ಕಳೆದ ಬಾರಿಯ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಅತ್ಯಂತ ಕಳಪೆ ಫಲಿತಾಂಶ ಪಡೆದ ಅನುದಾನಿತ ಪ್ರೌಢಶಾಲೆಗಳಿಗೆ ನೋಟಿಸ್ ನೀಡಿ, ಕ್ರಮ ಕೈಗೊಳ್ಳುವಂತೆ ಯೋಜನೆ ಮತ್ತು ಸಾಂಖ್ಯಿಕ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಲಾದ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸರ್ಕಾರದ ಅನುದಾನ, ಸೌಲಭ್ಯಗಳನ್ನೆಲ್ಲಾ ಪಡೆದು, ಜಿಲ್ಲೆಯ ಎಸ್‍ಎಸ್‍ಎಲ್‍ಸಿ ಫಲಿತಾಂಶ ಕಡಿಮೆಯಾಗಲು ಈ ಶಾಲೆಗಳೇ ಪ್ರಮುಖ ಕಾರಣವಾದರೆ ಸಹಿಸಲು ಸಾಧ್ಯವಿಲ್ಲ ಎಂದು ಜಿಲ್ಲೆಯ ಅನುದಾನಿತ ಖಾಸಗಿ ಶಾಲೆಗಳ ಕಾರ್ಯವೈಖರಿ ಬಗ್ಗೆ ಸಚಿವ ಡಿ. ಸುಧಾಕರ್ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಕೆಡಿಪಿ ಸಭೆಯಲ್ಲಿ ಕಳೆದ ವರ್ಷದ ಜಿಲ್ಲೆಯ ಎಸ್‍ಎಸ್‍ಎಲ್‍ಸಿ ಫಲಿತಾಂಶ ಹಾಗೂ ಫಲಿತಾಂಶ ಸುಧಾರಣೆ ನಿಟ್ಟಿನಲ್ಲಿ ಕೈಗೊಳ್ಳಲಾಗುತ್ತಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡಿದ ಜಿ.ಪಂ. ಸಿಇಒ ಡಾ. ಎಸ್. ಆಕಾಶ್ ಅವರು, ತಾವು ಈ ಹಿಂದೆ ಶಿಕ್ಷಣ ಇಲಾಖೆಯಲ್ಲಿ ಕೆಲಸ ಮಾಡಿದ ಅನುಭವದ ಆಧಾರದಲ್ಲಿ, ಎಸ್‍ಎಸ್‍ಎಲ್‍ಸಿ ಫಲಿತಾಂಶ ಸುಧಾರಣೆಗೆ ಏನೇನು ಕ್ರಮ ಕೈಗೊಳ್ಳಬೇಕು ಎಂಬುದನ್ನು ಗಂಭೀರವಾಗಿ ಚರ್ಚೆ ನಡೆಸಿದ್ದೇನೆ. ಈ ಬಾರಿಯ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ರಾಜ್ಯಮಟ್ಟದಲ್ಲಿ 10ನೇ ಸ್ಥಾನದೊಳಗೆ ಜಿಲ್ಲೆ ಸ್ಥಾನ ಪಡೆಯಬೇಕು. ಈ ನಿಟ್ಟಿನಲ್ಲಿ ಈ ವಿಷಯವನ್ನು ತುಂಬಾ ಗಂಭೀರವಾಗಿ ಪರಿಗಣಿಸಲಾಗಿದ್ದು, ಈಗಾಗಲೇ ಶಿಕ್ಷಣ ಇಲಾಖೆ ಅಧಿಕಾರಿಗಳ ಸಭೆ ನಡೆಸಿ, ಸಲಹೆ ಸೂಚನೆ ನೀಡಲಾಗಿದೆ. 2024-25ನೇ ಸಾಲಿನ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಜಿಲ್ಲೆಯು ರಾಜ್ಯದಲ್ಲಿ 23ನೇ ಸ್ಥಾನದಲ್ಲಿದೆ. ಎಸ್‍ಎಸ್‍ಎಲ್‍ಸಿ 2 ಮತ್ತು 3ನೇ ಪರೀಕ್ಷೆಯಲ್ಲಿ 21,881 ಮಕ್ಕಳಲ್ಲಿ 15,684 ಮಕ್ಕಳು ಉತೀರ್ಣರಾಗಿ ಶೇ.23ರಷ್ಟು ಫಲಿತಾಂಶ ಲಭಿಸಿದೆ ಎಂದು ತಿಳಿಸಿದ ಅವರು, ಜಿಲ್ಲೆಯಲ್ಲಿ ಕಳಪೆ ಫಲಿತಾಂಶ ಪಡೆದ ಶಾಲೆಗಳ ಪೈಕಿ ಅನುದಾನಿತ ಶಾಲೆಗಳೇ ಹೆಚ್ಚಾಗಿವೆ. ಸರ್ಕಾರಿ ಶಾಲೆಗಳಲ್ಲೇ ಉತ್ತಮ ಫಲಿತಾಂಶ ಬಂದಿದೆ. ಕಳಪೆ ಫಲಿತಾಂಶ ಪಡೆದ 40 ಸರ್ಕಾರಿ ಹಾಗೂ 60 ಅನುದಾನಿತ ಶಾಲೆಗಳು ಸೇರಿದಂತೆ ಒಟ್ಟು 100 ಶಾಲೆಗಳನ್ನು ಗುರುತಿಸಲಾಗಿದೆ. ಈ ಶಾಲೆಗಳಲ್ಲಿ ಫಲಿತಾಂಶ ಉತ್ತಮಪಡಿಸಲು ಈಗಾಗಲೇ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದರು. ಸಚಿವರು ಮಾತನಾಡಿ, ಸರ್ಕಾರದಿಂದ ಸೌಲಭ್ಯ ಹಾಗೂ ಅನುದಾನ ಪಡೆಯುವ ಖಾಸಗಿ ಶಾಲೆಗಳಲ್ಲಿ ಕಳಪೆ ಫಲಿತಾಂಶ ಬಂದಿರುವುದು, ಅವರು ಉತ್ತಮ ಶಿಕ್ಷಣ ನೀಡುತ್ತಿಲ್ಲ ಎಂಬುದಕ್ಕೆ ನಿದರ್ಶನವಾಗಿದೆ. ಇವುಗಳಿಗಿಂತ ಸರ್ಕಾರಿ ಶಾಲೆಗಳೇ ಉತ್ತಮ ಫಲಿತಾಂಶ ಪಡೆದಿವೆ. ಹೀಗಾಗಿ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಕಳಪೆ ಫಲಿತಾಂಶ ಪಡೆದಿರುವ ಅನುದಾನಿತ ಶಾಲೆಗಳಿಗೆ ನೋಟಿಸ್ ನೀಡಿ, ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದ ಅವರು, ಕಡಿಮೆ ಫಲಿತಾಂಶ ಪಡೆದ ಸಂಬಂಧ ಶಾಲೆಯ ಮುಖ್ಯ ಶಿಕ್ಷಕರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ನೇರ ಹೊಣೆಗಾರರನ್ನಾಗಿ ಮಾಡಬೇಕು. ಕಡಿಮೆ ಫಲಿತಾಂಶ ನೀಡಿದ ವಿಷಯವಾರು ಶಿಕ್ಷಕರ ವಿರುದ್ಧವೂ ಕ್ರಮಕೈಗೊಳ್ಳಬೇಕು ಎಂದು ಸಚಿವರು ಶಿಕ್ಷಣ ಇಲಾಖೆ ಉಪನಿರ್ದೇಶಕ ಎಂ.ಆರ್.ಮಂಜುನಾಥ್ ಅವರಿಗೆ ಸೂಚನೆ ನೀಡಿದರು.
ವಿಧಾನ ಪರಿಷತ್ ಶಾಸಕ ಕೆ.ಎಸ್.ನವೀನ್ ಮಾತನಾಡಿ, ಕಡಿಮೆ ಫಲಿತಾಂಶ ಪಡೆದ ಶಾಲೆಗಳಿಗೆ ಸೆಪ್ಟೆಂಬರ್ ಮಾಹೆಯಿಂದಲೇ ಫಲಿತಾಂಶ ಉತ್ತಮ ಪಡಿಸಲು ಪ್ರಯತ್ನ ನಡೆಸಿದರೆ ಶೇ.10ರಷ್ಟು ಫಲಿತಾಂಶ ಹೆಚ್ಚಳವಾಗಲಿದೆ. ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳು ನಿರಂತರವಾಗಿ ಶಾಲೆಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಬೇಕು ಎಂದು ಸೂಚನೆ ನೀಡಿದರು.
ಬೇಡಿಕೆಗಿಂತ ಹೆಚ್ಚು ಯೂರಿಯಾ ಪೂರೈಕೆಯಾಗಿದೆ : ಜಂಟಿಕೃಷಿ ನಿರ್ದೇಶಕ ಮಂಜುನಾಥ್ ಮಾತನಾಡಿ, ಜಾಗತಿಕವಾಗಿ ಅಲ್ಲಲ್ಲಿ ನಡೆದ ಯುದ್ಧಗಳ ಕಾರಣದಿಂದಾಗಿ ಯೂರಿಯಾ ಪೂರೈಕೆಯಲ್ಲಿ ಸ್ವಲ್ಪ ಸಮಸ್ಯೆ ಉಂಟಾಗಿತ್ತು. ಆದರೆ ಈಗ ಕೊರತೆ ಇಲ್ಲ. ಈವರೆಗೆ 26760 ಮೆ. ಟನ್ ಯೂರಿಯಾ ಮಾರಾಟವಾಗಿದ್ದು, ಪ್ರಸ್ತುತ 1533 ಟನ್ ಯೂರಿಯಾ ದಾಸ್ತಾನು ಲಭ್ಯವಿದೆ. ಬೇಡಿಕೆಗಿಂತಲೂ ಹೆಚ್ಚು ಯೂರಿಯಾ ಈಗ ಪೂರೈಕೆ ಆಗುತ್ತಿದೆ. ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ 3.16 ಲಕ್ಷ ಹೆ. ಬಿತ್ತನೆ ಗುರಿ ಇದ್ದು, ಈವರೆಗೆ 2.71 ಲಕ್ಷ ಹೆ. ನಲ್ಲಿ ಬಿತ್ತನೆಯಾಗಿದೆ. ಹಿರಿಯೂರು ತಾಲ್ಲೂಕಿನಲ್ಲಿ ಮಾತ್ರ 40510 ಹೆ. ಗುರಿಗೆ ಬದಲಾಗಿ ಕೇವಲ 6759 ಹೆಕ್ಟೇರ್‍ನಲ್ಲಿ ಮಾತ್ರ ಬಿತ್ತನೆಯಾಗಿದೆ. ಜಿಲ್ಲೆಯಲ್ಲಿ 20,700 ಕ್ವಿಂಟಲ್ ಬಿತ್ತನೆ ಬೀಜ ವಿತರಣೆ ಮಾಡಲಾಗಿದೆ. ಜಿಲ್ಲೆಯಲ್ಲಿ ಕಳೆದ 2022 ರಲ್ಲಿ ಇದ್ದಂತಹ 12 ಸಾವಿರ ಹೆ. ತೊಗರಿ ಬೆಳೆ ಪ್ರದೇಶ ಇದೀಗ ವಿಸ್ತರಣೆಗೊಂಡಿದ್ದು, ಈಗ 31 ಸಾವಿರ ಹೆ. ನಲ್ಲಿ ತೊಗರಿ ಬೆಳೆಯಲಾಗುತ್ತಿದೆ. ತೊಗರಿ ಬೆಳೆಯಲು ಖರ್ಚು ಕೂಡ ಕಡಿಮೆ, ಇಳುವರಿ ಉತ್ತಮವಾಗಿ ಬಂದಲ್ಲಿ ರೈತರಿಗೆ ಲಾಭದ ಪ್ರಮಾಣವು ಕೂಡ ಹೆಚ್ಚು ಇರಲಿದೆ. ಹೀಗಾಗಿ ತೊಗರಿ ಪ್ರದೇಶ ವಿಸ್ತರಣೆ ಕಂಡಿದೆ. ಕಳೆದ 40-50 ವರ್ಷಗಳಿಂದಲೂ ಟಿಎಂವಿ-2 ತಳಿ ಶೇಂಗಾ ಬೆಳೆಯುತ್ತಿದ್ದು, ತಳಿಯು ತನ್ನ ಚೈತನ್ಯ ಕಳೆದುಕೊಂಡಿರುವುದರಿಂದ ಶೇಂಗಾ ಬೆಳೆಯಲ್ಲಿ ರೈತರಿಗೆ ಉತ್ತಮ ಇಳುವರಿ ದೊರೆಯುತ್ತಿಲ್ಲ. ಜಿಲ್ಲೆಯಲ್ಲಿ ಡಿಹೆಚ್-256 ಹಾಗೂ ಸಹ್ಯಾದ್ರಿ ದುರ್ಗ ಎಂಬ ಎರಡು ಹೊಸ ಶೇಂಗಾ ತಳಿಗಳನ್ನು ಪರಿಚಯಿಸಲಾಗುತ್ತಿದ್ದು, ರೈತರಿಗೆ ಪ್ರಾತ್ಯಕ್ಷಿಕೆಗಾಗಿ ನೀಡಿ ಪರೀಕ್ಷೆ ಮಾಡಲಾಗುತ್ತಿದೆ, ಇವು ಉತ್ತಮವಾಗಿವೆ ಎಂಬ ವರದಿಯೂ ಬಂದಿವೆ ಎಂದರು. ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ ಮಾತನಾಡಿ, 2022-23 ನೇ ಸಾಲಿನಲ್ಲಿ ಬೆಳೆ ವಿಮೆ ಪರಿಹಾರ ಯೋಜನೆಯಲ್ಲಿ 48 ಕೋಟಿ ರೂ. ಗೂ ಹೆಚ್ಚಿನ ಅಕ್ರಮ ಜರುಗಿದ ಬಗ್ಗೆ ಕೈಗೊಂಡಿರುವ ಕ್ರಮಗಳ ಕುರಿತು ಮಾಹಿತಿ ಒದಗಿಸಲು ತಿಳಿಸಿದರು, ಇದಕ್ಕೆ ಪ್ರತಿಕ್ರಿಯಿಸಿದ ಜಂಟಿಕೃಷಿ ನಿರ್ದೇಶಕ ಮಂಜುನಾಥ್ ಅವರು, ಈ ಪ್ರಕರಣದ ಬಗ್ಗೆ ಈಗಾಗಲೆ ತನಿಖೆ ಕೈಗೊಂಡು, ದಾಖಲೆಗಳ ಸಹಿತ ವರದಿಯನ್ನು ಸಲ್ಲಿಸಲಾಗಿದೆ ಎಂದರು.
ಜಿಲ್ಲಾಸ್ಪತ್ರೆ ಅವ್ಯವಸ್ಥೆಗೆ ಅಸಮಾಧಾನ:
******
ಕೆ.ಡಿ.ಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ನಗರದ ಜಿಲ್ಲಾಸ್ಪತ್ರೆ ಅವ್ಯವಸ್ಥೆ ಬಗ್ಗೆ ತೀವ್ರ ಅಸಮಧಾನ ವ್ಯಕ್ತವಾಯಿತು. ಸಚಿವ ಡಿ.ಸುಧಾಕರ್ ಮಾತನಾಡಿ, ಜಿಲ್ಲಾಸ್ಪತ್ರೆಯಲ್ಲಿ ಸ್ವಚ್ಛತೆ ಕಾಪಾಡಿಕೊಂಡಿಲ್ಲ. ಶವ ಪರೀಕ್ಷೆ ಸ್ಥಳದಲ್ಲಿ ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿಯಿದೆ. ಡಿ.ಹೆಚ್.ಓ ಹಾಗೂ ಜಿಲ್ಲಾ ಶಸ್ತ್ರಚಿಕಿತ್ಸಕರು ಕರ್ತವ್ಯದಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಇದೇ ವೇಳೆ ಜಿಲ್ಲಾಸ್ಪತ್ರೆ ಸಿಬ್ಬಂದಿ ಸಾಮೂಹಿಕವಾಗಿ ರಜೆಯ ಮೇಲೆ ತೆರಳಿದ ವಿಷಯ ಚರ್ಚೆಗೆ ಗ್ರಾಸವಾಯಿತು. ಪ್ರಾದೇಶಿಕ ಆಯುಕ್ತ ಅಮ್ಲಾನ್ ಆದಿತ್ಯ ಬಿಸ್ವಾಸ್ ಮಾತನಾಡಿ, ಪ್ರಾಥಮಿಕ ವರದಿ ಆಧಾರದಲ್ಲಿ ಕೆಲ ಸಿಬ್ಬಂದಿ ರಜೆ ಅರ್ಜಿ ನೀಡದೆ ಪ್ರವಾಸಕ್ಕೆ ತೆರಳಿದ್ದಾರೆ. ಆರೋಪ ಕೇಳಿ ಬಂದ ನಂತರ ರಜೆ ಅರ್ಜಿಗಳನ್ನು ಸೃಷ್ಠಿಸಿ ದಾಖಲೆಗಳನ್ನು ತಿದ್ದುವ ಕೆಲಸ ಮಾಡಲಾಗಿದೆ. ಈ ಹಿನ್ನಲೆಯಲ್ಲಿ ರಜೆ ಅರ್ಜಿಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಗೆ ಕಳುಹಿಸಿ ಸಹಿ ಹಾಗೂ ಇತರೆ ವಿಷಯಗಳ ಸತ್ಯಾಸತ್ಯೆಯನ್ನು ಪರಿಶೀಲಿಸಲಾಗುವುದು. ಒಂದೊಮ್ಮೆ ರಜೆ ಅರ್ಜಿ ವಿಚಾರದಲ್ಲಿ ಅಕ್ರಮ ಮಾಡಿರುವುದು ಕಂಡುಬಂದರೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಎಚ್ಚರಿಸಿದರು. ತಾವು ಚಿತ್ರದುರ್ಗದಲ್ಲಿ ಜಿಲ್ಲಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆಯಲ್ಲಿ ಜಿಲ್ಲಾಸ್ಪತ್ರೆ ಸ್ವಚ್ಛತೆ ಹಾಗೂ ಉತ್ತಮ ಸೇವೆಗೆ ರಾಜ್ಯದಲ್ಲಿಯೇ ಮೊದಲ ಸ್ಥಾನವನ್ನು ಸತತ ಎರೆಡು ಬಾರಿ ಗಿಟ್ಟಿಸಿಕೊಂಡಿತ್ತು. ಆದರೆ ಈಗ ಪರಿಸ್ಥಿತಿ ತುಂಬಾ ಹದಗೆಟ್ಟಿದೆ. ಜಿಲ್ಲಾ ಶಸ್ತ್ರಚಿಕತ್ಸಕರು ಹೊರಗುತ್ತಿಗೆ ನೌಕರರ ವೇತನವನ್ನು ಸರಿಯಾದ ಸಂದರ್ಭಕ್ಕೆ ನೀಡುತ್ತಿಲ್ಲ ಎನ್ನುವ ಆರೋಪಗಳು ಕೇಳಿ ಬಂದಿವೆ ಎಂದರು.
ಶಾಸಕ ಡಾ.ಎಂ.ಚಂದ್ರಪ್ಪ ಮಾತನಾಡಿ, ಕೋವಿಡ್ ಸಂದರ್ಭದಲ್ಲಿ ಜಿಲ್ಲೆಯಲ್ಲಿನ ಗಣಿ ಕಂಪನಿಗಳ ಸಿ.ಎಸ್.ಆರ್ ನಿಧಿಯಡಿ ಸಾಕಷ್ಟು ಉಪಕರಣಗಳನ್ನು ಜಿಲ್ಲಾಸ್ಪತ್ರೆಗೆ ನೀಡಲಾಗಿದೆ. ಈ ಉಪಕರಣಗಳಿಗೆ ಬಿಲ್ ಹೊಂದಿಸಿ ಡಿ.ಎಂ.ಎಫ್ ಅನುದಾನದಡಿ ಖರೀದಿಸಲಾಗಿದೆ ಎಂದು ಲೆಕ್ಕ ತೋರಿಸಲಾಗಿದೆ. ಈ ಕುರಿತು ಜಿಲ್ಲಾಧಿಕಾರಿಗಳು ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ರಾಜ್ಯ ಸರ್ಕಾರ ಕೋವಿಡ್ ಅಕ್ರಮಗಳ ತನಿಖೆಗೆ ನ್ಯಾಯಮೂರ್ತಿ ಮೈಕಲ್ ಖುನ್ಹಾ ನೇತೃತ್ವದಲ್ಲಿ ತನಿಖಾ ನಿಯೋಗ ನೇಮಿಸಿದೆ. ಈಗಾಗಲೇ ಜಿಲ್ಲಾಸ್ಪತ್ರೆಯ ದಾಸ್ತನು ವಹಿಗಳನ್ನು ನಿಯೋಗಕ್ಕೆ ಹಸ್ತಾಂತರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿದರು.
ಶಾಸಕ ಟಿ.ರಘುಮೂರ್ತಿ ಮಾತನಾಡಿ, ಚಿತ್ರದುರ್ಗ ನಗರದ ಜಿಲ್ಲಾಸ್ಪತ್ರೆ ವೈದ್ಯಕೀಯ ಕಾಲೇಜಿನೊಂದಿಗೆ ಸೇರ್ಪಡೆಯಾಗಿದೆ ಈ ಹಿನ್ನಲೆಯಲ್ಲಿ ಚಳ್ಳಕೆರೆ ತಾಲ್ಲೂಕು ಆಸ್ಪತ್ರೆಯನ್ನು ಜಿಲ್ಲಾಸ್ಪತ್ರೆ ಎಂದು ಮೇಲ್ದರ್ಜೆಗೆ ಏರಿಸಬೇಕು. ಪ್ರಸಕ್ತ ವರ್ಷದಲ್ಲಿ ಕೌನ್ಸಲಿಂಗ್ ಮೂಲಕ ವರ್ಗಾವಣೆಯಾದ ನಂತರ ಚಳ್ಳಕೆರೆ ಹಾಗೂ ಪರುಶುರಾಂಪುರ ಆಸ್ಪತ್ರೆಯಲ್ಲಿ ತಜ್ಞ ವೈದ್ಯರ ಕೊರತೆ ಕಾಡುತ್ತಿದೆ. ಇಲ್ಲಿಂದ ವರ್ಗಾವಣೆಯಾದವರ ಸ್ಥಾನಕ್ಕೆ ಬೇರೆಯಡೆಯಿಂದ ವೈದ್ಯರು ಆಗಮಿಸಿಲ್ಲ. ಕೂಡಲೇ ವೈದ್ಯರ ನಿಯೋಜನೆಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕ್ರಮ ಕೈಗೊಳ್ಳಬೇಕು. ವಾಸ್ತವ ಸ್ಥಿತಿಯನ್ನು ಆರೋಗ್ಯ ಸಚಿವರು ಹಾಗೂ ಸರ್ಕಾರದ ಗಮನಕ್ಕೆ ತರಬೇಕು ಎಂದರು.
ಇದೇ ವೇಳೆ ಜಿಲ್ಲೆಯಲ್ಲಿ ಏಪ್ರಿಲ್ ನಿಂದ ಆಗಸ್ಟ್ ಅಂತ್ಯದ ವರೆಗೆ ಸಂಭವಿಸಿದ ತಾಯಿ ಹಾಗೂ ಶಿಶು ಮರಣಗಳ ಕುರಿತು ಚರ್ಚಿಸಲಾಯಿತು. ಈ ಅವಧಿಯಲ್ಲಿ 7 ತಾಯಿ ಮರಣ ಪ್ರಕರಣ ಸಂಭವಿಸಿದ್ದು, 01 ಮಾತ್ರ ಸರ್ಕಾರಿ ಆಸ್ಪತ್ರೆಯಲ್ಲಿ ಮರಣ ಸಂಭವಿಸಿದೆ, ಉಳಿದಂತೆ 03 ಖಾಸಗಿ ಆಸ್ಪತ್ರೆಯಲ್ಲಿ ಹಾಗೂ 03 ಮನೆಯಲ್ಲಿ ಸಂಭವಿಸಿದೆ ಎಂದು ಆರ್.ಸಿ.ಹೆಚ್ ಅಧಿಕಾರಿ ಡಾ.ಅಭಿನವ್ ಮಾಹಿತಿ ನೀಡಿದರು.
ರಸ್ತೆ ತಗ್ಗು-ಗುಂಡಿಗಳನ್ನು ಮುಚ್ಚಲು ಸೂಚನೆ :
**** ಜಿಲ್ಲೆಯಲ್ಲಿನ ರಾಜ್ಯ ಮತ್ತು ಜಿಲ್ಲಾ ಮುಖ್ಯ ರಸ್ತೆಗಳ ನಿರ್ವಹಣೆ ಹಾಗೂ ತಗ್ಗು-ಗುಂಡಿಗಳನ್ನು ಮುಚ್ಚುವ ಕಾಮಗಾರಿಗಳ ಕುರಿತು ಸಭೆ ಚರ್ಚೆಯಾಯಿತು. ಮಳೆಯಿಂದಾಗಿ ಜಿಲ್ಲೆಯಲ್ಲಿ ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದ ಪ್ರಮುಖ ರಸ್ತೆಗಳು ಗುಂಡಿ ಬಿದ್ದು ಹಾಳಾಗಿವೆ, ಅವುಗಳನ್ನು ಯಾವಾಗ ಮುಚ್ಚಿಸುತ್ತೀರಿ, ಯಾವಾಗ ಕಾಮಗಾರಿ ಪ್ರಾರಂಭಿಸುತ್ತೀರಿ ಎಂದು ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಇಂಜಿನಿಯರ್ ನಾಗರಾಜ್ ಅವರಿಗೆ ಸಚಿವರು ಪ್ರಶ್ನಿಸಿದರು. 2023-24 ಹಾಗೂ 2024-25ನೇ ಸಾಲಿನಲ್ಲಿನ ಹಿರಿಯೂರು ತಾಲ್ಲೂಕಿನ ರಸ್ತೆಗಳ ನಿರ್ವಹಣೆಗೆ 16 ಕಾಮಗಾರಿಗಳ ಯೋಜನೆ ರೂಪಿಸಲಾಗಿದೆ. ಆದರೆ ಇದುವರೆಗೂ 2 ಕಾಮಗಾರಿಗಳಿಗೆ ಮಾತ್ರ ಚಾಲನೆ ನೀಡಲಾಗಿದೆ. ಕೂಡಲೆ ಜಿಲ್ಲೆಯಲ್ಲಿ ಉಳಿದ ಎಲ್ಲ ಕಾಮಗಾರಿಗಳನ್ನು ಟೆಂಡರ್ ಕರೆದು ದುರಸ್ಥಿ ಕಾರ್ಯಕೈಗೊಳುವಂತೆ ಸಚಿವ ಡಿ.ಸುಧಾಕರ್ ಸೂಚನೆ ನೀಡಿದರು. 2024-25 ಸಾಲಿನಲ್ಲಿ 774 ಕಿ.ಮೀ ರಾಜ್ಯ ರಸ್ತೆ ಹಾಗೂ 1733 ಕಿ.ಮೀ ಜಿಲ್ಲಾ ಮುಖ್ಯ ರಸ್ತೆ ನಿರ್ವಹಣೆಯನ್ನು ಲೋಕೋಪಯೋಗಿ ಇಲಾಖೆಯಿಂದ ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಅಂಗನಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ನೇಮಕಾತಿ ಆದೇಶ:
*****
ಜಿಲ್ಲೆಯಾದ್ಯಂತ 2024-25 ಸಾಲಿನಲ್ಲಿ 67 ಅಂಗನವಾಡಿ ಕಾರ್ಯಕರ್ತೆ ಹಾಗೂ 149 ಸಹಾಯಕಿಯರ ಹುದ್ದೆಗಳ ನೇಮಕಾತಿ ಅಧಿಸೂಚನೆ ಹೊರಡಿಸಲಾಗಿತ್ತು. ಈ ಪೈಕಿ ಈಗಾಗಲೇ 60 ಕಾರ್ಯಕರ್ತೆ ಹಾಗೂ 139 ಸಹಾಯಕಿಯರಿಗೆ ನೇಮಕಾತಿ ಆದೇಶ ನೀಡಲಾಗಿದೆ. ಉಳಿದ ಪ್ರಕರಣಗಳಲ್ಲಿ ಆಕ್ಷೇಪಣೆಗಳು ಸ್ವೀಕೃತವಾಗಿದ್ದು, ಪರಿಶೀಲನೆ ನಡೆಸಲಾಗುತ್ತಿದೆ. ಶೀಘ್ರವೇ ನಿಯಮಾನುಸಾರ ಉಳಿದವರಿಗೂ ನೇಮಕಾತಿ ಆದೇಶ ನೀಡಲಾಗುವುದು. 2025-26ನೇ ಸಾಲಿನಲ್ಲಿ 28 ಅಂಗನವಾಡಿ ಕಾರ್ಯಕರ್ತೆ ಹಾಗೂ 263 ಸಹಾಯಕಿಯರ ನೇಮಕಾತಿ ಅರ್ಜಿ ಆಹ್ವಾನಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ವಿಜಯಕುಮಾರ್ ಸಭೆಗೆ ಮಾಹಿತಿ ನೀಡಿದರು.
ಸೆ. 22 ಕ್ಕೆ ಮುಂದುವರೆದ ಕೆಡಿಪಿ ಸಭೆ:
*** ತ್ರೈಮಾಸಿಕ ಕೆ.ಡಿ.ಪಿ. ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಅಪೂರ್ಣವಾದ ಕಾರಣ, ಮುಂದುವರೆದ ಪ್ರಗತಿ ಪರಿಶೀಲನೆ ಸಭೆಯನ್ನು ಸೆ. 22 ಕ್ಕೆ ನಿಗದಿಪಡಿಸಲಾಗಿದೆ. ಸಭೆಗೆ ಸಮಗ್ರ ಮಾಹಿತಿಯೊಂದಿಗೆ ಅಧಿಕಾರಿಗಳು ಹಾಜರಾಗಬೇಕು ಎಂದು ಸಚಿವ ಡಿ. ಸುಧಾಕರ್ ಸೂಚನೆ ನೀಡಿದರು.
ಸಭೆಯಲ್ಲಿ ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ, ಹೊಳಲ್ಕೆರೆ ಶಾಸಕ ಡಾ. ಎಂ. ಚಂದ್ರಪ್ಪ, ವಿಧಾನಪರಿಷತ್ ಸದಸ್ಯರುಗಳಾದ ಶ್ರೀನಿವಾಸ್, ಕೆ.ಎಸ್. ನವೀನ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಅಧ್ಯಕ್ಷ ಶಿವಣ್ಣ, ಪ್ರಾದೇಶಿಕ ಆಯುಕ್ತರು ಹಾಗೂ ಜಿಲ್ಲಾ ಪಂಚಾಯತ್ ಆಡಳಿತಾಧಿಕಾರಿಯಾದ ಅಮ್ಲನ್ ಆದಿತ್ಯ ಬಿಸ್ವಾಸ್, ಜಿಲ್ಲಾಧಿಕಾರಿ ಟಿ. ವೆಂಕಟೇಶ್, ಜಿ.ಪಂ. ಸಿಇಒ ಡಾ. ಎಸ್. ಆಕಾಶ್, ಎಸ್‍ಪಿ ರಂಜಿತ್ ಕುಮಾರ ಬಂಡಾರು, ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ, ಜಿ.ಪಂ. ಉಪಕಾರ್ಯದರ್ಶಿ ಡಾ. ರಂಗಸ್ವಾಮಿ, ಮುಖ್ಯ ಯೋಜನಾಧಿಕಾರಿ ಗಾಯತ್ರಿ, ಕೆಡಿಪಿ ಸದಸ್ಯರುಗಳಾದ ದೀಪಿಕಾ ಸತೀಶ್, ತಿಮ್ಮಯ್ಯ, ರಂಗಸ್ವಾಮಿ, ರಾಮಚಂದ್ರ, ಖಲೀಂ ಉಲ್ಲಾ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.