ಬೆಂಗಳೂರು: ರಾಜ್ಯದ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಔಷಧಗಳ ಕೊರತೆ ಆರೋಪದ ಬೆನ್ನಲ್ಲೇ 2025-26ನೇ ಸಾಲಿನಲ್ಲಿ ಸಾರ್ವಜನಿಕ ಆರೋಗ್ಯ ಸಂಸ್ಥೆಗಳಿಗೆ ಅಗತ್ಯವಿರುವ 883 ರೀತಿಯ ಔಷಧಿ ಖರೀದಿಸಲು 880.68 ಕೋಟಿ ರು. ಮೊತ್ತದ ಔಷಧ ಖರೀದಿ ಪ್ರಕ್ರಿಯೆಗೆ ಸರ್ಕಾರ ಅನುಮೋದನೆ ನೀಡಿದೆ.
ರಾಜ್ಯದ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಸ್ತುತ ಲಭ್ಯವಿರುವ 564 ರೀತಿಯ ಔಷಧಗಳು ಹಾಗೂ ವಿವಿಧ ಬೇಡಿಕೆಗಳಿಗೆ ಅನುಸಾರವಾಗಿ ಪ್ರಸ್ತುತ ಲಭ್ಯತೆ ಇಲ್ಲದ 319 ರೀತಿಯ ಔಷಧ ಸೇರಿ 883 ಬಗೆಯ ಔಷಧಿಗಳನ್ನು ಕೆಟಿಪಿಪಿ ಕಾಯ್ದೆ 1999 ಹಾಗೂ ಕೆಟಿಪಿಪಿ ನಿಯಮ 2000 ಅನುಸಾರ ಟೆಂಡರ್‌ಮೂಲಕ ಖರೀದಿಸಿ, ಪೂರೈಸುವಂತೆ ಆರೋಗ್ಯ ಇಲಾಖೆ ರಾಜ್ಯ ವೈದ್ಯಕೀಯ ಸರಬರಾಜು ನಿಗಮಕ್ಕೆ ಸೂಚಿಸಿದೆ.
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ 2025-26ನೇ ಸಾಲಿಗೆ ಸಾರ್ವಜನಿಕ ಆರೋಗ್ಯ ಸಂಸ್ಥೆಗಳ ಬೇಡಿಕೆಗಳಿಗನುಸಾರವಾಗಿ ಈ ಆದೇಶದೊಂದಿಗೆ ಲಗತ್ತಿಸಲಾದ ಅನುಬಂಧದಲ್ಲಿರುವ 890 ಔಷಧಗಳು, ಉಪಭೋಗ್ಯ ವಸ್ತುಗಳು ಹಾಗೂ ರಾಸಾಯನಿಕಗಳನ್ನು ಒಟ್ಟು ರೂ.880.68 ಕೋಟಿಗಳ (ಎಂಟು ನೂರ ಎಂಭತ್ತು ಕೋಟಿ ಅರವತ್ತೆಂಟು ಲಕ್ಷ ರೂಪಾಯಿಗಳು ಮಾತ್ರ) ಅಂದಾಜು ವೆಚ್ಚದಲ್ಲಿ ಕೆಟಿಪಿಪಿ ಕಾಯ್ದೆ 1999 ಹಾಗೂ ಕೆಟಿಪಿಪಿ ನಿಯಮ 2000 ಗಳನ್ನು ಅನುಸರಿಸಿ ಟೆಂಡರ್ ಮೂಲಕ ಸಂಗ್ರಹಿಸಿ ಸರಬರಾಜು ಮಾಡಲು ಅನುಮೋದನೆ ನೀಡಿ ಆದೇಶಿಸಲಾಗಿದೆ.