ಮೈಸೂರು : ಈ ಬಾರಿ ವಿಶ್ವವಿಖ್ಯಾತ ಮೈಸೂರು ದಸರಾ ಭರ್ಜರಿ ಸಿದ್ಧತೆ ನಡೆದಿದ್ದು, ಮೈಸೂರಿನಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ನಡುವೆ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಸಂದೇಶವನ್ನೊಳಗೊಂಡ ನಾಡಹಬ್ಬ ದಸರಾ ಮಹೋತ್ಸವದ ಅಧಿಕೃತ ಆಹ್ವಾನ ಪತ್ರಿಕೆಯನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ.
ವಿಶ್ವವಿಖ್ಯಾತ ಮೈಸೂರು ದಸರಾ- ಸಿಎಂ ಸಿದ್ದರಾಮ್ಯಯ ಶುಭಸಂದೇಶ
ನಾಡಿನ ಸಮಸ್ತ ಜನತೆಗೆ ನಾಡಹಬ್ಬ ಮೈಸೂರು ದಸರಾದ ಹಾರ್ದಿಕ ಶುಭಾಶಯಗಳು.
ನಮ್ಮ ರಾಜ್ಯದ ಐತಿಹಾಸಿಕ ಮತ್ತು ಸಾಂಸ್ಕೃತಿಕ ಪರಂಪರೆಯ ಹೊನಲಿನಲ್ಲಿ ಪ್ರಕಾಶಮಾನವಾಗಿರುವ ನಾಡಹಬ್ಬ ಮೈಸೂರು ದಸರಾ ಮಹೋತ್ಸವವು ಕರ್ನಾಟಕದ ಹೆಮ್ಮೆ ಶಕ್ತಿಯ ಆರಾಧನೆ, ಕಲಾ ಸಂಸ್ಕೃತಿಯ ಪೋಷಣೆ ಮತ್ತು ಸಮೂಹ ಸೌಹಾರ್ದತೆಯ ಪ್ರತೀಕವಾಗಿದೆ, ನ್ಯಾಯದ ಸ್ಥಾಪನೆಯ ಸಂಕೇತವಾಗಿದೆ.
ಈ ದಸರಾ ಹಬ್ಬದ ಸಂದರ್ಭದಲ್ಲಿ ಚಾಮುಂಡೇಶ್ವರಿ ದೇವಿಯ ಕೃಪೆ ಎಲ್ಲರ ಮೇಲೂ ಇರಲಿ. ನಾಡಿನಲ್ಲಿ ಶಾಂತಿ, ಸಮೃದ್ಧಿ ಮತ್ತು ಸೌಭಾಗ್ಯ ಮೇಲೈಸಲಿ ಎಂಬುದೇ ನನ್ನ ಹಾರೈಕೆ.
ವೈಭವೋಪೇತ ಮೈಸೂರು ದಸರಾ ಹಬ್ಬವು ನಾಡಿನ ವೈಶಿಷ್ಟ್ಯತೆ, ಜನಪದ ಕಲಾಪರಂಪರೆ ಮತ್ತು ಸಾಮೂಹಿಕ ಉತ್ಸವ ಸಂಸ್ಕೃತಿಯನ್ನೂ ವಿಶ್ವದವರೆಗೆ ಹರಡುವ ನಿಟ್ಟಿನಲ್ಲಿ ವಿಶ್ವದ ಕನ್ನಡಿಗರ ಸಾಂಸ್ಕೃತಿಕ ಹಬ್ಬವಾಗಿ ಅತ್ಯಂತ ಮಹತ್ವಪೂರ್ಣವಾಗಿದೆ.
ಈ ಬಾರಿಯ ದಸರಾ ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 02 ರವರೆಗೆ ಜರುಗಲಿದೆ. ಇಂತಹ ನಾಡಹಬ್ಬದ ಸಂದರ್ಭದಲ್ಲಿ ನಾವೆಲ್ಲರೂ ಒಗ್ಗಟ್ಟಿನಿಂದ, ಸಹಭಾಗಿತ್ವದಿಂದ, ಕನ್ನಡ ನಾಡು-ನುಡಿಗೆ ಗೌರವ ನೀಡುವ ದಿಕ್ಕಿನಲ್ಲಿ ಕೈಜೋಡಿಸೋಣ.
ಮತ್ತೊಮ್ಮೆ ನಾಡಹಬ್ಬ ದಸರಾ ಶುಭಾಶಯಗಳು.
ಡಿಸಿಎಂ ಡಿಕೆ ಶಿವಕುಮಾರ್ ಶುಭಸಂದೇಶ
ಕರ್ನಾಟಕದ ಜನತೆಗೆ ನಾಡಹಬ್ಬ ದಸರಾದ ಶುಭಾಶಯಗಳು.
“ಮೈಸೂರು ದಸರಾ ಎಷ್ಟೊಂದು ಸುಂದರ” ಶಕ್ತಿ, ಶಾಂತಿ ಮತ್ತು ಸಮಾನತೆಯನ್ನು ಸಾರುವ ಮಂದಾರ. ಇತಿಹಾಸ, ಸಂಸ್ಕೃತಿಯ ಪ್ರತೀಕವಾದ ಭಕ್ತಿ, ವೈಭವವನ್ನು ಒಳಗೊಂಡಿರುವ ಕರುನಾಡಿನ ಅತ್ಯಂತ ಪವಿತ್ರ ಹಾಗೂ ಪ್ರತಿಷ್ಠಿತವಾದ ಸಂಭ್ರಮದ ಹಬ್ಬವಾಗಿದೆ. ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಪ್ರಾರಂಭವಾಗಿ ಮೈಸೂರು ಅರಸರ ಅಳ್ವಿಕೆಯಲ್ಲಿ ಹೊಸ ರೂಪ ಪಡೆದು, ಇಂದಿನ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲೂ ಇತಿಹಾಸದ ಕೊಂಡಿಯಾಗಿ ಸರ್ವರನ್ನೂ ಬೆನಯುತ್ತಿರುವ ಹಬ್ಬ ದಸರಾ.
ಮೈಸೂರು ದಸರಾ ಕೇವಲ ಉತ್ಸವವಲ್ಲ. ನಮ್ಮ ನಾಡು-ನುಡಿಗಳ ಸಾಂಸ್ಕೃತಿಕ ಸಮ್ಮಿಲನ. ನಮ್ಮ ನಾಡಿನ ಪರಂಪರೆಯನ್ನು ಇಡೀ ಪ್ರಪಂಚಕ್ಕೆ ಪರಿಚಯಿಸುವ ಶಕ್ತಿಯುತ ವೇದಿಕೆ. ಇಂತಹ ಉತ್ಸವಗಳು ನಮ್ಮ ನೆಲದ ಮೂಲ ಗುಣವಾದ ಸೌಹಾರ್ದತೆಯನ್ನು ಸಾರುತ್ತವೆ. ಈ ಹಬ್ಬವು ನಮ್ಮ ನಾಡಿನಲ್ಲಿ ಶ್ರೇಯಸ್ಸು, ವೈಭವ ಮತ್ತು ಸಮಾನತೆಯ ಬೆಳಕು ಹರಡಲಿ ಎಂದು ಆಶಿಸುತ್ತೇನೆ.
ನಾಡ ಅಧಿದೇವತೆ ಚಾಮುಂಡೇಶ್ವರಿ ತಾಯಿಯ ಕೃಪಾಕಟಾಕ್ಷವು ರಾಜ್ಯದ ಜನರ ಮೇಲಿರಲಿ. ಎಲ್ಲಾ ಕೆಡುಕುಗಳಿಂದ ರಕ್ಷಣೆ ದೊರೆತು, ಸುಖ, ಶಾಂತಿ, ಆರೋಗ್ಯ ಹಾಗೂ ಸಮೃದ್ಧಿ ತರಲಿ ಎಂದು ಪ್ರಾರ್ಥಿಸುತ್ತೇನೆ. ಈ ಸಂತಸದ ಸಂದರ್ಭದಲ್ಲಿ ರಾಜ್ಯದ ಎಲ್ಲರಿಗೂ ನಾಡಹಬ್ಬದ ಶುಭಾಶಯಗಳನ್ನು ತಿಳಿಸುತ್ತೇನೆ.