ಬೆಂಗಳೂರು : ವಸತಿ ಶಾಲೆಗಳಲ್ಲಿ ಹಲವು ವರ್ಷಗಳಿಂದ ಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಕರಿಗೆ ನೇಮಕಾತಿ ವೇಳೆ ಶೇ.5 ಕೃಪಾಂಕ ನೀಡಲು ಸುಪ್ರೀಂಕೋರ್ಟ್ ಆದೇಶಿಸಿದೆ.
ರಾಜ್ಯದ ಕಿತ್ತೂರು ರಾಣಿ ಚೆನ್ನಮ್ಮ, ಮೊರಾರ್ಜಿ ದೇಸಾಯಿ, ಏಕಲವ್ಯ ವಸತಿ ಶಾಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಕರಿಗೆ ನೇಮಕಾತಿ ವೇಳೆ ಕೃಪಾಂಕ ನೀಡಲು ಸುಪ್ರೀಂಕೋರ್ಟ್ ಸಮ್ಮತಿ ನೀಡಿದ್ದು, ಈ ಮೂಲಕ ಕಳೆದ 14 ವರ್ಷದಿಂದ ಶಿಕ್ಷಕರು ನಡೆಸುತ್ತಿದ್ದ ಕಾನೂನು ಹೋರಾಟ ತಾರ್ಕಿಕ ಅಂತ್ಯ ಕಂಡಿದೆ.
ಗುತ್ತಿಗೆ ಶಿಕ್ಷಕರಿಗೆ ಶೇಕಡ 5 ರಷ್ಟು ಕೃಪಾಂಕ ನೀಡಲೇಬೇಕೆಂಬ ಹೈಕೋರ್ಟ್ ಆದೇಶವನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಿದೆ. 2011ರಲ್ಲಿ ವೃಂದ ಮತ್ತು ನೇಮಕ ನಿಯಮ ಜಾರಿಗೆ ಬಂದಾಗ ಕಾರ್ಯನಿರ್ವಹಿಸುತ್ತಿದ್ದ ಗುತ್ತಿಗೆ ಶಿಕ್ಷಕರಿಗೆ ಇದು ಅನ್ವಯವಾಗಲಿದೆ.
ಹೈಕೋರ್ಟ್ ಏಕಸದಸ್ಯ ಪೀಠ ಮತ್ತು ವಿಭಾಗೀಯ ಪೀಠಗಳು ಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಕರಿಗೆ ಶೇಕಡ 5ರಷ್ಟು ಕೃಪಾಂಕ ನೀಡಲೇಬೇಕೆಂದು ನೀಡಿದ ಆದೇಶವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ.