ಬೆಂಗಳೂರು: “ಮುನಿರತ್ನ ಅವರು ಬೆಟ್ಟದಲಸೂರು ಮೆಟ್ರೋ ನಿಲ್ದಾಣ ನಿರ್ಮಾಣಕ್ಕೆ ಹಣ ನೀಡಿದರೆ, ಆ ನಿಲ್ದಾಣಕ್ಕೆ ಮುನಿರತ್ನ ಅಂಡ್ ಕಂಪನಿ ಎಂದೇ ಹೆಸರಿಡಲು ಸಿದ್ಧ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಕುಟುಕಿದರು.
ವಿಧಾನಸಭೆ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಶಾಸಕ ಮುನಿರತ್ನ ಅವರು ಬೆಟ್ಟದಲಸೂರು ಮೆಟ್ರೋ ನಿಲ್ದಾಣದ ನಿರ್ಮಾಣಕ್ಕೆ ಎಂಬೆಸಿ ಸಂಸ್ಥೆ ಹಣ ನೀಡಿಲ್ಲ ಎಂದು ಈ ನಿಲ್ದಾಣ ನಿರ್ಮಾಣ ಮಾಡುವುದನ್ನು ಕೈಬಿಟ್ಟಿರುವುದು ಎಷ್ಟು ಸರಿ ಎಂದು ಪ್ರಶ್ನೆ ಕೇಳಿದಾಗ, ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮಂಗಳವಾರ ಉತ್ತರಿಸಿದರು.
“ಬೆಂಗಳೂರಿನಲ್ಲಿ ಒಂದು ಪರಿಕಲ್ಪನೆ ಇದೆ. ಕೆಲವು ಸಂಸ್ಥೆಗಳ ಸಿಎಸ್ಆರ್ ನಿಧಿ ಬಳಸಿಕೊಂಡು ಮೆಟ್ರೋ ನಿಲ್ದಾಣ ನಿರ್ಮಿಸಿದರೆ ಆ ನಿಲ್ದಾಣಕ್ಕೆ ಸಂಸ್ಥೆ ಹೆಸರಿಡಲು ಅವಕಾಶ ಮಾಡಿಕೊಡುತ್ತೇವೆ. ಈ ಮಾದರಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ನಿನ್ನೆ ಪ್ರಶಂಸೆ ಮಾಡಿದರು. ಈ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಇದ್ದರು. ಇನ್ಫೋಸಿಸ್ ಅವರು ರೂ.200 ಕೋಟಿ ಕೊಟ್ಟಿದ್ದು, ಮೆಟ್ರೋ ನಿಲ್ದಾಣಕ್ಕೆ ಆ ಸಂಸ್ಥೆ ಹೆಸರು ಇಡಲಾಗಿದೆ. ಡೆಲ್ಟಾ ಅವರು ಕೂಡ ನೀಡಿದ್ದಾರೆ. ಎಲ್ಲಾ ಸರ್ಕಾರಗಳು ಇದನ್ನು ಮಾಡಿಕೊಂಡು ಬಂದಿವೆ. ಪಾಪ, ಮುನಿರತ್ನ ಅವರಿಗೆ ಸೇರಿದ 70-80 ಎಕರೆ ಜಮೀನು ಅಲ್ಲಿದೆ. ಅವರ ಜಮೀನಿನ ಪಕ್ಕ ಅವರಿಗೆ ಮೆಟ್ರೋ ನಿಲ್ದಾಣ ಬೇಕಾಗಿದೆ. ಹೀಗಾಗಿ ಈ ಪ್ರಶ್ನೆ ಎತ್ತಿದ್ದಾರೆ” ಎಂದರು.
ಈ ವೇಳೆ ಮಧ್ಯ ಪ್ರವೇಶಿಸಿ ಮಾತನಾಡಿದ ಮುನಿರತ್ನ ಅವರು, “ಡಿಸಿಎಂ ಶಿವಕುಮಾರ್ ಅವರು ಬಿಲ್ಡರ್ ಗೆ ಕರೆ ಮಾಡಿ 24 ತಾಸಿನಲ್ಲಿ ಹಣ ಕಟ್ಟುತ್ತೀಯಾ ಇಲ್ಲವಾ ಎಂದು ಎಂಬೆಸಿ ಬಿಲ್ಡರ್ ಸಂಸ್ಥೆಯವರಿಗೆ ಕೇಳಿದರೆ ಸಾಕು. ಅವರು ಹಣ ಕಟ್ಟುತ್ತಾರೆ. ಬೆಂಗಳೂರಿನಲ್ಲಿ ಬಿಲ್ಡರ್ ಗಳು ಕೇವಲ ಶಿವಕುಮಾರ್ ಅವರ ಮಾತನ್ನಷ್ಟೇ ಕೇಳುತ್ತಾರೆ” ಎಂದು ತಿಳಿಸಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಶಿವಕುಮಾರ್ ಅವರು, “ಮನುಷ್ಯನಿಗೆ ಸ್ವಾರ್ಥ ಇರುವುದು ಸಹಜ. ಇದು ತಪ್ಪಲ್ಲ. ನನಗೂ ಇದೆ, ಅವರಿಗೂ ಇದೆ. ಆ ಭಾಗದಲ್ಲಿ ಎಂಬೆಸಿ ಅವರದ್ದು ಸುಮಾರು 250 ಎಕರೆ ಜಮೀನಿದೆ. ಅವರು ಮೆಟ್ರೋ ನಿಲ್ದಾಣಕ್ಕೆ ತಮ್ಮ ಹೆಸರು ಬರಬೇಕು ಎಂದು ಒಪ್ಪಂದ ಮಾಡಿಕೊಂಡಿದ್ದಾರೆ. ರೂ.140 ಕೋಟಿ ಮೊತ್ತದಲ್ಲಿ ನಿರ್ಮಿಸಲಾಗುವ ಮೆಟ್ರೋ ನಿಲ್ದಾಣಕ್ಕೆ ರೂ.120 ಕೋಟಿ ನೀಡುವುದಾಗಿ ಹೇಳಿದ್ದರು. ಅದರಲ್ಲಿ ಕೇವಲ ರೂ.1 ಕೋಟಿ ಮಾತ್ರ ನೀಡಿದ್ದಾರೆ. ಆ ಭಾಗದಲ್ಲಿ ಮುನಿರತ್ನ ಅವರದ್ದು 70-80 ಎಕರೆ ಜಮೀನಿದೆ, ಹೀಗಾಗಿ ಮುನಿರತ್ನ ಹಣ ಕೊಟ್ಟು ಮೆಟ್ರೋ ನಿಲ್ದಾಣ ನಿರ್ಮಿಸಿದರೆ ಆ ನಿಲ್ದಾಣಕ್ಕೆ ಮುನಿರತ್ನ ಅವರ ಹೆಸರೇ ಇಡುತ್ತೇನೆ” ಎಂದು ತಿಳಿಸಿದರು.
ಈ ವೇಳೆ ಮಾತನಾಡಿದ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು, “ಈಗಾಗಲೇ ಎಂಬೆಸಿ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಎಂಬೆಸಿ ಅವರು ರೂ.1 ಕೋಟಿ ಕೊಟ್ಟಿದ್ದು, ಬಾಕಿ ರೂ.119 ಕೋಟಿ ನೀಡಲಿ ಎಂದು ಉಪಮುಖ್ಯಮಂತ್ರಿಗಳು ಅವರು ಧಮ್ಕಿ ಹಾಕಲಿ ಎಂದಷ್ಟೇ ಮುನಿರತ್ನ ಹೇಳುತ್ತಿದ್ದಾರೆ” ಎಂದರು.
ಇದಕ್ಕೆ ತಿರುಗೇಟು ನೀಡಿದ ಶಿವಕುಮಾರ್ ಅವರು, “ನಾನೇಕೆ ಧಮ್ಕಿ ಹಾಕಲಿ? ಬೇಕಾದರೆ ಒಪ್ಪಂದ ರದ್ದುಗೊಳಿಸೋಣ, ಮುನಿರತ್ನ ಹಣ ಕೊಟ್ಟರೆ ʼಮುನಿರತ್ನ ಅಂಡ್ ಕಂಪನಿʼ ಅಂತಲೇ ಹೆಸರಿಡೋಣ” ಎಂದು ಹೇಳಿದರು.
“ಈ ಮೆಟ್ರೋ ನಿಲ್ದಾಣದ ಬಗ್ಗೆ ಸ್ಥಳೀಯ ಶಾಸಕರಾದ ಕೃಷ್ಣ ಬೈರೇಗೌಡರು ನನ್ನ ಜೊತೆ ಚರ್ಚಿಸಿ ಪರಿಸ್ಥಿತಿ ವಿವರಿಸಿದ್ದಾರೆ. ಕ್ಷೇತ್ರದ ಬಗ್ಗೆ ಅವರು ಹೇಳಿರುವ ಮಾತನ್ನು ನಾನು ಗಮನದಲ್ಲಿಟ್ಟುಕೊಂಡಿದ್ದೇನೆ. ಕೃಷ್ಣ ಬೈರೇಗೌಡ ಅವರದ್ದು ಸಾರ್ವಜನಿಕ ಬೇಡಿಕೆ, ಮುನಿರತ್ನ ಅವರದ್ದು ಖಾಸಗಿ ಬೇಡಿಕೆ. ಇಷ್ಟೇ ವ್ಯತ್ಯಾಸ” ಎಂದು ತಿರುಗೇಟು ನೀಡಿದರು.
ಅಶ್ವತ್ಥ್ ನಾರಾಯಣ ಅವರ ಸಲಹೆ ಸ್ವೀಕರಿಸಲು ಸಿದ್ಧ:
ಬಿಜೆಪಿ ಶಾಸಕ ಅಶ್ವತ್ಥ್ ನಾರಾಯಣ ಅವರು ಬೆಂಗಳೂರಿನಲ್ಲಿ ಚರಂಡಿ ವ್ಯವಸ್ಥೆ ಸರಿಯಿಲ್ಲದ ಕಾರಣ, ಮಳೆ ಬಂದಾಗ ಅಂಡರ್ ಪಾಸ್ ಸೇರಿದಂತೆ ಎಲ್ಲೆಡೆ ನೀರು ನಿಲ್ಲುತ್ತದೆ. ಇನ್ನು ಕಾಲುವೆಗಳ ಮೂಲಕ ಮಳೆನೀರು ಇಂಗು ಬಾವಿ ರೂಪಿಸಬೇಕು ಎಂದು ಪ್ರಸ್ತಾಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಿವಕುಮಾರ್ ಅವರು, “ಅಶ್ವತ್ಥ ನಾರಾಯಣ ಅವರು ಹಿರಿಯ ಶಾಸಕರು, ಬೆಂಗಳೂರಿನಲ್ಲಿ ಕೆಲಸ ಮಾಡಿದ ಅನುಭವ ಅವರಿಗಿದೆ. ಅವರು ಯಾವಾಗ ಬೇಕಾದರೂ ನಮಗೆ ಸಲಹೆ ನೀಡಬಹುದು. ನಾವು ಅದನ್ನು ಸ್ವಾಗತಿಸುತ್ತೇವೆ. 2,395 ಕಡೆ ಮಳೆನೀರುಗಾಲು ಒತ್ತುವರಿಯನ್ನು ತೆರವುಗೊಳಿಸಿದ್ದೇವೆ. ಅಂತರ್ಜಲ ಮರುಪೂರಣ ಕೂಡ ಇಲ್ಲಿ ಸಮಸ್ಯೆಯಾಗಿದೆ. ದೊಡ್ಡ ದೊಡ್ಡ ಅಪಾರ್ಟ್ ಮೆಂಟ್ ಗಳಲ್ಲೂ ಸಂಪೂರ್ಣ ಕಾಂಕ್ರೀಟ್ ಹಾಕುತ್ತಿದ್ದಾರೆ. ಇದಕ್ಕೆ ನೀತಿ ರೂಪಿಸಲು ಮುಂದಾಗಿದ್ದೇವೆ. ಮಳೆನೀರು ಇಂಗಿಸುವ ಈ ವಿಚಾರವಾಗಿ ನಾವು ಕೂತು ಚರ್ಚೆ ಮಾಡಿದ್ದು ತೀರ್ಮಾನಕ್ಕೆ ಬರೋಣ” ಎಂದು ತಿಳಿಸಿದರು.
ಆಧಾರ್ ಕಾರ್ಡ್ ಅನ್ನು ‘ಪೌರತ್ವ ಪುರಾವೆ’ಯಾಗಿ ಸ್ವೀಕರಿಸಲು ಸಾಧ್ಯವಿಲ್ಲ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
ಜುಲೈ 2025ರಲ್ಲಿ ಭಾರತದ ಚಿಲ್ಲರೆ ಹಣದುಬ್ಬರವು 8 ವರ್ಷಗಳ ಕನಿಷ್ಠ ಮಟ್ಟಕ್ಕೆ ಇಳಿಕೆ | India Retail Inflation