ಬೆಂಗಳೂರು: ನಗರದಲ್ಲಿ ದ್ವಿಚಕ್ರ ವಾಹನ ಕದಿಯುತ್ತಿದ್ದಂತ ಓರ್ವ ಕಳ್ಳನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯಿಂದ 16 ಲಕ್ಷ ಮೌಲ್ಯದ 8 ಬೈಕ್ ಗಳನ್ನು ಜಪ್ತಿ ಮಾಡಿದ್ದಾರೆ.
ಈ ಕುರಿತಂತೆ ಬೆಂಗಳಊರು ನಗರ ಪೊಲೀಸರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಬಾಣಸವಾಡಿ ಪೊಲೀಸ್ ಠಾಣಾ ಸರಹದ್ದಿನ ಕಾಮರಾಜ ನಗರ, ಹೆಚ್.ಆರ್.ಬಿ.ಆರ್ ಲೇಔಟ್‌ನಲ್ಲಿ ವಾಸವಿರುವ ಪಿರಾದುದಾರರು ದಿನಾಂಕ:24/07/2025 ರಂದು ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ದೂರನ್ನು ಸಲ್ಲಿಸಿರುತ್ತಾರೆ. ದೂರಿನಲ್ಲಿ ಪಿರಾದುದಾರರು ದಿನಾಂಕ:20/07/2025 ರಂದು ಬೆಳಗ್ಗೆ ಕಮ್ಮನಹಳ್ಳಿ ಮುಖ್ಯರಸ್ತೆಯಲ್ಲಿರುವ ಜ್ಯೂವೆಲ್ಲರಿ ಅಂಗಡಿಯೊಂದರ ಮುಂಭಾಗದಲ್ಲಿ ದ್ವಿ-ಚಕ್ರ ವಾಹನವನ್ನು ನಿಲ್ಲಿಸಿ, ಕೆಲಸಕ್ಕೆ ಹೋಗಿರುತ್ತಾರೆ. ಅದೇ ದಿನ ಸಂಜೆ ವಾಪಸ್ ಬಂದು ನೋಡಲಾಗಿ ದ್ವಿ-ಚಕ್ರ ವಾಹನವನ್ನು ಯಾರೋ ಅಪರಿಚಿತರು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ತಿಳಿಸಿರುತ್ತಾರೆ. ಈ ಕುರಿತು ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ದ್ವಿ-ಚಕ್ರ ವಾಹನ ಕಳವು ಪ್ರಕರಣ ದಾಖಲಾಗಿರುತ್ತದೆ.
ಪ್ರಕರಣದ ತನಿಖೆಯನ್ನು ಮುಂದುವರೆಸಿದ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆಯನ್ನು ಕೈಗೊಂಡು, ಭಾತ್ಮೀದಾರರಿಂದ ಖಚಿತ ಮಾಹಿತಿಯನ್ನು ಕಲೆಹಾಕಿ, ದಿನಾಂಕ:03/08/2025 ರಂದು ಕಮ್ಮನಹಳ್ಳಿ ಮುಖ್ಯರಸ್ತೆಯಲ್ಲಿರುವ ಟೀ ಅಂಗಡಿಯೊಂದರ ಬಳಿ ಓರ್ವ ವ್ಯಕ್ತಿಯು ನಂಬರ್ ಪ್ಲೇಟ್‌ಯಿಲ್ಲದ ಒಂದು ದ್ವಿ-ಚಕ್ರ ವಾಹನವನ್ನು ನಿಲ್ಲಿಸಿಕೊಂಡು ನಿಂತಿದ್ದು, ಆತನನ್ನು ವಶಕ್ಕೆ ಪಡೆದುಕೊಳ್ಳಲಾಯಿತು. ವಶಕ್ಕೆ ಪಡೆದ ವ್ಯಕ್ತಿಯನ್ನು ವಿಚಾರಣೆಗೊಳಪಡಿಸಲಾಗಿ, ಈ ಪ್ರಕರಣದಲ್ಲಿ ದ್ವಿ-ಚಕ್ರ ವಾಹನವನ್ನು ಕಳವು ಮಾಡಿರುವುದಾಗಿ ತನ್ನೊಪ್ಪಿಕೊಂಡಿರುತ್ತಾನೆ. ಹಾಗೂ ಬೆಂಗಳೂರು ನಗರದ ವಿವಿಧ ಕಡೆಗಳಲ್ಲಿ ದ್ವಿ-ಚಕ್ರ ವಾಹನಗಳನ್ನು ಕಳವು ಮಾಡಿರುವುದಾಗಿ ತಿಳಿಸಿರುತ್ತಾನೆ. ಕಳವು ಮಾಡಿದ ದ್ವಿ-ಚಕ್ರ ವಾಹನಗಳನ್ನು ಕೆ.ಜಿ.ಹಳ್ಳಿ, ಸಂಪಿಗೆಹಳ್ಳಿ ಮತ್ತು ಥಣಿಸಂದ್ರದ ವಿವಿಧ ಜಾಗಗಳಲ್ಲಿ ನಿಲ್ಲಿಸಿರುವುದಾಗಿ ತಿಳಿಸಿರುತ್ತಾನೆ.
ದಿನಾಂಕ:04/08/2025 ರಂದು ಆರೋಪಿಯು ನೀಡಿದ ಮಾಹಿತಿ ಮೇರೆಗೆ ಕೆ.ಜಿ.ಹಳ್ಳಿ, ಸಂಪಿಗೆಹಳ್ಳಿ, ಥಣಿಸಂದ್ರದ ವಿವಿಧ ಜಾಗಗಳಲ್ಲಿ ನಿಲ್ಲಿಸಿದ್ದ 7 ದ್ವಿ-ಚಕ್ರ ವಾಹನಗಳನ್ನು ವಶ ಪಡಿಸಿಕೊಳ್ಳಲಾಯಿತು.
ಈ ಪ್ರಕರಣದ ಆರೋಪಿಯ ಬಂಧನದಿಂದ ಒಟ್ಟು 8 ದ್ವಿ-ಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿರುತ್ತದೆ. ಇವುಗಳ ಒಟ್ಟು ಮೌಲ್ಯ 16,00,000/-(ಆರು ಲಕ್ಷ ರೂಪಾಯಿ).
ಈ ಪ್ರಕರಣದ ಆರೋಪಿಯ ಬಂಧನದಿಂದ 1) ಬಾಣಸವಾಡಿ ಪೊಲೀಸ್ ಠಾಣೆಯ-04 ದ್ವಿ-ಚಕ್ರ ವಾಹನ ಕಳವು ಪ್ರಕರಣಗಳು, 2) ರಾಮಮೂರ್ತಿನಗರ ಪೊಲೀಸ್ ಠಾಣೆಯ-01 ದ್ವಿ-ಚಕ್ರ ವಾಹನ ಕಳವು ಪ್ರಕರಣ, 3) ಬೇಗೂರು ಪೊಲೀಸ್ ಠಾಣೆಯ-01 ದ್ವಿ-ಚಕ್ರ ವಾಹನ ಕಳವು ಪ್ರಕರಣ, 4) ಯಲಹಂಕ ಪೊಲೀಸ್ ಠಾಣೆಯ-01 ದ್ವಿ-ಚಕ್ರ ವಾಹನ ಕಳವು ಪ್ರಕರಣ ಸೇರಿದಂತೆ, ಒಟ್ಟು 7 ದ್ವಿ-ಚಕ್ರ ವಾಹನ ಕಳವು ಪ್ರಕರಣಗಳು ಪತ್ತೆಯಾಗಿದ್ದು, 1 ದ್ವಿ-ಚಕ್ರ ವಾಹನದ ಮಾಲೀಕರು ಪತ್ತೆಯಾಗಬೇಕಾಗಿರುತ್ತದೆ. ತನಿಖೆ ಪ್ರಗತಿಯಲ್ಲಿದೆ.
ದಿನಾಂಕ:04/08/2025 ರಂದು ಆರೋಪಿಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಮಾನ್ಯ ನ್ಯಾಯಾಲಯವು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿರುತ್ತದೆ.
ಈ ಕಾರಾಚರಣೆಯನ್ನು ಪೂರ್ವ ವಿಭಾಗದ ಉಪ-ಪೊಲೀಸ್ ಕಮೀಷನರ್ ದೇವರಾಜ್, ಐ.ಪಿ.ಎಸ್.ರವರ ಮಾರ್ಗದರ್ಶನದಲ್ಲಿ ಬಾಣಸವಾಡಿ ಉಪ ವಿಭಾಗದ ಸಹಾಯಕ ಪೊಲೀಸ್ ಕಮೀಷನರ್, ಉಮಾಶಂಕರ್.ಎಂ.ಹೆಚ್. ರವರ ನೇತೃತ್ವದಲ್ಲಿ ಬಾಣಸವಾಡಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಅರುಣ್ ಸಾಳುಂಕೆ ಹಾಗೂ ಇತರೆ ಅಧಿಕಾರಿ/ಸಿಬ್ಬಂದಿಗಳ ತಂಡ ಪ್ರಕರಣವನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿರುತ್ತಾರೆ.