ಬೆಂಗಳೂರು ಗ್ರಾಮಾಂತರ: ನೆಲಮಂಗಲದ ಬಸ್ ನಿಲ್ದಾಣಕ್ಕೆ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರು ಭೇಟಿ ನೀಡಿದರು. ಬಿಎಂಟಿಸಿ ಬಸ್ ನಿಲ್ದಾಣ ಬಳಕೆಗೆ ಸಿದ್ಧಗೊಂಡಿರುವ ಕಾರಣ, ಎರಡು ವರುಷಗಳ ನಂತರ ಇಂದಿನಿಂದ ಬಿ.ಎಂ.ಟಿ.ಸಿ ಬಸ್ಸುಗಳ ಕಾರ್ಯಚರಣೆ ಆರಂಭಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದಾರೆ.
ಸಾರಿಗೆ ಹಾಗೂ ಮುಜರಾಯಿ ಖಾತೆ ಸಚಿವ ರಾಮಲಿಂಗಾರೆಡ್ಡಿ ಅವರು ನೆಲಮಂಗಲ ಬಸ್ ನಿಲ್ದಾಣದ ಕಾಮಗಾರಿಯ ಪರಿವೀಕ್ಷಣೆ ನಡೆಸಿದರು. 2023 ರಲ್ಲಿ ಪ್ರಾರಂಭವಾದ ಬಸ್ ನಿಲ್ದಾಣದ ಕಾಮಗಾರಿಯು ಕಾರಣಾಂತರಗಳಿಂದ ಆಮೆಗತಿಯಲ್ಲಿ ಸಾಗುತ್ತಿದ್ದು, ಇದರಿಂದ ಸಾರ್ವಜನಿಕ ಪ್ರಯಾಣಿಕರಿಗೆ ಸಮರ್ಪಕ ಸಾರಿಗೆ ಸೌಲಭ್ಯದಿಂದ ವಂಚಿತರಾಗಿದ್ದರು. ಈ ವಿಷಯವು ಸಾರಿಗೆ ಸಚಿವರ ಗಮನಕ್ಕೆ ಬಂದ ಕೂಡಲೇ ನೆಲಮಂಗಲ ಶಾಸಕ ಶ್ರೀನಿವಾಸ್, ವ್ಯವಸ್ಥಾಪಕ ನಿರ್ದೇಶಕರು ಕೆಎಸ್ ಆರ್ ಟಿ ಸಿ, ವ್ಯವಸ್ಥಾಪಕ ನಿರ್ದೇಶಕರು ಬಿಎಂಟಿಸಿ ಹಾಗೂ ನೆಲಮಂಗಲ ನಗರಸಭಾ ಅಧ್ಯಕ್ಷರೊಂದಿಗೆ ನೆಲಮಂಗಲ ಪಟ್ಟಣದಲ್ಲಿ ನಿರ್ಮಾಣ ಹಂತದಲ್ಲಿರುವ ಬಸ್ ನಿಲ್ದಾಣದ ಪರಿಶೀಲನೆ ನಡೆಸಿದರು.
ಬಿಎಂಟಿಸಿ ವಾಹನಗಳ ಕಾರ್ಯಾಚರಣೆಗೆ ನಿಗದಿಪಡಿಸಿರುವ ನಾಲ್ಕು ಬಸ್ ಬೇಗಳಲ್ಲಿ ಎರಡು ಬಸ್ ಬೇ ಗಳ ಕಾಮಗಾರಿ ಸಂಪೂರ್ಣಗೊಂಡಿದ್ದು, ಇನ್ನೂ ಎರಡು ಬಸ್ ಬೇಗಳ ಕಾಮಗಾರಿಯನ್ನು 30 ದಿನಗಳೊಳಗೆ ಪೂರ್ಣಗೊಳಿಸಲು ಎಲ್ಲಾ ಸಿದ್ಧತೆ ಮಾಡಲು ಸಚಿವ ರಾಮಲಿಂಗಾರೆಡ್ಡಿ ಸೂಚಿಸಿದರು. ತದನಂತರ ಬಸ್ ನಿಲ್ದಾಣದ ಮುಂಭಾಗದಲ್ಲಿ ನಿರ್ಮಿಸಲು ಯೋಜಿಸಿರುವ ವಾಣಿಜ್ಯೋದ್ದೇಶ ಕಟ್ಟಡಗಳ ಕಾಮಗಾರಿಯನ್ನು ವೀಕ್ಷಿಸಿದರು.
ಈ ಸಂದರ್ಭದಲ್ಲಿ ಶಾಸಕರು ಹಾಗೂ ನಗರಸಭೆ ಅಧ್ಯಕ್ಷರು ಸದರಿ ಬಸ್ ನಿಲ್ದಾಣಕ್ಕೆ ಮುಖ್ಯರಸ್ತೆಯಿಂದ ಸಂಪರ್ಕಿಸುವ ರಸ್ತೆಯು ತುಂಬಾ ಚಿಕ್ಕದಾಗಿದ್ದು ಇದರಿಂದಾಗಿ ಬಸ್ ಗಳು ಸದರಿ ರಸ್ತೆಯಲ್ಲಿ ಸಂಚರಿಸಿದರೆ ಸಂಚಾರ ದಟ್ಟಣೆ ಉಂಟಾಗುತ್ತದೆ ಎಂಬ ಮಾಹಿತಿಯನ್ನು ಸಾರಿಗೆ ಸಚಿವರ ರಾಮಲಿಂಗಾರೆಡ್ಡಿ ಗಮನಕ್ಕೆ ತಂದರು. ಅವರು ಇದಕ್ಕೆ ರಸ್ತೆಯ ಅಗಲ ಹೆಚ್ಚಿಸಿ ಯೋಜನಾ ಬದ್ಧವಾಗಿ ಬಸ್ ಕಾರ್ಯಾಚರಣೆಗೆ ಅನುಕೂಲವಾಗುವಂತೆ ಕಾರ್ಯಸೂಚಿ ರೂಪಿಸಲು ಮುಖ್ಯ ಕಾಮಗಾರಿ ಅಭಿಯಂತರರಿಗೆ ಸೂಚಿಸಿದರು.
ಶಾಸಕರು ಮತ್ತು ಕೆಎಸ್ ಆರ್ ಟಿ ಸಿ/ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರುಗಳನ್ನು ಒಳಗೊಂಡಂತೆ ದಿನಾಂಕ 01.09.2025ರಂದು ಸಭೆ ಸೇರಿ ಸಾಧಕ ಬಾಧಕಗಳನ್ನು ಚರ್ಚಿಸಿ ನಿರ್ಮಾಣ ಹಂತದಲ್ಲಿರುವ ಬಸ್ ನಿಲ್ದಾಣವನ್ನು ಒಂದು ವರ್ಷದೊಳಗೆ ಪೂರ್ಣಗೊಳಿಸಲು ಸೂಚಿಸಿದರು.
ಈಗಾಗಲೇ ಕಾಮಗಾರಿ ಪೂರ್ಣಗೊಂಡ ಬಸ್ ಬೇ ಗಳನ್ನು ಕಾರ್ಯಾಚರಣೆಗಾಗಿ ಉಪಯೋಗಿಸುವಂತೆ ಸೂಚಿಸಿದ್ದಾರೆ. ಇದರಿಂದಾಗಿ ಬಸ್ ನಿಲ್ದಾಣದ ಮುಂಭಾಗದಲ್ಲಿ ಸಂಸ್ಥೆಯ ವಾಹನಗಳ ಸಂಚಾರ ದಟ್ಟಣೆ ಕಡಿಮೆ ಮಾಡುವ ದೃಷ್ಟಿಯಿಂದ ಬಾಕಿ ಇರುವ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಸಂಬಂಧಪಟ್ಟವರಿಗೆ ಸೂಚಿಸಿದ್ದಾರೆ. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಆದೇಶದಂತೆ ಮೊದಲ ಹಂತದಲ್ಲಿ ಇಂದು ಬಿ.ಎಂ.ಟಿ.ಸಿಯ ಬಸ್ಸುಗಳು ನೆಲಮಂಗಲ ಬಸ್ ನಿಲ್ದಾಣದಿಂದ ಕಾರ್ಯಾಚರಣೆ ಆರಂಭಗೊಂಡಿದೆ.
BREAKING: ಧರ್ಮಸ್ಥಳ ಕೇಸ್: ಈ ಸ್ಪೋಟಕ ಮಾಹಿತಿ ಬಿಚ್ಚಿಟ್ಟ ದೂರುದಾರ ಜಯಂತ್
‘ಹೊಸ ಆನ್ಲೈನ್ ಗೇಮಿಂಗ್ ಕಾಯ್ದೆಗೆ ನ್ಯಾಯಾಲಯಗಳು ಅಡ್ಡಿಯಾಗಲು ಸಾಧ್ಯವಿಲ್ಲ’: ಕರ್ನಾಟಕ ಹೈಕೋರ್ಟ್ ಗೆ ಕೇಂದ್ರ ಸರ್ಕಾರ