ಮಂಡ್ಯ : ಜಗತ್ತಿನ ಶ್ರೇಷ್ಠ ಕಾರ್ಯಗಳಲ್ಲಿ ಶಿಕ್ಷಕ ವೃತ್ತಿಯು ಅಗ್ರ ಸ್ಥಾನ ಪಡೆದಿದೆ. ದೀಪದಿಂದ ದೀಪ ಬೆಳಗುವ ಹಾಗೆ ಜ್ಞಾನದಿಂದ ಜ್ಞಾನ ಬೆಳೆಸುವವರು ಶಿಕ್ಷಕ ವೃಂದವಾಗಿದೆ ಎಂದು ಶಾಸಕ ಕೆ.ಎಂ.ಉದಯ್ ಶುಕ್ರವಾರ ಹೇಳಿದರು.
ಮದ್ದೂರು ಪಟ್ಟಣದ ಶಿವಪುರದ ಶ್ರೀ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಶಿಕ್ಷಣಾಧಿಕಾರಿಗಳ ಕಚೇರಿ, ಶಾಲಾ ಶಿಕ್ಷಣ ಇಲಾಖೆ ಹಾಗೂ ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಮತ್ತು ನಿವೃತ್ತ ಶಿಕ್ಷಕರ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಆಧುನಿಕ ಯುಗದಲ್ಲಿ ನಾವು ಸಮಾಜದ ಮುಖ್ಯವಾಹಿನಿಗೆ ಬರಲು ಶಿಕ್ಷಕರಿಂದ ಸರಿಯಾದ ಜೀವನ ವಿಧಾನವನ್ನು ಅನುಸರಿಸಬೇಕಿದೆ. ಶಿಕ್ಷಕರು ಭವಿಷ್ಯದ ಶಿಲ್ಪಿಗಳಾಗಿದ್ದು, ಒಬ್ಬ ವ್ಯಕ್ತಿ ಸಮಾಜದಲ್ಲಿ ಉನ್ನತ ಮಟ್ಟದ ಸಾಧನೆ ಮಾಡಲು ಮತ್ತು ಉತ್ತಮ ಪ್ರಜೆಯಾಗಿ ರೂಪುಗೊಳ್ಳಲು ಶಿಕ್ಷಕರ ಪಾತ್ರ ಅಪಾರವಾಗಿದೆ. ಅವರ ಮಾರ್ಗದರ್ಶನದಲ್ಲಿ ನಾವು ನಮ್ಮ ಯಶಸ್ಸನ್ನು ಸಾಧಿಸುತ್ತೇವೆ. ಹಿಂದೆ ಗುರು ಇರಬೇಕು, ಮುಂದೆ ಗುರಿ ಇರಬೇಕು ಆಗ ಮಾತ್ರ ನಾವು ಯಶಸ್ಸಿನ ಗುರಿ ತಲುಪಲು ಸಾಧ್ಯವಾಗುತ್ತದೆ ಎಂದರು.
ಮೊದಲೆಲ್ಲ ಗುರುವನ್ನು ಗುರುವೇ ಪರಬ್ರಹ್ಮ ಎಂಬ ಸ್ವರೂಪದಲ್ಲಿ ಕಾಣಲಾಗುತ್ತಿತ್ತು. ಪ್ರಸ್ತುತ ಮುಂದುವರಿದ ಕಾಲಘಟ್ಟದಲ್ಲಿ ಇದು ಕಣ್ಮರೆಯಾಗುತ್ತಿದೆ. ಅಲ್ಲದೆ ಈ ಕಾಲದ ವಿದ್ಯಾರ್ಥಿಗಳ ಮನಸ್ಸು ಕಿನ್ನತೆಯೆಡೆಗೆ ಸಾಗುತ್ತಿರುವುದು ವಿಷಾದನೀಯ ಅಂಶವಾಗಿದೆ ಎಂದು ಹೇಳಿದರು.
ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವ ಶಿಕ್ಷಕರಿಗೆ ಸರ್ಕಾರದಿಂದ ಹೆಚ್ಚಿನ ಪ್ರಮಾಣದಲ್ಲಿ ಸೌಲಭ್ಯಗಳು ಸಿಗಬೇಕು. ಈ ನಿಟ್ಟಿನಲ್ಲಿ ನಾನು ಕೂಡ ಸರ್ಕಾರದ ಮಟ್ಟದಲ್ಲಿ ಹೋರಾಟ ಮಾಡುತ್ತೇನೆ. ಮುಂದಿನ ದಿನಗಳಲ್ಲಿ ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಅರ್ಥಪೂರ್ಣವಾಗಿ ಶಿಕ್ಷಕರ ದಿನಾಚರಣೆಯನ್ನು ಹಮ್ಮಿಕೊಂಡು ಶಿಕ್ಷಕ ವೃಂದಕ್ಕೆ ಗೌರವ ಸಲ್ಲಿಸಲಾಗುವುದು ಎಂದರು.
ಕ್ಷೇತ್ರದಲ್ಲಿ ಕೆಲವು ಸರ್ಕಾರಿ ಶಾಲೆಗಳಿಗೆ ಕೊಠಡಿಗಳು, ಶೌಚಗೃಹ ಸೇರಿದಂತೆ ಮೂಲ ಸೌಕರ್ಯ ಕಲ್ಪಿಸಲು ಸಮಗ್ರ ಅಭಿವೃದ್ಧಿಗೆ ಈಗಾಗಲೇ ಅಗತ್ಯ ಕ್ರಮ ಕೈಗೊಳ್ಳುವ ಜತೆಗೆ ವಿದ್ಯಾರ್ಥಿಗಳಿಗೆ ಶಿಕ್ಷಕರಿಂದ ಗುಣ್ಮಾತಕ ಶಿಕ್ಷಣ ಕೊಡಿಸಲಾಗುತ್ತಿದೆ ಎಂದರು.
ಇತಿಹಾಸ ಉಪನ್ಯಾಸಕ ಹಾ.ವಾಸು ಬೋರೇಗೌಡ ಕಾರ್ಯಕ್ರಮ ಕುರಿತು ಪ್ರಧಾನ ಭಾಷಣ ಮಾಡಿದರು.
ಇದೇ ವೇಳೆ ನಿವೃತ್ತಿಗೊಂಡ ಶಿಕ್ಷಕರನ್ನು ಹಾಗೂ ಉಪನ್ಯಾಸಕರನ್ನು ಶಾಸಕ ಕೆ.ಎಂ.ಉದಯ್ ಅಭಿನಂದಿಸಿದರು.
ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ರವೀಶ್, ಬಿಇಒ ಎಸ್.ಬಿ.ಧನಂಜಯ, ಅಕ್ಷರ ದಾಸೋಹ ಸಹಾಯಕ ನಿರ್ದೆಶಕಿ ರಾಜೇಶ್ವರಿ, ಪ್ರಾಂಶುಪಾಲರಾದ ಗೀತಾ, ಶಿಕ್ಷಣ ಇಲಾಖೆಯ ವಿವಿಧ ಸಂಘದ ಪದಾಧಿಕಾರಿಗಳಾದ ರವೀಶ್, ಸತೀಶ್, ಎಸ್.ಟಿ.ರಮೇಶ್. ರಮೇಶ್, ದೇವರಾಜು, ರವಿಚಂದ್ರ, ದೇವರಾಜು, ಚೌಡೇಶ್, ಎಚ್.ಆರ್.ಅನಂತೇಗೌಡ, ಚಂದ್ರಶೇಖರ್, ಮಂಜುನಾಥ್, ಅಂಕೇಗೌಡ, ಮಹೇಂದ್ರ ಕುಮಾರ್ ಜಯಲಿಂಗು, ಜೋಗಿಗೌಡ, ಸಿದ್ದರಾಜು, ಮಹೇಶ್, ನಾಗೇಂದ್ರಕುಮಾರ್ ಸೇರಿದಂತೆ ಮತ್ತಿತರರು ಇದ್ದರು.
ವರದಿ : ಗಿರೀಶ್ ರಾಜ್, ಮಂಡ್ಯ
ನಿಮ್ಮ ಮನೆಗೂ ‘UHID ಸ್ಟಿಕ್ಕರ್’ ಅಂಟಿಸಿದ್ದಾರೆಯೇ? ಆ ಬಗ್ಗೆ ಇಲ್ಲಿದೆ ಮಾಹಿತಿ