಣಪ್ಪ ಮಡಿವಾಳರ (40) ಕೊಲೆ ಮಾಡಿದ ಆರೋಪಿಗಳು ಎಂದು ಗುರುತಿಸಲಾಗಿದೆ. ಆರೋಪಿಗಳಿಬ್ಬರು ಅನೈತಿಕ ಸಂಬಂಧ ಹೊಂದಿದ್ದರು. ತಮ್ಮ ಅಕ್ರಮ ಸಂಬಂಧಕ್ಕೆ ಮಗಳು ಅಡ್ಡಿಯಾಗುತ್ತಿದ್ದಾಳೆಂದು ಆ.5ರಂದು ಮಗಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿ ಹಾವೇರಿ ತಾಲೂಕಿನ ಕುರಗುಂದ ಗ್ರಾಮದ ಬಳಿಯ ಕಾಲುವೆ ಬಳಿ ಸುಟ್ಟು ಹಾಕಿದ್ದಾರೆ. ಆದರೆ ಬಾಲಕಿಯ ಅರ್ಧದೇಹ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು.
ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಗುತ್ತಲ ಠಾಣೆ ಪೊಲೀಸರು ಬಾಲಕಿಯನ್ನು ಅಪರಿಚಿತ ಶವ ಎಂದು ಪರಿಗಣಿಸಿ, ಅಂತ್ಯಸಂಸ್ಕಾರ ನೆರವೇರಿಸಿದ್ದರು. ಆದರೆ ತನ್ನ ಮಗಳು ಕೊಡುವಂತೆ ಪತಿ ಮಂಜುನಾಥ್ ಪೊಲೀಸ್ ಠಾಣೆಗೆ ಹೋಗಿದ್ದು, ಈ ವೇಳೆ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಸದ್ಯ ಪೊಲೀಸರು ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.