ಬೆಂಗಳೂರು: ಬೆಂಗಳೂರಿನ ಜನತೆಗೆ ಸಿಹಿಸುದ್ದಿ ಸಿಕ್ಕಿದ್ದು, ಇಂದಿನಿಂದ ಎಲೆಕ್ಟ್ರಾನಿಕ್ ಸಿಟಿ ಸಂಪರ್ಕಿಸುವ ಆರ್.ವಿ. ರಸ್ತೆ- ಬೊಮ್ಮಸಂದ್ರ ಮಾರ್ಗದ ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ ನಾಲ್ಕನೇ ರೈಲು ಸಂಚಾರ ಆರಂಭಿಸಲಿದೆ.
ರೈಲುಗಳ ಸಂಚಾರದ ವೇಳಾಪಟ್ಟಿ ಬದಲಾವಣೆಯಾಗಿದ್ದು, ರೈಲುಗಳ ನಡುವಿನ ಅಂತರ 25 ನಿಮಿಷದಿಂದ 19 ನಿಮಿಷಕ್ಕೆ ಇಳಿಕೆಯಾಗಿದೆ. ಆಗಸ್ಟ್ 10 ರಿಂದ ಮೂರು ರೈಲುಗಳೊಂದಿಗೆ ಕಾರ್ಯಾರಂಭ ಮಾಡಲಾಗಿತ್ತು. ಮೂರು ವಾರದ ಹಿಂದೆ ಕೊಲ್ಕತ್ತಾದ ತೀತಾಗಢ್ ರೈಲು ಫ್ಯಾಕ್ಟರಿಯಿಂದ ಈ ರೈಲು ಸೆಟ್ ಗಳು ಬೆಂಗಳೂರಿಗೆ ಬಂದು ಹೆಬ್ಬಗೋಡಿ ಡಿಪೋದಲ್ಲಿ ಜೋಡಣೆ ಮಾಡಲಾಗಿದೆ. ಕಳೆದ ವಾರದಿಂದ ರಾತ್ರಿ ರೈಲುಗಳ ಪ್ರಾಯೋಗಿಕ ಸಂಚಾರ ನಡೆಸಿ ಇದೀಗ ಪ್ರಯಾಣಿಕರ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ.
ಹಳದಿ ಮಾರ್ಗದಲ್ಲಿ ಸೋಮವಾರದಿಂದ ಶನಿವಾರದವರೆಗೆ ಮೊದಲ ವಾಣಿಜ್ಯ ಸೇವೆ ಬೆಳಗ್ಗೆ 6 ಗಂಟೆಗೆ ಆರಂಭವಾಗಲಿದೆ. ಭಾನುವಾರ ಮೊದಲ ರೈಲು ಸೇವೆ ಬೆಳಗ್ಗೆ 7 ಗಂಟೆಗೆ ಶುರುವಾಗಲಿದೆ. ರಾತ್ರಿ ಕೊನೆಯ ರೈಲು ಸಮಯ ಎಂದಿನಂತೆ ಇರಲಿದ್ದು, ಆರ್.ವಿ. ರಸ್ತೆಯಿಂದ ರಾತ್ರಿ 11:55 ಕ್ಕೆ, ಬೊಮ್ಮಸಂದ್ರದಿಂದ ರಾತ್ರಿ 10:42ಕ್ಕೆ ಹೊರಡಲಿದೆ.