ವಿಧಾನಪರಿಷತ್ : ಭೌಗೋಳಿಕ ಪ್ರದೇಶದ ಶೇ.60-70ರಷ್ಟು ಕಾನನ ಪ್ರದೇಶವಿದ್ದಾಗಲೂ ವನ್ಯಜೀವಿ – ಮಾನವ ಸಂಘರ್ಷವಿತ್ತು, ಈಗ ಅರಣ್ಯ ಕ್ಷೀಣಿಸಿ ಶೇ.20ಕ್ಕೆ ಇಳಿದಿದೆ. ವನ್ಯಜೀವಿ- ಮಾನವ ಸಂಘರ್ಷ ಹೆಚ್ಚಾಗುತ್ತಿದೆ, ಇದನ್ನು ನಿಯಂತ್ರಿಸಲು ಸರ್ಕಾರ ಎಲ್ಲ ಸಾಧ್ಯ ಕ್ರಮ ಕೈಗೊಳ್ಳುತ್ತಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ.
ಮೇಲ್ಮನೆಯ ಪ್ರಶ್ನೋತ್ತರ ಕಲಾಪದಲ್ಲಿಂದು ಕಿಶೋರ್ ಕುಮಾರ್ ಪುತ್ತೂರು ಹಾಗೂ ಪ್ರತಾಪ ಸಿಂಹ ನಾಯಕ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ವನ್ಯಜೀವಿ ಸಂರಕ್ಷಣಾ ಕಾಯಿದೆಯ ಅನುಷ್ಠಾನದ ಬಳಿಕ ರಾಜ್ಯದಲ್ಲಿ 6395 ಆನೆ ಇದ್ದು, ಗಜಪಡೆಯಲ್ಲಿ ನಂ.1 ಆಗಿದ್ದರೆ, ರಾಜ್ಯದಲ್ಲಿ 563 ಹುಲಿ ಇದ್ದು, ಹುಲಿ ಸಂಖ್ಯೆಯಲ್ಲಿ ನಂ.2ನೇ ಸ್ಥಾನದಲ್ಲಿದ್ದೇವೆ ಎಂದು ತಿಳಿಸಿದರು.
ರಾಜ್ಯದಲ್ಲಿ 2025-26ರ ಸಾಲಿನಲ್ಲಿ ಈವರೆಗೆ ಆನೆಯಿಂದ 13 ಹಾಗೂ ಇತರ ವನ್ಯಜೀವಿ ದಾಳಿಯಿಂದ 6 ಸೇರಿ ಒಟ್ಟು 19 ಜನರು ಮೃತಪಟ್ಟಿದ್ದು, ಮಾನವ, ವನ್ಯಜೀವಿ ಸಂಘರ್ಷ ನಿಯಂತ್ರಣಕ್ಕೆ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳುತ್ತಿದೆ. ಆನೆ ದಾಳಿಯಿಂದ 2022-23ನೇ ಸಾಲಿನಲ್ಲಿ 32, 2023-24ನೇ ಸಾಲಿನಲ್ಲಿ 48, 2024-25ನೇ ಸಾಲಿನಲ್ಲಿ 36 ಜನರು ಸಾವಿಗೀಡಾಗಿದ್ದರು ಎಂದು ವಿವರ ನೀಡಿದರು.
ಆನೆ – ಮಾನವ ಸಂಘರ್ಷ ತಡೆಗೆ ಕ್ರಮ
– @eshwar_khandre , ಅರಣ್ಯ ಸಚಿವರು pic.twitter.com/EQWjy2f37z
— DIPR Karnataka (@KarnatakaVarthe) August 11, 2025
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2022-23ರ ಸಾಲಿನಲ್ಲಿ ಮೂರು ಸಾವು ಸಂಭವಿಸಿತ್ತು, 23-24ರಲ್ಲಿ ಒಬ್ಬರು ಮೃತಪಟ್ಟಿದ್ದರು, 2024-25ರಲ್ಲಿ ಯಾವುದೇ ಜೀವಹಾನಿ ಆಗಿರಲಿಲ್ಲ. ಆದರೆ ಈ ವರ್ಷ 2 ಸಾವು ಸಂಭವಿಸಿದೆ. ಜನರ ಜೀವ ಅಮೂಲ್ಯವಾದ್ದು, ಇದಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಈ ಹಿಂದೆ ವನ್ಯಜೀವಿ ದಾಳಿಯಿಂದ ಮೃತಪಟ್ಟವರಿಗೆ 15 ಲಕ್ಷ ಪರಿಹಾರ ನೀಡಲಾಗುತ್ತಿತ್ತು. ಈಗ 20 ಲಕ್ಷ ರೂ. ಪರಿಹಾರ ನೀಡಲಾಗುತ್ತಿದೆ.
ಕಾಡಾನೆ ಹಾವಳಿ ನಿಯಂತ್ರಣಕ್ಕೆ ಕ್ರಮ:
ಕಾಡಾನೆಗಳ ಹಾವಳಿ ತಡೆಯಲು ಕಾಡಿನಂಚಿನ ಗ್ರಾಮಸ್ಥರಿಗೆ ಬೇಲಿ ನಿರ್ಮಿಸಿಕೊಳ್ಳಲು ಶೇ.50ರಷ್ಟು ಸಬ್ಸಿಡಿ ನೀಡಲಾಗುತ್ತಿದೆ. ಆನೆ ನಿರೋಧಕ ಕಂದಕ ನಿರ್ಮಿಸಲಾಗುತ್ತಿದೆ. ಹಳ್ಳ ತೊರೆ ಬರುವಲ್ಲಿ ವಿಶೇಷ ವಿನ್ಯಾಸದ ಕಾಂಕ್ರೀಟ್ ತಡೆಗೋಡೆ ನಿರ್ಮಿಸಲಾಗುತ್ತಿದೆ. ಇದರ ಜೊತೆಗೆ ಸೌರ ತೂಗು ಬೇಲಿ (ಸೋಲಾರ್ ಟೆಂಟಕಲ್ ಫೆನ್ಸಿಂಗ್), ಸೌರ ಬೇಲಿ ಅಳವಡಿಸಲಾಗುತ್ತಿದೆ. ಆನೆ ಸಂಚರಿಸುವ ಪ್ರದೇಶಗಳಲ್ಲಿ ಸೂಚನಾ ಫಲಕ ಹಾಕಲಾಗುತ್ತಿದೆ, ಕಾಡಾನೆಗಳು ಗ್ರಾಮಗಳಿಗೆ ಬಂದಾಗ ಗ್ರಾಮಸ್ಥರಿಗೆ ಮಾಹಿತಿ ನೀಡಲು ವ್ಯವಸ್ಥೆ ಮಾಡಲಾಗಿದೆ. ಆನೆಗಳನ್ನು ಕಾಡಿಗೆ ಮರಳಿಸಲು ಸಿಬ್ಬಂದಿ ನಿಯೋಜಿಸಲಾಗುತ್ತಿದೆ. ಪುಂಡಾನೆ ಇದ್ದರೆ ಸೆರೆ ಹಿಡಿಯಲಾಗುತ್ತಿದೆ. ಆನೆಗಳು ಹೆಚ್ಚಿರುವ ಕಾಡಿನಂಚಿನಲ್ಲಿ ಬಿದಿರು ಬೆಳೆಸಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಆನೆ ಎಲ್ಲಿ ತಂತ್ರಜ್ಞಾನ:
ಆನೆ-ಮಾನವ ಸಂಘರ್ಷ ಇರುವ 10 ಜಿಲ್ಲೆಗಳಲ್ಲಿ ಆನೆ ಎಲ್ಲಿ ಎಂಬ ತಂತ್ರಜ್ಞಾನ ವ್ಯವಸ್ಥೆ ಜಾರಿಗೆ ತರಲಾಗಿದೆ. ಈ ವ್ಯವಸ್ಥೆಯು ಸಾರ್ವಜನಿಕರ ದೂರುಗಳು, ಗಸ್ತು ಮೊದಲಾದ ಮಾಹಿತಿ ಸಂಗ್ರಹಿಸಿ ಆನೆಗಳ ಚಲನವಲನದ ಮೇಲ್ವಿಚಾರಣೆ ಮಾಡುತ್ತದೆ ಮತ್ತು ಈ ತಂತ್ರಜ್ಞಾನವನ್ನು ದಕ್ಷಿಣ ಕನ್ನಡ ಜಿಲ್ಲೆಗೂ ವಿಸ್ತರಿಸಲು ಕ್ರಮ ವಹಿಸಲಾಗಿದೆ ಎಂದರು.
2027ರ ಮಾರ್ಚ್ ವೇಳೆಗೆ ಕೋಲಾರ, ಚಿಕ್ಕಬಳ್ಳಾಪುರಕ್ಕೆ ಎತ್ತಿನಹೊಳೆ ಕುಡಿಯುವ ನೀರು ಪೂರೈಕೆ: ಡಿಸಿಎಂ ಡಿಕೆಶಿ
ನಾಳೆಯಿಂದ ಆಶಾ ಕಾರ್ಯಕರ್ತೆಯರಿಂದ ಅಹೋರಾತ್ರಿ ಧರಣಿ, ಅಗತ್ಯ ಕ್ರಮಕ್ಕೆ ರಾಜ್ಯ ಸರ್ಕಾರ ಸೂಚನೆ