ಬೆಂಗಳೂರು : ಹುದ್ದೆ ಖಾಲಿ ಇಲ್ಲ ಎಂದು ನೆಪ ಹೇಳಿ ಅನುಕಂಪದ ನೌಕರಿ ನಿರಾಕರಿಸುವಂತಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ.
ನಿರ್ದಿಷ್ಟ ಅನುದಾನಿತ ಕಾಲೇಜಿನಲ್ಲಿ ಉದ್ಯೋಗ ಖಾಲಿಯಿಲ್ಲ ಎಂಬ ಕಾರಣಕ್ಕೆ ಅನುಕಂಪದ ಆಧಾರದ ಮೇಲೆ ನೌಕರಿ ನಿರಾಕರಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಆದೇಶಿಸಿದೆ.
ಬಾಗಲಕೋಟೆಯ ಅನುದಾನಿತ ಆದರ್ಶ ಪಿಯು ಕಾಲೇಜಿನಲ್ಲಿ ಎಫ್‌ಡಿಎ ನೌಕರನಾಗಿದ್ದ ತಂದೆ ಮೃತಪಟ್ಟ ಹಿನ್ನೆಲೆಯಲ್ಲಿ ಅನುಕಂಪದ ಆಧಾರ ದಲ್ಲಿ ನೌಕರಿ ನೀಡಲು ಕೋರಿ ಸಂತೋಷ್ ಯಮನಪ್ಪ ವಡಕರ್ ಸಲ್ಲಿಸಿದ್ದ ಮನವಿಗೆ ಪದವಿ ಪೂರ್ವಶಿಕ್ಷಣ ಇಲಾಖೆ ಹುದ್ದೆ ಖಾಲಿಯಿಲ್ಲ ಎಂದು ಹಿಂಬರಹ ನೀಡಿತ್ತು.
ಇದನ್ನು ಪ್ರಶ್ನಿಸಿ ಯಮನಪ್ಪ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾ.ಸೂರಜ್ ಗೋವಿಂದರಾಜ್ ಪೀಠ, ಹುದ್ದೆ ಖಾಲಿಯಿಲ್ಲ ಮನವಿ ತಿರಸ್ಕರಿಸಲಾಗುವುದಿಲ್ಲ. ಇತರೆ ಅನುದಾನಿತ ಸಂಸ್ಥೆಗಳಲ್ಲಿ ಹಂಚಿಕೆ ಮಾಡಬೇಕು ಎಂದು ಇಲಾಖೆ ಹಿಂಬರಹ ರದ್ದುಪಡಿಸಿ ಆದೇಶ ಹೊರಡಿಸಿದೆ.