ಬೆಂಗಳೂರು : ದೇಶಾದ್ಯಂತ ಇಂದು 79 ನೇ ಸ್ವಾತಂತ್ರ್ಯೋತ್ಸವದ ಸಂಭ್ರಮ ಮನೆ ಮಾಡಿದ್ದು, ಇಂದು ಬೆಂಗಳೂರಿನ ಮಾಣೆಕ್ ಷಾ ಮೈದಾನದಲ್ಲಿ ಸಿಎಂ ಸಿದ್ದರಾಮಯ್ಯ ಧ್ವಜಾರೋಹಣ ನೆರವೇರಿಸಿದ್ದಾರೆ.
79ನೇ ಸ್ವಾತಂತ್ರ್ಯೋತ್ಸವದ ಭಾಷಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭಾಷಣದ ಮುಖ್ಯಾಂಶಗಳು
ಪ್ರೀತಿಯ ನಾಡ ಬಾಂಧವರೆ,
1. ಭಾರತದ 79ನೇ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ತಮಗೆ ಹೃತ್ಪೂರ್ವಕ ಶುಭಾಶಯಗಳನ್ನು ತಿಳಿಸಬಯಸುತ್ತೇನೆ.
2. ಬ್ರಿಟೀಷ್ ಸಾಮ್ರಾಜ್ಯಶಾಹಿ ಆಳ್ವಿಕೆಯನ್ನು ಕಿತ್ತೆಸೆದು ಧೈರ್ಯ, ತ್ಯಾಗ, ಸ್ವರಾಜ್ಯದ ಸಂಕೇತ ಮತ್ತು ಸಮಸ್ತ ಶಕ್ತಿಯಾದ ತ್ರಿವರ್ಣ ಧ್ವಜವನ್ನು ಸಂಭ್ರಮದಿಂದ ಹಾರಿಸಲಾಯಿತು. ದೇಶವನ್ನು ದಾಸ್ಯದಿಂದ ಬಿಡುಗಡೆಗೊಳಿಸಲು ನಡೆದ ದೀರ್ಘಕಾಲದ ಹೋರಾಟದಲ್ಲಿ ಭಾಗವಹಿಸಿದ್ದ ಮಹಾತ್ಮ ಗಾಂಧೀಜಿ, ಸರ್ದಾರ್ ವಲ್ಲಭ ಭಾಯಿ ಪಟೇಲ್, ಮೌಲಾನಾ ಅಬುಲ್ ಕಲಾಂ ಆಜಾದ್, ಜವಾಹರ್ ಲಾಲ್ ನೆಹರು, ಸುಭಾಷ್ ಚಂದ್ರ ಬೋಸ್, ಭಗತ್ ಸಿಂಗ್ ಮುಂತಾದ ಎಲ್ಲಾ ಅಮರ ವೀರರನ್ನು ಧನ್ಯತಾಭಾವದಿಂದ ಸ್ಮರಿಸೋಣ. ಅವರಿಗೆ ನಮಿಸೋಣ.
3. ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಕರ್ನಾಟಕವು ಮುಂಚೂಣಿಯಲ್ಲಿತ್ತು. ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ದೋಂಡಿಯಾ ವಾಘ, ಹಲಗಲಿಯ ವೀರ ಬೇಡರು, ಮೈಲಾರ ಮಹಾದೇವಪ್ಪ, ಬೂದಿ ಬಸಪ್ಪ ನಾಯಕ ಮುಂತಾದವರು ಹಾಗೂ ಶ್ರೀರಂಗಪಟ್ಟಣ, ಸುರಪುರ, ಕಿತ್ತೂರು, ಈಸೂರು, ವಿಧುರಾಶ್ವತ್ಥ, ಶಿವಪುರ, ಅಂಕೋಲ ಮುಂತಾದ ಸ್ಥಳಗಳು ಬ್ರಿಟೀಷರನ್ನು ನಡುಗಿಸಿದ್ದವು. ಲಕ್ಷಾಂತರ ಜನರು ಸಕ್ರಿಯವಾಗಿ ಭಾಗವಹಿಸಿದ್ದರಲ್ಲದೆ ಸಾವಿರಾರು ಜನರು ಜೀವ ತ್ಯಾಗ ಮಾಡಿದ್ದಾರೆ. ಅವರೆಲ್ಲರನ್ನೂ ಕೃತಜ್ಞತಾ ಪೂರ್ವಕವಾಗಿ ಗೌರವಿಸೋಣ.
4. ಸ್ವಾತಂತ್ರ್ಯಾನಂತರ ದೇಶದ ರಕ್ಷಣೆಗಾಗಿ ನಡೆದ ಯುದ್ಧಗಳಲ್ಲಿ, ಸಂಘರ್ಷಗಳಲ್ಲಿ ಅಸಂಖ್ಯಾತ ಸೈನಿಕರು ಹುತಾತ್ಮರಾಗಿದ್ದಾರೆ. ಪ್ರಧಾನ ಮಂತ್ರಿಗಳಾಗಿದ್ದವರು ಸಹ ಭಯೋತ್ಪಾದಕರ ದಾಳಿಯಲ್ಲಿ ಹುತಾತ್ಮರಾಗಿದ್ದಾರೆ. ದೇಶದ ಆರ್ಥಿಕತೆಯನ್ನು ಕಟ್ಟಿ ಬೆಳೆಸುವ ಕೈಂಕರ್ಯದಲ್ಲಿ ಅಸಂಖ್ಯಾತ ಕಾರ್ಮಿಕರು, ರೈತರು, ವಿದ್ವಾಂಸರು, ವಿಜ್ಞಾನಿಗಳು, ಶಿಕ್ಷಕರು, ಹೋರಾಟಗಾರರೂ ಸೇರಿದಂತೆ ಸಮಸ್ತ ಉತ್ಪಾದಕ ವರ್ಗಗಳ ಜನರು ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ. ಅವರೆಲ್ಲರನ್ನು ಈ ಸುಸಂದರ್ಭದಲ್ಲಿ ಸ್ಮರಿಸಲೇಬೇಕಾಗಿದೆ.
5. ಇತ್ತೀಚೆಗೆ ತಾನೆ ಪಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದಕರ ದಾಳಿಯಲ್ಲಿ ಮಡಿದವರು ಹಾಗೂ ಆ ನಂತರದಲ್ಲಿ ಭಾರತ ಮತ್ತು ಪಾಕಿಸ್ತಾನಗಳ ನಡುವೆ ನಡೆದ ಸಂಘರ್ಷದಲ್ಲಿ ಹುತಾತ್ಮರಾದ ಎಲ್ಲರನ್ನೂ ಋಣಪೂರ್ವಕವಾಗಿ ದೇಶವು ನೆನಪಿಡುತ್ತದೆ. ಅವರೆಲ್ಲರ ಧೀರೋದಾತ್ತ ಹೋರಾಟವನ್ನು ವಿನೀತ ಭಾವದಿಂದ ತಲೆಬಾಗಿ ಗೌರವಿಸುತ್ತದೆ.
6. ನಮ್ಮ ಹೆಮ್ಮೆಯ ನವಭಾರತದ ನಿರ್ಮಾಣದಲ್ಲಿ ತ್ಯಾಗ ಬಲಿದಾನಗಳನ್ನು ಮಾಡಿದ ಮಹಾನ್ ವ್ಯಕ್ತಿಗಳ ಮಾತುಗಳನ್ನು ನೆನಪಿಸಿಕೊಳ್ಳುವುದು ಈ ಸಂದರ್ಭದಲ್ಲಿ ಔಚಿತ್ಯಪೂರ್ಣ ಎನ್ನಿಸಿದೆ. ಪಂಡಿತ್ ಜವಾಹರ್ಲಾಲ್ ನೆಹರೂ ಅವರ ಪ್ರಕಾರ “ದೇಶ ಸೇವೆ ಎಂದರೆ ಸಂಕಷ್ಟದಲ್ಲಿರುವ ಕೋಟ್ಯಾಂತರ ಜನರ ಸೇವೆ. ಬಡತನ, ಅಜ್ಞಾನ, ರೋಗ ರುಜಿನಗಳಲ್ಲಿ ನರಳುವವರ ಬದುಕನ್ನು ನೇರ್ಪು ಮಾಡುವುದು”ಎಂದಿದ್ದಾರೆ.
7. ನುಡಿದಂತೆ ನಡೆಯಬೇಕು ಎಂಬುದು 12ನೇ ಶತಮಾನದ ಬಸವಾದಿ ಶರಣರ ನಿಶ್ಚಲ ನಿಲುವು. ನಮ್ಮ ಸರ್ಕಾರ ಈ ಧ್ಯೇಯ ವಾಕ್ಯದಲ್ಲಿ ನಂಬಿಕೆಯಿಟ್ಟು ರಾಜ್ಯವು ತನ್ನದೇ ಆದ ಅಭಿವೃದ್ಧಿ ಮಾದರಿಗಳನ್ನು ನಿರ್ಮಿಸಿದೆ. ಇದಕ್ಕೆ ‘ಕರ್ನಾಟಕ ಅಭಿವೃದ್ಧಿ ಮಾದರಿ’ಎಂಬ ಹೆಸರಿನಲ್ಲಿ ಮನ್ನಣೆ ದೊರೆತಿರುವುದು ಹೆಮ್ಮೆಯ ಸಂಗತಿ. ವಿಶ್ವಸಂಸ್ಥೆಯ ಮುಖ್ಯಸ್ಥರಾದ ಫಿಲೆಮಾನ್ ಯಾಂಗ್ರವರು ಕರ್ನಾಟಕಕ್ಕೆ ಬಂದು ನಮ್ಮ ಗ್ಯಾರಂಟಿ ಯೋಜನೆಗಳ ಬಗ್ಗೆ ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ. ಈ ಮೂಲಕ ನಮ್ಮ ಯೋಜನೆಗಳು ವಿಶ್ವಮಾನ್ಯಗೊಂಡಿವೆ.
8. ದೇಶದ ಪ್ರಮುಖ ಸಂಸ್ಥೆಗಳು ಮಾಡಿರುವ ಸಮೀಕ್ಷೆಗಳ ಪ್ರಕಾರ ಶೇ.10ರಷ್ಟಿರುವ ಶ್ರೀಮಂತರ ಬಳಿ ಶೇ.80ರಷ್ಟು ಸಂಪತ್ತು ಶೇಖರಣೆಯಾಗಿದೆ. ಆದರೆ ಶೇ. 10 ಜನ ಕೇವಲ ಶೇ.3ರಷ್ಟು ಮಾತ್ರ ಜಿಎಸ್ಟಿ ಪಾವತಿಸುತ್ತಿದ್ದರೆಂದು ಅಧ್ಯಯನಗಳು ಹೇಳುತ್ತಿವೆ. ಉಳಿದ ಶೇ.90ರಷ್ಟು ಜನ ಹೊಟ್ಟೆ-ಬಟ್ಟೆಗೆ ದುಡಿಯುವವರಾದ್ದರಿಂದ ಶೇ.97 ರಷ್ಟು ಜಿಎಸ್ಟಿ ಪಾವತಿಸುತ್ತಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ಯಾವ ಆರ್ಥಿಕತೆ ಮುಂದುವರೆಯಲು ಸಾಧ್ಯ? ಸಂವಿಧಾನದ ಆಶಯಗಳನ್ನು ಈಡೇರಿಸುವುದು ಹೇಗೆ? ಬೃಹದಾಕಾರವಾಗಿ ಬೆಳೆಯುತ್ತಿರುವ ಅಸಮಾನತೆಯನ್ನು ತಗ್ಗಿಸುವುದು ಹೇಗೆ? ಎಂಬ ಪ್ರಶ್ನೆಗಳು ನಮ್ಮನ್ನು ಬಾಧಿಸಲಾರಂಭಿಸಿದವು. ಈ ಬೃಹತ್ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಉದ್ದೇಶದಿಂದಲೇ ನಾವು ಗ್ಯಾರಂಟಿ ಯೋಜನೆಗಳು ಹಾಗೂ ಇನ್ನಿತರೆ ಜನ ಕಲ್ಯಾಣದ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದೇವೆ.
9. ಗ್ಯಾರಂಟಿ ಯೋಜನೆಗಳು ರಾಜ್ಯದ ಅಭಿವೃದ್ಧಿಯ ದಿಕ್ಕನ್ನೆ ಬದಲಾಯಿಸುತ್ತಿವೆ. 2023ರ ಮೇ ತಿಂಗಳಲ್ಲಿ ಅಧಿಕಾರಕ್ಕೆ ಬಂದ ಕೂಡಲೇ ನಾವು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲು ಆರಂಭಿಸಿದೆವು. ಅನ್ನಭಾಗ್ಯ, ಶಕ್ತಿ, ಗೃಹಲಕ್ಷ್ಮಿ, ಗೃಹ ಜ್ಯೋತಿ, ಯುವನಿಧಿ ಯೋಜನೆಗಳಿಗೆ ಈ ವರೆಗೆ 96,000 ಕೋಟಿ ರೂ.ಗಳಿಗೂ ಹೆಚ್ಚಿನ ಮೊತ್ತವನ್ನು ವಿನಿಯೋಗಿಸಿದ್ದೇವೆ. ಶಕ್ತಿ ಯೋಜನೆಯಲ್ಲಿ 500 ಕೋಟಿ ಟ್ರಿಪ್ಪುಗಳ ಮೂಲಕ ಮಹಿಳೆಯರು ಉಚಿತವಾಗಿ ಸರ್ಕಾರಿ ಬಸ್ಸುಗಳಲ್ಲಿ ಪ್ರಯಾಣ ಮಾಡಿದ್ದನ್ನು ಇತ್ತೀಚೆಗೆ ಆಚರಣೆ ಮಾಡಿದ್ದೇವೆ. ಮಧ್ಯವರ್ತಿಗಳ ಹಾವಳಿಯಿಲ್ಲದೆ ನೇರವಾಗಿ ಜನರಿಗೆ ತಲುಪುವ ಈ ಯೋಜನೆಗಳು ರಾಜ್ಯದ ಜನರ ತಲಾದಾಯವನ್ನು ಹೆಚ್ಚಿಸುತ್ತಿರುವುದಲ್ಲದೆ ಕಾರ್ಮಿಕ ಶಕ್ತಿಯಲ್ಲಿಮಹಿಳೆಯರ ಭಾಗವಹಿಸುವಿಕೆಯನ್ನು ಶೇ.23 ರಷ್ಟು ಹೆಚ್ಚಿಸಿವೆ ಎಂದು ಹಲವು ಅಧ್ಯಯನಗಳು ಹೇಳುತ್ತಿವೆ. ನಾವು ಶಕ್ತಿ ಯೋಜನೆಯನ್ನು ಜಾರಿಗೊಳಿಸುವುದರ ಜೊತೆಗೆ ಸಾರಿಗೆ ಇಲಾಖೆಗೆ ವಿವಿಧ ಮಾದರಿಯ ವಾಹನಗಳು ಸೇರಿದಂತೆ ಒಟ್ಟು 5,049 ಹೊಸ ಬಸ್ಸುಗಳ ಖರೀದಿ ಮತ್ತು 8,473 ಸಿಬ್ಬಂದಿಗಳನ್ನು ನೇಮಕ ಮಾಡಿಕೊಂಡಿದ್ದೇವೆ.
10. ಕರ್ನಾಟಕವು ಈಗ ತಲಾದಾಯದ ವಿಚಾರದಲ್ಲಿ ಮೊದಲ ಸ್ಥಾನದಲ್ಲಿದೆ. ತಲಾದಾಯದಲ್ಲಿ ಕಳೆದ ಹತ್ತು ವರ್ಷಗಳಲ್ಲಿ ಶೇ.101 ರಷ್ಟು ಪ್ರಗತಿಯನ್ನು ಸಾಧಿಸಿದ ರಾಜ್ಯ ನಮ್ಮ ಕರ್ನಾಟಕವಾಗಿದೆ. 2013-14 ರಲ್ಲಿ ಸ್ಥಿರ ದರಗಳಲ್ಲಿ 1,01,858 ರೂಪಾಯಿಗಳಷ್ಟಿದ್ದ ತಲಾದಾಯವು 2024-25 ರ ವೇಳೆಗೆ 2,04,605 ರೂಪಾಯಿಗಳಿಗೆ ತಲುಪಿದೆ.
11. ನಮ್ಮ ಸರ್ಕಾರವು ಗ್ಯಾರಂಟಿ ಯೋಜನೆಗಳೂ ಸೇರಿದಂತೆ ಸಹಾಯಧನ, ಪ್ರೋತ್ಸಾಹ ಧನ, ವಿದ್ಯಾರ್ಥಿವೇತನ, ಸಾಮಾಜಿಕ ಯೋಜನೆಗಳಿಗಾಗಿ ವಿನಿಯೋಗಿಸುತ್ತಿರುವ ಪಿಂಚಣಿ ಮುಂತಾದವುಗಳಿಗಾಗಿ 1.12 ಲಕ್ಷ ಕೋಟಿ ರೂ.ಗಳಿಗೂ ಹೆಚ್ಚಿನ ಮೊತ್ತವನ್ನು ಜನ ಕಲ್ಯಾಣಕ್ಕಾಗಿ ಖರ್ಚು ಮಾಡುತ್ತಿದೆ.
12. ಬಾಬಾಸಾಹೇಬ್ ಅಂಬೇಡ್ಕರ್ ಅವರು ನವೆಂಬರ್ 25, 1949 ರಂದು ತಮ್ಮ ಸಂವಿಧಾನ ಸಮರ್ಪಣಾ ಭಾಷಣದಲ್ಲಿ, “ನಾವು ಕೇವಲ ರಾಜಕೀಯ ಪ್ರಜಾಪ್ರಭುತ್ವದಿಂದ ಸಂತೃಪ್ತರಾಗಬಾರದು. ರಾಜಕೀಯ ಪ್ರಜಾಪ್ರಭುತ್ವಕ್ಕೆ ಆಧಾರವಾಗಿ ಆರ್ಥಿಕ ಪ್ರಜಾಪ್ರಭುತ್ವವನ್ನು ಏರ್ಪಡಿಸಿಕೊಳ್ಳಬೇಕು. ಆರ್ಥಿಕ ಪ್ರಜಾಪ್ರಭುತ್ವದ ಬುನಾದಿ ಇಲ್ಲದೆ ಹೋದರೆ, ರಾಜಕೀಯ ಪ್ರಜಾಪ್ರಭುತ್ವಕ್ಕೆ ಉಳಿಗಾಲವಿಲ್ಲ. ಸಾಮಾಜಿಕ ಪ್ರಜಾಪ್ರಭುತ್ವವೂ ಬಹಳ ಮುಖ್ಯ. ಸ್ವಾತಂತ್ರ್ಯವನ್ನು ಸಮಾನತೆಯಿಂದ ಬೇರ್ಪಡಿಸುವಂತಿಲ್ಲ. ಹಾಗೆ ಬೇರ್ಪಡಿಸಿದರೆ ಕೆಲವರ ಸರ್ವಾಧಿಕಾರವಾಗುತ್ತದೆ. ಸ್ವಾತಂತ್ರ್ಯ ಮತ್ತು ಸಮಾನತೆಗಳನ್ನೂ ಬಂಧುತ್ವದಿಂದ ಬೇರ್ಪಡಿಸುವಂತಿಲ್ಲ”ಎಂದಿದ್ದಾರೆ.
13. ಬಲಾಢ್ಯರು ಮಾತ್ರ ಬದುಕಬೇಕು ಉಳಿದವರು ಗುಲಾಮರಾಗಿ ಬಲಾಢ್ಯರಿಗಾಗಿ ದುಡಿಯಬೇಕು ಎನ್ನುವ ಮನುವಾದಿ ಸಿದ್ಧಾಂತದ ಮಾದರಿಯೇ ಸಾಮಾಜಿಕ ಡಾರ್ವಿನ್ವಾದ. ಈ ಮೃಗೀಯ ಸಿದ್ಧಾಂತಕ್ಕೆ ಎದುರಾಗಿ ಅಸಹಾಯಕರಿಗೆ ಮೊದಲು ಆದ್ಯತೆ ಸಿಗಬೇಕು ಎನ್ನುವುದು ನಮ್ಮ ಸಂವಿಧಾನವಾದ. ಆದ್ದರಿಂದ ನಾವು ಸಂವಿಧಾನದ ಉಳಿವಿಗಾಗಿ ಪಣ ತೊಡೋಣ.
14. ಜನರ ಬದುಕಿನ ಸ್ಥಿತಿಗತಿಗಳನ್ನು ಅರಿತುಕೊಳ್ಳಲು ಹಿಂದುಳಿದ ವರ್ಗಗಳ ಆಯೋಗದ ಮೂಲಕ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಮಾಡಲು ತೀರ್ಮಾನಿಸಿದ್ದೇವೆ. ಸಮರ್ಪಕವಾದ ಅಂಕಿ-ಅಂಶಗಳು ಮಾತ್ರ ಜನರ ಬದುಕಿನ ಗತಿಯನ್ನು ಬದಲಾಯಿಸಲು ಕಾರಣವಾಗಬಲ್ಲವು. ನಮ್ಮ ಮೊದಲ ಆದ್ಯತೆ ಅಂಕಿ-ಅಂಶಗಳ ಸಂಗ್ರಹ. ಆ ನಂತರ ರೂಪಿಸುವ ಯೋಜನೆಗಳಲ್ಲಿ ವಿಶೇಷ ಪ್ರಾತಿನಿಧ್ಯ ಕೊಡಬೇಕಾಗುತ್ತದೆ. ಹಾಗೆ ಮಾಡದಿದ್ದರೆ ನಾವು ನಮ್ಮ ಸಂವಿಧಾನಕ್ಕೆ ಹಾಗೂ ಸ್ವಾತಂತ್ರ್ಯ ಹೋರಾಟಕ್ಕೆ ಅನ್ಯಾಯ ಮಾಡುತ್ತಿದ್ದೇವೆ ಎಂದು ಭಾವಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿಯೆ ಪರಿಶಿಷ್ಟ ಜಾತಿಗಳಲ್ಲಿ ಒಳಮೀಸಲಾತಿ ಹಾಗೂ ಹಿಂದುಳಿದ ವರ್ಗಗಳ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯ ವಿಚಾರಗಳನ್ನು ಸರ್ಕಾರವು ಗಂಭೀರವಾಗಿ ಪರಿಗಣಿಸಿದೆ.
15. ಕಳೆದ ಎರಡು ವರ್ಷಗಳಲ್ಲಿ ರಾಜ್ಯದ ಅಭಿವೃದ್ಧಿ ಮಾದರಿಗೆ 250ಕ್ಕಿಂತ ಹೆಚ್ಚಿನ ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ. ಇಂಡಿಯಾ ಜಸ್ಟೀಸ್ ರಿಪೋರ್ಟ್ ವರದಿಗಳ ಪ್ರಕಾರ ನಮ್ಮ ರಾಜ್ಯವು ನ್ಯಾಯ ವ್ಯವಸ್ಥೆ, ಪೊಲೀಸು, ಕಾನೂನು ಸುವ್ಯವಸ್ಥೆ, ಕಾನೂನು ನೆರವು ಮುಂತಾದ ವಿಚಾರಗಳಲ್ಲಿ ಇಡೀ ದೇಶದಲ್ಲಿಯೇ ಮೊದಲ ಸ್ಥಾನದಲ್ಲಿದೆ.
16. ರಾಜ್ಯದಲ್ಲಿ ಉತ್ತಮವಾದ ಮುಂಗಾರು ಮಳೆಯಾಗುತ್ತಿದೆ. ಅಣೆಕಟ್ಟೆಗಳು ತುಂಬಿವೆ. ರೈತರ ಮುಖದಲ್ಲಿ ಮಂದಹಾಸವಿದೆ.ಹಿಂದಿನ ವರ್ಷಗಳಿಗೆ ಹೋಲಿಸಿದರೆ ಹೆಚ್ಚಿನ ಭೂ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ. 2024-25ರಲ್ಲಿ ಕೂಡ ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿದು ಕೃಷಿ ಮತ್ತು ತೋಟಗಾರಿಕಾ ಉತ್ಪನ್ನಗಳನ್ನು ಬೆಳೆಯಲಾಗಿದೆ. ಹಿಂದಿನ ಸರ್ಕಾರವು ಎಪಿಎಂಸಿಗಳನ್ನು ಖಾಸಗೀಕರಿಸಿ ರೈತರ ಬದುಕನ್ನು ಕಾರ್ಪೊರೇಟ್ ಬಂಡವಾಳಿಗರ ಕೈಗೆ ಕೊಡಲು ಹೊರಟಿತ್ತು. ಆದರೆ, ನಮ್ಮ ಸರ್ಕಾರವು ಎಪಿಎಂಸಿಗಳನ್ನು ಬಲಿಷ್ಠಗೊಳಿಸಿದ ಕಾರಣ 2024-25 ರಲ್ಲಿ 164 ಲಕ್ಷ ಮೆಟ್ರಿಕ್ ಟನ್ನುಗಳಷ್ಟು ಕೃಷಿ ಉತ್ಪನ್ನಗಳು ಆವಕವಾಗಿದ್ದು ಶೇ. 447 ರಷ್ಟು ಹೆಚ್ಚಿನ ಪ್ರಮಾಣವಾಗಿದೆ. ಇದು ರಾಜ್ಯದ ಎ.ಪಿ.ಎಂ.ಸಿ.ಗಳ ಇತಿಹಾಸದಲ್ಲಿಯೇ ದಾಖಲೆಯಾಗಿದೆ.
17. ಕಳೆದ ಎರಡು ವರ್ಷಗಳಲ್ಲಿ ಬೆಲೆ ಕುಸಿತ ಕಂಡ ಕಾರಣ ಮಾವು ಮತ್ತು ಕೊಬ್ಬರಿಗೆ ಬೆಂಬಲ ಬೆಲೆ ನೀಡಿದ್ದೇವೆ. ವಿವಿಧ ಕಾರಣಗಳಿಂದ ಬೆಳೆ ಹಾನಿಯಾದ ತೊಗರಿಗೂ ಪರಿಹಾರ ನೀಡಿದ್ದೇವೆ. ಅಡಿಕೆ ಮತ್ತು ತೆಂಗನ್ನು ಬಾಧಿಸುತ್ತಿರುವ ರೋಗಗಳ ನಿವಾರಣೆಗೆ ಈ ಸಾಲಿನ ಬಜೆಟ್ನಲ್ಲಿ ಅನುದಾನಗಳನ್ನು ಒದಗಿಸಿದ್ದೇವೆ. ನಮ್ಮ ಸರ್ಕಾರವು “ಕೃಷಿ ಮೊದಲು ಸರ್ವಕ್ಕೆ, ಕೃಷಿಯಿಂದ ಪಸರಿಸುವುದು ಆ ಕೃಷಿಯನು ಉದ್ಯೋಗಿಸುವ ಜನವನು ಪಾಲಿಸುವುದು ಆ ಜನಪದದ ಜನದಿ ವಸು ತೆರಳುವುದು”ಎಂಬ ಕುಮಾರವ್ಯಾಸನ ಪರಿಕಲ್ಪನೆಯನ್ನು ಅಕ್ಷರಶಃ ನಂಬಿ ಮುನ್ನಡೆಯುತ್ತಿದೆ.
18. ಕೃಷಿ ವಲಯಕ್ಕೆ 2025-26ರ ಬಜೆಟ್ ನಲ್ಲಿ 51,339 ಕೋಟಿ ರೂ.ಗಳನ್ನು ಒದಗಿಸಿದ್ದೇವೆ. 2022-23 ಕ್ಕೆ ಹೋಲಿಸಿದರೆ ಶೇ.52.34 ರಷ್ಟು ಹೆಚ್ಚಿನ ಅನುದಾನವನ್ನು ಒದಗಿಸಿ ಕೃಷಿ ವಲಯವನ್ನು ಬಲಪಡಿಸುತ್ತಿದ್ದೇವೆ. ಇಷ್ಟರ ನಡುವೆಯೂ ನಮಗೆ ಬೇಕಾಗಿರುವಷ್ಟು ಯೂರಿಯಾವನ್ನು ಒಕ್ಕೂಟ ಸರ್ಕಾರ ಪೂರೈಸುತ್ತಿಲ್ಲ, ಇದರಿಂದ ಸ್ವಲ್ಪ ಸಮಸ್ಯೆಗಳಾಗಿವೆ. ಈ ಸಮಸ್ಯೆಯನ್ನು ಕೂಡಲೆ ಪರಿಹರಿಸಬೇಕೆಂದು ಒಕ್ಕೂಟ ಸರ್ಕಾರವನ್ನು ಆಗ್ರಹಿಸುತ್ತೇನೆ.
19. “ರಿವಾರ್ಡ್”ಎಂಬ ಯೋಜನೆಯಡಿ 18 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಭೂ ಸಂಪನ್ಮೂಲ ಸಮೀಕ್ಷೆ (LRI) ಕೈಗೊಳ್ಳಲಾಗಿದೆಯಲ್ಲದೆ ರಾಷ್ಟ್ರದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಮಣ್ಣಿನ ಗುಣಲಕ್ಷಣ ಪೋಷಕಾಂಶ ಮತ್ತು ಸೂಕ್ತ ಬೆಳೆಯ ಮಾಹಿತಿ ಹೊಂದಿರುವ LRI ಕಾರ್ಡ್ ಗಳನ್ನು 8 ಲಕ್ಷ ರೈತರಿಗೆ ವಿತರಿಸಲಾಗಿರುತ್ತದೆ.
20. ರಾಜ್ಯದ ಹೈನುಗಾರಿಕೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕೆ.ಎಂ.ಎಫ್.ನಿಂದ “ಗೋವಿನಿಂದ ಗ್ರಾಹಕರವರೆಗೆ” ಎಂಬ ಶೀರ್ಷಿಕೆಯೊಂದಿಗೆ “ನಂದಿನಿ” ಬ್ರ್ಯಾಂಡ್ನಲ್ಲಿ 175 ಕ್ಕೂ ಅಧಿಕ ಗುಣಮಟ್ಟದ ಹಾಲಿನ ಉತ್ಪನ್ನಗಳನ್ನು ರಾಜ್ಯ, ಹೊರರಾಜ್ಯ ಮತ್ತು ವಿದೇಶಗಳ ಮಾರುಕಟ್ಟೆಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ಹಿಂದಿನ ಸರ್ಕಾರ ಬಾಕಿಯಿರಿಸಿದ್ದ 609 ಕೋಟಿ ರೂ.ಗಳನ್ನೂ ಸೇರಿಸಿ ಇದುವರೆಗೆ 3283 ಕೋಟಿ ರೂ.ಗಳನ್ನು ಪೆÇ್ರೀತ್ಸಾಹ ಧನವನ್ನು ನಮ್ಮ ಹೈನುಗಾರರ ಕುಟುಂಬಗಳಿಗೆ ಪಾವತಿಸಲಾಗಿದೆ.
21. ಕೈಗಾರಿಕಾ ಕ್ಷೇತ್ರದ ಬೆಳವಣಿಗೆಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಯಾವತ್ತೂ ಹಿಂದೆ ಬಿದ್ದಿಲ್ಲ. ರಾಜ್ಯದಲ್ಲಿರುವ ಅತಿ ದೊಡ್ಡ ಕೈಗಾರಿಕಾ ಪ್ರದೇಶಗಳನ್ನು ನಿರ್ವಹಿಸಲು ಮತ್ತು ಜಾಗತಿಕ ಉತ್ಪಾದನಾ ತಾಣಗಳಾಗಿ ಅಭಿವೃದ್ಧಿ ಪಡಿಸಲು, ವಿಶ್ವ ದರ್ಜೆಯ ಮೂಲಸೌಕರ್ಯವನ್ನು ಒದಗಿಸುವ ಉದ್ದೇಶದಿಂದ 44,166 ಎಕರೆ ಪ್ರದೇಶವುಳ್ಳ 18 ಕೈಗಾರಿಕಾ ಪ್ರದೇಶಗಳನ್ನು ವಿಶೇಷ ಹೂಡಿಕೆ ಪ್ರದೇಶಗಳೆಂದು ಘೋಷಿಸಲಾಗಿದೆ. ಇವುಗಳ ಜೊತೆಗೆ ಸಣ್ಣ ಕೈಗಾರಿಕೆಗಳ ಅಭಿವೃದ್ಧಿಗೂ ಆದ್ಯತೆ ನೀಡುತ್ತಿದ್ದೇವೆ. 10 ಲಕ್ಷ ಕೋಟಿ ರೂ.ಗಳಿಗಿಂತ ಹೆಚ್ಚಿನ ಹೂಡಿಕೆ ಮಾಡಲು ಕೈಗಾರಿಕೋದ್ಯಮಿಗಳು ಆಸಕ್ತಿ ತೋರಿಸಿದ್ದಾರೆ. ಕೈಗಾರಿಕಾ ಕ್ಷೇತ್ರದಲ್ಲಿ ರಾಜ್ಯವು ದೇಶದ ಮುಂಚೂಣಿ ರಾಜ್ಯಗಳ ಹಾದಿಯಲ್ಲಿದ್ದು ರಾಜ್ಯದ ಜಿ.ಎಸ್.ಡಿ.ಪಿ.ಗೆ ಶೇ.23.6 ರಷ್ಟು ಕೊಡುಗೆಯನ್ನು ನೀಡುತ್ತಿದೆ. ವಿದೇಶಿ ಬಂಡವಾಳ ಹೂಡಿಕೆಯಲ್ಲಿ ರಾಜ್ಯವು ಎರಡನೇ ಸ್ಥಾನದಲ್ಲಿದೆ. ರಾಜ್ಯದಲ್ಲಿ ಪ್ರವಾಸೋದ್ಯಮಕ್ಕೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಪ್ರವಾಸಿಗರಿಗೆ ಮೂಲಸೌಕರ್ಯಗಳನ್ನು ಹಾಗೂ ಜನರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಹೊಸ `ಪ್ರವಾಸೋದ್ಯಮ ನೀತಿ’ಯನ್ನು ಜಾರಿಗೊಳಿಸಿದ್ದೇವೆ.
22. ಶಿಕ್ಷಣ ಕ್ಷೇತ್ರದ ಬಲವರ್ಧನೆಗಾಗಿ ಈ ಸಾಲಿನಲ್ಲಿ 65,000 ಕೋಟಿ ರೂ.ಗಳಷ್ಟು ಬೃಹತ್ ಪ್ರಮಾಣದ ಸಂಪನ್ಮೂಲಗಳನ್ನು ವಿನಿಯೋಗಿಸುತ್ತಿದ್ದೇವೆ. ನಮ್ಮ ವಸತಿ ಶಾಲೆಗಳು, ವಸತಿ ನಿಲಯಗಳಲ್ಲಿ 8.36 ಲಕ್ಷಕ್ಕೂ ಹೆಚ್ಚಿನ ಮಕ್ಕಳು ಅತ್ಯುತ್ತಮ ಗುಣಮಟ್ಟದ ಶಿಕ್ಷಣ ಪಡೆಯುತ್ತಿದ್ದಾರೆ. ವಸತಿ ಶಾಲೆಗಳ ವಿದ್ಯಾರ್ಥಿಗಳ ಉತ್ತೀರ್ಣತೆಯ ಪ್ರಮಾಣ ಶೇ.98-99 ರಷ್ಟಿದೆ ಎಂಬುದು ಸಂತೋಷದ ಸಂಗತಿಯಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಅಗತ್ಯ ಇರುವ ಕಡೆಗಳಲ್ಲಿ ಹೊಸದಾಗಿ ವಸತಿ ಶಾಲೆಗಳು, ವಸತಿ ನಿಲಯಗಳನ್ನು ಸ್ಥಾಪಿಸುತ್ತಿದ್ದೇವೆ.
23. ಈ ವರ್ಷ 2,500 ಕೋಟಿ. ರೂ. ವೆಚ್ಚದಲ್ಲಿ 500 ಕರ್ನಾಟಕ ಪಬ್ಲಿಕ್ ಸ್ಕೂಲ್-ಕೆಪಿಎಸ್ ಶಾಲೆಗಳನ್ನು ಸ್ಥಾಪಿಸುತ್ತಿದ್ದೇವೆ. 53 ಲಕ್ಷ ಮಕ್ಕಳಿಗೆ ರಾಗಿ ಮಾಲ್ಟ್, ಹಾಲು, ವಾರದ ಎಲ್ಲಾ ದಿನ ಮೊಟ್ಟೆ ಅಥವಾ ಬಾಳೆಹಣ್ಣು, ಮಧ್ಯಾಹ್ನದ ಬಿಸಿಯೂಟ ನೀಡುತ್ತಿದ್ದೇವೆ. ಅತಿಥಿ ಶಿಕ್ಷಕರಿಗೆ ಮತ್ತು ಬಿಸಿಯೂಟ ತಯಾರಿಸುವ ಸಿಬ್ಬಂದಿಗಳಿಗೆ ಗೌರವಧನ ಹೆಚ್ಚಿಸಿದ್ದೇವೆ. ಶಿಕ್ಷಕರ ನೇಮಕಾತಿಗೂ ಆದ್ಯತೆ ನೀಡುತ್ತಿದ್ದೇವೆ. 2,500 ಕೋಟಿ ರೂ. ವೆಚ್ಚದಲ್ಲಿ ಪ್ರಥಮ ದರ್ಜೆ ಕಾಲೇಜುಗಳು, ಪಾಲಿಟೆಕ್ನಿಕ್ಗಳನ್ನು ಉನ್ನತೀಕರಿಸುತ್ತಿದ್ದೇವೆ. 13 ಹೊಸ ತಾಂತ್ರಿಕ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುತ್ತಿದ್ದೇವೆ.
24. ಪ್ರೊ.ಸುಖ್ದೇವ್ ಥೋರಟ್ ಅವರ ಅಧ್ಯಕ್ಷತೆಯಲ್ಲಿ ರಚನೆಯಾಗಿದ್ದ ರಾಜ್ಯ ಶಿಕ್ಷಣ ನೀತಿ ಆಯೋಗವು ಇತ್ತೀಚೆಗೆ ತನ್ನ ವರದಿಯನ್ನು ನೀಡಿದೆ. ಪೂರ್ಣ ಪ್ರಮಾಣದಲ್ಲಿ ರಾಜ್ಯದ್ದೆ ಆದ ಶಿಕ್ಷಣ ನೀತಿಯು ಸಿದ್ಧಪಡಿಸಲು ಕ್ರಮವಹಿಸಿರುವುದು ಇದೇ ಮೊದಲು. ವರದಿಯನ್ನು ಗಂಭೀರವಾಗಿ ಪರಿಶೀಲಿಸಿ ಅದರ ಅನುಷ್ಠಾನಕ್ಕೆ ಕ್ರಮಗಳನ್ನು ಕೈಗೊಳ್ಳುತ್ತೇವೆ.
25. ಯುವಜನರಿಗೆ ಕೌಶಲ್ಯ ತರಬೇತಿ ನೀಡಿ ಉದ್ಯೋಗ ಒದಗಿಸುವುದು ನಮ್ಮ ಸರ್ಕಾರದ ಪ್ರಮುಖ ಆದ್ಯತೆ. 8 ರಿಂದ 12ನೇ ತರಗತಿವರೆಗಿನ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ “ನನ್ನ ವೃತ್ತಿ, ನನ್ನ ಆಯ್ಕೆ”ಎಂಬ ಧ್ಯೇಯವಾಕ್ಯದೊಂದಿಗೆ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮಗಳನ್ನು 150 ಸರ್ಕಾರಿ ಶಾಲೆಗಳಲ್ಲಿ ಅನುಷ್ಠಾನಗೊಳಿಸುತ್ತಿದ್ದೇವೆ. ಈವರೆಗೆ 35,000 ವಿದ್ಯಾರ್ಥಿಗಳು ಫಲಾನುಭವಿಗಳಾಗಿರುತ್ತಾರೆ. ಇದನ್ನು ವಿಸ್ತರಿಸಿ 2.30 ಲಕ್ಷ ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ಯೋಜಿಸಲಾಗಿದೆ. ನಮ್ಮ ಸರ್ಕಾರವು ಜಿ.ಟಿ.ಟಿ.ಸಿ.ಗಳು ಮತ್ತು ಎಂ.ಎಸ್.ಡಿ.ಸಿ.ಗಳನ್ನು ಬಲವರ್ಧನೆ ಮಾಡುತ್ತಿರುವುದಲ್ಲದೆ, ಹೊಸ ಜಿ.ಟಿ.ಟಿ.ಸಿ.ಗಳನ್ನೂ ಸ್ಥಾಪಿಸುತ್ತಿದ್ದೇವೆ. ಜಿ.ಟಿ.ಟಿ.ಸಿ.ಗಳು ನಮ್ಮ ರಾಜ್ಯದ ಹೆಮ್ಮೆಯ ಸಂಸ್ಥೆಗಳಾಗಿ ಬೆಳೆಯುತ್ತಿವೆ.
26. ಸಾಮಾಜಿಕ ಮತ್ತು ಆರ್ಥಿಕವಾಗಿ ಸಬಲೀಕರಣಗೊಳಿಸಲು ಸ್ವಸಹಾಯ ಗುಂಪಿನ ಮಹಿಳೆಯರಿಗೆ ರಾಜ್ಯಾದ್ಯಂತ ಒಂದೇ ಮಾದರಿಯಲ್ಲಿ “ಅಕ್ಕ ಕೆಫೆ” ಗಳನ್ನು ಸ್ಥಾಪಿಸಲು ಕ್ರಮವಹಿಸಲಾಗಿದೆ. ಹಾವೇರಿ ಜಿಲ್ಲೆಯಲ್ಲಿ ಲಿಂಗತ್ವ ಅಲ್ಪಸಂಖ್ಯಾತರಿಂದ ಅಕ್ಕ ಕೆಫೆ ನಡೆಸಲಾಗುತ್ತಿದೆ. 250 ಕೋಟಿ ರೂಪಾಯಿಗಳ ಬದ್ಧ ನಿಧಿಯ ಅನುದಾನದ ಬೆಂಬಲದೊಂದಿಗೆ 1,000 ಕ್ಕೂ ಹೆಚ್ಚು ಸ್ಟಾರ್ಟ್ಅಪ್ಗಳನ್ನು ಬೆಂಬಲಿಸುವ ಮೂಲಕ ಕರ್ನಾಟಕವು ಮುಂಚೂಣಿ ರಾಜ್ಯವಾಗಿದೆ.
27. ನಮ್ಮ ಸರ್ಕಾರ ಕಾರ್ಮಿಕರ ಕಲ್ಯಾಣದ ದೃಷ್ಟಿಯಿಂದ ಹತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ವಿಶೇಷವಾಗಿ ಅಸಂಘಟಿತ ಕಾರ್ಮಿಕರುಗಳಿಗೆ ಸೇವಾ ಭದ್ರತೆಯನ್ನು ಒದಗಿಸುವ “ಕರ್ನಾಟಕ ಕಾರ್ಮಿಕ ನೀತಿ”ಯನ್ನು ಜಾರಿಗೊಳಿಸಲಾಗುತ್ತಿದೆ.
28. ರಾಜ್ಯವು ಸೇವಾ ಕ್ಷೇತ್ರದಲ್ಲಿಯೂ ಗಮನಾರ್ಹ ಸಾಧನೆ ಮಾಡಿದೆ. ನಮ್ಮ ಜಿ.ಎಸ್.ಡಿ.ಪಿ.ಗೆ ಈ ಕ್ಷೇತ್ರವು ಶೇ.66.7 ರಷ್ಟು ಕೊಡುಗೆಯನ್ನು ನೀಡುತ್ತಿದೆ. ಸೇವಾ ಕ್ಷೇತ್ರದಲ್ಲಿ ದುಡಿಯುತ್ತಿರುವ ಸಮಗ್ರ ಕಾರ್ಮಿಕರ ಹಿತಾಸಕ್ತಿಯನ್ನು ರಕ್ಷಿಸುತ್ತಿರುವುದಷ್ಟೇ ಅಲ್ಲದೆ ಸುಮಾರು 5 ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯಲ್ಲಿರುವ ಗಿಗ್ ಕಾರ್ಮಿಕರ ಕಲ್ಯಾಣಕ್ಕಾಗಿ ಈ ವರ್ಷದಿಂದ ‘ಪ್ಲಾಟ್ ಫಾರಂ ಆಧಾರಿತ ಗಿಗ್ ಕಾರ್ಮಿಕರ ವಿಧೇಯಕ’ವನ್ನು ಜಾರಿಗೊಳಿಸುತ್ತಿದ್ದೇವೆ. ಈ ಕಾರ್ಮಿಕರಿಗೆ 4 ಲಕ್ಷ ರೂ.ಗಳವರೆಗೆ ವಿಮಾ ಯೋಜನೆಯನ್ನು ಜಾರಿಗೊಳಿಸುತ್ತಿದ್ದೇವೆ.
29. ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದವರ ಮೇಲಿನ ದೌರ್ಜನ್ಯ ಪ್ರಕರಣಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಮತ್ತು ಶಿಕ್ಷೆ ಪ್ರಮಾಣವನ್ನು ಹೆಚ್ಚಿಸುವ ಸಲುವಾಗಿ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ವ್ಯಾಪ್ತಿಯಲ್ಲಿ 33 ವಿಶೇಷ ಪೆÇಲೀಸ್ ಠಾಣೆಗಳನ್ನು ಪ್ರಾರಂಭಿಸಲಾಗಿದೆ. 17,000ಕ್ಕೂ ಹೆಚ್ಚಿನ ಪೌರ ಕಾರ್ಮಿಕರನ್ನು ಖಾಯಂ ಮಾಡಲಾಗಿದೆ. ಎಸ್ಸಿಎಸ್ಪಿ ಮತ್ತು ಟಿಎಸ್ಪಿ ಕಾಯ್ದೆಯಡಿ ಈ ಬಾರಿ 42,018 ಕೋಟಿ ರೂಗಳನ್ನು ಒದಗಿಸಿ ಪರಿಶಿಷ್ಟ ಸಮುದಾಯಗಳ ಬಲವರ್ಧನೆಗಾಗಿ ದುಡಿಯುತ್ತಿದ್ದೇವೆ.
30. ರಾಜ್ಯದ ಪಶುಪಾಲಕ ಸಮುದಾಯಗಳ ಹಿತವನ್ನು ಕಾಪಾಡುವ ನಿಟ್ಟಿನಲ್ಲಿ ಆಕಸ್ಮಿಕವಾಗಿ ಮರಣ ಹೊಂದಿದ ಕುರಿ, ಮೇಕೆ ಹಾಗೂ ಇನ್ನಿತರ ಜಾನುವಾರುಗಳಿಗೆ ಅನುಗ್ರಹ ಯೋಜನೆಯಡಿ 80 ಕೋಟಿ ರೂ.ಗಳಿಗೂ ಅಧಿಕ ಪರಿಹಾರವನ್ನು ನೀಡಲಾಗಿದೆ. ವಲಸೆ ಕುರಿಗಾರರ ರಕ್ಷಣೆಗಾಗಿ ಕಾಯ್ದೆಯನ್ನೂ ಜಾರಿ ಮಾಡುತ್ತಿದ್ದೇವೆ.
31. ಸರ್ಕಾರವು ನಗರಾಭಿವೃದ್ಧಿಯನ್ನು ಗಂಭೀರವಾಗಿ ಪರಿಗಣಿಸಿದೆ. ಕಳೆದ ಮೂರು ದಶಕಗಳಿಂದ ನಗರೀಕರಣವು ತೀವ್ರಗೊಂಡಿದೆ. ಬೆಂಗಳೂರನ್ನು ಹೊರತು ಪಡಿಸಿ ನಗರಾಭಿವೃದ್ಧಿ ಇಲಾಖೆಗೆ ಈ ವರ್ಷ 16,508 ಕೋಟಿ ರೂ.ಗಳಷ್ಟು ಅನುದಾನಗಳನ್ನು ಒದಗಿಸಲಾಗಿದೆ. ನಮ್ಮ 10 ಮಹಾನಗರ ಪಾಲಿಕೆಗಳಿಗೆ 2,000 ಕೋಟಿ ರೂ.ಗಳಷ್ಟು ಅನುದಾನ ಒದಗಿಸಿ 2ನೇ ಹಂತದ ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆಯನ್ನು ಮೂರು ವರ್ಷಗಳ ಅವಧಿಯಲ್ಲಿ ಅನುಷ್ಠಾನ ಮಾಡುತ್ತಿದ್ದೇವೆ. ಈಗಾಗಲೇ ಮಾರ್ಗಸೂಚಿಗಳನ್ನು ಹೊರಡಿಸಿ ಟೆಂಡರ್ಗಳನ್ನು ಕರೆಯಲಾಗುತ್ತಿದೆ.
32. ಬೆಂಗಳೂರು ನಗರಾಭಿವೃದ್ಧಿಗಾಗಿ ಸುಮಾರು 1,35,000 ಕೋಟಿ ರೂ.ಗಳಿಗೂ ಹೆಚ್ಚಿನ ವೆಚ್ಚದಲ್ಲಿ ಡಬಲ್ ಡೆಕರ್ ರಸ್ತೆಗಳು, ಸುರಂಗ ರಸ್ತೆಗಳು, ಬೆಂಗಳೂರು ಬ್ಯುಸಿನೆಸ್ ಕಾರಿಡಾರ್, ವೈಟ್ ಟಾಪಿಂಗ್ ರಸ್ತೆಗಳು, ಡಾಂಬರು ರಸ್ತೆಗಳು, 6ನೇ ಹಂತದ ಕಾವೇರಿ ನೀರು ಸರಬರಾಜು ಯೋಜನೆ, ಹೊಸ ಮೆಟ್ರೋ ರೈಲು ಮಾರ್ಗಗಳು, ಬಫರ್ ರಸ್ತೆ, ಮೇಲ್ಸೇತುವೆ, ಉತ್ತರ-ದಕ್ಷಿಣ ಕಾರಿಡಾರ್, ಪೂರ್ವ-ಪಶ್ಚಿಮ ಕಾರಿಡಾರ್, ಉದ್ಯಾನಗಳ ಅಭಿವೃದ್ಧಿ, ಸಾರ್ವಜನಿಕ ಪಾರ್ಕಿಂಗ್ ವ್ಯವಸ್ಥೆ, ಶಿಕ್ಷಣ-ಆರೋಗ್ಯ ವ್ಯವಸ್ಥೆಯ ಸುಧಾರಣೆ, ಟ್ರಾಫಿಕ್ ನಿರ್ವಹಣೆ, ಆಟದ ಮೈದಾನಗಳು ಇತ್ಯಾದಿ ಯೋಜನೆಗಳಲ್ಲಿ ಕೆಲವು ಚಾಲನೆಗೊಂಡಿವೆ. ಇನ್ನುಳಿದವು ಪ್ರಾಥಮಿಕ ಹಂತದಲ್ಲಿವೆ.
33. ಜಿ.ಬಿ.ಎ. ವ್ಯಾಪ್ತಿಯಲ್ಲಿ ಇ-ಖಾತಾ ವ್ಯವಸ್ಥೆಯು ನಾಗರಿಕರಿಗೆ ಆನ್ಲೈನ್ ಮೂಲಕ ಡಿಜಿಟೈಸ್ಡ್ ಆಸ್ತಿ ದಾಖಲೆಗಳನ್ನು ಒದಗಿಸುತ್ತದೆ. ಈ ವ್ಯವಸ್ಥೆಯಲ್ಲಿ ಸಾರ್ವಜನಿಕರು ಮನೆಗಳಿಂದಲೇ ಖಾತಾವನ್ನು ಪಡೆಯುವ ವ್ಯವಸ್ಥೆ ಕಲ್ಪಿಸುತ್ತಿದ್ದೇವೆ. ಇದು ಭಾರತದಲ್ಲಿನ ಅತಿದೊಡ್ಡ ಡಿಜಿಟಲ್ ಇ-ಖಾತಾ ವ್ಯವಸ್ಥೆಯಾಗಿದೆ. ಈ ವ್ಯವಸ್ಥೆಯನ್ನು ರಾಜ್ಯದ ಉಳಿದ ಪ್ರದೇಶಗಳಿಗೂ ವಿಸ್ತರಿಸಲು ಯೋಜಿಸುತ್ತಿದ್ದೇವೆ. ಇದರ ಜೊತೆಗೆ 4000 ಚದರ ಅಡಿಯವರೆಗೆ ನಂಬಿಕೆ ನಕ್ಷೆ ಪರಿಕಲ್ಪನೆಯನ್ನೂ ಜಾರಿಗೊಳಿಸಿದ್ದೇವೆ.
34. ಬೆಂಗಳೂರು ಮತ್ತು ರಾಜ್ಯದ ಉಳಿದ ಕಡೆಗಳಲ್ಲಿ ಬಹುದಿನಗಳಿಂದ ಜನರಿಗೆ ಸಮಸ್ಯೆಯಾಗಿದ್ದ ಬಿ-ಖಾತಾ ಗೊಂದಲಗಳನ್ನು ಬಗೆಹರಿಸಿ ಎ-ಖಾತಾ ಕೊಡುವ ಕ್ರಾಂತಿಕಾರಿ ತೀರ್ಮಾನ ಮಾಡಿ ಅನುಷ್ಠಾನ ಮಾಡುತ್ತಿದ್ದೇವೆ.
35. ಬಳಸಿದ ನೀರಿನ ಮರುಬಳಕೆಯಲ್ಲಿ ಕರ್ನಾಟಕವು ಅಳವಡಿಸಿಕೊಂಡಿರುವ ಮಾದರಿಯನ್ನು ಒಕ್ಕೂಟ ಸರ್ಕಾರವು ದೇಶದ ವಿವಿಧ ಕಡೆ ಅಳವಡಿಸಿಕೊಳ್ಳಲು ನಿರ್ದೇಶನಗಳನ್ನು ನೀಡಿದೆ. ಬೆಂಗಳೂರಿನಲ್ಲಿ ಬಳಸಿದ ನೀರನ್ನು ಎರಡು ಹಂತದಲ್ಲಿ ಶುದ್ಧೀಕರಿಸಿ ಒಟ್ಟಾರೆ 926 ಕೆರೆಗಳನ್ನು ಮತ್ತು 143 ಚೆಕ್-ಡ್ಯಾಂಗಳನ್ನು ತುಂಬಿಸಲು ಕ್ರಮವಹಿಸಿದ್ದೇವೆ. ಈಗಾಗಲೇ 233 ಕೆರೆಗಳು ಹಾಗೂ 143 ಚೆಕ್ ಡ್ಯಾಂಗಳನ್ನು ತುಂಬಿಸಲಾಗುತ್ತಿದೆ. ನಮ್ಮ ಈ ಉಪಕ್ರಮವನ್ನು ವಿಶ್ವ ಸಂಸ್ಥೆಯ ಮುಖ್ಯಸ್ಥರು ಕೋಲಾರಕ್ಕೆ ಬಂದು, ‘The KC valley waste water management project in Karnataka is transformation in the making’ ಎಂದು ಮೆಚ್ಚುಗೆ ಸೂಚಿಸಿದ್ದಾರೆ.
36. 2027ರ ವೇಳೆಗೆ ಎತ್ತಿನ ಹೊಳೆ ಯೋಜನೆಯನ್ನೂ ಪೂರ್ಣಗೊಳಿಸುವ ಗುರಿ ಹಾಕಿಕೊಂಡಿದ್ದೇವೆ. ನೀರಾವರಿ ಕ್ಷೇತ್ರದಲ್ಲಿಯೂ ಸರ್ಕಾರ ಹೆಚ್ಚಿನ ಗಮನ ಹರಿಸಿದ್ದು ನಾವು ಚುನಾವಣೆಗೆ ಮೊದಲು ಹೇಳಿದ್ದ ಆಶ್ವಾಸನೆಗಳನ್ನು ಈಡೇರಿಸಲು ಪ್ರಾಮಾಣಿಕವಾದ ಪ್ರಯತ್ನಗಳನ್ನು ಮಾಡುತ್ತಿದ್ದೇವೆ.
37. ವಿವಿಧ ವಸತಿ ಯೋಜನೆಗಳಡಿಯಲ್ಲಿ ಜೂನ್-2025ರ ಅಂತ್ಯದವರೆಗೆ 3,87,756 ಮನೆಗಳನ್ನು ಪೂರ್ಣಗೊಳಿಸಲಾಗಿದೆ. ಕರ್ನಾಟಕ ಗೃಹ ಮಂಡಳಿಯಲ್ಲಿ ರಾಜ್ಯಾದ್ಯಂತ 26 ವಸತಿ ಯೋಜನೆಗಳು ಪ್ರಗತಿಯಲ್ಲಿವೆ.
38. ಚುನಾವಣೆಗೆ ಮೊದಲು ನೀಡಿದ್ದ ಭರವಸೆಯಂತೆ ಪ್ರಾದೇಶಿಕ ಅಸಮಾನತೆಯನ್ನು ಹೋಗಲಾಡಿಸಿ ರಾಜ್ಯದ ಸಮಗ್ರ ಅಭಿವೃದ್ಧಿಯನ್ನು ಸಾಧ್ಯವಾಗಿಸಲು ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಪ್ರತಿವರ್ಷ 5,000 ಕೋಟಿ ರೂ.ಗಳನ್ನು ಒದಗಿಸಿ ಶಿಕ್ಷಣ, ಆರೋಗ್ಯ, ಕೈಗಾರಿಕಾಭಿವೃದ್ಧಿ, ಮೂಲಭೂತ ಸೌಕರ್ಯ ಸೇರಿದಂತೆ ಹಲವು ಕ್ರಮಗಳನ್ನು ಕೈಗೊಂಡಿದ್ದೇವೆ. 7 ಜಿಲ್ಲೆಗಳ 38 ವಿಧಾನಸಭಾ ಕ್ಷೇತ್ರಗಳ ಗ್ರಾಮೀಣ ಪ್ರದೇಶದ 1150 ಕಿ.ಮೀ. ರಸ್ತೆಗಳನ್ನು “ಕಲ್ಯಾಣ ಪಥ” ಕಾರ್ಯಕ್ರಮದಡಿ 1.000 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ಅಭಿವೃದ್ಧಿ ಮಾಡುತ್ತಿದ್ದೇವೆ.
39. ರಾಜ್ಯದ ಕರಾವಳಿ ಜಿಲ್ಲೆಗಳ ಸಮುದ್ರ ಕೊರೆತವನ್ನು ತಗ್ಗಿಸಲು 200 ಕೋಟಿ ರೂ.ವೆಚ್ಚದಲ್ಲಿ ಯೋಜನೆಗಳನ್ನು ಅನುಷ್ಠಾನಗೊಳಿಸಲು ಕ್ರಮವಹಿಸಲಾಗುತ್ತಿದೆ. ಕರಾವಳಿಯಲ್ಲಿ ಕೋಮು ಸಂಘರ್ಷದಿಂದ ಅಮಾಯಕ ಜನರು ಆಸ್ತಿ, ಪಾಸ್ತಿ ಹಾಗೂ ಪ್ರಾಣ ಹಾನಿ ಉಂಟಾಗುತ್ತಿತ್ತು. ಕೋಮು ಹಿಂಸೆಯನ್ನು ನಿವಾರಿಸಲು ‘ವಿಶೇಷ ಕಾರ್ಯ ಪಡೆ’ಯನ್ನು ರಚಿಸಿದ್ದೇವೆ.
40. ಪಳೆಯುಳಿಕೆ ಇಂಧನವು ಪರಿಸರದ ಮೇಲೆ ಮಾಡುವ ದುಷ್ಪರಿಣಾಮಗಳನ್ನು ಮನಗಂಡು ಮತ್ತು ವಿದ್ಯುತ್ ಸ್ವಾವಲಂಬನೆಯ ಮಹತ್ವದ ಹಿನ್ನೆಲೆಯಲ್ಲಿ ನವೀಕರಿಸಬಹುದಾದ ಇಂಧನ ಮೂಲಗಳಾದ ಗಾಳಿ, ಬಿಸಿಲು, ನೀರು ಮುಂತಾದವುಗಳನ್ನು ಬಳಸಿಕೊಂಡು ಅಗಾಧ ಪ್ರಮಾಣದ ವಿದ್ಯುತ್ ಉತ್ಪಾದಿಸುವ ರಾಜ್ಯ ಕರ್ನಾಟಕವಾಗಿದೆ. 2012-2013ರಲ್ಲಿ 6,944 ಮೆಗಾವ್ಯಾಟ್ ನಷ್ಟಿದ್ದ ನವೀಕರಿಸಬಹುದಾದ ವಿದ್ಯುತ್ ಉತ್ಪಾದನೆಯು ಪ್ರಸ್ತುತ ಸುಮಾರು 24,000 ಮೆಗಾವ್ಯಾಟ್ಗಳಿಗೆ ತಲುಪಿದೆ.
41. ಜನರ ಬದುಕಿನ ಜೊತೆ ನೇರವಾದ ಸಂಬಂಧ ಹೊಂದಿರುವ ಕಂದಾಯ, ಆರೋಗ್ಯ, ಗ್ರಾಮೀಣಾಭಿವೃದ್ಧಿ ಮತ್ತು ನಗರಾಭಿವೃದ್ಧಿ ಇಲಾಖೆಗಳನ್ನು ಜನಸ್ನೇಹಿಯಾಗಿಸಲು ನಿರಂತರವಾಗಿ ಪ್ರಯತ್ನಿಸುತ್ತಿದ್ದೇವೆ. ಕಂದಾಯ ಇಲಾಖೆಯಲ್ಲಿ ಬಹಳ ಕಾಲದಿಂದ ಬಾಕಿ ಇದ್ದ 40 ಸಾವಿರಕ್ಕೂ ಹೆಚ್ಚಿನ ಅಳತೆ ಕೆಲಸಗಳು ಮುಗಿದಿವೆ. ಭೂ-ಸುರಕ್ಷಾ ಯೋಜನೆಯಲ್ಲಿ 100 ಕೋಟಿ ಪುಟಗಳಷ್ಟು ದಾಖಲೆಗಳನ್ನು ಡಿಜಿಟೈಸ್ ಮಾಡಿ ಸಾರ್ವಜನಿಕರು ಕೂತಲ್ಲಿಯೇ ತಮ್ಮ ಆಸ್ತಿಗಳ ದಾಖಲೆಗಳನ್ನು ಪಡೆದುಕೊಳ್ಳುವ ವ್ಯವಸ್ಥೆ ಕಲ್ಪಿಸಲಾಗಿದೆ. ನಮ್ಮ ಸರ್ಕಾರದ ಆದ್ಯತೆಯ ವಿಷಯಗಳಲ್ಲೊಂದಾದ ಕಂದಾಯ ಗ್ರಾಮ ಯೋಜನೆಯಲ್ಲಿ ಇತ್ತೀಚಿಗೆ ತಾನೆ 1.11 ಲಕ್ಷ ಹಕ್ಕುಪತ್ರಗಳನ್ನು ನೀಡಲಾಗಿದೆ. ಹೊಸದಾಗಿ 3300 ಮಜರೆ, ಹಟ್ಟಿ, ತಾಂಡಾಗಳನ್ನು ಗುರ್ತಿಸಿ ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸುತ್ತಿದ್ದೇವೆ. ಅಲ್ಲದೆ ದುಸ್ಥಿತಿಯಲ್ಲಿದ್ದ ಜಿಲ್ಲಾಧಿಕಾರಿಗಳ ಕಛೇರಿಗಳನ್ನು ಹಾಗೂ ಹೊಸ ತಾಲ್ಲೂಕುಗಳಲ್ಲಿ ಪ್ರಜಾಸೌಧಗಳನ್ನು ನಿರ್ಮಿಸುತ್ತಿದ್ದೇವೆ.
42. ಇಂದು ವೈದ್ಯಕೀಯ ಶುಲ್ಕಗಳು ದುಬಾರಿಯಾಗುತ್ತಿದ್ದು ಬಡ ಮಧ್ಯಮ ವರ್ಗದವರಿಗೆ ಉತ್ತಮ ವೈದ್ಯಕೀಯ ಸೇವೆಗಳು ಲಭ್ಯವಾಗಬೇಕು ಎಂಬ ನಿಟ್ಟಿನಲ್ಲಿ ನಮ್ಮ ಸರ್ಕಾರ ಹಲವಾರು ಉಪಕ್ರಮಗಳನ್ನು ಸಾಧಿಸಿದ್ದು ಇವು ಜನಮೆಚ್ಚುಗೆ ಗಳಿಸಿಕೊಂಡಿವೆ. ಬಿಮ್ಸ್ ಬೆಳಗಾವಿಯ ಆವರಣದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣದ ಕಾಮಗಾರಿ ಪೂರ್ಣಗೊಂಡಿರುತ್ತದೆ. ಕಲಬುರಗಿಯಲ್ಲಿ 371 ಹಾಸಿಗೆ ಸಾಮಥ್ರ್ಯದ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನೆ ಸಂಸ್ಥೆಯನ್ನು 304 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಲಾಗಿದೆ. ಗದಗದಲ್ಲಿ ಕ್ಯಾಥ್ ಲ್ಯಾಬ್ ಸೌಲಭ್ಯದೊಂದಿಗೆ ಸೂಪರ್ ಸ್ಪೆಷಾಲಿಟಿ ಹೃದ್ರೋಗ ಘಟಕವನ್ನು ಪ್ರಾರಂಭಿಸಲಾಗಿದೆ.
43. ಆರೋಗ್ಯ ಇಲಾಖೆಯಲ್ಲಿ ನಮ್ಮ ಸರ್ಕಾರವು ಹಲವಾರು ಹೊಸ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಮುಖ್ಯವಾಗಿ, ಪುನೀತ್ ರಾಜ್ಕುಮಾರ್ ಹೃದಯ ಜ್ಯೋತಿ ಯೋಜನೆಯನ್ನು ರಾಜ್ಯಾದ್ಯಂತ ವಿಸ್ತರಿಸಲಾಗಿದೆ. ಕ್ಯಾನ್ಸರ್ ರೋಗಿಗಳ ಪ್ರಯಾಣ ಮತ್ತು ಚಿಕಿತ್ಸೆಯ ಹೊರೆ ಕಡಿಮೆ ಮಾಡಲು ಹಬ್ ಮತ್ತು ಸ್ಕೋಪ್ ಮಾದರಿಯಲ್ಲಿ ಜಿಲ್ಲಾ ಆಸ್ಪತ್ರೆಗಳಲ್ಲಿ ಕ್ಯಾನ್ಸರ್ ಆರೈಕೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.
44. ನಾವು ತೆಗೆದುಕೊಂಡ ಕ್ರಮಗಳಿಂದಾಗಿ 2025ನೇ ಸಾಲಿನಲ್ಲಿ ತಾಯಂದಿರ ಮರಣ ಪ್ರಮಾಣ ಶೇ.26 ರಷ್ಟು ಕಡಿಮೆ ಆಗಿದೆ. ಪ್ರಮುಖ 14 ಅಸಾಂಕ್ರಾಮಿಕ ರೋಗಗಳಿಗೆ ಮನೆ ಬಾಗಿಲಲ್ಲೆ ತಪಾಸಣೆ, ಚಿಕಿತ್ಸೆ ಮತ್ತು ಅನುಸರಣೆ ಸೇವೆಗಳನ್ನು ನೀಡುವ ಗೃಹ ಆರೋಗ್ಯ ಯೋಜನೆಯನ್ನು ವಿಸ್ತರಿಸಿದ್ದೇವೆ.
45. ಆಂಬ್ಯುಲೆನ್ಸ್ ಸೇವೆಗಳನ್ನು ರಾಜ್ಯಾದ್ಯಂತ ಕೇಂದ್ರೀಯ ಕಮಾಂಡ್ ಮತ್ತು ನಿಯಂತ್ರಣ ಕೇಂದ್ರದಲ್ಲಿ ನಿರ್ವಹಿಸುವಂತೆ ಮಾಡಲು ತೀರ್ಮಾನಿಸಿದ್ದೇವೆ. ಸಾರ್ವಜನಿಕ ಆರೋಗ್ಯ ಕಾಪಾಡುವ ದೃಷ್ಟಿಯಲ್ಲಿ ಕಲಬೆರಕೆ ಮತ್ತು ಜನರ ಆರೋಗ್ಯಕ್ಕೆ ಹಾನಿ ಉಂಟುಮಾಡುವ ಆಹಾರಗಳನ್ನು ವಿಶ್ಲೇಷಣೆಗೆ ಒಳಪಡಿಸಿ ಅವುಗಳನ್ನು ನಿಷೇಧಿಸುವ ಕಾರ್ಯವನ್ನು ನಿರಂತರವಾಗಿ ಮಾಡಲಾಗುತ್ತಿದೆ.
46. ನಮ್ಮ ಸರ್ಕಾರವು ರಸ್ತೆಗಳ ಅಭಿವೃದ್ಧಿಗೆ ಹೆಚ್ಚು ಆದ್ಯತೆಯನ್ನು ನೀಡುತ್ತಿದ್ದೇವೆ. ಇದುವರೆಗೆ ಗ್ರಾಮೀಣಾಭಿವೃದ್ಧಿ ಮತ್ತು ಲೋಕೋಪಯೋಗಿ ಇಲಾಖೆಯ ವತಿಯಿಂದ 12,000 ಕಿ.ಮೀ.ಗಳಿಗೂ ಹೆಚ್ಚಿನ ರಸ್ತೆಗಳನ್ನು ಕಳೆದ ಎರಡು ವರ್ಷಗಳಲ್ಲಿ ಅಭಿವೃದ್ಧಿ ಮತ್ತು ನವೀಕರಣ ಮಾಡಿದ್ದೇವೆ. ಈ ವರ್ಷದ ಬಜೆಟ್ನಲ್ಲಿ ಆಡಳಿತ ಇಲಾಖೆಗಳ ವತಿಯಿಂದ ರಸ್ತೆಗಳ ಅಭಿವೃದ್ಧಿಗೆ ಅನುದಾನಗಳನ್ನು ಒದಗಿಸಿರುವುದಲ್ಲದೆ ರಸ್ತೆ, ಸೇತುವೆ ಮುಂತಾದ ಮೂಲಸೌಕರ್ಯಗಳ ಅಭಿವೃದ್ಧಿಗಾಗಿ ‘ಮುಖ್ಯಮಂತ್ರಿ ಮೂಲಸೌಕರ್ಯ ಅಭಿವೃದ್ಧಿ ಕಾರ್ಯಕ್ರಮ’ಯೋಜನೆಯನ್ನು ಪ್ರಾರಂಭಿಸಿ ಈ ವರ್ಷ 8,000 ಕೋಟಿ ರೂ.ಗಳನ್ನು ನೀಡುತ್ತಿದ್ದೇವೆ.
47. ಕರಾವಳಿ, ಮಲೆನಾಡು ಪ್ರದೇಶಗಳ ಸಂಪರ್ಕ ರಹಿತ ಜನವಸತಿ ಪ್ರದೇಶಗಳ ಸಾರ್ವಜನಿಕರು ಮತ್ತು ಶಾಲಾ ಮಕ್ಕಳು ಹಳ್ಳ ಮತ್ತು ತೊರೆಗಳನ್ನು ಸುರಕ್ಷಿತವಾಗಿ ದಾಟಲು ಅನುಕೂಲವಾಗುವಂತೆ ರೂ.44.15 ಕೋಟಿ ಅಂದಾಜು ಮೊತ್ತದಲ್ಲಿ ಕಳೆದ ಎರಡು ವರ್ಷದಲ್ಲಿ 208 ಕಾಲುಸಂಕಗಳ ನಿರ್ಮಾಣ ಪೂರ್ಣಗೊಳಿಸಲಾಗಿದೆ. 2025-26ನೇ ಸಾಲಿನಲ್ಲಿ 184 ಕಾಲುಸಂಕಗಳ ನಿರ್ಮಾಣದ ಕ್ರಿಯಾಯೋಜನೆಗಳಿಗೆ 31 ಕೋಟಿ ರೂ.ಮೊತ್ತದಲ್ಲಿ ಅನುಮೋದನೆ ನೀಡಲಾಗಿದೆ.
48. ಉದ್ಯೋಗ ಸೃಜನೆಯ ದೃಷ್ಟಿಯಿಂದ ನಮ್ಮ ಸರ್ಕಾರ ಪೂರಕ ಉಪಕ್ರಮಗಳನ್ನು ಕೈಗೊಂಡಿದೆ. ಈ ನಿಟ್ಟಿನಲ್ಲಿ ಫೆಬ್ರವರಿ-2025ರ ಮಾಹೆಯಲ್ಲಿ ನಡೆಸಿದ “ಇನ್ವೆಸ್ಟ್ ಕರ್ನಾಟಕ-2025”ರಲ್ಲಿ ಒಟ್ಟು 3,250 ಉದ್ದಿಮೆದಾರರು ಭಾಗವಹಿಸಿದ್ದು, ಒಟ್ಟು 98 ಕಂಪನಿಗಳೊಂದಿಗೆ 6,23,970 ಕೋಟಿ ರೂ.ಗಳ ಹೂಡಿಕೆಯ ಒಡಂಬಡಿಕೆ ಮಾಡಿಕೊಳ್ಳಲಾಗಿದೆ ಹಾಗೂ 4,03,533 ಕೋಟಿ ರೂ. ಹೂಡಿಕೆ ಮಾಡಲು 1,101 ಕಂಪನಿಗಳು ಸಂಬಂಧಿಸಿದ ಸಮಿತಿಗಳಿಂದ ಅನುಮೋದನೆ ಪಡೆದಿರುತ್ತಾರೆ. ಇವುಗಳಿಂದ ಅಂದಾಜು 6 ಲಕ್ಷಕ್ಕೂ ಹೆಚ್ಚಿನ ಉದ್ಯೋಗಗಳು ಸೃಜನೆಯಾಗುವ ನಿರೀಕ್ಷೆಯಿದೆ.
49. ಕರ್ನಾಟಕ ರಾಜ್ಯವು 2023-24ನೇ ಸಾಲಿನಲ್ಲಿ 54,427 ಕೋಟಿ ರೂ. ವಿದೇಶಿ ಹೂಡಿಕೆ ಆಕರ್ಷಿಸಿ, ದೇಶದಲ್ಲಿ 3ನೇ ಸ್ಥಾನದಲ್ಲಿದ್ದು, 2024-25ನೇ ಸಾಲಿನಲ್ಲಿ 56,030 ಕೋಟಿ ರೂ. ವಿದೇಶಿ ಹೂಡಿಕೆ ಆರ್ಕರ್ಷಿಸುವುದರೊಂದಿಗೆ ದೇಶದಲ್ಲಿ 2ನೇ ಸ್ಥಾನದಲ್ಲಿದೆ.
50. ನಮ್ಮ ಸರ್ಕಾರವು ಕಲ್ಯಾಣ ಕಾರ್ಯಕ್ರಮಗಳ ಜೊತೆಯಲ್ಲಿ ಮೂಲ ಸೌಕರ್ಯಗಳ ಅಭಿವೃದ್ಧಿ ಕಾರ್ಯಕ್ರಮಗಳನ್ನೂ ಸಮಾನವಾಗಿ ನೋಡುತ್ತಿದೆ. ಬಂಡವಾಳ ವೆಚ್ಚಗಳಿಗಾಗಿ ಈ ವರ್ಷ 83,200 ಕೋಟಿ ರೂ.ಗಳನ್ನು ವಿನಿಯೋಗಿಸುತ್ತಿದ್ದೇವೆ. ಬಜೆಟ್ನಲ್ಲಿ ಶೇ.20.1ರಷ್ಟು ಅನುದಾನವನ್ನು ಮೂಲ ಸೌಕರ್ಯಗಳ ಅಭಿವೃದ್ಧಿಗಾಗಿ ವಿನಿಯೋಗ ಮಾಡುತ್ತಿರುವ ಪ್ರಮುಖ ರಾಜ್ಯ ನಮ್ಮದಾಗಿದೆ.
51. ಮಹಿಳಾ ಉದ್ಯಮಿಗಳು ಮತ್ತು ಸ್ವಸಹಾಯ ಸಂಘಗಳಿಗೆ ನಮ್ಮ ಸರ್ಕಾರ ಬೆಂಬಲ ನೀಡುತ್ತಲೇ ಬಂದಿದೆ. ನಮ್ಮ ಗ್ಯಾರಂಟಿ ಯೋಜನೆಗಳು ಅವರ ಸದ್ದಿಲ್ಲದ ಛಲವನ್ನು ಕಣ್ಣಿಗೆ ಕಾಣುವ ಯಶಸ್ಸನ್ನಾಗಿ ಪರಿವರ್ತನೆ ಮಾಡುತ್ತಿವೆ. ನಾವು ಕ್ರೀಡೆ, ಕಲೆ ಮತ್ತು ವಿಜ್ಞಾನದಲ್ಲಿ ಸಾಧಕರನ್ನು ಗುರುತಿಸುತ್ತಿದ್ದೇವೆ. ಪ್ರತಿಯೊಂದು ರೀತಿಯ ಪ್ರತಿಭೆಗೂ ಅದಕ್ಕೆ ಅರ್ಹವಾದ ಗೌರವ ಸಿಗುವಂತೆ ಮಾಡುತ್ತಿದ್ದೇವೆ.
52. ರೈತನ ಮಗ ವಿಜ್ಞಾನಿಯಾಗಬೇಕು, ನೇಕಾರನ ಮಗಳು ಉದ್ಯಮಿಯಾಗಬೇಕು ಮತ್ತು ಪ್ರತಿಯೊಂದು ಮಗುವಿಗೂ ತನ್ನ ಭವಿಷ್ಯ ತನ್ನ ಕೈಯಲ್ಲಿದೆ ಎಂಬ ಭಾವನೆ ಮೂಡುವಂತಹ ವಾತಾವರಣ ನಿರ್ಮಿಸುವ ನಿಟ್ಟಿನಲ್ಲಿ ಶ್ರಮಿಸಬೇಕಾಗಿದೆ.
53. ಅಭಿವೃದ್ಧಿಯ ಉತ್ತುಂಗ ತಲುಪಿ, ಸಮಾಜಕ್ಕೆ ಮರಳಿ ಕೊಡುಗೆ ನೀಡುವುದೇ ಅತ್ಯುನ್ನತ ಸ್ವಾತಂತ್ರ್ಯ. ಕರ್ನಾಟಕ ರಾಜ್ಯ ಈಗಾಗಲೇ ಭಾರತದ ಐಟಿ ರಾಜಧಾನಿಯಾಗಿದೆ ಮತ್ತು ಈಗ ನಾವು ಜಗತ್ತಿನ ‘ನಾವೀನ್ಯತಾ ರಾಜಧಾನಿ’ ಯಾಗುವತ್ತ ಹೆಜ್ಜೆ ಇರಿಸಿದ್ದೇವೆ.
54. ನಾವು ಕ್ವಾಂಟಮ್ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ ನವೀಕರಿಸಬಹುದಾದ ಇಂಧನ ಮತ್ತು ಜೈವಿಕ ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿದ್ದೇವೆ. ದೇಶದ ಮೊದಲ ಕ್ವಾಂಟಮ್ ಕಂಪ್ಯೂಟರ್ ಕರ್ನಾಟಕದಲ್ಲಿದೆ. ನಮ್ಮ `ಕರ್ನಾಟಕ ಕ್ವಾಂಟಮ್ ಮಿಷನ್’ ವಿಜ್ಞಾನದ ಭವಿಷ್ಯವನ್ನು ರೂಪಿಸಲಿದೆ.
55. ನಾವು ಕೇವಲ ಉದ್ಯೋಗಗಳನ್ನು ಸೃಷ್ಟಿಸುತ್ತಿಲ್ಲ. ಜನರ ಜೀವನವನ್ನು ಬದಲಾಯಿಸುವಂತಹ ಆಲೋಚನೆಗಳು, ಆವಿಷ್ಕಾರಗಳು ಮತ್ತು ಹೊಸತನಗಳನ್ನು ಸೃಷ್ಟಿಸುತ್ತಿದ್ದೇವೆ. ನಮ್ಮ ಈ ಆಲೋಚನೆಗಳು ಗಡಿಯಾಚೆಗೂ ತಲುಪಿವೆ.
56. ಪ್ರಾದೇಶಿಕ ಅಸಮಾನತೆಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿರುವ ನಮ್ಮ ಸರ್ಕಾರವು ಪ್ರೊ.ಗೋವಿಂದರಾವ್ ಅವರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಿದೆ. ಆ ಸಮಿತಿಯು ವರದಿಯನ್ನು ನೀಡಿದ ಕೂಡಲೆ ಅದನ್ನು ಅನುಷ್ಠಾನ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ.
57. ನಾವೆಲ್ಲರೂ ಗಮನಿಸಿರುವ ಹಾಗೆ ನಮ್ಮ ಹೊಸ ತಲೆಮಾರು ಮೊಬೈಲ್ ಫೋನು, ಇಂಟರ್ನೆಟ್ಟು ಮುಂತಾದವುಗಳ ಭರಾಟೆಯಲ್ಲಿ ವಿಪರೀತ ತಲ್ಲಣಗಳನ್ನು ಎದುರಿಸುತ್ತಿದೆ. ಖಿನ್ನತೆ, ಆತಂಕ, ವಿನಾಕಾರಣ ಸಿಟ್ಟು, ದ್ವೇಷ ಮುಂತಾದ ಭಾವನೆಗಳಲ್ಲಿ ಸಿಲುಕಿ ಸಂಕಷ್ಟ ಪಡುತ್ತಿದೆ. ಈ ಸಾಮಾಜಿಕ ಸಮಸ್ಯೆಯನ್ನು ಹೋಗಲಾಡಿಸಲು ನಾವೆಲ್ಲರೂ ಸೇರಿ ಹೊಸ ದಾರಿಗಳನ್ನು ಹುಡುಕಿಕೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ನಾವು ಮೊಬೈಲ್ ಬಿಡಿ – ಪುಸ್ತಕ ಹಿಡಿ ಮತ್ತು ಓದು ಕರ್ನಾಟಕ ಎಂಬ ಕಾರ್ಯಕ್ರಮವನ್ನು ರೂಪಿಸಿದ್ದೇವೆ.
58. ಕರ್ನಾಟಕವನ್ನು ನಕ್ಸಲ್ ಮುಕ್ತ ರಾಜ್ಯವೆಂದು ಘೋಷಿಸಿದ್ದೇವೆ. ಹಾಗೆಯೇ ನಾವೆಲ್ಲರೂ ನಮ್ಮ ಹೆಮ್ಮೆಯ ರಾಜ್ಯವನ್ನು ಡ್ರಗ್ಸ್ ಮುಕ್ತ ರಾಜ್ಯವನ್ನಾಗಿ ಘೋಷಿಸಬೇಕಾಗಿದೆ. ಈ ಹೋರಾಟದಲ್ಲಿ ಪ್ರತಿ ಪ್ರಜೆಯೂ ಯೋಧರಂತೆ ಕೆಲಸ ಮಾಡಬೇಕಾಗಿದೆ. ಸರ್ಕಾರವು ಈಗಾಗಲೇ ಈ ವಿಚಾರದಲ್ಲಿ ಸಕಲ ಆಯಾಮಗಳಲ್ಲಿ ಕೆಲಸ ಮಾಡುತ್ತಿದೆ.
59. ಒಕ್ಕೂಟ ಸರ್ಕಾರವು ತೆರಿಗೆ ಮುಂತಾದ ಸಂಪನ್ಮೂಲಗಳನ್ನು ಹಂಚುವಾಗ ನಿಷ್ಪಕ್ಷಪಾತದ ಧೋರಣೆ ಅನುಸರಿಸುತ್ತಿಲ್ಲ. ಐಟಿ, ಇ.ಡಿ, ಸಿಬಿಐ ಮತ್ತು ಕೆಲವು ಸಾಂವಿಧಾನಿಕ ಸಂಸ್ಥೆಗಳು ಪ್ರಜಾಪ್ರಭುತ್ವದ ಹಾಗೂ ಸಂವಿಧಾನದ ನೈಜ ಮೌಲ್ಯಗಳ ಉಳಿವಿಗಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬ ಆಕ್ರೋಶವು ವಿವಿಧ ವೇದಿಕೆಗಳಿಂದ ವ್ಯಕ್ತವಾಗುತ್ತಿದೆ. ಈ ಕುರಿತು ಜವಾಬ್ದಾರಿಯುಳ್ಳ ನಾಗರಿಕರೆಲ್ಲ ಧ್ವನಿಯೆತ್ತಬೇಕಾಗಿದೆ.
60. ಕರ್ನಾಟಕವನ್ನು ಸರ್ವ ಜನಾಂಗದ ಶಾಂತಿಯ ತೋಟವನ್ನಾಗಿಯೇ ಉಳಿಸಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಸಾಮರಸ್ಯದಿಂದ ಕೂಡಿದ ಸಮೃದ್ಧ ಕರ್ನಾಟಕವನ್ನು ನಿರ್ಮಾಣ ಮಾಡುವುದರ ಮೂಲಕ ಸಶಕ್ತ ಭಾರತವನ್ನು ಕಟ್ಟೋಣ. ಸ್ವಾತಂತ್ರ್ಯ, ಸಂವಿಧಾನ ಹಾಗೂ ನೈಜ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಜೀವಕ್ಕಿಂತ ಮಿಗಿಲು ಎಂದು ಭಾವಿಸೋಣ. ಸಾಮಾಜಿಕ, ಆರ್ಥಿಕ, ರಾಜಕೀಯ ಸ್ವಾತಂತ್ರ್ಯ ಹಾಗೂ ನ್ಯಾಯಗಳನ್ನು ನಿರಂತರವಾಗಿ ರಕ್ಷಿಸಿಕೊಳ್ಳುವ ಪ್ರತಿಜ್ಞೆ ಮಾಡಿ ಈ ಸ್ವಾತಂತ್ರ್ಯೋತ್ಸವವನ್ನು ಅರ್ಥಪೂರ್ಣಗೊಳಿಸೋಣ.
ಜೈ ಹಿಂದ್ – ಜೈ ಕರ್ನಾಟಕ – ಜೈ ಸಂವಿಧಾನ್!