ಬೆಂಗಳೂರು : ಬೆಂಗಳೂರಿನಲ್ಲಿ ಕರ್ನಾಟಕದ ನಿವೃತ್ತ ಡಿಜಿ ಮತ್ತು ಐಜಿಪಿ ಓಂ ಪ್ರಕಾಶ್ ಅವರ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಸಿಸಿಬಿ ಪಲೀಸರು ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.
ಪ್ರಕರಣದ ತನಿಖೆ ನಡೆಸಿರುವ ಸಿಸಿಬಿ ಪೊಲೀಸರು ಬೆಂಗಳೂರಿನ 1ನೇ ಎಸಿಎಂಎಂ ನ್ಯಾಯಾಲಯಕ್ಕೆ 1,150 ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದ್ದು, ಓಂ ಪ್ರಕಾಶ್ ಕೊಲೆ ಪ್ರಕರಣದಲ್ಲಿ ಮಗಳಿಗೆ ಕ್ಲೀನ್ ಚಿಟ್ ನೀಡಿದ್ದಾರೆ.
ಚಾರ್ಜ್ ಶೀಟ್ ನಲ್ಲಿ ಓಂ ಪ್ರಕಾಶ್ ಪುತ್ರಿ ಕೃತಿಕಾ ಹೆಸರು ಕೈಬಿಡಲಾಗಿದ್ದು, ತನಿಖೆ ವೇಳೆ ಕೃತಿಕಾ ಪಾತ್ರ ಕಂಡುಬಾರದ ಹಿನ್ನೆಲೆಯಲ್ಲಿ ಕ್ಲೀನ್ ಚಿಟ್ ನೀಡಲಾಗಿದೆ. ಕೊಲೆ ವೇಳೆ ಕೃತಿಕಾ ಮನೆಯ ಮೇಲ್ಮಹಡಿಯಲ್ಲಿದ್ದರು. ಕೊಲೆಯಲ್ಲಿ ಭಾಗಿಯಾದ ಬಗ್ಗೆ ಸೂಕ್ತ ಸಾಕ್ಷ್ಯಗಳ ಕೊರತೆ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ಕ್ಲೀನ್ ಚಿಟ್ ನೀಡಿದ್ದಾರೆ.
ಘಟನೆ ಹಿನ್ನೆಲೆ
ಏಪ್ರಿಲ್ 22 ರಂದು ನಿವೃತ್ತ ಐಜಿ ಮತ್ತು ಡಿಜಿಪಿ ಓಂ ಪ್ರಕಾಶ್ ಅವರನ್ನು ಪತ್ನಿಯೇ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದರು. ಈ ಪ್ರಕರಣವನ್ನು ರಾಜ್ಯ ಸರ್ಕಾರವು ಸಿಸಿಬಿಗೆ ವರ್ಗಾವಣೆ ಮಾಡಿ ಆದೇಶಿಸಿತ್ತು. ಹೆಚ್ ಎಸ್ ಆರ್ ಲೇಔಟ್ ನಲ್ಲಿರುವಂತ ಅವರ ಮನೆಯಲ್ಲಿ ರಕ್ತದ ಮಡುವಿನಲ್ಲಿ ಓಂ ಪ್ರಕಾಶ್ ಅವರ ಮೃತದೇಹ ಪತ್ತೆಯಾಗಿತ್ತು. ತನಿಖೆ ನಡೆಸಿದಂತ ಪೊಲೀಸರಿಗೆ ಸ್ಥಳದಲ್ಲಿ ಖಾರದಪುಡಿ ಡಬ್ಬಿ, ಚಾಕು ಪತ್ತೆಯಾಗಿತ್ತು. ಈ ಸಂಬಂಧ ಪೊಲೀಸರು ಪತ್ನಿ ಪಲ್ಲವಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು.