ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಅಲೆಮಾರಿ/ಅರೆಅಲೆಮಾರಿ ಜನಾಂಗದವರಿಗೆ ಸರ್ಕಾರದಿಂದ ವಿವಿಧ ಸೌಲಭ್ಯಗಳನ್ನು ನೀಡಲಾಗುತ್ತಿದ್ದು, ಅರ್ಹ ಫಲಾನುಭವಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಕೊಪ್ಪಳ ಜಿಲ್ಲಾ ಅಧಿಕಾರಿಗಳು ತಿಳಿಸಿದ್ದಾರೆ.
ಇಲಾಖೆಯಿಂದ ಮೆಟ್ರಿಕ್ ಪೂರ್ವ ವಿದ್ಯಾರ್ಥಿಗಳಿಗೆ ವಿಶೇಷ ಪ್ರೋತ್ಸಾಹಧನ ಯೋಜನೆಯಡಿ ಅಲೆಮಾರಿ/ಅಲೆಮಾರಿ ಪಂಗಡಕ್ಕೆ ಸೇರಿದ ವಿದ್ಯಾರ್ಥಿಗಳ ಪ್ರಾಥಮಿಕ, ಮಾಧ್ಯಮಿಕ ಹಾಗೂ ಪ್ರೌಢಶಿಕ್ಷಣಕ್ಕೆ ಆರ್ಥಿಕ ನೆರವು ನೀಡಲು, ಸರ್ಕಾರಿ ಅಥವಾ ಸರ್ಕಾರದಿಂದ ಮಾನ್ಯತೆ ಪಡೆದ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ವ್ಯಾಸಂಗ ಮಾಡುವ 1 ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ ಮಾಹೆಯಾಣ ರೂ.200 ರಂತೆ 10 ತಿಂಗಳ ಅವಧಿಗೆ ರೂ.2000/- ಗಳನ್ನು ಹಾಗೂ 9 ರಿಂದ 10 ನೇ ತರಗತಿ ವಿದ್ಯಾರ್ಥಿಗಳಿಗೆ ಮಾಹೆಯಾನ ರೂ.400 ರಂತೆ 10 ತಿಂಗಳ ಅವಧಿಗೆ ರೂ.4000/- ಗಳ ಪ್ರೋತ್ಸಾಹಧನ ಮಂಜೂರು ಮಾಡಲಾಗುತ್ತದೆ.
ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ ಅರ್ಹತಾ ವಿದ್ಯಾರ್ಥಿ ವೇತನ ಯೋಜನೆಯಡಿ ಅಲೆಮಾರಿ/ಅಲೆಮಾರಿ ಪಂಗಡಕ್ಕೆ ಸೇರಿದ ಮೆಟ್ರಿಕ್ ನಂತರದ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುವ ಕಾಲೇಜು ವಿದ್ಯಾರ್ಥಿಗಳಿಗೆ ಗ್ರೂಪ್-1 ರಲ್ಲಿ ಬರುವ ಪದವಿ ಮತ್ತು ಸ್ನಾತಕೋತ್ತರ ಪದವಿ ಮಟ್ಟದ ವೃತ್ತಿಪರ ಕೋರ್ಸುಗಳಿಗೆ ವಾರ್ಷಿಕ ರೂ.20,000/-, ಗ್ರೂಪ್-2 ರಲ್ಲಿ ಬರುವ ಪದವಿ ಡಿಪ್ಲೋಮಾ, ಪ್ರಮಾಣ ಪತ್ರಕ್ಕೆ ಕಾರಣವಾಗುವ ಇತರೆ ವೃತ್ತಿಪರ ಕೋರ್ಸುಗಳಿಗೆ ವಾರ್ಷಿಕ ರೂ.13,000/-, ಗ್ರೂಪ್-3 ರಲ್ಲಿ ಬರುವ ಗ್ರೂಪ್-1 ಮತ್ತು ಗ್ರೂಪ್-2 ರಲ್ಲಿ ಒಳಗೊಳ್ಳದ ಪದವಿ ಮತ್ತು ಸ್ನಾತಕೋತ್ತರ ಪದವಿ ಕೋರ್ಸುಗಳಿಗೆ ವಾರ್ಷಿಕ ರೂ.8000/- ಹಾಗೂ ಗ್ರೂಪ್-4 ರಲ್ಲಿ ಬರುವ ಎಲ್ಲಾ ಮೆಟ್ರಿಕ್ಯೂಲೇಷನ್ ನಂತರದ (10ನೇ ತರಗತಿ ನಂತರದ ಕೋರ್ಸುಗಳು) ಕೋರ್ಸುಗಳಿಗೆ ರೂ.5000/- ಗಳನ್ನು ಅರ್ಹತಾ ವಿದ್ಯಾರ್ಥಿ ವೇತನವಾಗಿ ನೀಡಲಾಗುತ್ತದೆ.
ಆಶ್ರಮ ಶಾಲೆಗಳ ನಿರ್ವಹಣೆ ಕಾರ್ಯಕ್ರಮದಡಿ ಅಲೆಮಾರಿ/ಅಲೆಮಾರಿ ಜನಾಂಗದವರ ಕುಟುಂಬಕ್ಕೆ ಸೇರಿದ ಮಕ್ಕಳ ಪ್ರಾಥಮಿಕ ಶಿಕ್ಷಣಕ್ಕೆ ನೆರವು ಹಾಗೂ ಉತ್ತೇಜನ ನೀಡುವ ದೃಷ್ಠಿಯಿಂದ 125 ಸಂಖ್ಯಾಬಲದ ಶಾಲೆಯನ್ನು ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ತಾವರಗೇರಾ ಗ್ರಾಮದಲ್ಲಿ ನಿರ್ವಹಣೆ ಮಾಡಲಾಗುತ್ತಿದೆ. ಈ ಆಶ್ರಮ ಶಾಲೆಗಳಲ್ಲಿ 1 ರಿಂದ 5 ನೇ ತರಗತಿಯವರೆಗೆ ಊಟ ಮತ್ತು ವಸತಿ ಸೌಲಭ್ಯವನ್ನು ಕಲ್ಪಿಸಿ, ಹತ್ತಿರದಲ್ಲಿ ಸಕಾರಿ ಶಾಲೆ ಇಲ್ಲದೇ ಇದ್ದಲ್ಲಿ, ಶೈಕ್ಷಣಿಕ ಸೌಲಭ್ಯವನ್ನು ಕೂಡಾ ಒದಗಿಸಲಾಗುತ್ತದೆ.
ಅಲೆಮಾರಿ/ಅರೆಅಲೆಮಾರಿ ಮೂಲಭೂತ ಸೌಕರ್ಯಗಳು-ಕಾಂಕ್ರೀಟ್ ರಸ್ತೆ ಮತ್ತು ಚರಂಡಿ ಕಾರ್ಯಕ್ರಮಗಳಡಿ ಅಲೆಮಾರಿ/ಅರೆಅಲೆಮಾರಿ ಜನಾಂಗದವರು ಹೆಚ್ಚಾಗಿ ವಾಸಿಸುವ ಕಾಲೋನಿಗಳಲ್ಲಿ ಹಾಗೂ ಹೊಸದಾಗಿ ನಿರ್ಮಾಣ ಮಾಡಿದ ಬಡಾವಣೆಗಳಲ್ಲಿ ಕಾಂಕ್ರಿಟ್ ರಸ್ತೆ ಮತ್ತು ಚರಂಡಿ ನಿರ್ಮಾಣವನ್ನು ಮಾಡಿ ನಾಗರೀಕ ಸೌಲಭ್ಯವನ್ನು ಒದಗಿಸಲಾಗುತ್ತದೆ.
ವಸತಿ ಯೋಜನೆಯಡಿ ಅಲೆಮಾರಿ/ಅರೆಅಲೆಮಾರಿ ಜನಾಂಗದ ವಸತಿ ರಹಿತರಿಗೆ ಅತಿ ಅಗತ್ಯ ಮೂಲಭೂತ ಸೌಕರ್ಯವಾದ ವಸತಿ ಸೌಲಭ್ಯವನ್ನು ಒದಗಿಸಲಾಗುವುದು. ನಿರ್ದಿಷ್ಟ ನೆಲೆ ಇಲ್ಲದೆ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ವಲಸೆ ಹೋಗುವ ಕಾರಣ, ಶೈಕ್ಷಣಿಕ ಮತ್ತು ಆರ್ಥಿಕವಾಗಿ ಈ ಜನಾಂಗವು ಅತ್ಯಂತ ಹಿಂದುಳಿದಿರುವ ಕಾರಣ ವಸತಿ ಸೌಲಭ್ಯವನ್ನು ಕಲ್ಪಿಸಿ, ಒಂದು ಸ್ಥಳದಲ್ಲಿ ನೆಲೆ ನಿಲ್ಲಲು ಅವಕಾಶವನ್ನು ನೀಡುವುದು ಈ ಕಾರ್ಯಕ್ರಮದ ಉದ್ದೇಶವಾಗಿರುತ್ತದೆ.
ಡಿ.ದೇವರಾಜ ಅರಸು ಅಲೆಮಾರಿ/ಅರೆ ಅಲೆಮಾರಿ ಜನಾಂಗದ ವಸತಿ ಶಾಲೆ ಕಾರ್ಯಕ್ರಮದ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಕಾರಟಗಿಯಲ್ಲಿ ಡಿ.ದೇವರಾಜ ಅರಸು ಅಲೆಮಾರಿ/ಅರೆ ಅಲೆಮಾರಿ ಜನಾಂಗದ ವಿದ್ಯಾರ್ಥಿಗಳಿಗೆ 2025-26 ನೇ ಸಾಲಿಗೆ ಶೈಕ್ಷಣಿಕ ವರ್ಷದಿಂದ ವಸತಿ ಶಾಲೆ ಪ್ರಾರಂಭಿಸುತ್ತಿದ್ದು, ಈ ವಸತಿ ಶಾಲೆಯನ್ನು ಶೇ.100 ರಷ್ಟು ಅಲೆಮಾರಿ/ಅರೆ ಅಲೆಮಾರಿ ಜನಾಂಗದ ವಿದ್ಯಾರ್ಥಿಗಳಿಗೆ ಮೀಸಲಿರಿಸಿ, 6ನೇ ತರಗತಿಗೆ ಪ್ರಸಕ್ತ ಸಾಲಿಗೆ ಒಟ್ಟು 60 ವಿದ್ಯಾರ್ಥಿಗಳಿಗೆ ಪ್ರವೇಶ ಕಲ್ಪಿಸಲಾಗುತ್ತಿದೆ.
ಈ ಎಲ್ಲಾ ಸೌಲಭ್ಯಗಳ ಕುರಿತ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಕೊಪ್ಪಳ ದೂ.08539-221606 ಹಾಗೂ ತಾಲ್ಲೂಕಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕೊಪ್ಪಳ, ಕುಷ್ಟಗಿ, ಗಂಗಾವತಿ, ಯಲಬುರ್ಗಾ ಇವರನ್ನು ಸಂಪರ್ಕಿಸಬಹುದು ಎಂದು ಇಲಾಖೆಯ ಜಿಲ್ಲಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.