ಬೆಂಗಳೂರು : ಕಾಡುಗೊಲ್ಲ, ಅಲೆಮಾರಿ ಮತ್ತು ಅರೆ ಅಲೆಮಾರಿ ಸಮುದಾಯದ ಒಳಪಂಗಡಗಳ ಕುಲಶಾಸ್ತ್ರೀಯ ಅಧ್ಯಯನಕ್ಕೆ ಶೀಘ್ರವೇ ಆದೇಶ ಹೊರಡಿಸಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್ ಎಸ್.ತಂಗಡಗಿ ಅವರು ಭರವಸೆ ನೀಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಶ್ರೀ ಕೃಷ್ಣ ಜಯಂತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಚಿತ್ರದುರ್ಗ, ತುಮಕೂರು, ಕೋಲಾರ ಜಿಲ್ಲೆಗಳಲ್ಲಿ ಈ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಈ ಸಮುದಾಯದ ಕುಲಶಾಸ್ತ್ರೀಯ ಅಧ್ಯಯನದ ಬಗ್ಗೆ ಹಲವು ಬಾರಿ ಚರ್ಚೆ ನಡೆದಿತ್ತು. ಈ ಬಗ್ಗೆ ಶೀಘ್ರವೇ ಅಗತ್ಯ ಕ್ರಮವಹಿಸಲಾಗುವುದು ಎಂದು ಹೇಳಿದರು.
ಕಾಡುಗೊಲ್ಲ, ಅಲೆಮಾರಿ ಮತ್ತು ಅರೆ ಅಲೆಮಾರಿ ಸಮುದಾಯದಲ್ಲಿ 46 ಒಳಪಂಗಡಗಳಿವೆ. ಹೀಗಾಗಿ ಇದರ ಕುಲಶಾಸ್ತ್ರೀಯ ಅಧ್ಯಯನ ಅಗತ್ಯವಿದೆ ಎಂದು ಸಮುದಾಯದ ಮುಖಂಡರು ಹಲವು ಬಾರಿ ಮನವಿ ಮಾಡಿದ್ದರು. ಕುಲಶಾಸ್ತ್ರೀಯ ಅಧ್ಯಯನದಿಂದ ಅನುಕೂಲವಾಗಲಿದೆ ಎಂದರು.
ಇನ್ನು ರಾಜಕೀಯ ಮಾತನಾಡುತ್ತಿದ್ದೇನೆ ಎಂದು ಯಾರು ಅನ್ಯತಾ ಭಾವಿಸುವುದು ಬೇಡ. ಹಿಂದಿನ ಸರ್ಕಾರ ಚುನಾವಣಾ ಸಂದರ್ಭದಲ್ಲಿ ಹತ್ತು ನಿಗಮಗಳನ್ನು ಕೇವಲ ಪೇಪರ್ ನಲ್ಲಿ ಆದೇಶ ಮಾಡಿ ಹೋಗಿತ್ತು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ನಿಗಮಗಳನ್ನು ನೋಂದಣಿ ಮಾಡಿಸಿ, ಈ ನಿಗಮಗಳಿಗೆ ಅಗತ್ಯ ಅನುದಾನ ಒದಗಿಸಲಾಗಿದೆ. ಈ ಬಾರಿ ಅಲೆಮಾರಿ ಮತ್ತು ಅರೆ ಅಲೆಮಾರಿ ಅಭಿವೃದ್ಧಿ ನಿಗಮಕ್ಕೆ ಗಂಗಾಕಲ್ಯಾಣ, ನೇರ ಸಾಲ ಮತ್ತು ಸಾರಥಿ ಯೋಜನೆಗೆ ರೂ.45 ಕೋಟಿ ಅನುದಾನ ಮೀಸಲಿಡಲಾಗಿದೆ. ಈ ಸಮುದಾಯದ ಮೂಲಸೌಲಭ್ಯ ಅಭಿವೃದ್ಧಿಗೆ ರೂ.100 ಕೋಟಿ ಅನುದಾನ ಹಾಗೂ ವಾಸಕ್ಕೆ ಮನೆ ಇಲ್ಲದವರಿಗೆ ಮನೆ ನಿರ್ಮಾಣ ಮಾಡಿಕೊಡಲು ರೂ.15 ಕೋಟಿ ಮೀಸಲಿಡಲಾಗಿದೆ. ಈಗಾಗಲೇ ಭೂಮಿ ಗುರುತಿಸುವ ಕಾರ್ಯವನ್ನು ಪ್ರಾರಂಭಿಸಲಾಗಿದೆ. ಇನ್ನು ಕಾಡುಗೊಲ್ಲ ಅಭಿವೃದ್ಧಿ ನಿಗಮಕ್ಕೆ ರೂ.64 ಕೋಟಿ ಅನುದಾನ ಮೀಸಲಿಡಲಾಗಿದೆ ಎಂದು ಸಚಿವರು ವಿವರಿಸಿದರು.
ಕಾಡುಗೊಲ್ಲ ಸಮುದಾಯ ಭವನ ನಿರ್ಮಾಣಕ್ಕೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಅನುದಾನ ಒದಗಿಸಲಾಗುವುದು. ಪ್ರತಿಯೊಂದು ಸಣ್ಣ ಸಮಾಜದ ಬೆಳವಣಿಗೆ ಆಗಬೇಕು. ಈ ನಿಟ್ಟಿನಲ್ಲಿ ನಮ್ಮ ಮುಖ್ಯಮಂತ್ರಿಗಳು ಅಗತ್ಯ ಕ್ರಮವಹಿಸಿದ್ದಾರೆ. ಅದಕ್ಕೆ ಉದಾಹರಣೆ ಎಂದರೆ ಇತಿಹಾಸದಲ್ಲೇ ಮೊದಲ ಬಾರಿಗೆ ಹಿಂದುಳಿದ ವರ್ಗಗಳ ನಿಗಮಗಳಿಗೆ ಒಟ್ಟು ರೂ.1500 ಕೋಟಿ ಅನುದಾನ ಒದಗಿರುವುದೇ ಸಾಕ್ಷಿ ಎಂದರು.
ಪ್ರತಿಯೊಂದು ಸಮಾಜದಲ್ಲಿ ಸಣ್ಣ ಪುಟ್ಟ ವ್ಯತ್ಯಾಸಗಳಿರುತ್ತವೆ. ಪ್ರತಿಯೊಬ್ಬರು ಒಗ್ಗಟ್ಟಿನಿಂದ ಕೆಲಸ ಮಾಡಿದಾಗ ಸಂಘಟನೆ ಸಾಧ್ಯ. ಅಂಬೇಡ್ಕರ್ ಅವರು ಹೇಳಿದ್ದಂತೆ ಯಾವುದೇ ಸಮುದಾಯ ಅಭಿವೃದ್ಧಿ ಆಗಬೇಕಾದರೆ ಶಿಕ್ಷಣ, ಸಂಘಟನೆ ಮತ್ತು ಹೋರಾಟ ಅಗತ್ಯ. ಈ ನಿಟ್ಟಿನಲ್ಲಿ ಪ್ರತಿಯೊಂದು ಸಣ್ಣ ಸಮುದಾಯಗಳು ಹೆಜ್ಜೆಯನ್ನಿಡಬೇಕು ಎಂದು ಸಲಹೆ ನೀಡಿದರು.
ಇನ್ನು ಶ್ರೀಕೃಷ್ಣನ ಬಗ್ಗೆ ಎಷ್ಟು ಮಾತನಾಡಿದರೂ ಕಡಿಮೆಯೇ. ಜಾತಿ, ಮತ, ಪಂಥಗಳ ಬೇಧವಿಲ್ಲದೆ ಎಲ್ಲರೂ ಬಯಸುವ ವ್ಯಕ್ತಿತ್ವ ಶ್ರೀಕೃಷ್ಣರದ್ದು. ಯುದ್ಧದಿಂದ ವಿಮುಖನಾಗುವ ಸಂದರ್ಭದಲ್ಲಿ ಅರ್ಜುನನಿಗೆ ಬೋಧಿಸಲಾಯಿತು ಎನ್ನಲಾಗುವ ಗೀತೆಯಲ್ಲಿನ ಬೋದನೆಗಳು ಸರ್ವರಿಗೂ ಸರ್ವಕಾಲಕ್ಕೂ ಅನುಕರಣೀಯ. ಜೀವನದಲ್ಲಿ ಸೋತುಹೋದೆ ಅನಿಸಿದಾಗ ಅತ್ಯಂತ ಆತ್ಮವಿಶ್ವಾಸ ತುಂಬಬಲ್ಲ ಶ್ರೀ ಕೃಷ್ಣರ ನುಡಿಗಳು ಭಗವದ್ಗೀತೆಯಲ್ಲಿವೆ ಎಂದು ಸಚಿವರು ಮೆಲುಕು ಹಾಕಿದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯರೂ ಆದ ಗೊಲ್ಲ ಯಾದವ ಸಂಘದ ಅಧ್ಯಕ್ಷ ಡಿ.ಟಿ.ಶ್ರೀನಿವಾಸ್, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ್ ಬಿಳಿಮಲೆ, ನೆಪ್ರೋ ಮತ್ತು ಯುರಾಲಾಜಿ ಸಂಸ್ಥೆಯ ನಿರ್ದೇಶಕ ಡಾ.ಶಿವಲಿಂಗಯ್ಯ, ಬಿಬಿಎಂಪಿ ಮಾಜಿ ಸದಸ್ಯ ಮೋಹನ್, ಪ್ರೊ.ಎಂ.ಎನ್.ವೆಂಕಟೇಶ್, ಇಲಾಖೆ ನಿರ್ದೇಶಕಿ ಕೆ.ಎಂ.ಗಾಯಿತ್ರಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.