ಬೆಂಗಳೂರು: ಬಿಗ್ ಬಾಸ್ ಖ್ಯಾತಿಯ ರಕ್ಷಕ್ ಬುಲೆಟ್ ಎಡವಟ್ಟಿನಿಂದ ಯುವಕನ ಕಾಲು ಮುರಿತದ ಘಟನೆಗೆ ಸಂಬಂಧಿಸಿದಂತೆ ಇದೀಗ ನಟ ರಕ್ಷಕ್ ಬುಲೆಟ್ ವಿರುದ್ಧ ಹೆಣ್ಣೂರು ಸಂಚಾರ ಠಾಣೆಯಲ್ಲಿಎಫ್‌ಐಆರ್ ದಾಖಲಾಗಿದೆ.
ಗುರುವಾರ ಬೆಳಗ್ಗೆ 11:30ರ ಸುಮಾರಿಗೆ ಅಪಘಾತ ಸಂಭವಿಸಿತ್ತು. ರಕ್ಷಕ್ ಬುಲೆಟ್ ಅಜಾಗರೂಕತೆಯಿಂದ ಕಾರು ಚಲಾಯಿಸಿ ಬೈಕ್‌ಗೆ ಡಿಕ್ಕಿ ಹೊಡೆದಿದ್ದಾರೆ. ಅಜಾಗರೂಕವಾಗಿ ಜೀಪು ಚಾಲನೆ ಮಾಡಿ ಬೈಕ್ ಡಿಕ್ಕಿ ಹೊಡೆಸಿ ಬೈಕ್ ಸವಾರನ ಕಾಲುಮುರಿತಕ್ಕೆ ಕಾರಣವಾಗಿದೆ. ನಟ ರಕ್ಷಕ್ ಎಸಗಿದ ಅಪಘಾತದಿಂದ ಕಾಲು ಮುರಿದುಕೊಂಡಿರುವ ಖಾಸಗಿ ಕಂಪನಿ ಉದ್ಯೋಗಿ ವೇಣುಗೋಪಾಲ್ (27) ಎಂಬುವವರು ಆಸ್ಪತ್ರೆಯಲ್ಲಿಚಿಕಿತ್ಸೆ ಪಡೆಯುತ್ತಿದ್ದಾರೆ.
ತನ್ನ ಸ್ನೇಹಿತೆಯನ್ನು ಬೈಕ್ ಹಿಂಬದಿ ಕೂರಿಸಿಕೊಂಡು ವೇಣುಗೋಪಾಲ್ ಥಣಿಸಂದ್ರದ ಮಾನ್ಯತಾ ಟೆಕ್‌ಪಾರ್ಕ್ ಬಳಿ ತೆರಳುತ್ತಿದ್ದರು. ಈ ವೇಳೆ ಹಿಂದಿನಿಂದ ಥಾರ್ ಜೀಪಿನಲ್ಲಿ ಬಂದ ರಕ್ಷಕ್, ಬೈಕ್‌ಗೆ ಡಿಕ್ಕಿ ಹೊಡೆದಿದ್ದರಿಂದ ವೇಣುಗೋಪಾಲ್ ಹಾಗೂ ಸ್ನೇಹಿತೆ ಇಬ್ಬರೂ ಕೆಳಗೆ ಉರುಳಿದ್ದಾರೆ. ಅಪಘಾತದಲ್ಲಿ ವೇಣುಗೋಪಾಲ್ ಎಡಕಾಲು ಮುರಿದಿದೆ. ಸ್ನೇಹಿತೆಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.