ಬೆಂಗಳೂರು: ಡಿ.ಕೆ.ಶಿವಕುಮಾರ್ ಅವರು ಸಿದ್ದರಾಮಯ್ಯ ಅವರ ಬಲಗೈ ಬಂಟ ರಾಜಣ್ಣನವರ ಮೇಲೆ ಕ್ರಮ ತೆಗೆದುಕೊಳ್ಳುವಂತೆ ಮಾಡಿ, ರಾಜೀನಾಮೆ ಕೊಡಿಸಿದ್ದಾರೆ. ಇದು ಶಿವಕುಮಾರ್ ಅವರು ಸಿದ್ದರಾಮಯ್ಯನವರಿಗೆ ನೀಡಿದ ದೊಡ್ಡ ಹೊಡೆತ ಎಂದು ವಿಪಕ್ಷ ಉಪ ನಾಯಕ ಹಾಗೂ ಶಾಸಕ ಅರವಿಂದ ಬೆಲ್ಲದ ಅವರು ವಿಶ್ಲೇಷಿಸಿದ್ದಾರೆ.
ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಈ ಮೂಲಕ ಸಿದ್ದರಾಮಯ್ಯ ಅವರಿಗೆ ನಿಮ್ಮ ಅವಧಿ ಮುಗಿದಿದೆ. ಮುಖ್ಯಮಂತ್ರಿಯಾಗಿ ಬಹಳ ದಿನ ನೀವು ಮುಂದುವರೆಯುವುದಿಲ್ಲ ಎಂದು ಸಂದೇಶವನ್ನು ನೀಡಿದ್ದಾರೆ ಎಂದು ತಿಳಿಸಿದರು. ಸಚಿವ ರಾಜಣ್ಣ ಅವರ ಮೇಲೆ ಕ್ರಮ ತೆಗೆದುಕೊಳ್ಳಲು ಮತ್ತೊಂದು ಕಾರಣವೇನೆಂದರೆ, ಕಳೆದ ಅಧಿವೇಶನದಲ್ಲಿ ಹನಿಟ್ರ್ಯಾಪ್ ಮಾಡಿ ನನ್ನನ್ನು ಸಿಲುಕಿಸುವ ಕೆಲಸವಾಗಿದೆ ಎಂದು ಡಿ.ಕೆ ಶಿವಕುಮಾರ್ ಹೆಸರನ್ನು ತೆಗೆದುಕೊಳ್ಳದೇ, ಅವರ ಮೇಲೆ ಆರೋಪವನ್ನು ಮಾಡಿದ್ದರು. ಇದಕ್ಕೆ ಪ್ರತೀಕಾರವಾಗಿ ಡಿ.ಕೆ. ಶಿವಕುಮಾರ್ ಅವರು ಸಿದ್ದರಾಮಯ್ಯ ಅವರ ಆಪ್ತರಾದ ರಾಜಣ್ಣನವರ ಮೇಲೆ ಕ್ರಮ ತೆಗದುಕೊಳ್ಳುವಂತೆ ಮಾಡಿದ್ದಾರೆ; ಸಿದ್ದರಾಮಯ್ಯ ಅವರಿಗೆ ನಿಮ್ಮ ಅವಧಿ ಮುಗಿದಿದೆ. ಮುಖ್ಯಮಂತ್ರಿಯಾಗಿ ಬಹಳ ದಿನ ನೀವು ಮುಂದುವರೆಯುವುದಿಲ್ಲ ಎಂಬ ಸಂದೇಶ ನೀಡಿದ್ದಾರೆ ಎಂದು ಅವರು ತಿಳಿಸಿದರು.
ಸುಳ್ಳಿನ ಸರದಾರ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಸುಳ್ಳಿನ ಸರದಾರ ಎಂಬುದು ಇಡೀ ದೇಶಕ್ಕೆ ಮತ್ತು ರಾಜ್ಯಕ್ಕೆ ಗೊತ್ತಾಗಿದೆ ಯಾವುದೇ ಹುರುಳಿಲ್ಲದ ವಿಷಯವನ್ನು ತೆಗೆದುಕೊಂಡು ಬಂದು ಮತದಾರರ ಪಟ್ಟಿಯಲ್ಲಿ ಅಕ್ರಮ ಆಗಿದೆ ಎಂದು ಸುಳ್ಳು ಆರೋಪವನ್ನು ಚುನಾವಣಾ ಆಯೋಗದ ಮೇಲೆ ಮಾಡಿದ್ದಾರೆ ಎಂದು ಆಕ್ಷೇಪಿಸಿದರು. ಚುನಾವಣಾ ಆಯೋಗವು ಮತದಾರರ ಪಟ್ಟಿಯನ್ನು ಪರಿಷ್ಕರಿಸುವ ಕೆಲಸವನ್ನು ಬಿಹಾರದ ರಾಜ್ಯದಲ್ಲಿ ಮಾಡಿದಾಗ ಇದೇ ರಾಹುಲ್ ಗಾಂಧಿಯವರು ಪ್ರತಿಭಟನೆ ಮಾಡಿದ್ದರು. ಆದರೆ, ಕರ್ನಾಟಕದಲ್ಲಿ ಮತ ಅಕ್ರಮ ನಡೆದಿದೆ ಎಂದು ಆಪಾದನೆ ಮಾಡಿದ್ದಾರೆ ಎಂದು ಅವರು ಆರೋಪಿಸಿದರು.
ಈ ಆಪಾದನೆ ಸಂಬಂಧ ವಾಲ್ಮೀಕಿ ಸಮಾಜದ ಹಿರಿಯರು ಮತ್ತು ಕಾಂಗ್ರೆಸ್ಸಿನ ಸಚಿವ ಕೆ.ಎನ್. ರಾಜಣ್ಣ ಅವರು ಈ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದೆ. ನಮ್ಮ ಅಧಿಕಾರಿಗಳೇ ಚುನಾವಣಾ ಪಟ್ಟಿಯನ್ನು ಮಾಡಿದ್ದಾರೆ. ಇದರಲ್ಲಿ ಏನು ತಪ್ಪಾಗುವುದಕ್ಕೆ ಸಾಧ್ಯ ಎಂದು ರಾಹುಲ್ ಗಾಂಧಿ ಅವರು ಮಾಡಿದ ಆಪಾದನೆ ಬಗ್ಗೆ ಪ್ರಶ್ನಿಸಿದ್ದರು ಎಂದು ತಿಳಿಸಿದರು. ಸಂವಿಧಾನ ಪುಸ್ತಕ ಕೈನಲ್ಲಿ ಹಿಡಿದು ಸಂವಿಧಾನದ ಬಗ್ಗೆ ಮತ್ತು ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುವ ರಾಹುಲ್ ಗಾಂಧಿಯವರು ಕಾಂಗ್ರೆಸ್ ಸಚಿವ ಕೆ.ಎನ್ ರಾಜಣ್ಣ ಅವರ ಹೇಳಿಕೆಯನ್ನು ಇಟ್ಟುಕೊಂಡು ಸಚಿವ ಸಂಪುಟದಿಂದ ವಜಾ ಮಾಡಲು ತಿಳಿಸಿದ್ದು ಪ್ರಜಾಪ್ರಭುತ್ವ ವಿರೋಧಿ ನಡೆ ಎಂದು ಖಂಡಿಸಿದರು.
ಸಂಪುಟದಿಂದ ವಜಾ ಬಳಿಕ ಕೆ.ಎನ್ ರಾಜಣ್ಣ ಹೇಳಿದ್ದೇನು ಗೊತ್ತಾ? ಇಲ್ಲಿದೆ ಫಸ್ಟ್ ರಿಯಾಕ್ಷನ್
ಲೋಕಸಭೆಯಲ್ಲಿ ರಾಷ್ಟ್ರೀಯ ಕ್ರೀಡಾ ಆಡಳಿತ, ಡೋಪಿಂಗ್ ವಿರೋಧಿ ತಿದ್ದುಪಡಿ ಮಸೂದೆ ಅಂಗೀಕಾರ