ಬೆಂಗಳೂರು : ಬೆಂಗಳೂರಿನಲ್ಲಿ ಯುವಕನೋರ್ವ ಬುದ್ದಿವಂತ ಸಿನಿಮಾ ಶೈಲಿಯಲ್ಲಿ ಯುವತಿಯರಿಗೆ ವಂಚಿಸಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಹೌದು, ಬೆಂಗಳೂರಿನ ಪಟ್ಟೇಗಾರಪಾಳ್ಯ ನಿವಾಸಿ ಮಿಥುನ್ ಕುಮಾರ್ ಬಂಧಿತ ಆರೋಪಿಯಾಗಿದ್ದಾನೆ. ಈತ ಸುಂದರವಾಗಿರುವ ಯುವತಿಯರನ್ನು ಬಲೆಗೆ ಬೀಳಿಸಿಕೊಂಡು ಪ್ರೀತಿಯ ನಾಟಕ ಮಾಡಿ ಅವರ ಜೊತೆ ಮದುವೆ ಆಗಿ. 5-6 ತಿಂಗಳು ಸಂಸಾರ ಮಾಡಿ. ನಂತರ ಅವರ ಬಳಿ ಇರುವ ಚಿನ್ನಾಭರಣ ದೋಚಿ ಪರಾರಿಯಾಗುತ್ತಿದ್ದ. ಈತ ಇಂತಹ ಕೇಸ್ ನಲ್ಲಿ ಹಲವು ಬಾರಿ ಜೈಲಿಗೆ ಹೋಗಿ ಬಂದಿದ್ದಾನೆ.
ಈ ಹಿಂದೆ ಬೆಂಗಳೂರಿನ ಕಾಮಾಕ್ಷಿ ಪಾಳ್ಯ ಪೊಲೀಸ್ ಠಾಣೆಯಲ್ಲಿ ಮಿಥುನ್ ವಿರುದ್ಧ ಲವ್ ಸೆಕ್ಸ್ ದೋಖಾ ಕೇಸ್ ದಾಖಲಾಗಿದ್ದು, 6 ತಿಂಗಳು ಜೈಲುಶಿಕ್ಷೆ ಅನುಭವಿಸಿ ಹೊರಗಡೆ ಬಂದಿದ್ದನು. ಇದೀಗ ಮತ್ತೋರ್ವ ಯುವತಿಗೆ ಈತ ವಂಚಿಸಿರುವ ಆರೋಪ ಕೇಳಿಬಂದಿದೆ. ಮತ್ತೆ ಯುವತಿಯನ್ನು ವಂಚಿಸಿ ಪರಾರಿಯಾಗಿದ್ದ ಯುವಕನನ್ನು ಬೆಂಗಳೂರಿನ ಗೋವಿಂದರಾಜನಗರ ಪೊಲೀಸ್ ಠಾಣೆ ಪೊಲೀಸರು ಬಂಧಿಸಿ ಪರಪ್ಪನ ಅಗ್ರಹಾರಕ್ಕೆ ಕಳುಹಿಸಿದ್ದಾರೆ. ಯುವತಿ ನೀಡಿದ ದೂರಿನ ಮೇರೆಗೆ ಪೊಲೀಸರು ಎಫ್ ಐ ಆರ್ ದಾಖಲಿಸಿ ಬಂಧಿಸಿದ್ದಾರೆ.