ಶಿವಮೊಗ್ಗ : ನಮ್ಮ ಧಾರ್ಮಿಕ ಆಚರಣೆಗಳಿಗೆ ಯಾವುದೇ ಧಕ್ಕೆ ಬರಬಾರದು. ದೇವಸ್ಥಾನ ಸೇರಿದಂತೆ ಧಾರ್ಮಿಕ ಕೇಂದ್ರಗಳು ನಮ್ಮ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ. ಅವುಗಳ ಶ್ರೇಯೋಭಿವೃದ್ದಿಗೆ ಅಗತ್ಯ ಸಹಕಾರ ನೀಡಲಾಗುತ್ತದೆ ಎಂದು ಸಾಗರ ಶಾಸಕ ಹಾಗೂ ಅರಣ್ಯ ಕೈಗಾರಿಕಾ ಅಭಿವೃದ್ದಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ತಿಳಿಸಿದರು.
ಇಂದು ಶಿವಮೊಗ್ಗ ಜಿಲ್ಲೆಯ ಸಾಗರ ನಗರದ ಭಾರತೀತೀರ್ಥ ಸಭಾಭವನದಲ್ಲಿ ಶನಿವಾರ ಸಾಗರ-ಹೊಸನಗರ ವಿಧಾನಸಭಾ ಕ್ಷೇತ್ರವ್ಯಾಪ್ತಿ ಮುಜರಾಯಿ ದೇವಸ್ಥಾನಗಳ ಅಭಿವೃದ್ದಿಗೆ ಅನುದಾನ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದಂತ ಅವರು, ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿರುವ ವಿವಿಧ ಸಮಾಜಗಳ ದೇವಸ್ಥಾನಗಳು, ಸಮುದಾಯ ಭವನಗಳು ಸುಸಜ್ಜಿತವಾಗಿರಬೇಕು. ಅಲ್ಲಿ ಧಾರ್ಮಿಕ ಚಟುವಟಿಕೆಗಳು ನಿರಂತರವಾಗಿ ನಡೆಯಬೇಕು. ಈ ಹಿನ್ನೆಲೆಯಲ್ಲಿ ಈ ವರ್ಷ 94 ದೇವಸ್ಥಾನಗಳಿಗೆ ಸುಮಾರು 4 ಕೋಟಿ ರೂ. ಅನುದಾನ ನೀಡಲಾಗುತ್ತಿದೆ ಎಂದರು.
ಕೆಲವು ದೇವಸ್ಥಾನಗಳ ದಾಖಲೆ ಸರಿ ಇಲ್ಲದೆ ಇರುವುದರಿಂದ ಅನುದಾನ ನೀಡಲು ಸಾಧ್ಯವಾಗಿಲ್ಲ. ಇನ್ನು ಕೆಲವು ದೇವಸ್ಥಾನಗಳು ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿದ್ದು, ನಾವು ಕೊಡುವ ಅನುದಾನ ಕಡಿಮೆಯಾಗಿದೆ. ಅಂತಹ ದೇವಸ್ಥಾನಗಳಿಗೆ ಸಹ ಮುಂದಿನ ದಿನಗಳಲ್ಲಿ ಹೆಚ್ಚಿನ ಅನುದಾನ ನೀಡಲಾಗುತ್ತದೆ. ಪ್ರತಿ ವರ್ಷ 100 ದೇವಸ್ಥಾನಗಳಿಗೆ ಅನುದಾನ ನೀಡುವ ಚಿಂತನೆ ನಡೆಸಲಾಗಿದೆ ಎಂದು ಹೇಳಿದರು.
ಸಾಗರದ ಇತಿಹಾಸ ಪ್ರಸಿದ್ದ ಗಣಪತಿ ದೇವಸ್ಥಾನ ಊರಿನ ಹೆಬ್ಬಾಗಿಲು. ದೇವಸ್ಥಾನ ಪದೇಪದೇ ರಿಪೇರಿಗೆ ಬರುತ್ತಿರುವ ಹಿನ್ನೆಲೆಯಲ್ಲಿ ಕೇರಳ ಮಾದರಿಯಲ್ಲಿ ದೇವಸ್ಥಾನ ಪುನರ್ ನಿರ್ಮಿಸಲು ನೀಲನಕ್ಷೆ ಸಿದ್ದಪಡಿಸಲಾಗಿದೆ. ಸುಸಜ್ಜಿತ ಕಲ್ಯಾಣ ಮಂಟಪ, ಉದ್ಯಾನವನ ಸೇರಿ ವಿವಿಧ ಕಾಮಗಾರಿಗೆ ಚಾಲನೆ ನೀಡಲಾಗುತ್ತದೆ. ಇದರ ಜೊತೆಗೆ ಕೆಳದಿ ರಾಣಿ ಚೆನ್ನಮ್ಮ ವೃತ್ತದಲ್ಲಿ ಪುತ್ಥಳಿ ನಿರ್ಮಾಣ, ಮಹಾದ್ವಾರ ನಿರ್ಮಾಣ ಮಾಡಲಾಗುತ್ತದೆ. ಜಾತ್ಯಾತೀತವಾಗಿ, ಪಕ್ಷಾತೀತವಾಗಿ ಅಭಿವೃದ್ದಿ ಕೆಲಸಗಳನ್ನು ಮಾಡಲಾಗುತ್ತದೆ ಎಂದು ತಿಳಿಸಿದರು.
ನಾನು ಗೆಲ್ಲುವವರೆಗಷ್ಟೇ ಪಕ್ಷದ ನಾಯಕ, ಗೆದ್ದ ಬಳಿಕ ಜಾತ್ಯಾತೀತ ನಾಯಕ. ನಾನು ಅಭಿವೃದ್ಧಿಯ ವಿಚಾರದಲ್ಲಿ ಪಕ್ಷಾತೀತ ನಾಯಕ. ಆ ಸಮುದಾಯ, ಈ ಸಮುದಾಯ ಎನ್ನುವ ಯಾವುದೇ ಭೇದ ಭಾವವಿಲ್ಲ. ಎಲ್ಲಾ ಸಮುದಾಯಗಳಿಗೂ ಅನುದಾನ ಒದಗಿಸಿಕೊಡುವಂತ ಕೆಲಸ ಮಾಡುತ್ತೇನೆ. ಯಾರೇ ಮನೆಗೆ ಬಂದರು ಅವರ ಸಮಸ್ಯೆಯನ್ನು ನನ್ನ ಕೈಲಾದಷ್ಟು ಪರಿಹರಿಸುತ್ತಿದ್ದೇನೆ ಎಂದರು.
ತುಂಬೆ ದೇವಸ್ಥಾನದ ಪ್ರಖ್ಯಾತ ಭಟ್ ಮಾತನಾಡಿ, ಶಿವಮೊಗ್ಗ ಜಿಲ್ಲೆಯಲ್ಲಿ ಸಾಗರ ಕ್ಷೇತ್ರಕ್ಕೆ ಮಾತ್ರ ಮುಜರಾಯಿ ಅನುದಾನ ಬಿಡುಗಡೆಯಾಗಿದ್ದು, ಅದು ಶಾಸಕರ ವಿಶೇಷ ಪ್ರಯತ್ನದಿಂದ ಎಂದು ಅಧಿಕಾರಿಗಳೆ ತಿಳಿಸುತ್ತಾರೆ. ದೇವಸ್ಥಾನ ಎಂದರೆ ಅದು ಕೇವಲ ಪೂಜೆ ಮಾಡುವ ಸ್ಥಳವಲ್ಲ, ಬದಲಾಗಿ ನಮ್ಮ ಶ್ರದ್ಧಾಭಕ್ತಿಯ ಕೇಂದ್ರ. ದೇವಸ್ಥಾನಗಳ ಅಭಿವೃದ್ದಿಗೆ ಹಣ ಕೊಟ್ಟರೆ ಸಮಾಜಕ್ಕೆ ಹಣ ಕೊಟ್ಟಂತೆ ಎಂದು ಹೇಳಿದರು.
ಗಣಪತಿ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಟಿ.ವಿ.ಪಾಂಡುರಂಗ ಮಾತನಾಡಿದರು. ವೇದಿಕೆಯಲ್ಲಿ ಸಾಗರ ನಗರಸಭೆ ಸದಸ್ಯರಾದ ಗಣಪತಿ ಮಂಡಗಳಲೆ, ಮಧುಮಾಲತಿ, ಪ್ರಮುಖರಾದ ಕಲಸೆ ಚಂದ್ರಪ್ಪ, ಕೆ.ಹೊಳೆಯಪ್ಪ, ರಾಜು ಹಾಜರಿದ್ದರು.
ಈ ಸಂದರ್ಭದಲ್ಲಿ ಸಹನಾ ಭಟ್ ಪ್ರಾರ್ಥಿಸಿದರು. ಗಣಪತಿ ದೇವಸ್ಥಾನದ ಕಾರ್ಯ ನಿರ್ವಾಹಕ ಅಧಿಕಾರಿ ಪ್ರಮಿಳಾ ಕುಮಾರಿ ಸ್ವಾಗತಿಸಿದರು. ತಹಶೀಲ್ದಾರ್ ರಶ್ಮಿ ಪ್ರಾಸ್ತಾವಿಕ ಮಾತನಾಡಿದರು. ದೀಪಕ್ ಸಾಗರ್ ಕಾರ್ಯಕ್ರಮ ನಿರೂಪಿಸಿದರು.
ಸ್ಯಾಂಡಲ್ ವುಡ್ ನಟ ಅಜಯ್ ರಾವ್ ದಾಂಪತ್ಯದಲ್ಲಿ ಬಿರುಕು: ಫಸ್ಟ್ ರಿಯಾಕ್ಷನ್ ಇಲ್ಲಿದೆ
ರೈತರ ಗಮನಕ್ಕೆ: ಹಸು, ಕುರಿ, ಕೋಳಿ ಸಾಕಾಣಿಕೆ ಉಚಿತ ತರಬೇತಿಗೆ ಅರ್ಜಿ ಆಹ್ವಾನ