ಶಿವಮೊಗ್ಗ: ಜಿಲ್ಲೆಯಲ್ಲಿ ರಾಜ್ಯದಲ್ಲೇ ನರೇಗಾ ಉದ್ಯೋಗ ಖಾತ್ರಿ ಯೋಜನೆಯಡಿ ಬಹುದೊಡ್ಡ ಹಗರಣ ಎನ್ನುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ನಡೆದಿದೆ. ಈ ಗ್ರಾಮ ಪಂಚಾಯ್ತಿಯಲ್ಲಿ ಸತ್ತವರು, ಅನಾರೋಗ್ಯ ಪೀಡಿತರು, ಕೈ-ಕಾಲು ಮುರಿದುಕೊಂಡು ಕೆಲಸಕ್ಕೇ ಬಾರದವರ ಹೆಸರಿಗೂ ನರೇಗಾ ಕೂಲಿ ಹಣವನ್ನು ಜಮಾ ಮಾಡಲಾಗಿದೆ.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಕಲ್ಮನೆ ಗ್ರಾಮ ಪಂಚಾಯ್ತಿಯಲ್ಲಿ ಇಂತದ್ದೊಂದು ಬಹುದೊಡ್ಡ ಹಗರಣ, ಗೋಲ್ಮಾಲ್ ನಡೆದಿರುವ ಆರೋಪ ಕೇಳಿ ಬಂದಿದೆ. ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯ ಅಡಿಯಲ್ಲಿ ಗ್ರಾಮೀಣ ಜನರಿಗೆ ಉದ್ಯೋಗ ಖಾತ್ರಿ ಜಾಬ್ ಕಾರ್ಡ್ ನೀಡುವುದು ಸೇರಿದಂತೆ, ಕೆಲಸ ಮಾಡದವರೂ, ಕೆಲಸಕ್ಕೆ ಬಾರದವರಿಗೂ ಹಣವನ್ನು ಜಮಾ ಮಾಡಿರುವಂತ ಆರೋಪವಿದೆ.
ಕಲ್ಮನೆ ಗ್ರಾಮ ಪಂಚಾಯ್ತಿಯಲ್ಲಿ ಉದ್ಯೋಗ ಖಾತ್ರಿಯಲ್ಲಿ ಬಹುದೊಡ್ಡ ಗೋಲ್ಮಾಲ್
ಸಾಗರ ತಾಲ್ಲೂಕಿನ ಕಲ್ಮನೆ ಗ್ರಾಮ ಪಂಚಾಯ್ತಿಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಅನರ್ಹರು, ಖಾಯಿಲೆ ಬಿದ್ದು ಮನೆಯಲ್ಲಿ ಮಲಗಿದ್ದವರ ಹೆಸರಿಗೂ ಜಾಬ್ ಕಾರ್ಡ್ ನೀಡಿ, ಉದ್ಯೋಗ ಖಾತ್ರಿಯ ಹಣವನ್ನು ಸಂದಾಯ ಮಾಡಿರುವಂತ ಆರೋಪ ಕೇಳಿ ಬಂದಿದೆ.
ಇದಷ್ಟೇ ಅಲ್ಲದೇ ಬೇರೆ ಊರಿನಲ್ಲಿ ನೆಲೆಸಿರುವ ಜನರಿಗೂ ಉದ್ಯೋಗ ಖಾತ್ರಿ ಯೋಜನೆಯ ಅಡಿಯ ಹಣ ಹಾಕಲಾಗಿದೆ. ಕಲ್ಮನೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಹೀಗೆ ಬಹು ದೊಡ್ಡ ಅಕ್ರಮವೇ ನಡೆದಿದ್ದು, ತನಿಖೆಗೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಹಾಲಿ ಹಾಗು ಈ ಹಿಂದಿನ ಪಿಡಿಓಗಳ ಕೈವಾಡದ ಶಂಕೆ
ಕಲ್ಮನೆ ಗ್ರಾಮ ಪಂಚಾಯ್ತಿಯ ಉದ್ಯೋಗ ಖಾತ್ರಿ ಯೋಜನೆಯ ಗೋಲ್ಮಾಲ್ ನಲ್ಲಿ ಹಾಲಿ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಹಾಗೂ ಈ ಹಿಂದಿನ ಪಿಡಿಓ ಇಬ್ಬರ ಕೈವಾಡವಿದೆ ಎನ್ನುವ ಶಂಕೆ ವ್ಯಕ್ತವಾಗಿದೆ. ಐದು ವರ್ಷಗಳ ಅವಧಿಯಲ್ಲಿ ಲಕ್ಷಾಂತರ ಉದ್ಯೋಗ ಖಾತ್ರಿ ಹಣ ಅರ್ಹರಲ್ಲದವರಿಗೂ ಸಂದಾಯವಾಗಿರೋದಾಗಿ ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.
2021-25ರವರೆಗೆ ಹಗರಣ ನಡೆದಿರೋ ಆರೋಪ
ಸಾಗರ ತಾಲ್ಲೂಕಿನ ಕಲ್ಮನೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಉದ್ಯೋಗ ಖಾತ್ರಿ ಯೋಜನೆಯಲ್ಲಿ 2021ರಿಂದ ಹಿಡಿದು ಇಲ್ಲಿಯವರೆಗೆ ವಿವಿಧ ರೀತಿಯಲ್ಲಿ ಹಗರಣದ ಶಂಕೆಯಿದೆ ಎನ್ನುವುದು ಸಾರ್ವಜನಿಕರ ಆರೋಪ. ಹುಷಾರಿಲ್ಲದೇ ಮನೆಯಲ್ಲಿ ಮಲಗಿದ್ದವರೂ ಉದ್ಯೋಗ ಖಾತ್ರಿ ಕೆಲಸಕ್ಕೆ ಬಂದಿದ್ದರು ಅಂತ ಅವರು ಪಡೆದಿರುವಂತ ಜಾಬ್ ಕಾರ್ಡ್ ಗೆ ಹಣವನ್ನು ಖಾತೆಗೆ ಜಮಾ ಮಾಡಿರೋ ಗುರುತರ ಆರೋಪ ಕೇಳಿ ಬಂದಿದೆ.
ಅಧಿಕಾರಿಗಳ ಬದಲು ಗ್ರಾಮ ಪಂಚಾಯ್ತಿ ಸದಸ್ಯರೇ ಮೇಟಿಯಾಗಿ ಹಾಜರಾತಿ?
ಉದ್ಯೋಗ ಖಾತ್ರಿ ಯೋಜನೆಯ ಕಾಮಗಾರಿ ಸ್ಥಳಕ್ಕೆ ಸಂಬಂಧ ಪಟ್ಟ ಗ್ರಾಮ ಪಂಚಾಯ್ತಿ ಅಧಿಕಾರಿಗಳು ಭೇಟಿ ನೀಡಿ, ಕಾರ್ಯ ನಿರ್ವಹಿಸುತ್ತಿರುವವರ ಹಾಜರಾತಿ ಪಡೆಯುವುದು ನಿಯಮ. ಆದರೇ ಕಲ್ಮನೆ ಗ್ರಾಮ ಪಂಚಾಯ್ತಿಯಲ್ಲಿನ ಸದಸ್ಯರೊಬ್ಬರೇ ಅಧಿಕಾರಿಗಳ ಕಾರ್ಯ ಮಾಡಿದ ಆರೋಪ ಕೇಳಿ ಬಂದಿದೆ. ಅಧಿಕಾರಿಗಳ ಬದಲು ಗ್ರಾಮ ಪಂಚಾಯ್ತಿ ಸದಸ್ಯರೇ ಮೇಟಿಯಾಗಿ ಕಾರ್ಯ ನಿರ್ವಹಿಸಿ ಹಾಜರಾತಿ ತೆಗೆದುಕೊಂಡಿದ್ದಾರೆ ಎಂಬುದಾಗಿ ಗ್ರಾಮಸ್ಥರ ಆರೋಪವಾಗಿದೆ.
ಹಗರಣ ಮುಚ್ಚಿ ಹಾಕಲು ಪ್ರಭಾವಿಯೊಬ್ಬರ ಮನೆಯಲ್ಲಿ ಸರಣಿ ಮೀಟಿಂಗ್
ಕಲ್ಮನೆ ಗ್ರಾಮ ಪಂಚಾಯ್ತಿ ಉದ್ಯೋಗ ಖಾತ್ರಿ ಯೋಜನೆಯ ಹಗರಣ ಬಯಲಾಗುತ್ತಿದ್ದಂತೆ, ಮುಚ್ಚಿ ಹಾಕೋ ಸಂಬಂಧ ಆ ಭಾಗದ ಪ್ರಭಾವಿಗಳೊಬ್ಬರ ಮನೆಯಲ್ಲಿ ಸರಣಿ ಸಭೆ ನಡೆಸಿ, ಸಂಧಾ ಮಾತುಕತೆ ನಡೆಸಲಾಗಿದೆ ಎನ್ನಲಾಗುತ್ತಿದೆ. ಆದರೇ ಈ ಸಂಧಾನ ಸಭೆ ವಿಫಲವಾಗಿದೆ. ಹೀಗಾಗಿ ಇಓ ದೂರು ನೀಡಲಾಗಿದ್ದು, ಸಿಇಒಗೂ ಗ್ರಾಮಸ್ಥರು ದೂರು ನೀಡಲು ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಇಓ ಗುರುಕೃಷ್ಣ ಶಣೈ ಭೇಟಿ, ಮುಂದಿನ ವಾರ ಸ್ಪಾಟ್ ವೆರಿಫಿಕೇಷನ್
ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕಲ್ಮನೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಹಗರಣದ ಬಗ್ಗೆ ತನಿಖೆ ನಡೆಸುವಂತೆ ದೂರು ಬಂದ ಹಿನ್ನಲೆಯಲ್ಲಿ, ನಿನ್ನೆಯ ಸೋಮವಾರದಂದು (08/09/2025) ಸಾಗರ ತಾಲ್ಲೂಕು ಕಾರ್ಯನಿರ್ವಹಣಾಧಿಕಾರಿ ಗುರುಕೃಷ್ಣ ಶಣೈ ಅವರು ಕಲ್ಮನೆಗೆ ಗ್ರಾಮ ಪಂಚಾಯ್ತಿಗೆ ಭೇಟಿ ನೀಡಿದ್ದಾರೆ. ಉದ್ಯೋಗ ಖಾತ್ರಿಯಲ್ಲಿನ ಹಗರಣದ ದೂರಿನ ಬಗ್ಗೆ ಪ್ರಾಥಮಿಕ ಮಾಹಿತಿಯನ್ನು ಪಡೆದಿರುವುದಾಗಿ ತಿಳಿದು ಬಂದಿದೆ.
ಈ ಕುರಿತಂತೆ ಕನ್ನಡ ನ್ಯೂಸ್ ನೌಗೆ ಪ್ರತಿಕ್ರಿಯಿಸಿದಂತ ಇಒ ಗುರುಕೃಷ್ಣ ಶಣೈ ಅವರು, ಕಲ್ಮನೆ ಗ್ರಾಮ ಪಂಚಾಯ್ತಿಯಲ್ಲಿನ ಎನ್ ಆರ್ ಇ ಜಿ ಎಯಲ್ಲಿನ ಹಗರಣದ ಬಗ್ಗೆ ದೂರು ಬಂದ ಹಿನ್ನಲೆಯಲ್ಲಿ ಸೋಮವಾರದಂದು(08/09/2025) ಗ್ರಾಮ ಪಂಚಾಯ್ತಿಗೆ ಭೇಟಿ ನೀಡಿ, ಪ್ರಾಥಮಿಕ ಮಾಹಿತಿ ಪಡೆಯಲಾಗಿದೆ. ಮುಂದಿನ ವಾರ ಎನ್ ಆರ್ ಇ ಜಿಯ ಎಡಿ ಜೊತೆಗೂಡಿ ದೂರುದಾರರ ದೂರಿನಂತೆ ಕಲ್ಮನೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹಳೇ ಇಕ್ಕೇರಿ ಗ್ರಾಮದಲ್ಲಿ ಉದ್ಯೋಗ ಖಾತ್ರಿ ನಡೆದಿರುವಂತ ಎಲ್ಲಾ ಸ್ಥಳಗಳಿಗೂ ಭೇಟಿ ನೀಡಿ, ಸ್ಥಳ ಪರಿಶೀಲನೆ ನಡೆಸುವುದಾಗಿ ತಿಳಿಸಿದರು.
ಒಟ್ಟಾರೆಯಾಗಿ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಕಲ್ಮನೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಭಾರೀ ಅವ್ಯವಹಾರವೇ ನಡೆದಿರುವ ಆರೋಪ ಕೇಳಿ ಬಂದಿದೆ. ಇದು ನಿಜವೇ ಎನ್ನುವ ಬಗ್ಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಶಿವಮೊಗ್ಗ ಜಿಲ್ಲೆಯ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವರ ತಂಡದಿಂದ ಸೂಕ್ತ ತನಿಖೆ ನಡೆದಾಗಲೇ ಸತ್ಯಾಸತ್ಯತೆ ಹೊರ ಬಂದು, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಆಗೋದಕ್ಕೆ ಸಾಧ್ಯ. ಆ ಕಾರ್ಯವನ್ನು ಗ್ರಾಮೀಣಾಭಿವೃದ್ಧಿ ಇಲಾಖೆ ಮಾಡುತ್ತಾ ಎಂಬುದನ್ನು ಕಾದು ನೋಡಬೇಕಿದೆ.
ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು