ಬೆಂಗಳೂರು: ಶ್ರೀ ಕ್ಷೇತ್ರ ಧರ್ಮಸ್ಥಳದ ವಿಚಾರದ ದೂರುದಾರ, ದೂರುದಾರನ ಹಿಂದಿರುವ ವ್ಯಕ್ತಿಗಳ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಆಗ್ರಹಿಸಿದ್ದಾರೆ.
ಇಂದು ಇಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಮುಖ್ಯಮಂತ್ರಿಗಳು ಶನಿವಾರ ರಾತ್ರಿ ಹೇಳಿಕೆ ಕೊಟ್ಟು ಯಾವುದೇ ಕಾರಣಕ್ಕೂ ಎಸ್‍ಐಟಿ ರಚಿಸುವುದಿಲ್ಲ ಎಂದಿದ್ದರು. ಮರುದಿನವೇ ಅಂದರೆ, ಭಾನುವಾರ ಬೆಳಿಗ್ಗೆ ಎಸ್‍ಐಟಿ ರಚನೆಯ ಹೇಳಿಕೆ ಕೊಟ್ಟಿದ್ದರು. ರಾತ್ರೋರಾತ್ರಿ ಮುಖ್ಯಮಂತ್ರಿಗಳ ಅಭಿಪ್ರಾಯ ಬದಲಾಗಲು ಅವರ ಮೇಲೆ ಒತ್ತಡ ಹೇರಿದ್ದು ಯಾರು ಎಂದು ಸದನದಲ್ಲೇ ಪ್ರಶ್ನಿಸಿದ್ದೆ ಎಂದು ಗಮನಕ್ಕೆ ತಂದರು. ಒತ್ತಡ ಹೇರಿದ ಸಂಘಟನೆಗಳು ಯಾವುವು ಎಂಬ ಕುರಿತು ಸದನದ ಗಮನಕ್ಕೆ ತರಬೇಕು; ಮುಖ್ಯಮಂತ್ರಿಗಳು ಉತ್ತರಿಸಬೇಕೆಂದು ಕೋರಿದ್ದಾಗಿ ತಿಳಿಸಿದರು.
ಮುಸುಕುಧಾರಿಯು ಧರ್ಮಸ್ಥಳದ ವಿಷಯದಲ್ಲಿ ಸಾಕಷ್ಟು ಪ್ರಚಾರ ತೆಗೆದುಕೊಂಡು, ರಾಜ್ಯ ಸರಕಾರ ಎಸ್‍ಐಟಿ ಸ್ಥಾಪಿಸುವ ಮಟ್ಟಕ್ಕೂ ಹೋಗಿದ್ದ. ಕಳೆದ 2-3 ವಾರಗಳಿಂದ ತನಿಖೆಯ ಜೊತೆಗೇ ಧರ್ಮಸ್ಥಳ, ಶ್ರೀ ಮಂಜುನಾಥೇಶ್ವರನ ಕ್ಷೇತ್ರದ ಕುರಿತು ಸಾಕಷ್ಟು ಅಪಪ್ರಚಾರಗಳು ನಡೆದಿದ್ದವು. ರಾಜ್ಯ- ರಾಷ್ಟ್ರೀಯ ಮಾತ್ರವಲ್ಲದೇ ಅಂತರರಾಷ್ಟ್ರೀಯ ಮಟ್ಟದಲ್ಲೂ ಚರ್ಚೆಗೆ ಒಳಗಾಗಿತ್ತು ಎಂದು ವಿವರಿಸಿದರು.
ಕೋಟ್ಯಂತರ ಭಕ್ತರ ಭಾವನೆಗೆ ಧಕ್ಕೆ…
ಮುಸುಕುಧಾರಿ ಈಗ ಯಾರೋ ಗುಂಪಿನ ಒತ್ತಡದ ಹಿನ್ನೆಲೆಯಲ್ಲಿ ಹೇಳಿಕೆ ನೀಡಿದ್ದು ಗೊತ್ತಾಗಿದೆ. ಎಸ್‍ಐಟಿ ರಚಿಸಿದ ಬಳಿಕ ಆಗಿರುವ ಅಪಪ್ರಚಾರದ ಕಾರಣ ಕೋಟ್ಯಂತರ ಭಕ್ತರ ಭಾವನೆಗಳಿಗೆ ಧಕ್ಕೆ ಉಂಟಾಗಿದೆ. ಅವರಿಗೆ ನೋವಾಗಿದೆ ಎಂದು ವಿಜಯೇಂದ್ರ ಅವರು ಬೇಸರ ವ್ಯಕ್ತಪಡಿಸಿದರು.
ರಾಜ್ಯ ಸರಕಾರದ ಕ್ರಮ ಹಿಟ್ ಆಂಡ್ ರನ್ ಆಗಬಾರದು. ದೂರುದಾರ, ದೂರುದಾರನ ಹಿಂದಿರುವ ಪ್ರಭಾವಿ ವ್ಯಕ್ತಿಗಳೇ ಇರಬಹುದು; ಎಡಪಂಥೀಯ ಸಂಘಟನೆಗಳೇ ಇರಬಹುದು- ಇವರೆಲ್ಲರ ಬಗ್ಗೆ ಸಮಗ್ರ ತನಿಖೆ ಆಗಬೇಕೆಂದು ಅವರು ಮತ್ತೊಮ್ಮೆ ಆಗ್ರಹಿಸಿದರು.
ಪ್ರಚಾರಕರು, ಆರೆಸ್ಸೆಸ್‍ಗೆ ಅಗೌರವದಿಂದ ನೋವು
ಕೆಲವು ವ್ಯಕ್ತಿಗಳು ಸಂಘಟನೆ ಮಾಡಿಕೊಂಡು ಧರ್ಮಸ್ಥಳದ ವಿರೋಧವಾಗಿ ಚರ್ಚೆ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ನಮ್ಮ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿಗಳಾದ ಮಾನ್ಯ ಸಂತೋಷ್ ಜೀ ಅವರ ಬಗ್ಗೆ ಕೀಳು ಮಟ್ಟದ ಮಾತನಾಡಿದ್ದಾರೆ; ಆರೋಪ ಮಾಡಿದ್ದಾರೆ. ಆರೆಸ್ಸೆಸ್, ಪ್ರಚಾರಕರ ಬಗ್ಗೆ ಆಗಲೀ, ಸಂತೋಷ್ ಜೀ ಅವರ ಬಗ್ಗೆ ಈ ರೀತಿ ಹೇಳಿಕೆ ನೀಡಿದ್ದು, ನನ್ನನ್ನೂ ಒಳಗೊಂಡಂತೆ ರಾಜ್ಯದ ಅನೇಕ ಸ್ವಯಂಸೇವಕರಿಗೆ ನೋವಾಗಿದೆ. ಪ್ರಚಾರಕರು, ಆರೆಸ್ಸೆಸ್‍ಗೆ ಅಗೌರವ ತರುವುದನ್ನು ನೋಡಿಕೊಂಡು ರಾಜ್ಯ ಸರಕಾರ ಸುಮ್ಮನೇ ಕೂರಬಾರದು ಎಂದು ಅವರು ತಿಳಿಸಿದರು. ರಾಜ್ಯ ಸರಕಾರ ಇದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳÀಬೇಕು. ಧರ್ಮಸ್ಥಳದ ವಿಚಾರದಲ್ಲಿ ವ್ಯಕ್ತಿಗಳ ತೇಜೋವಧೆ ಮಾಡುವುದನ್ನು ಸಹಿಸಲು ಸಾಧ್ಯವಿಲ್ಲ ಎಂದು ಎಚ್ಚರಿಸಿದರು.
BREAKING: ‘ಬಾಲಿವುಡ್ ಖ್ಯಾತ ಗಾಯಕ ಲಕ್ಕಿ ಆಲಿ’ ವಿರುದ್ಧ ಅರೆಸ್ಟ್ ವಾರಂಟ್ ಜಾರಿ
ಭಾರತದಲ್ಲಿ ಮೊದಲ ಬಾರಿಗೆ: ವಂತಾರದಿಂದ ‘ಪಶುವೈದ್ಯಕೀಯ ತರಬೇತಿ ಕೋರ್ಸ್’ ಆರಂಭ