ಬೆಂಗಳೂರು : ರಾಜ್ಯದ ಧಾರ್ಮಿಕ ದತ್ತಿ ಇಲಾಖೆಯ ಎಲ್ಲ ದೇವಸ್ಥಾನಗಳಲ್ಲಿ ನೀರಿನ ಬಾಟಲ್ ಸೇರಿ ಎಲ್ಲ ಬಗೆಯ ಪ್ಲಾಸ್ಟಿಕ್ ಬಳಕೆಯನ್ನು ಆ.15ರಿಂದ ಕಡ್ಡಾಯವಾಗಿ ನಿಷೇಧಿಸಲಾಗಿದೆ ಎಂದು ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ಬಿಜೆಪಿಯ ಭಾರತಿ ಶೆಟ್ಟಿ ಹಾಗೂ ಕಾಂಗ್ರೆಸ್ಸಿನ ಮಧು ಜಿ.ಮಾದೇಗೌಡ ಅವರು ಕೇಳಿದ ಪ್ರತ್ಯೇಕ ಪ್ರಶ್ನೆಗೆ ಉತ್ತರಿಸಿದ ಸಚಿವರು, ಇಲಾಖಾ ವ್ಯಾಪ್ತಿಯ ದೇವಾಲಯಗಳಲ್ಲಿ ಪ್ಲಾಸ್ಟಿಕ್ ಉತ್ಪನ್ನ ಬಳಸಿದಲ್ಲಿ ದಂಡ ವಿಧಿಸುವಂತೆ ಸಂಬಂಧಪಟ್ಟ ದೇವಾಲಯಗಳ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಆದರೆ ಈ ಆದೇಶ ಖಾಸಗಿ ದೇವಾಲಯಗಳಿಗೆ ಅನ್ವಯವಾಗುವು ದಿಲ್ಲ ಎಂದು ಸಚಿವರು ಉತ್ತರಿಸಿದರು.
ಇಲಾಖೆ ವ್ಯಾಪ್ತಿಗೆ ಬರುವ ದೇವಾಲಯಗಳ ಛತ್ರಗಳಲ್ಲಿ ಉತ್ಪತ್ತಿಯಾಗುವ ಘನ ತ್ಯಾಜ್ಯಗಳನ್ನು ವೈಜ್ಞಾನಿಕವಾಗಿ ನಿರ್ವಹಣೆ ಸಂಬಂಧ ಯೋಜನಾ ನಿರ್ವಹಣಾ ಘಟಕ ಸ್ಥಾಪಿಸಿ ತಜ್ಞರ ತಂಡದಿಂದ ಮೊದಲ ಹಂತದಲ್ಲಿ ಇಲಾಖೆಗೆ ಸೇರಿದ 25 ದೇವಾಲಯ ಆಯ್ಕೆ ಮಾಡಿಕೊಂಡು ಘನ ಮತ್ತು ದ್ರವ ತ್ಯಾಜ್ಯ ಘಟಕ ಸ್ಥಾಪಿಸಲು ಸ್ಥಳ ಗುರುತಿಸಿ ತ್ಯಾಜ್ಯ ವಿಲೇವಾರಿಯನ್ನು ನಿರ್ವಹಿಸಲು ಕ್ರಮ ವಹಿಸಲಾಗಿದೆ ಎಂದು ಹೇಳಿದ್ದಾರೆ.