ಶಿವಮೊಗ್ಗ: ಆಡಂಬರದ ಪೂಜೆಯಿಂದ ಭಗವಂತನ ಸಾಕ್ಷಾತ್ಕಾರವಾಗುವುದಿಲ್ಲ. ನಿರ್ಮಲವಾದ ಭಕ್ತಿಯೇ ಪ್ರಧಾನವಾದದ್ದು ಎಂದು ಪಂಡಿತ ಅನಂತ ಪದ್ಮನಾಭಾಚಾರ್ ಮೈಸೂರು ಹೇಳಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಸಾಗರದ ಮಧ್ವ ಮಂದಿರದಲ್ಲಿ 3 ದಿನಗಳ ಕಾಲ ಆಯೋಜಿಸಿದ್ದ ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವದಲ್ಲಿ ಮಂಗಳವಾರ ಸಮಾಜದಿಂದ ಕೊಡಮಾಡುವ ʼಅನಂತ ಸೇವಾ ಪುರಸ್ಕಾರʼವನ್ನು ಆಯನೂರಿನ ಕೋಟೆ ಆಂಜನೇಯಸ್ವಾಮಿ ದೇವಾಲಯದ ಪ್ರಧಾನ ಅರ್ಚಕ ಪ್ರಮೋದಾಚಾರ್ ಕಲ್ಲಾಪುರ ಅವರಿಗೆ ಪ್ರಧಾನ ಮಾಡಿ ಮಾತನಾಡಿದರು.
ಸೇವೆ ನಮ್ಮ ಅಹಂಕಾರವೂ ಆಗಬಾರದು, ಆಡಂಬರವೂ ಆಗಬಾರದು. ನಮ್ಮ ಅಂತರಾಳದಲ್ಲಿರುವ ಪರಮಾತ್ಮನಿಗೆ ಎಲ್ಲವನ್ನೂ ಸಮರ್ಪಿಸಬೇಕು ಎಂದರು.
ಕಲಿಯುಗದ ಕಾಮಧೇನು, ಕಲ್ಪವೃಕ್ಷ ಗುರುಸಾರ್ವಭೌಮ ರಾಘವೇಂದ್ರರು ನಾವು ಬೇಡಿದ್ದನ್ನೆಲ್ಲಾ ಕರುಣಿಸುತ್ತಿದ್ದಾರೆ. ನಾವು ಈ ಭೂಮಿಗೆ ಬಂದಮೇಲೆ ಋಣ ತೀರಿಸಬೇಕಾದದ್ದು ನಮ್ಮ ಧರ್ಮ, ಪ್ರತಿಯೊಬ್ಬರೂ ಸೇವಾ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಸಾಗರದಲ್ಲಿ 3ದಿನಗಳ ಕಾಲ ಗುರುಸಾರ್ವಭೌಮರ ಆರಾಧನೆಯನ್ನು ಅತ್ಯಂತ ಶ್ರದ್ಧಾಭಕ್ತಿಯಿಂದ ನಡೆಸಲಾಗಿದೆ. ಪ್ರತಿವರ್ಷ ಸಂಸ್ಕೃತಿ ಸಂಸ್ಕಾರವನ್ನು ಮುನ್ನಡೆಸುತ್ತಿರುವವರಿಗೆ ಪ್ರಶಸ್ತಿ ನೀಡಿ ಗೌರವಿಸುತ್ತಿರುವುದು ಶ್ಲಾಘನೀಯ. ರಾಘವೇಂದ್ರ ಸ್ವಾಮಿಗಳ ಗ್ರಂಥಗಳನ್ನು ಯುವಜನತೆಗೆ ಪರಿಚಯಿಸುವ ಜ್ನಾನ ಸತ್ರಗಳು ಹೆಚ್ಚಾಗಿ ನಡೆಯಬೇಕು ಎಂದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಆಯನೂರಿನ ಕೋಟೆ ಆಂಜನೇಯಸ್ವಾಮಿ ದೇವಾಲಯದ ಪ್ರಧಾನ ಅರ್ಚಕ ಪ್ರಮೋದಾಚಾರ್ ಕಲ್ಲಾಪುರ ಮಾತನಾಡಿ, ನಮ್ಮ ಕೆಲಸ ಅತ್ಯಂತ ಪವಿತ್ರವಾದುದು. ಅದನ್ನು ನಿಷ್ಟೆಯಿಂದ ನಡೆಸಿದರೆ ಮಾತ್ರ ಯಶಸ್ವಿಯಾಗಲು ಸಾಧ್ಯ. ಸಿದ್ಧಿಯಿಲ್ಲದೇ ಯಾವುದೂ ನಮಗೆ ಲಭ್ಯವಾಗುವುದಿಲ್ಲ. ಆಚರಣೆ ಆರಾಧನೆಯ ವಿಚಾರದಲ್ಲಿ ವ್ಯಾವಹಾರಿಕವಾಗಿಯೇ ನೋಡುವುದು ಒಳ್ಳೆಯ ಬೆಳವಣಿಗೆಯಲ್ಲ. ಇತ್ತೀಚಿನ ದಿನಗಳಲ್ಲಿ ಸಂಸ್ಕೃತದ ಬಗ್ಗೆ ಯುವಜನರು ಹೆಚ್ಚಿನ ಆಸಕ್ತಿ ತೋರುತ್ತಿದ್ದು, ಒಳ್ಳೆಯ ಬೆಳವಣಿಗೆಯಾಗಿದೆ. ಶ್ರೀಮಠಗಳು ಗುರುಕುಲ ಮಾದರಿಯ ಶಿಕ್ಷಣವನ್ನು ನೀಡುತ್ತಾ ಸಂಸ್ಕೃತಿ ಸಂಸ್ಕಾರದ ಮಹತ್ವ ಪರಿಚಯಿಸುತ್ತಿದೆ. ಸಾಗರದ ಮಧ್ವಸಂಘ ನಮಗೆ ಪ್ರಶಸ್ತಿ ನೀಡಿ ಜವಾಬ್ದಾರಿಯನ್ನು ಹೆಚ್ಚಿಸಿದೆ ಎಂದರು.
ಮಾಧ್ವಸಂಘದ ಗೌರವಾಧ್ಯಕ್ಷರಾದ ಡಾ.ಗುರುರಾಜ್ ಕಲ್ಲಾಪುರ್ ಮಾತನಾಡಿ 3 ದಿನಗಳ ಕಾಲ ರಾಘವೇಂದ್ರಸ್ವಾಮಿಗಳ ಆರಾಧನೆ ಅತ್ಯಂತ ಯಶಸ್ವಿಯಾಗಿ ನಡೆದಿದೆ. ರಾಘವೇಂದ್ರಸ್ವಾಮಿಗಳ ಗ್ರಂಥಗಳ ಅಧ್ಯಯನದ ಕುರಿತು ಇನ್ನಷ್ಟು ಬೆಳಕು ಚೆಲ್ಲುವ ಕೆಲಸ ಆಗಬೇಕಾಗಿದೆ. ಹಾಗಾಗಿ ಪ್ರತಿವರ್ಷ ಆರಾಧನೆಯಲ್ಲಿ ರಾಯರ ಗ್ರಂಥಗಳ ಕುರಿತು ಚಿಂತನ-ಮಂಥನ ನಡೆಸುವ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದೇವೆ. ಪ್ರತಿವರ್ಷ ಕಲ್ಯಾಣಿ ಕುಟುಂಬದವರು ಸಮಾಜದ ಜೊತೆಗೂಡಿ ಸಾಧಕರನ್ನು ಗುರುತಿಸಿ ಪ್ರಶಸ್ತಿ ನೀಡುತ್ತಿರುವುದು ಮಾದರಿಯಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಲೋಕಕಲ್ಯಾಣರ್ಥವಾಗಿ ಪವಮಾನ ಹೋಮವನ್ನು ನಡೆಸಲಾಯಿತು.
ಸಾಗರ ಮಾಧ್ವಸಂಘದ ಅಧ್ಯಕ್ಷ ವೆಂಕಟೇಶ್ ಕಟ್ಟಿ, ಕಾರ್ಯದರ್ಶಿ ಬದರೀಶ್, ದೀಪಕ್ ಸಾಗರ್ ಶ್ರೀಶಾಚಾರ್, ಆನಂದ ಕಲ್ಯಾಣಿ, ಸಹನಾ ದೀಪಕ್ ಪಿ.ಜಿ, ವಾದಿರಾಜ್ ಸಾಬಾಜಿ, ಹರ್ಷವರ್ಧನ್ ಪಿಜಿ, ನಾಗರಾಜ್ ಆಯನೂರು, ಸುಧಾ, ಮಂಜುಳಾ ಬದರೀನಾಥ್, ಜಯಭಾರತೀ ಕೆ.ಆರ್, ಜ್ಯೋತಿ ಕೆ.ಆರ್, ರೇವತಿ ಹತ್ವಾರ್ ಇನ್ನಿತರರು ಹಾಜರಿದ್ದರು.
ರೇಣುಕಾಸ್ವಾಮಿ ಕೊಲೆ ಕೇಸ್: ನಾಳೆ ಸುಪ್ರೀಂ ಕೋರ್ಟ್ ನಲ್ಲಿ ‘ನಟ ದರ್ಶನ್’ ಜಾಮೀನು ಭವಿಷ್ಯ ನಿರ್ಧಾರ
64,197 ರೈಲ್ವೆ ಹುದ್ದೆಗಳಿಗೆ 1.87 ಕೋಟಿ ಅರ್ಜಿಗಳು ಸಲ್ಲಿಕೆ: ರೈಲ್ವೆ ಸಚಿವಾಲಯದ ಅಂಕಿ ಅಂಶಗಳು