ಬೆಂಗಳೂರು : ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳ ಜಾರಿಯಿಂದಾಗಿ ಉದ್ಯೋಗ ಕ್ಷೇತ್ರಗಳಲ್ಲಿ ಹೆಣ್ಣು ಮಕ್ಕಳ ಪಾಲುದಾರಿಕೆ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಇಂದು ಬೆಂಗಳೂರಿನ ಮಾಣೆಕ್ ಷಾ ಮೈದಾನದಲ್ಲಿ ಸಿಎಂ ಸಿದ್ದರಾಮಯ್ಯ ಧ್ವಜಾರೋಹಣ ನೆರವೇರಿಸಿದ್ದು, ನಾಡಿನ ಜನತೆಗೆ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಸಂದೇಶ ನೀಡಿದ್ದಾರೆ.
ಇಂದು ಭಾರತವು ಬ್ರಿಟಿಷರ ವಸಾಹತುಶಾಹಿ ಆಡಳಿತದಿಂದ ಮುಕ್ತಗೊಂಡ ಶುಭದಿನ. ಮಹಾತ್ಮ ಗಾಂಧೀಜಿ, ಜವಾಹರಲಾಲ್ ನೆಹರು, ಸರ್ದಾರ್ ವಲ್ಲಭಭಾಯಿ ಪಟೇಲ್, ಸುಭಾಷ್ ಚಂದ್ರ ಬೋಸ್, ಮೌಲಾನಾ ಅಬುಲ್ ಕಲಾಂ ಅಜಾದ್ ಮುಂತಾದ ಕೆಚ್ಚೆದೆಯ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರರ ನೇತೃತ್ವದಲ್ಲಿ ದೇಶಾದ್ಯಂತ ಲಕ್ಷಾಂತರ ಹೋರಾಟಗಾರರು ತಮ್ಮ ತ್ಯಾಗ, ಬಲಿದಾನದ ಮೂಲಕ 1947ರ ಆಗಸ್ಟ್ 15ರಂದು ನಮ್ಮ ದೇಶಕ್ಕೆ ಸ್ವಾತಂತ್ರ್ಯವನ್ನು ಗಳಿಸಿಕೊಟ್ಟರು.
ದೇಶದ ನಾಳೆಗಳನ್ನು ರೂಪಿಸುವ ಸಲುವಾಗಿ ತಮ್ಮ ಇಂದಿನ ಬದುಕನ್ನೇ ತ್ಯಾಗ ಮಾಡಿದ ಆ ಎಲ್ಲ ಮಹನೀಯರನ್ನು ನಾವು ಇಂದು ಮನದುಂಬಿ ಸ್ಮರಿಸೋಣ.
ಸ್ವಾತಂತ್ರ್ಯ ಹೋರಾಟದಲ್ಲಿ ಕರ್ನಾಟಕದ ಪಾತ್ರ ಸ್ಮರಣೀಯವಾದುದು. `ಬ್ರಿಟಿಷರ ಕರಾಳ ಕಾನೂನಿನ ವಿರುದ್ಧ ಬಾಲಾಜಿ ನಿಂಬಾಳ್ಕರ್ ಹಾಗೂ ಜಡಗಬಾಲರ ನಾಯಕತ್ವದಲ್ಲಿ ಹೋರಾಡಿದ ಹಲಗಲಿಯ ಬೇಡವೀರರು, ಬೈಲಹೊಂಗಲದ ಸಂಗೊಳ್ಳಿ ರಾಯಣ್ಣ, ಟಿಪ್ಪು ಸುಲ್ತಾನ್, ಕಿತ್ತೂರು ಚೆನ್ನಮ್ಮ, ಬೂದಿ ಬಸಪ್ಪ ನಾಯಕ, ಸುರಪುರದ ವೆಂಕಟಪ್ಪ ನಾಯಕ, ಕೊಡಗಿನ ಸ್ವಾಮಿ ಅಪರಾಂಪರ ಮೊದಲಾದ ಧೀರ ಹೋರಾಟಗಾರರ ಬಲಿದಾನವನ್ನು ನಾವು ಈ ದಿನ ನೆನೆಸಿಕೊಳ್ಳಬೇಕು.
ಹಾಗೆಯೇ ಗಾಂಧೀಜಿಯವರ ಕರೆಗೆ ಓಗೊಟ್ಟಿದ್ದ, `ಕರ್ನಾಟಕದ ಸಿಂಹ’ ಗಂಗಾಧರ ರಾವ್ ದೇಶಪಾಂಡೆ,. ಹರ್ಡೀಕರ್ ಮಂಜಪ್ಪ, ಆಲೂರು ವೆಂಕಟರಾವ್ , ಮೈಲಾರ ಮಹಾದೇವಪ್ಪರಂತಹ ದೇಶಪ್ರೇಮಿಗಳು, ದಂಡಿ ಸತ್ಯಾಗ್ರಹದ ಕರೆಗೆ ಓಗೊಟ್ಟು ಕರನಿರಾಕರಣೆ ಮಾಡಿದ ಅಂಕೋಲದ ಸತ್ಯಾಗ್ರಹಿಗಳು, `ಏಸೂರು ಕೊಟ್ಟರೂ ಈಸೂರು ಬಿಡೆವು’ ಎಂದು ಬ್ರಿಟಿಷರಿಗೆ ಸವಾಲು ಹಾಕಿ ಪ್ರಾಣತ್ಯಾಗ ಮಾಡಿದ ಈಸೂರಿನ ಸತ್ಯಾಗ್ರಹಿಗಳು, ಹೀಗೆ ಭಾರತೀಯರ ಉತ್ತಮ ಭವಿಷ್ಯಕ್ಕಾಗಿ ಅಂದು ಹೆಜ್ಜೆ ಹಾಕಿದ ಸಾವಿರ ಸಾವಿರ ಧೀರ ದೇಶಪ್ರೇಮಿ ಕನ್ನಡಿಗರನ್ನು ನಾವು ಈ ದಿನ ತಲೆಬಗ್ಗಿಸಿ ಗೌರವ ಸಲ್ಲಿಸಬೇಕು. ಈ ಮಹನೀಯರ ಹೋರಾಟದ ಫಲವಾದ ಸ್ವಾತಂತ್ರ್ಯವನ್ನು ರಕ್ಷಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ.
ಸ್ವಾತಂತ್ರ್ಯಾನಂತರದ ಈ 79 ವರ್ಷಗಳ ಅವಧಿಯಲ್ಲಿ ವಿವಿಧ ಬಗೆಯ ಗಂಭೀರ ಸವಾಲುಗಳನ್ನು ದೇಶವು ಸಮರ್ಥವಾಗಿ ಎದುರಿಸಿದೆ. ದೇಶದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರೂ ಅವರ ದೂರದರ್ಶಿತ್ವ, ವಿಚಾರಶೀಲತೆ, ಪ್ರಜಾಪ್ರಭುತ್ವವಾದಿ ಧೋರಣೆ, ದೃಢ ಜಾತ್ಯತೀತ ನಿಲುವು, ವೈಜ್ಞಾನಿಕ ಚಿಂತನೆಗಳು ನಮ್ಮ ದೇಶದ ಅಸಾಧಾರಣ ಪ್ರಗತಿಗೆ ಅಗತ್ಯವಾದ ಸದೃಢ ತಳಪಾಯವನ್ನು ಹಾಕಿಕೊಟ್ಟಿವೆ. ಅದೇ ರೀತಿ, ಡಾ. ಬಿ.ಆರ್. ಅಂಬೇಡ್ಕರ್ ಅವರಿಂದ ರಚಿತವಾದ ಸಂವಿಧಾನವು ಈ ದೇಶದ ಜಾತ್ಯತೀತ, ಪ್ರಜಾಸತ್ತಾತ್ಮಕ ಆಶಯಗಳ ಉಸಿರಾಗಿದ್ದು ಪ್ರತಿಯೊಬ್ಬ ಭಾರತೀಯನ ಘನತೆಯ ಬದುಕಿನ ರಹದಾರಿಯಾಗಿದೆ.
ಭಾರತದ ಸ್ವಾತಂತ್ರ್ಯವು ಅಖಂಡವಾಗಿಯೂ, ಸಮಗ್ರವಾಗಿಯೂ ಸದಾಕಾಲ ನಳನಳಿಸಬೇಕೆಂದರೆ ನಮ್ಮ ಸಂವಿಧಾನದ ಮೂಲ ತತ್ವಗಳಾದ ಸಾರ್ವಭೌಮತೆ, ಪ್ರಜಾಸತ್ತಾತ್ಮತೆ, ಸಮಾಜವಾದ, ಜಾತ್ಯತೀತತೆ, ಸ್ವತಂತ್ರ ನ್ಯಾಯಾಂಗ, ರಾಜ್ಯ ನಿರ್ದೇಶಕ ತತ್ವಗಳು, ಒಕ್ಕೂಟ ತತ್ವಗಳು ಇದಾವುದೂ ಒಂದಿನಿತೂ ಮುಕ್ಕಾಗದಂತೆ ಎಚ್ಚರವಹಿಸಬೇಕು.
ಬ್ರಿಟಿಷರ ದಾಸ್ಯದಿಂದ ಸ್ವಾತಂತ್ರ್ಯ ಪಡೆಯಲು ದೇಶವು ಒಗ್ಗೂಡಿ ಹೋರಾಡುವಲ್ಲಿ ತೋರಿದ ಸ್ಫೂರ್ತಿಯನ್ನೇ ಸಂವಿಧಾನವನ್ನು ಎತ್ತಿಹಿಡಿಯುವ ವಿಚಾರದಲ್ಲಿಯೂ ನಾವೆಲ್ಲರೂ ತೋರಬೇಕು. ಸ್ವಾತಂತ್ರ್ಯ ಚಳವಳಿಯು ನಮ್ಮನ್ನು ಹೇಗೆ ಬ್ರಿಟಿಷರ ಆಳ್ವಿಕೆಯ ಸಂಕೋಲೆಗಳಿಂದ ಬಿಡುಗಡೆಗೊಳಿಸಿತೋ, ಅದೇ ರೀತಿ ಸಂವಿಧಾನವು ನಮ್ಮನ್ನು ಶೋಷಣೆ, ಅಸಮಾನತೆ, ಮೂಲಭೂತವಾದ, ಮತೀಯವಾದ, ಬಡತನಗಳಿಂದ ಮುಕ್ತಗೊಳಿಸುತ್ತದೆ. ಹಾಗಾಗಿ, ಸ್ವಾತಂತ್ರ್ಯ ದಿನಾಚರಣೆಯ ಈ ಶುಭದಿನದಂದು ನಾವೆಲ್ಲರೂ ಸಂವಿಧಾನದ ರಕ್ಷಣೆಯ ಪಣತೊಡೋಣ.
ನಮ್ಮ ಸಂವಿಧಾನದಲ್ಲಿ ಅಡಕವಾಗಿರುವ ರಾಜ್ಯ ನಿರ್ದೇಶಕ ತತ್ವಗಳು ಭಾರತವು ಒಂದು ಕಲ್ಯಾಣ ರಾಜ್ಯವಾಗಿ, ಸಾಮಾಜಿಕ – ಆರ್ಥಿಕ ಸಮಾನತೆಯನ್ನು ಸಾಧಿಸಬೇಕಾದ ಅಗತ್ಯವನ್ನು ಪ್ರತಿಪಾದಿಸುತ್ತವೆ. ಸಮಾನ ಅವಕಾಶಗಳು, ಸಂಪನ್ಮೂಲಗಳನ್ನು ಒದಗಿಸುವ ಮೂಲಕ ಆಳುವ ಸರ್ಕಾರಗಳು ಭಾರತ ದೇಶವನ್ನು ಸುಖೀ ರಾಜ್ಯವಾಗಿ ವಿಕಸಿತಗೊಳಿಸಬೇಕು ಎನ್ನುವ ಪರಿಕಲ್ಪನೆಯನ್ನು ನೀಡುತ್ತವೆ.
ಗಾಂಧೀಜಿಯವರ ಕನಸಿನ ರಾಮರಾಜ್ಯದ ಕಲ್ಪನೆಯನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಈ ನಿರ್ದೇಶಕ ತತ್ವಗಳು ಅತ್ಯಂತ ಮಹತ್ವವನ್ನು ಹೊಂದಿವೆ. ಸ್ವಾತಂತ್ರ್ಯವನ್ನು ನಿಜ ಅರ್ಥದಲ್ಲಿ ಸಾಕಾರಗೊಳಿಸುವ ಮಾರ್ಗವನ್ನು ಈ ತತ್ವಗಳು ತೋರುತ್ತವೆ. ಹಾಗಾಗಿಯೇ, ಈ ನಿರ್ದೇಶಕ ತತ್ವಗಳನ್ನು ಸಂವಿಧಾನ ನಿರ್ಮಾತೃವಾದ ಅಂಬೇಡ್ಕರ್ ಅವರು ನಮ್ಮ ಸಂವಿಧಾನದ ಅಪೂರ್ವ ವೈಶಿಷ್ಟ್ಯವೆಂದಿದ್ದರು.
ಕರ್ನಾಟಕ ಸರ್ಕಾರವು ಕಳೆದ ಎರಡು ವರ್ಷಗಳಲ್ಲಿ ಸಾಂವಿಧಾನಿಕ ಆಶಯಗಳನ್ನು ಎತ್ತಿಹಿಡಿಯುವಲ್ಲಿ ಸಾಕಷ್ಟು ದೂರ ಕ್ರಮಿಸಿದೆ. ಡಾ. ಬಿ ಆರ್ ಅಂಬೇಡ್ಕರ್ ಅವರು ಹೇಳಿದಂತೆ, ರಾಜಕೀಯ ಸಮಾನತೆಯೊಂದರಿಂದಲೇ ದೇಶದ ಪ್ರಗತಿ ಸಾಧ್ಯವಾಗದು. ಅದನ್ನು ಸಾಧಿಸಬೇಕೆಂದರೆ ಸಾಮಾಜಿಕ, ಆರ್ಥಿಕ ಸಮಾನತೆಯು ಅತ್ಯಗತ್ಯ. ಸಂವಿಧಾನದಲ್ಲಿ ಅಡಕವಾಗಿರುವ ಸಮಾಜವಾದಿ ತತ್ವವು ಇದನ್ನೇ ದನಿಸುತ್ತದೆ.
ನಮ್ಮ ಸರ್ಕಾರವು ಗ್ಯಾರಂಟಿ ಯೋಜನೆಗಳ ಮೂಲಕ ಯಶಸ್ವಿಯಾಗಿ ಜಾರಿಗೊಳಿಸಿರುವ ಸಾರ್ವತ್ರಿಕ ಮೂಲ ಆದಾಯದ ಕಲ್ಪನೆಯು ಸಹ ಇದನ್ನೇ ಒಳಗೊಳ್ಳುತ್ತದೆ. ಲಿಂಗ, ಧರ್ಮ, ಜಾತಿಗಳ ಭೇದಭಾವವಿಲ್ಲದೆ ಸರ್ವರಿಗೂ ಘನತೆಯಿಂದ ಬಾಳಲು ಅಗತ್ಯವಾದ, ಆಧುನಿಕ ಸಮಾಜದಲ್ಲಿ ಬದುಕಲು ಅವಶ್ಯಕವಾದ ಪ್ರಾಥಮಿಕ ಅವಶ್ಯಕತೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಕಲ್ಯಾಣ ರಾಜ್ಯವಾಗಿ ಕರ್ನಾಟಕವು ಮಾಡಿರುವ ಸಾಧನೆ ದೇಶಕ್ಕೇ ಮಾದರಿಯಾಗಿದೆ. ಇಂದು ದೇಶದಲ್ಲಿಯೇ ತಲಾದಾಯದಲ್ಲಿ ಕರ್ನಾಟಕವು ಮುಂಚೂಣಿಯಲ್ಲಿದೆ. ಸರ್ವರನ್ನೂ ಒಳಗೊಳ್ಳುವಂತಹ ಅಭಿವೃದ್ಧಿ ಮಾದರಿಯನ್ನು ನಾವು ಹೊಂದಿರುವುದಕ್ಕೆ ಇದುವೇ ನಿದರ್ಶನವಾಗಿದೆ.
“ಸಬಲೀಕರಣವೇ ಸ್ವಾತಂತ್ರ್ಯ” ಎನ್ನುವುದನ್ನು ಕರ್ನಾಟಕ ಸರ್ಕಾರವು ಮನಗಂಡಿದೆ. ನಾಡಿನ ಜನಸಮುದಾಯಗಳನ್ನು ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ವಿವಿಧ ಸ್ವರೂಪದ ತಾರತಮ್ಯಗಳನ್ನು ತೊಡೆಯುವಂತಹ ಕಾರ್ಯಕ್ರಮಗಳಿಗೆ ನಾವು ಆದ್ಯತೆ ನೀಡಿದ್ದೇವೆ.
ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸುವ ಶಕ್ತಿ, ಮನೆಯೊಡತಿಗೆ ಮಾಸಿಕ 2 ಸಾವಿರ ರೂಪಾಯಿ ನೀಡುವ ಗೃಹಲಕ್ಷ್ಮಿಯಂತಹ ವಿನೂತನ ಯೋಜನೆಗಳ ಮೂಲಕ ಮಹಿಳಾ ಸಬಲೀಕರಣದಲ್ಲಿ ಕ್ರಾಂತಿಕಾರಕ ಹೆಜ್ಜೆಗಳನ್ನಿರಿಸಿದ್ದೇವೆ.
ಇಂದು ನಾಡಿನ ಪ್ರತಿಯೊಬ್ಬ ಗೃಹಿಣಿ, ಪ್ರತಿಯೊಬ್ಬ ಹೆಣ್ಣು ಮಗಳು ಈ ಯೋಜನೆಗಳ ಲಾಭ ಪಡೆದು ಸ್ವಾವಲಂಬಿ ಮತ್ತು ಸ್ವಾಭಿಮಾನಿ ಬದುಕನ್ನು ಕಟ್ಟಿಕೊಳ್ಳುತ್ತಿದ್ದಾರೆ. ದೇಶದ ಇತರೆ ರಾಜ್ಯಗಳ ಮಹಿಳೆಯರಿಗೂ ಸ್ಫೂರ್ತಿಯಾಗುವಂತಹ ಪ್ರೇರಣೆಗಳನ್ನು ನೀಡುತ್ತಿದ್ದಾರೆ. ವಿಶೇಷವಾಗಿ ಗ್ರಾಮೀಣ ಭಾಗದ ಹೆಣ್ಣುಮಕ್ಕಳಲ್ಲಿ ಈ ಯೋಜನೆಗಳು ತುಂಬಿರುವ ಆತ್ಮವಿಶ್ವಾಸ ಅಗಾಧವಾಗಿದೆ.
ಈ ಯೋಜನೆಗಳ ಜಾರಿಯಿಂದಾಗಿ ಉದ್ಯೋಗ ಕ್ಷೇತ್ರಗಳಲ್ಲಿ ಹೆಣ್ಣು ಮಕ್ಕಳ ಪಾಲುದಾರಿಕೆ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡಿದೆ. ವಿಶೇಷವಾಗಿ ನಮ್ಮ ಎರಡನೆಯ ಹಂತದ ನಗರಗಳಲ್ಲಿ ಮಹಿಳೆಯರು ಗಣನೀಯ ಪ್ರಮಾಣದಲ್ಲಿ ಔದ್ಯೋಗಿಕ ಕ್ಷೇತ್ರಗಳಲ್ಲಿ ತೊಡಗಿಕೊಂಡಿರುವುದು ಸಮೀಕ್ಷೆಗಳಿಂದ ತಿಳಿದು ಬಂದಿದೆ. ಹೀಗೆ ಸಾಂಪ್ರದಾಯಿಕ ಕ್ರಮಗಳ ಆಚೆ ಸಾಗಿ ವಿಶಿಷ್ಟ ಯೋಜನೆಗಳನ್ನು ರೂಪಿಸುವ ಮೂಲಕ ಲಿಂಗ ತಾರತಮ್ಯವನ್ನು ತೊಡೆಯುವ ನಿಟ್ಟಿನಲ್ಲಿ ಕರ್ನಾಟಕವು ಅನುಕರಣೀಯ ಹೆಜ್ಜೆಗಳನ್ನಿರಿಸಿದೆ.
ಆಧುನಿಕ ಜಗತ್ತಿನಲ್ಲಿ ಜನರ ಜೀವನ ಮಟ್ಟ ಸುಧಾರಣೆಗೆ ಆಹಾರ, ಶಿಕ್ಷಣ, ಆರೋಗ್ಯ ಸೌಕರ್ಯಗಳನ್ನು ಒದಗಿಸಿದರಷ್ಟೇ ಸಾಲದು, ನಾಡಿನ ನಾಳೆಯ ಭವಿಷ್ಯಕ್ಕೆ ಅಂಧಕಾರ ಕವಿಯಬಾರದೆಂದರೆ ಇಂದು ನಾಡಿನ ಪ್ರತಿಯೊಂದು ಮನೆಯಲ್ಲಿಯೂ ನಿರಾತಂಕವಾಗಿ ವಿದ್ಯುತ್ ಬಳಕೆಯಾಗಬೇಕು. ಅ ಮೂಲಕ ಪ್ರತಿಭಾವಂತ ಯುವಪೀಳಿಗೆಯ ಓದು, ಕಲಿಕೆಗಳು ಅಡಚಣೆಯಿಲ್ಲದೆ ಸಾಗಬೇಕು.
ಗೃಹಜ್ಯೋತಿ ಯೋಜನೆಯು ಬಡವ, ಬಲ್ಲಿದರೆನ್ನುವ ಭೇದ ತೋರದೆ ನಾಡಿನ ಪ್ರತಿಯೊಂದು ಮನೆಯನ್ನು ವಿದ್ಯುತ್ ಸಬಲೀಕರಣಗೊಳಿಸಿದೆ. ಆ ಮೂಲಕ ಯಾವುದೇ ಆರ್ಥಿಕ ಹೊರೆಯಿಲ್ಲದೆ ಪ್ರತಿಯೊಂದು ಕುಟುಂಬವೂ ಪ್ರಗತಿ ಪಥದಲ್ಲಿ ದಾಪುಗಾಲು ಹಾಕಲು ನೆರವಾಗಿದೆ. ಅದೇ ಮಾದರಿಯಲ್ಲಿಯೇ, ನಾಡಿನ ಯುವಪೀಳಿಗೆಯು ಕೌಶಲಾಭಿವೃದ್ಧಿ ಹೊಂದಲು, ಆಧುನಿಕ ಉದ್ಯೋಗ ಮಾರುಕಟ್ಟೆಯ ಅವಕಾಶಗಳಿಗೆ ಸಜ್ಜುಗೊಳ್ಳಲು ಯುವನಿಧಿ ಆರ್ಥಿಕ ಸಹಾಯ ಕಾರ್ಯಕ್ರಮವು ನೆರವಾಗಿದೆ.
ಕರ್ನಾಟಕ ಸರ್ಕಾರವು ಹೀಗೆ ವಿವಿಧ ಕಲ್ಯಾಣ ಕಾರ್ಯಕ್ರಮಗಳ ಮೂಲಕ ಸ್ವಾತಂತ್ರ್ಯದ ನೈಜ ಆಶಯಗಳನ್ನು ಸಾಕಾರಗೊಳಿಸುತ್ತಾ, ಸಾಂವಿಧಾನಿಕ ತತ್ವಗಳನ್ನು ಬಲಗೊಳಿಸುತ್ತಿದೆ. ನಮ್ಮ ಈಗಿನ ಸರ್ಕಾರ ಜಾರಿಗೆ ತಂದಿರುವ ಪಂಚ ಗ್ಯಾರಂಟಿ ಯೋಜನೆಗಳ ಜೊತೆ ನಮ್ಮಿಂದಲೇ ಜಾರಿಗೊಂಡಿರುವ ಅನ್ನಭಾಗ್ಯ, ಕ್ಷೀರಭಾಗ್ಯ, ಕ್ಷೀರಧಾರೆ, ಕೃಷಿಭಾಗ್ಯ, ಮನಸ್ವಿನಿ ಹಾಗೂ ಮೈತ್ರಿ ಯೋಜನೆಗಳು ಯಾವುದೇ ಒಂದು ಜಾತಿಯ ಅಥವಾ ಧರ್ಮಕ್ಕೆ ಸೀಮಿತವಲ್ಲ.
ಈ ಎಲ್ಲಾ ಯೋಜನೆಗಳು ನಿಜವಾದ ಅರ್ಥದಲ್ಲಿ ಜಾತ್ಯಾತೀತ ಯೋಜನೆಗಳು. ಅಲ್ಲದೆ, ಒಕ್ಕೂಟ ವ್ಯವಸ್ಥೆಯ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸುತ್ತಾ, ಇತರರಿಗೂ ನೆನಪಿಸುತ್ತಾ ದೇಶದ ಸಮಗ್ರತೆಯನ್ನು ಎತ್ತಿ ಹಿಡಿದಿದೆ.
ದೇಶದ ಸ್ವಾತಂತ್ರ್ಯಕ್ಕೆ ಧಕ್ಕೆ ತರುವ ಯಾವುದೇ ಬಾಹ್ಯ, ಆಂತರಿಕ ಪ್ರಯತ್ನಗಳನ್ನು ಭಾರತೀಯರಾದ ನಾವೆಲ್ಲರೂ ಒಗ್ಗೂಡಿ ಹಿಮೆಟ್ಟಿಸಬೇಕಿದೆ. ದೇಶದ ಸಮಗ್ರತೆಗೆ ಬೆದರಿಕೆಯೊಡ್ಡುವ ಬಾಹ್ಯ ಶಕ್ತಿಗಳನ್ನು ಸೋಲಿಸುವಲ್ಲಿ ಹೇಗೆ ನಮ್ಮ ಸೈನ್ಯವು ಸಮರ್ಥವಾಗಿದೆಯೋ ಅದೇ ರೀತಿ, ದೇಶದೊಳಗಿನ ಐಕ್ಯತೆಗೆ ಭಂಗ ತರಲು ಪ್ರಯತ್ನಿಸುವಂತಹ ಸಂವಿಧಾನ ವಿರೋಧಿ ಶಕ್ತಿಗಳನ್ನು ಈ ದೇಶದ ನಾಗರಿಕರಾದ ನಾವೆಲ್ಲರೂ ಒಗ್ಗೂಡಿ ಮಣಿಸಬೇಕಿದೆ.
ಜಗತ್ತಿಗೇ ಮಾದರಿಯಾಗುವಂತಹ ಸಾಮರಸ್ಯ ಪರಂಪರೆಯನ್ನು ಭಾರತವು ಹೊಂದಿದೆ. ಇಲ್ಲಿ ವಿವಿಧ ಧರ್ಮ, ಸಂಸ್ಕೃತಿಗಳು ನೆಲೆಗೊಂಡು ಒಂದಕ್ಕೊಂದು ಪ್ರೇರಕವಾಗಿ, ಪೂರಕವಾಗಿ ಬೆಸೆದುಕೊಂಡಿವೆ. ದೇಶದ ಮೂಲೆಮೂಲೆಗಳಲ್ಲಿ ಕಂಡುಬರುವ ಧಾರ್ಮಿಕ, ಸಾಂಸ್ಕೃತಿಕ ಆಚರಣೆಗಳಲ್ಲಿ ಈ ಸಾಮರಸ್ಯವನ್ನು ಕಾಣಬಹುದಾಗಿದೆ.
ವಿಪರ್ಯಾಸವೆಂದರೆ, ಇಂದು ಪ್ರಜಾತಂತ್ರ ವಿರೋಧಿ, ಸಂವಿಧಾನ ವಿರೋಧಿ ಶಕ್ತಿಗಳು ಪ್ರಜಾಪ್ರಭುತ್ವದ ಸೋಗಿನಲ್ಲಿ ದೇಶದ ಸಾಮಾಜಿಕ ಸಂರಚನೆಗೆ ಧಕ್ಕೆ ತರುವ ಪ್ರಯತ್ನ ನಡೆಸಿವೆ. ತಮಗೆ ಬೇಕಾದಂತೆ ಇತಿಹಾಸವನ್ನು ತಿರುಚುತ್ತಾ, ಸುಳ್ಳು ಸುದ್ದಿಗಳನ್ನು, ತಪ್ಪು ಮಾಹಿತಿಗಳನ್ನು ಹರಡುತ್ತಾ ಜನಸಮುದಾಯಗಳ ನಡುವೆ ಅಪನಂಬಿಕೆ, ವೈಷಮ್ಯಗಳನ್ನು ಬಿತ್ತಲು ನಿರಂತರ ಪ್ರಯತ್ನ ನಡೆಸಿವೆ. ಸಂವಿಧಾನದ ರಕ್ಷಣೆಯ ಹೊಣೆ ಹೊತ್ತಿರುವ ಪ್ರತಿಯೊಬ್ಬ ಭಾರತೀಯನೂ ಇಂತಹ ಪ್ರಯತ್ನಗಳನ್ನು ನಿಷ್ಫಲಗೊಳಿಸಬೇಕು.
ಭಾರತದ ಅಖಂಡತೆಯ ರಕ್ಷಣೆಯೆನ್ನುವುದು ಕೇವಲ ದೇಶದ ಗಡಿಗಳ ರಕ್ಷಣೆಗೆ ಮಾತ್ರವೇ ಸೀಮಿತವಲ್ಲ. ಬದಲಿಗೆ ದೇಶದೊಳಗಿರುವ ಪ್ರತಿಯೊಂದು ಸಾಂವಿಧಾನಿಕ ಸಂಸ್ಥೆಯ ಪಾವಿತ್ರ್ಯವನ್ನು ಕಾಪಾಡುವುದಕ್ಕೂ ಅನ್ವಯಿಸುತ್ತದೆ.
ಸ್ವತಂತ್ರ ನ್ಯಾಯಾಂಗ, ಸ್ವತಂತ್ರ ಸಾಂವಿಧಾನಿಕ ಸಂಸ್ಥೆಗಳು, ನಿರ್ಭೀತ ತನಿಖಾ ಸಂಸ್ಥೆಗಳು ಇವೆಲ್ಲವೂ ಸ್ವತಂತ್ರ ಭಾರತದ ಹೆಗ್ಗುರುತುಗಳಾಗಿವೆ. ಇವುಗಳ ಪಾವಿತ್ರ್ಯಕ್ಕೆ ಧಕ್ಕೆ ಒದಗಿದರೆ ದೇಶದ ಸ್ವಾತಂತ್ರ್ಯಕ್ಕೆ ಧಕ್ಕೆ ಒದಗಿದಂತೆ. ಹಾಗಾಗಿ, ಯಾವುದೇ ಬೆಲೆ ತೆತ್ತಾದರೂ ಸರಿಯೇ ಇವುಗಳನ್ನು ಮೂಲಸ್ವರೂಪದಲ್ಲಿಯೇ ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ.
ಈ ಎಲ್ಲ ಅಂಶಗಳ ಹಿನ್ನೆಲೆಯಲ್ಲಿ ಸ್ವಾತಂತ್ರ್ಯದ ಪರಿಕಲ್ಪನೆಯನ್ನು ನಾವು ಇಂದು ಹೆಚ್ಚು ವಿಸ್ತಾರವಾಗಿ ವ್ಯಾಖ್ಯಾನಿಸಿಕೊಳ್ಳಬೇಕಿದೆ, ಸ್ವಾತಂತ್ರ್ಯ ದಿನಾಚರಣೆಯನ್ನು ಅರ್ಥಪೂರ್ಣವಾಗಿಸಬೇಕಿದೆ. ಮತ್ತೊಮ್ಮೆ ಎಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು.