ಚಿಕ್ಕಬಳ್ಳಾಪುರ: ಕಾರು ಚಾಲಕ ಬಾಬು ಆತ್ಮಹತ್ಯೆ ಪ್ರಕರಣದಲ್ಲಿ ಬಿಜೆಪಿ ಸಂಸದ ಡಾ.ಕೆ ಸುಧಾಕರ್ ವಿರುದ್ಧ ಅಟ್ರಾಸಿಟಿ ಕೇಸ್ ದಾಖಲಾಗಿದೆ. ಮೃತನ ಪತ್ನಿ ನೀಡಿದಂತ ದೂರಿನ ಹಿನ್ನಲೆಯಲ್ಲಿ ಈ ಪ್ರಕರಣ ದಾಖಲಾಗಿದೆ.
ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ತೆರಳಿ ಮೃತ ಬಾಬು ಪತ್ನಿ ದೂರು ನೀಡಿದ್ದರು. ಈ ದೂರಿನಲ್ಲಿ ಪತಿಯ ಡೆತ್ ನೋಟ್ ಬಗ್ಗೆಯೂ ಪ್ರಸ್ತಾಪಿಸಲಾಗಿತ್ತು. ಹೀಗಾಗಿ ಡೆತ್ ನೋಟ್ ಆಧಾರದ ಅಡಿಯಲ್ಲಿ ಬಿಎನ್ಎಸ್ ಸೆಕ್ಷನ್ 108, 352, 351 ಹಾಗೂ ಎಸ್ಸಿ, ಎಸ್ಟಿ ಕಾಯ್ದೆಯಡಿ ಅಟ್ರಾಸಿಟಿ ಕೇಸ್ ದಾಖಲಾಗಿದೆ.
ಅಂದಹಾಗೇ ಬಾಬು ಆತ್ಮಹತ್ಯೆ ಪ್ರಕರಣದಲ್ಲಿ ಎ1 ಆರೋಪಿಯಾಗಿ ಬಿಜೆಪಿ ಸಂಸದ ಡಾ.ಕೆ ಸುಧಾಕರ್ ಅವರನ್ನು ಸೇರಿಸಲಾಗಿದೆ. ಕ್ರಮವಾಗಿ ನಾಗೇಶ್, ಮಂಜುನಾಥ್ ಎ2, ಎ3 ಆರೋಪಿಯಾಗಿಸಲಾಗಿದೆ.
ಏನಿದು ಘಟನೆ?
ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯತಿ ಮುಖ್ಯ ಲೆಕ್ಕಾಧಿಕಾರಿಯ ಗುತ್ತಿಗೆ ನೌಕರ ಕಾರು ಚಾಲಕನಾಗಿದ್ದ ಬಾಬು, ಇಂದು ಜಿಲ್ಲಾ ಪಂಚಾಯತಿ ಸಭಾಂಗಣದ ಪಕ್ಕದ ಮರದಡಿಯಲ್ಲೇ ಸರ್ಕಾರಿ ಕಾರು ನಿಲ್ಲಿಸಿದ್ದಾನೆ. ಬಳಿಕ ಕಾರಿನ ಮೇಲೆ ಹತ್ತಿ ಹೊಂಗೆ ಮರಕ್ಕೆ ನೇಣಿಗೆ ಶರಣಾಗಿದ್ದಾನೆ.
ಈ ವಿಚಾರ ತಿಳಿದು ಸ್ಥಳಕ್ಕೆ ಆಗಮಿಸಿದ ಚಿಕ್ಕಬಳ್ಳಾಪುರ ಎಸ್ಪಿ ಕುಶಾಲ್ ಚೌಕ್ಸಿ ಸೇರಿದಂತೆ ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ತನಿಖೆ ನಡೆಸಿದ್ದು, ಮೃತನ ಕಾರಿನಲ್ಲಿ 4 ಪುಟಗಳ ಡೆತ್ ನೋಟ್ ಸಿಕ್ಕಿದೆ.
ಮೃತ ಬಾಬು ಡೆತ್ ನೋಟ್ ನ ಮೊದಲ ಪುಟದಲ್ಲೇ, ಮೊದಲ ಸಾಲಿನಲ್ಲೇ ನನ್ನ ಸಾವಿಗೆ ಡಾ.ಕೆ.ಸುಧಾಕರ್ ಕಾರಣ ಹಾಗೂ ನಾಗೇಶ್ ಸೇರಿದಂತೆ ಜಿಲ್ಲಾ ಪಂಚಾಯತಿ ಲೆಕ್ಕ ಪರಿಶೋಧಕ ವಿಭಾಗದ ಎಸ್ ಡಿ ಎ ಮಂಜುನಾಥ್ ಹೆಸರನ್ನ ಉಲ್ಲೇಖಿಸಿದ್ದರು. ಹೀಗಾಗಿ ಸಂಸದ ಡಾ.ಕೆ ಸುಧಾಕರ್ ಸೇರಿದಂತೆ ಮೂವರ ವಿರುದ್ಧ ಎಫ್ಐಆರ್ ದಾಖಲಾಗಿದೆ.