ಬೆಂಗಳೂರು: ರಾಜ್ಯದಲ್ಲಿ 7,500 ಗ್ರಾಮ ಆಡಳಿತ ಅಧಿಕಾರಿಗಳ ಸರ್ಕಲ್ ಇದ್ದು (ವಿಎ ಸರ್ಕಲ್) 8357 ಜನ ಅಧಿಕಾರಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರಿಗೆ ದಶಕಗಳಿಂದ ಕಚೇರಿಯೇ ಇರಲಿಲ್ಲ. ಒಂದೆಡೆ ವಿಎ ಗಳು ಕೈಗೇ ಸಿಗುವುದಿಲ್ಲ ಎಂದು ಸಾರ್ವಜನಿಕರು ದೂರುತ್ತಿದ್ದರೆ ಮತ್ತೊಂದೆಡೆ ತಮಗೆ ಕಚೇರಿ ಸೌಲಭ್ಯ ಬೇಕು ಎಂದು ವಿಎ ಗಳು ಸಹ ಬೇಡಿಕೆ ಇಟ್ಟಿದ್ದರು. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದು, ಜಿಲ್ಲಾಧಿಕಾರಿಗಳು ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆ ಸಚಿವರ ಜೊತೆ ಚರ್ಚಿಸಿ ಕೇವಲ ನಾಲ್ಕು ತಿಂಗಳಿನಲ್ಲಿ 7405 ವಿಎಗಳಿಗೆ ಗ್ರಾಮ ಪಂಚಾಯತಿ ಕಚೇರಿಯಲ್ಲೇ ಕಚೇರಿ ಸೌಲಭ್ಯ ಒದಗಿಸಲಾಗಿದೆ ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ತಿಳಿಸಿದರು.
“ರೈತರು ತಮ್ಮ ಕೆಲಸಗಳಿಗೆ ಗ್ರಾಮ ಪಂಚಾಯತ್ ಕಚೇರಿಗಳಿಗೆ ಆಗಮಿಸುವುದು ವಾಡಿಕೆ. ಹೀಗಾಗಿ ಕಂದಾಯ ಇಲಾಖೆ ಅಧಿಕಾರಿಗಳೂ ಗ್ರಾಮ ಪಂಚಾಯತ್ ಆವರಣದಲ್ಲೇ ಇದ್ದರೆ ಪಂಚಾಯತಿಯೂ ಸಬಲೀಕರಣಗೊಳ್ಳುತ್ತದೆ, ರೈತರಿಗೂ ಸಾಕಷ್ಟು ಅನುಕೂಲವಾಗುತ್ತದೆ ಎಂಬ ಉದ್ದೇಶದಿಂದ ಗ್ರಾಮೀಣಾಭಿವೃದ್ಧಿ ಸಚಿವರ ಜೊತೆ ಚರ್ಚಿಸಿ ವಿಎ ಗಳಿಗೆ ಹೊಸ ಕಚೇರಿ ಹಾಗೂ ಮೂಲಭೂತ ಸೌಲಭ್ಯಗಳ ವ್ಯವಸ್ಥೆ ಮಾಡಿಕೊಡಲಾಯಿತು. ಇನ್ನೂ 952 ವಿಎ ಗಳಿಗೆ ಕಚೇರಿ ನೀಡುವ ಕೆಲಸ ಬಾಕಿ ಇದ್ದು, ಶೀಘ್ರದಲ್ಲೇ ಅವರಿಗೂ ಕಚೇರಿ ನೀಡಲು ಸೂಕ್ತ ಕ್ರಮ ವಹಿಸಲಾಗುವುದು” ಎಂದರು.
“ಇಲಾಖೆಯ ಕೆಲಸಗಳನ್ನು ತಳಮಟ್ಟದಿಂದಲೇ ಡಿಜಿಟಲೀಕರಣಗೊಳಿಸುವ ಉದ್ದೇಶದಿಂದಲೇ ಇ-ಆಫೀಸ್ಗೆ ಒತ್ತು ನೀಡಲಾಗಿತ್ತು. ಆ ನಿಟ್ಟಿನಲ್ಲಿ ಈಗಾಗಲೇ 4,000 ವಿಎ ಗಳಿಗೆ ಲ್ಯಾಪ್ ಟಾಪ್ ನೀಡಲಾಗಿದ್ದು, ಉಳಿದ ವಿಎ ಗಳಿಗೂ ಶೀಘ್ರದಲ್ಲೇ ಲ್ಯಾಪ್ಟಾಪ್ ನೀಡಲಾಗುವುದು. ಇದರ ಜೊತೆಗೆ ಎಲ್ಲರಿಗೂ ಇ-ಆಫೀಸ್ ಬಳಕೆಯ ಬಗ್ಗೆ ತರಬೇತಿ ನೀಡುತ್ತಿದ್ದು, ಮುಂದಿನ ತಿಂಗಳ ಒಳಗಾಗಿ ಪತ್ರ ವ್ಯವಹಾರ/ಟಪಾಲು ವ್ಯವಸ್ಥೆಗೆ ತಿಲಾಂಜಲಿ ಹಾಡುವುದು ಜನರಿಗೆ ಸರಳ ಹಾಗೂ ವೇಗದ ಆಡಳಿತ ನೀಡುವುದೇ ನಮ್ಮ ಗುರಿಯಾಗಿದೆ” ಎಂದು ವಿವರಿಸಿದರು.
BREAKING: ಧರ್ಮಸ್ಥಳ ಕೇಸಿಗೆ ಬಿಗ್ ಟ್ವಿಸ್ಟ್: ಪೊಲೀಸರಿಗೆ ದೂರು ಕೊಟ್ಟ ಮತ್ತೊಬ್ಬ ದೂರುದಾರ
GOOD NEWS: ರಾಜ್ಯದ ಕಂದಾಯ ಗ್ರಾಮಗಳ 1.62 ಲಕ್ಷ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ: ಸಚಿವ ಕೃಷ್ಣಭೈರೇಗೌಡ