ದಕ್ಷಿಣ ಕನ್ನಡ : ಧರ್ಮಸ್ಥಳದಲ್ಲಿ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಗಿರೀಶ್ ಮಟ್ಟಣನವರ್, ಮಹೇಶ್ ಶೆಟ್ಟಿ ತಿಮರೋಡಿ, ಪುನೀತ್ ಕೆರೆಹಳ್ಳಿ ವಿರುದ್ಧ ದೂರು ದಾಖಲಾಗಿದೆ.
ಧರ್ಮಸ್ಥಳದಲ್ಲಿ ಬುಧವಾರ ಸಂಭವಿಸಿದ ಗಲಭೆ ಪ್ರಕರಣಕ್ಕೆ ಗಲಾಟೆಗೆ ಪ್ರಚೋದನೆ ನೀಡಿದ್ದಕ್ಕಾಗಿ ಗಿರೀಶ್ ಮಟ್ಟಣನವರ್, ಮಹೇಶ್ ಶೆಟ್ಟಿ ತಿಮರೋಡಿ, ಪುನೀತ್ ಕೆರೆಹಳ್ಳಿ ವಿರುದ್ಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಮೂವರ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.
ಧರ್ಮಸ್ಥಳದಲ್ಲಿ ನಡೆದ ಗಲಭೆಯಲ್ಲಿ ಗಿರೀಶ್ ಮಟ್ಟಣ್ಣವರ್ ಅಪರಾಧಿಕ ಕೃತ್ಯಗಳನ್ನು ನಡೆಸಲು ದುಷ್ಟೇರಣೆಯಾಗುವಂತೆ ಮಾತನಾಡಿದ್ದಾರೆ ಎಂದು ಆರೋಪಿಸಿ ಬೆಳ್ತಂಗಡಿ ನಿವಾಸಿ ಚರಣ್ ಶೆಟ್ಟಿ ಎಂಬುವವರು ಗಿರೀಶ್ ಮಟ್ಟಣ್ಣವರ್, ಮಹೇಶ್ ಶೆಟ್ಟಿ ತಿಮರೋಡಿ ಅವರ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಇನ್ನು ಬೆಳ್ತಂಗಡಿ ಗ್ರಾಮದ ನಿವಾಸಿ ಜೆರೋಮ್ ಬರ್ಬೋಝಾ ಎಂಬುವರು ಪುನೀತ್ ಕೆರೆಹಳ್ಳಿ ಯವರು ತಮ್ಮ ಯೂಟ್ಯೂಬ್ ನಲ್ಲಿ ಅಶ್ಲೀಲ ಪದದಲ್ಲಿ ಮಾತನಾಡಿದ್ದಾರೆ ಎಂದು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಖಾಸಗಿ ವಾಹಿನಿಯ ಪತ್ರಕರ್ತನ ಮೇಲೆ ಹಲ್ಲೆ ನಡೆಸಿದ ಘಟನೆಗೆ ಸಂಬಂಧಿಸಿದಂತೆ ಗಿರೀಶ್ ಮಟ್ಟಣನವರ್, ಮಹೇಶ್ ಶೆಟ್ಟಿ ತಿಮರೋಡಿ, ಯೂಟ್ಯೂಬರ್ ಸಮೀರ್ ವಿರುದ್ಧ ಬೆಳ್ತಂಗಡಿ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಬೆಳ್ತಂಗಡಿ ಠಾಣೆಯಲ್ಲಿ ಬಿಎನ್ಎಸ್ ಸೆಕ್ಷನ್ 115(2), 189(2), 191(2), 351(2), 352, 190 ಅಡಿ ಎಫ್ಐಆರ್ ದಾಖಲಾಗಿದೆ. ಎಫ್ಐಆರ್ ನಲ್ಲಿ ಗಿರೀಶ್ ಮಟ್ಟಣನವರ್ (ಎ1), ಮಹೇಶ್ ಶೆಟ್ಟಿ ತಿಮರೋಡಿ(ಎ2) ಯೂಟ್ಯೂಬರ್ ಸಮೀರ್(ಎ3), ಜಯಂತ್(ಎ4) ಇತರರ ಹೆಸರನ್ನು ಉಲ್ಲೇಖಿಸಲಾಗಿದೆ.