ಬೀದರ್: ಭಾದ್ರಪದ ಶುಕ್ಲ ಚತುರ್ಥಿಯಂದು ಮನೆ ಮನೆಯಲ್ಲೂ ಪೂಜೆಗೊಳ್ಳುವ ಗಣೇಶ ಪರಿಸರ (ಮಣ್ಣಿನಿಂದ)ದಿಂದಲೇ ಹುಟ್ಟಿದ ದೇವರಾಗಿದ್ದು, ಪರಿಸರ ಸ್ನೇಹಿಯಾದ ಬಣ್ಣರಹಿತ ಮಣ್ಣಿನ ಮೂರ್ತಿಗಳನ್ನೇ ಪೂಜಿಸುವಂತೆ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಈಶ್ವರ ಬಿ ಖಂಡ್ರೆ ನಾಡಿನ ಜನತೆಗೆ ಮನವಿ ಮಾಡಿದ್ದಾರೆ.
ಗೌರಿ – ಗಣೇಶ ಹಬ್ಬದ ಸಂದರ್ಭದಲ್ಲಿ ಚಿನ್ನದಿಂದ, ಬೆಳ್ಳಿಯಿಂದ ಅಥವಾ ಮಣ್ಣಿನಿಂದ ಮಾಡಿದ ಮೂರ್ತಿಗಳನ್ನು ಪೂಜಿಸುವುದು ಅನೂಚಾನವಾಗಿ ನಡೆದುಬಂದಿರುವ ಸಂಪ್ರದಾಯ. ಆದರೆ ಇತ್ತೀಚಿನ ವರ್ಷಗಳಲ್ಲಿ ನೀರಲ್ಲಿ ಕರಗದ ಪ್ಲಾಸ್ಟರ್ ಆಫ್ ಪ್ಯಾರೀಸ್ ಮತ್ತು ವಿಷಕಾರಿಯಾದ ಭಾರಲೋಹಯುಕ್ತ ರಾಸಾಯನಿಕ ಬಣ್ಣ ಲೇಪಿತ -ಪಿಓಪಿ ಮೂರ್ತಿಗಳ ಸಂಖ್ಯೆ ಹೆಚ್ಚಾಗಿದ್ದು, ಇದರ ವಿಸರ್ಜನೆಯಿಂದ ಜಲಚರಗಳು, ಪಶುಪಕ್ಷಿಗಳ ಸಾವಿಗೆ ಕಾರಣವಾಗುತ್ತಿದೆ ಎಂದೂ ತಿಳಿಸಿದ್ದಾರೆ.
ಜಲ ಮಾಲಿನ್ಯ (ತಡೆ ಮತ್ತು ನಿಯಂತ್ರಣ)ಕಾಯಿದೆ 1974ರ ಕಲಂ 33(ಎ) ಅಡಿಯಲ್ಲಿ ರಾಜ್ಯದ ನದಿ, ಸರೋವರ, ಕೆರೆ, ಕಟ್ಟೆ, ಬಾವಿ ಸೇರಿದಂತೆ ಯಾವುದೇ ಜಲ ಮೂಲದಲ್ಲಿ ಪಿಓಪಿ ಮೂರ್ತಿಗಳ ವಿಸರ್ಜನೆ ನಿಷೇಧಿಸಲಾಗಿದೆ. ಪ್ರಜ್ಞಾವಂತ, ಜವಾಬ್ದಾರಿಯುತ ನಾಗರಿಕರು, ಧಾರ್ಮಿಕರು ಪರಿಸರ ಸ್ನೇಹಿ ಮಣ್ಣಿನ ಗಣಪತಿ ಮೂರ್ತಿಗಳನ್ನು ಮಾತ್ರವೇ ಪೂಜಿಸಿ ಪರಿಸರ ಉಳಿಸುವಂತೆ ಈಶ್ವರ ಖಂಡ್ರೆ ಮನವಿ ಮಾಡಿದ್ದಾರೆ.
ಹೈಕೋರ್ಟ್ ಆದೇಶ:
ಪಿಓಪಿ ಗಣೇಶ ವಿಗ್ರಹಗಳನ್ನು ಕ್ಯಾಲ್ಷಿಯಂ, ಸಲ್ಫೇಟ್, ಹೆಮಿಹೈಡ್ರೇಟ್ ಯುಕ್ತ ಪುಡಿಯಿಂದ ತಯಾರಿಸಲಾಗುತ್ತದೆ. ಇದರಲ್ಲಿ ಗಂಧಕ, ರಂಜಕ, ಜಿಪ್ಸಮ್ ಮತ್ತು ಮ್ಯಾಗ್ನೀಷಿಯಂ ಸೇರಿದಂತೆ ಅನೇಕ ಅಪಾಯಕಾರಿ ಅಂಶಗಳಿರುತ್ತವೆ. ಇಂತಹ ಮೂರ್ತಿಗಳಿಗೆ ಪಾದರಸ, ಕ್ಯಾಡ್ಮಿಯಂ, ಸೀಸ ಮತ್ತು ಇಂಗಾಲ ಒಳಗೊಂಡ ರಾಸಾಯನಿಕ ಬಣ್ಣ ಲೇಪಿಸಲಾಗುತ್ತದೆ. ಇದನ್ನು ಕೆರೆ, ಬಾವಿ, ನದಿಯಲ್ಲಿ ವಿಸರ್ಜಿಸಿದಾಗ ಭಾರ ಲೋಹ ಕರಗಿ ಜನ ಜಾನುವಾರುಗಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಜಲಚರಗಳ ಸಾವಿಗೆ ಕಾರಣವಾಗುತ್ತದೆ ಎಂದು ತಿಳಿಸಿದ್ದಾರೆ.
ಹಬ್ಬದ ಸಂಭ್ರಮದಲ್ಲಿ ಯಾವುದೇ ಸಮುದಾಯದ ಧಾರ್ಮಿಕ ಭಾವನೆಗಳಿಗೆ ನೋವು ಉಂಟು ಮಾಡುವ ಉದ್ದೇಶ ಸರ್ಕಾರಕ್ಕೆ ಇಲ್ಲ. ಆದರೆ ಪರಿಸರಕ್ಕೆ ಮಾರಕವಾದ ಪಿಓಪಿ ಮೂರ್ತಿಗಳ ತಯಾರಿಕೆ, ಸಾಗಾಟ, ಮಾರಾಟ ಮತ್ತು ವಿಸರ್ಜನೆ ನಿಷೇಧಿಸಿ 2023ರ ಸೆ.15ರಂದು ಸರ್ಕಾರಿ ಆದೇಶ ಹೊರಡಿಸಲಾಗಿದೆ, ಇತ್ತೀಚೆಗೆ ರಾಜ್ಯ ಹೈಕೋರ್ಟ್ ಈ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವಂತೆ ನಿರ್ದೇಶನ ನೀಡಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಪರಿಸರ ಸ್ನೇಹಿಯಾದ ಮಣ್ಣಿನ ಮೂರ್ತಿಗಳನ್ನು ಪೂಜಿಸಿ ಪರಿಸರ ಉಳಿಸುವಂತೆ ಕೋರಿದ್ದಾರೆ.