ಬೆಂಗಳೂರು: ರೈತರಿಗೆ ಕಾಂಗ್ರೆಸ್ ಸರ್ಕಾರ ನೀಡಿದ ಸರಳೀಕೃತ ದರ್ಖಾಸ್ತು ಪೋಡಿ “ನನ್ನ ಭೂಮಿ” ಗ್ಯಾರಂಟಿ ಅಭಿಯಾನ ವೇಗ ಪಡೆದುಕೊಂಡಿದ್ದು, ಈವರೆಗೆ ಕೇವಲ 8 ತಿಂಗಳಲ್ಲಿ 1,09,000 ಜಮೀನುಗಳನ್ನು ಅಳತೆಗೆ ತೆಗೆದುಕೊಳ್ಳಲಾಗಿದೆ. ಮುಂದಿನ ಡಿಸೆಂಬರ್ ಒಳಗಾಗಿ 2 ಲಕ್ಷ ಜಮೀನುಗಳಿಗೆ ಪೋಡಿ ಮಾಡಿಕೊಡುವ ಗುರಿ ಹೊಂದಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಮಾಹಿತಿ ನೀಡಿದರು.
ವಿಕಾಸಸೌಧದಲ್ಲಿ ಎಲ್ಲಾ ಜಿಲ್ಲಾಧಿಕಾರಿಗಳ ಮಾಸಿಕ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಬಳಿಕ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, “ಈ ಹಿಂದಿನ ಸರ್ಕಾರದ ಅವಧಿಯಲ್ಲಿ ಮೂರು ವರ್ಷಕ್ಕೆ ಕೇವಲ 5,801 ಪ್ರಕರಣಗಳಲ್ಲಿ ಮಾತ್ರ ರೈತರಿಗೆ ಪೋಡಿ ದುರಸ್ಥಿ ಮಾಡಿಕೊಡಲಾಗಿತ್ತು. ಆದರೆ, ಪ್ರಸ್ತುತ ಕಳೆದ ಡಿಸೆಂಬರ್ನಲ್ಲಿ “ನನ್ನ ಭೂಮಿ” ಹೆಸರಿನಲ್ಲಿ ಪೋಡಿ ಅಭಿಯಾನ ಕೈಗೊಂಡಿದ್ದು, ಕೇವಲ 9 ತಿಂಗಳಲ್ಲಿ 1,09,000 ಜಮೀನುಗಳನ್ನು ಅಳತೆಗೆ ತೆಗೆದುಕೊಳ್ಳಲಾಗಿದೆ” ಎಂದು ತಿಳಿಸಿದರು.
“ಈವರೆಗೆ 1,09,000 ಜಮೀನುಗಳನ್ನು ಅಳತೆಗೆ ತೆಗೆದುಕೊಂಡಿದ್ದು, ಈ ಪೈಕಿ ಗಣನೀಯ ಪ್ರಮಾಣದಲ್ಲಿ ಭೂಮಿಯ ಅಳತೆ ಕೆಲಸವೂ ನಡೆಯುತ್ತಿದೆ. ಇನ್ನೂ 50 ರಿಂದ 70 ಸಾವಿರ ಪೋಡಿ ಪ್ರಕರಣಗಳು ದಾಖಲಾಗುವ ನಿರೀಕ್ಷೆ ಇದ್ದು, ಮುಂದಿನ ಡಿಸೆಂಬರ್ ಒಳಗೆ 2 ಲಕ್ಷ ಪ್ರಕರಣಗಳಲ್ಲಿ ರೈತರಿಗೆ ದರ್ಖಾಸ್ತು ಪೋಡಿ ಮಾಡಿಕೊಡಲು ನಿರ್ಧರಿಸಲಾಗಿದೆ. ಈ ಗುರಿ ಸಾಧ್ಯವಾದರೆ ಕನಿಷ್ಠ 7 ಲಕ್ಷ ಕುಟುಂಬಗಳಿಗೆ 30 ಲಕ್ಷಕ್ಕೂ ಹೆಚ್ಚು ರೈತರಿಗೆ ಅನುಕೂಲವಾಗಲಿದೆ ” ಎಂದು ಮಾಹಿತಿ ನೀಡಿದರು.
“ಮೂರು-ನಾಲ್ಕು ದಶಕಗಳ ಹಿಂದೆ ರೈತರಿಗೆ ದರ್ಖಾಸ್ತಿನಲ್ಲಿ ಮಂಜೂರಾಗಿದ್ದ ಜಮೀನಿಗೆ ಈವರೆಗೆ ಪೋಡಿ ಆಗಿಲ್ಲ. ಇದರಿಂದ ರೈತರು ಸಾಕಷ್ಟು ಸಮಸ್ಯೆ ಎದುರಿಸಿದ್ದರು. ಈ ಸಮಸ್ಯೆಗೆ ಶಾಶ್ವತ ಪರಿಹಾರ ನೀಡುವ ಸಲುವಾಗಿಯೇ “ನನ್ನ ಭೂಮಿ” ಹೆಸರಿನಲ್ಲಿ ಪೋಡಿ ಅಭಿಯಾನ ಆರಂಭಿಸಲಾಯಿತು. ಈ ಅಭಿಯಾನದ ಅಡಿ ಜನರ ಅರ್ಜಿಗೆ ಕಾಯದೆ ಮಧ್ಯವರ್ತಿಗಳ ಹಾವಳಿ ಇಲ್ಲದೆ ಸರ್ಕಾರವೇ ರೈತರ ಮನೆ ಬಾಗಿಲಿಗೆ ತೆರಳಿ ಪೋಡಿ ಮಾಡಿಕೊಡುತ್ತಿದೆ. ಹಿಂದೆ ಮಂಜೂರಾಗಿದ್ದ ಜಮೀನಿಗೆ ಪಕ್ಕಾ ದಾಖಲೆಗಳನ್ನು ಅವರ ಕೈಗೆ ಕೊಟ್ಟು ಅವರ ಭೂ ಮಾಲೀಕತ್ವಕ್ಕೆ ಗ್ಯಾರಂಟಿ ನೀಡುವುದು ಈ ಕಾರ್ಯಕ್ರಮದ ವಿಶೇಷ” ಎಂದು ವಿವರಿಸಿದರು.
ಕಂದಾಯ ಗ್ರಾಮಗಳ 1.62 ಲಕ್ಷ ಫಲಾನುಭವಿಗಳಿಗೆ ಹಕ್ಕುಪತ್ರ:
ಹಾಡಿ, ಹಟ್ಟಿ, ತಾಂಡಾ, ಮಜರೆ ಗ್ರಾಮಗಳಲ್ಲಿ ವಾಸಿಸುತ್ತಿರುವವರು ಸಾಮಾಜಿಕವಾಗಿ ಹಾಗೂ ಆರ್ಥಿವಾಗಿ ಸಾಕಷ್ಟು ಹಿಂದುಳಿದವರು. ಆದರೆ, ಈ ಗ್ರಾಮಗಳನ್ನು ಕಂದಾಯ ಗ್ರಾಮಗಳಾಗಿ ಘೋಷಿಸದ ಕಾರಣ ದಶಕಗಳಿಂದಲೂ ಇವರು ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಹೀಗಾಗಿ ಇಂತಹ ದಾಖಲೆ ರಹಿತ ವಸತಿ ಪ್ರದೇಶಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸುವ ಕೆಲಸವನ್ನು ಸರ್ಕಾರ ಕಳೆದ ಎರಡು ವರ್ಷಗಳಿಂದ ಅಭಿಯಾನ ಮಾದರಿಯಲ್ಲಿ ಮುನ್ನಡೆಸುತ್ತಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದರು.
ಸಾಂಪ್ರದಾಯಿಕ ವಸತಿ ಪ್ರದೇಶಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸುವ ನಿಟ್ಟಿನಲ್ಲಿ 2017 ರಲ್ಲೇ ಅಂದಿನ ಕಾಂಗ್ರೆಸ್ ಸರ್ಕಾರ ಸೂಕ್ತ ಕಾನೂನು ರಚಿಸಿತ್ತು. ಆದರೆ, ಹಿಂದಿನ ಸರ್ಕಾರ ಈ ಕಾನೂನನ್ನು 2023 ರ ವರೆಗೆ ಸಮರ್ಪಕವಾಗಿ ಅನುಷ್ಠಾನಗೊಳಿಸಿರಲ್ಲ. ಈ ಅವಧಿಯಲ್ಲಿ ಕೇವಲ 2,626 ಗ್ರಾಮಗಳನ್ನು ಮಾತ್ರ ಗುರುತಿಸಲಾಗಿತ್ತು. 1500 ಗ್ರಾಮಗಳನ್ನು ಮಾತ್ರ ಕಂದಾಯ ಗ್ರಾಮ ಎಂದು ಘೋಷಿಸಲಾಗಿತ್ತು. 2023ರಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆ ಹಿಂದಿನ ಸರ್ಕಾರದ ಅವಧಿಯಲ್ಲಿ ಅರ್ಹತೆ ಇದ್ದಾಗ್ಯೂ ಬಿಟ್ಟುಹೋಗಿದ್ದ 4,250 ಅರ್ಹ ದಾಖಲೆ ರಹಿತ ಜನ ವಸತಿ ಪ್ರದೇಶಗಳನ್ನು ಗುರುತಿಸಲಾಗಿದೆ. ಡಿಸೆಂಬರ್ ತಿಂಗಳ ಒಳಗೆ ಇಷ್ಟೂ ಗ್ರಾಮಗಳನ್ನು ಕಂದಾಯ ಗ್ರಾಮಗಳನ್ನಾಗಿ ಘೋಷಿಸಲು ಸೂಚಿಸಲಾಗಿದೆ ಎಂದರು.
ಈಗಾಗಲೇ ಕಳೆದ ಮೇ ತಿಂಗಳಲ್ಲಿ ಹೊಸಪೇಟೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಂದಾಯ ಗ್ರಾಮಗಳ 1.11 ಲಕ್ಷ ಫಲಾನುಭವಿಗಳಿಗೆ ಹಕ್ಕುಪತ್ರ ನೀಡಲಾಗಿದೆ. ಇನ್ನೂ 1.62 ಲಕ್ಷ ಕುಟುಂಬದ ಫಲಾನುಭವಿಗಳಿಗೆ ಇ-ಖಾತಾ- ನೋಂದಣಿ ಮಾಡಿಸಿದ ಪಕ್ಕಾ ಹಕ್ಕುಪತ್ರ ನೀಡುವ ಗುರಿಯನ್ನು ನವೆಂಬರ್ ತಿಂಗಳ ಅಂತ್ಯದೊಳಗೆ ಯಶಸ್ವಿಗೊಳಿಸುವಂತೆ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಗುರಿ ನೀಡಲಾಗಿದೆ” ಎಂದು ತಿಳಿಸಿದರು.
7405 ಗ್ರಾಮ ಆಡಳಿತ ಅಧಿಕಾರಿಗಳಿಗೆ ಕಚೇರಿ, ಲ್ಯಾಪ್ಟಾಪ್ ಭಾಗ್ಯ
“ರಾಜ್ಯದಲ್ಲಿ 7,500 ಗ್ರಾಮ ಆಡಳಿತ ಅಧಿಕಾರಿಗಳ ಸರ್ಕಲ್ ಇದ್ದು (ವಿಎ ಸರ್ಕಲ್) 8357 ಜನ ಅಧಿಕಾರಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರಿಗೆ ದಶಕಗಳಿಂದ ಕಚೇರಿಯೇ ಇರಲಿಲ್ಲ. ಒಂದೆಡೆ ವಿಎ ಗಳು ಕೈಗೇ ಸಿಗುವುದಿಲ್ಲ ಎಂದು ಸಾರ್ವಜನಿಕರು ದೂರುತ್ತಿದ್ದರೆ ಮತ್ತೊಂದೆಡೆ ತಮಗೆ ಕಚೇರಿ ಸೌಲಭ್ಯ ಬೇಕು ಎಂದು ವಿಎ ಗಳು ಸಹ ಬೇಡಿಕೆ ಇಟ್ಟಿದ್ದರು. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದು, ಜಿಲ್ಲಾಧಿಕಾರಿಗಳು ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆ ಸಚಿವರ ಜೊತೆ ಚರ್ಚಿಸಿ ಕೇವಲ ನಾಲ್ಕು ತಿಂಗಳಿನಲ್ಲಿ 7405 ವಿಎಗಳಿಗೆ ಗ್ರಾಮ ಪಂಚಾಯತಿ ಕಚೇರಿಯಲ್ಲೇ ಕಚೇರಿ ಸೌಲಭ್ಯ ಒದಗಿಸಲಾಗಿದೆ” ಎಂದು ತಿಳಿಸಿದರು.
“ರೈತರು ತಮ್ಮ ಕೆಲಸಗಳಿಗೆ ಗ್ರಾಮ ಪಂಚಾಯತ್ ಕಚೇರಿಗಳಿಗೆ ಆಗಮಿಸುವುದು ವಾಡಿಕೆ. ಹೀಗಾಗಿ ಕಂದಾಯ ಇಲಾಖೆ ಅಧಿಕಾರಿಗಳೂ ಗ್ರಾಮ ಪಂಚಾಯತ್ ಆವರಣದಲ್ಲೇ ಇದ್ದರೆ ಪಂಚಾಯತಿಯೂ ಸಬಲೀಕರಣಗೊಳ್ಳುತ್ತದೆ, ರೈತರಿಗೂ ಸಾಕಷ್ಟು ಅನುಕೂಲವಾಗುತ್ತದೆ ಎಂಬ ಉದ್ದೇಶದಿಂದ ಗ್ರಾಮೀಣಾಭಿವೃದ್ಧಿ ಸಚಿವರ ಜೊತೆ ಚರ್ಚಿಸಿ ವಿಎ ಗಳಿಗೆ ಹೊಸ ಕಚೇರಿ ಹಾಗೂ ಮೂಲಭೂತ ಸೌಲಭ್ಯಗಳ ವ್ಯವಸ್ಥೆ ಮಾಡಿಕೊಡಲಾಯಿತು. ಇನ್ನೂ 952 ವಿಎ ಗಳಿಗೆ ಕಚೇರಿ ನೀಡುವ ಕೆಲಸ ಬಾಕಿ ಇದ್ದು, ಶೀಘ್ರದಲ್ಲೇ ಅವರಿಗೂ ಕಚೇರಿ ನೀಡಲು ಸೂಕ್ತ ಕ್ರಮ ವಹಿಸಲಾಗುವುದು” ಎಂದರು.
“ಇಲಾಖೆಯ ಕೆಲಸಗಳನ್ನು ತಳಮಟ್ಟದಿಂದಲೇ ಡಿಜಿಟಲೀಕರಣಗೊಳಿಸುವ ಉದ್ದೇಶದಿಂದಲೇ ಇ-ಆಫೀಸ್ಗೆ ಒತ್ತು ನೀಡಲಾಗಿತ್ತು. ಆ ನಿಟ್ಟಿನಲ್ಲಿ ಈಗಾಗಲೇ 4,000 ವಿಎ ಗಳಿಗೆ ಲ್ಯಾಪ್ ಟಾಪ್ ನೀಡಲಾಗಿದ್ದು, ಉಳಿದ ವಿಎ ಗಳಿಗೂ ಶೀಘ್ರದಲ್ಲೇ ಲ್ಯಾಪ್ಟಾಪ್ ನೀಡಲಾಗುವುದು. ಇದರ ಜೊತೆಗೆ ಎಲ್ಲರಿಗೂ ಇ-ಆಫೀಸ್ ಬಳಕೆಯ ಬಗ್ಗೆ ತರಬೇತಿ ನೀಡುತ್ತಿದ್ದು, ಮುಂದಿನ ತಿಂಗಳ ಒಳಗಾಗಿ ಪತ್ರ ವ್ಯವಹಾರ/ಟಪಾಲು ವ್ಯವಸ್ಥೆಗೆ ತಿಲಾಂಜಲಿ ಹಾಡುವುದು ಜನರಿಗೆ ಸರಳ ಹಾಗೂ ವೇಗದ ಆಡಳಿತ ನೀಡುವುದೇ ನಮ್ಮ ಗುರಿಯಾಗಿದೆ” ಎಂದು ವಿವರಿಸಿದರು.
ಫೌತಿ ಖಾತೆ ಆಂದೋಲನಕ್ಕೆ ವೇಗ ತುಂಬಲು ಸೂಚನೆ:
“ರಾಜ್ಯದಲ್ಲಿ 52 ಲಕ್ಷ ಜಮೀನುಗಳು ಮೃತರ ಹೆಸರಿನಲ್ಲಿ ಮುಂದುವರೆಯುತ್ತಿದೆ. ಇದರಲ್ಲಿ ಯಾವುದೆಲ್ಲ ಸಾಧ್ಯವಿದೆ ಆ ಎಲ್ಲವನ್ನೂ ಫೌತಿ ಖಾತೆ ಅಭಿಯಾನದ ಮೂಲಕ ಈಗಿನ ವಾರಸುದಾರರ ಹೆಸರಿಗೆ ಬದಲಿಸುವ ಪ್ರಕ್ರಿಯೆಗೆ ವೇಗ ತುಂಬುವಂತೆ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಯಿತು” ಎಂದು ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದರು.
“ಮೃತರ ಹೆಸರಿನಲ್ಲಿರುವ ಜಮೀನುಗಳಿಗೆ ಪಿಎಂ ಕಿಸಾನ್, ಹನಿ ನೀರಾವರಿ ಹಾಗೂ ಯಂತ್ರೋಪಕರಣ ಖರೀದಿ ಸಬ್ಸಿಡಿ ನೀಡದಂತೆ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಇದರಿಂದ ರೈತರಿಗೆ ತೊಂದರೆಯಾಗಲಿದೆ. ಹೀಗಾಗಿ ಜನರಿಂದ ಅರ್ಜಿ ಕರೆಯದೆ ನಾವೇ ರೈತರ ಮನೆ ಬಾಗಿಲಿಗೆ ತೆರಳಿ ಅಭಿಯಾನ ಮಾದರಿಯಲ್ಲಿ ಫೌತಿ ಖಾತೆ ಮಾಡಿಕೊಡುತ್ತಿದ್ದೇವೆ. ಈವರೆಗೆ 2.30 ಲಕ್ಷ ಜಮೀನುಗಳನ್ನು ಫೌತಿ ಖಾತೆ ಮಾಡಿಕೊಡಲಾಗಿದೆ. ಮುಂದಿನ ದಿನಗಳಲ್ಲಿ ಈ ಅಭಿಯಾನಕ್ಕೆ ಮತ್ತಷ್ಟು ವೇಗ ತುಂಬಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಅಲ್ಲದೆ, ಇ-ಫೌತಿ ಆಂದೋಲನದಲ್ಲಿ ಪ್ರಗತಿ ಸಾಧಿಸುವ ವಿಎ ಗಳಿಗೆ ಪ್ರತಿ ಫೌತಿ ಪ್ರಕರಣಕ್ಕೆ 6 ರೂಪಾಯಿ ನೀಡಲು ನಿರ್ಧರಿಸಲಾಗಿದೆ.” ಎಂದು ತಿಳಿಸಿದರು.
ಜಲಾಶಯಗಳ ನಿರ್ವಹಣೆ ಬಗ್ಗೆ ಇರಲಿ ಎಚ್ಚರ..!
ಜಲಾಶಯಗಳ ನೀರಿನ ನಿರ್ವಹಣೆ ಬಗ್ಗೆ ಎಚ್ಚರ ಇರಲಿ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಎಲ್ಲಾ ಜಿಲ್ಲಾಧಿಕಾರಿಗಳಿಗೂ ತಿಳಿಸಿದರು.
ಸಭೆಯಲ್ಲಿ ಈ ಬಗ್ಗೆ ಗಮನ ಸೆಳೆದ ಅವರು, “ಪ್ರಸ್ತುತ ವರ್ಷ ಬಹುತೇಕ ಜಿಲ್ಲೆಗಳಲ್ಲಿ ವಾಡಿಕೆ ಮಳೆಯಾಗಿದೆ. ಒಂದೆರಡು ಜಿಲ್ಲೆಗಳಲ್ಲಿ ಹೆಚ್ಚು ಮಳೆಯಾಗಿದ್ದರೆ, 6-7 ಜಿಲ್ಲೆಗಳಲ್ಲಿ ವಾಡಿಕೆಗಿಂತ ತುಸು ಕಡಿಮೆ ಮಳೆಯಾಗಿದೆ. ಕಡಿಮೆ ಮಳೆಯಾಗಿರುವ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಮುಂದಿನ ದಿನಗಳಲ್ಲಿ ವಾಡಿಕೆಗಿಂತ ಅಧಿಕ ಮಳೆಯಾಗುವ ಸೂಚನೆ ಇದೆ. ಆಗಸ್ಟ್ ಅಂತ್ಯದ ವೇಳೆಗೆ ಮಳೆ ಪ್ರಮಾಣ ಈ ಭಾಗಗಳಲ್ಲಿ ಸುಧಾರಣೆಯಾಗಲಿದೆ. ಪ್ರಸ್ತುತ ಜಲಾಶಯಗಳಿಗೆ ಒಳಹರಿವು ಉತ್ತಮವಾಗಿದೆ. ಆದರೆ, ಸೆಪ್ಟೆಂಬರ್, ಅಕ್ಟೋಬರ್ ತಿಂಗಳಲ್ಲೂ ಪರಿಸ್ಥಿತಿ ಹೀಗೆ ಇರುತ್ತೆದೆ ಎಂದು ಹೇಳಲಾಗದು. ಹೀಗಾಗಿ ಜಿಲ್ಲಾಧಿಕಾರಿಗಳು ಜಲಾಶಯಗಳಲ್ಲಿನ ನೀರಿನ ಬಳಕೆಯ ಮೇಲೆ ಹೆಚ್ಚು ನಿಗಾವಹಿಸುವುದು ಉತ್ತಮ” ಎಂದು ಕಿವಿಮಾತು ಹೇಳಿದರು.
ಸಭೆಯಲ್ಲಿ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳಾದ ರಾಜೇಂದ್ರ ಕುಮಾರ್ ಕಟಾರಿಯಾ, ವಿಪತ್ತು ನಿರ್ವಹಣಾ ಇಲಾಖೆ ಪ್ರಧಾನ ಕಾರ್ಯದರ್ಶಿಗಳಾದ ಮುನೀಶ್ ಮೌದ್ಗಿಲ್, ಬೆಂಗಳೂರು ಕಂದಾಯ ವಿಭಾಗ ಆಯುಕ್ತರಾದ ಆದಿತ್ಯ ಆಮ್ಲನ್ ಬಿಶ್ವಾಸ್ ಹಾಗೂ ಕಂದಾಯ ಆಯುಕ್ತರಾದ ಸುನೀಲ್ ಕುಮಾರ್ ಉಪಸ್ಥಿತರಿದ್ದರು.
ರಾಜ್ಯದ 7405 ಗ್ರಾಮ ಆಡಳಿತ ಅಧಿಕಾರಿಗಳಿಗೆ ಕಚೇರಿ, ಲ್ಯಾಪ್ ಟಾಪ್ ಭಾಗ್ಯ
BIG NEWS: ಸಾಗರ ತಾಯಿ ಮಕ್ಕಳ ಆಸ್ಪತ್ರೆ ‘ಜನರೇಟರ್ ಕಳ್ಳತನ’ ಕೇಸ್: ಆರೋಗ್ಯ ಇಲಾಖೆ ‘ಕಚೇರಿ ಅಧೀಕ್ಷಕ’ನೇ ಸಾಥ್