ಮಂಡ್ಯ : ಪುರಸಭೆ ವ್ಯಾಪ್ತಿಯ ಎ ಮತ್ತು ಬಿ ಖಾತಾ ಅರ್ಜಿಗಳನ್ನು 10 ದಿನಗಳ ಒಳಗೆ ವಿಲೇವಾರಿ ಮಾಡದ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಕೆ.ಎಂ.ಉದಯ್ ಶುಕ್ರವಾರ ಎಚ್ಚರಿಕೆ ನೀಡಿದರು.
ಮದ್ದೂರು ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಸಾರ್ವಜನಿಕರಿಂದ ಎ ಮತ್ತು ಬಿ ಖಾತಾ ಸಂಬಂಧ ಸೇರಿದಂತೆ ಹಲವು ಸಮಸ್ಯೆಗಳ ಬಗ್ಗೆ ಸಾರ್ವಜನಿಕರಿಂದ ದೂರುಗಳನ್ನು ಸ್ವೀಕರಿಸಿ ಮಾತನಾಡಿ, ಎ ಮತ್ತು ಬಿ ಖಾತೆ ಮಾಡಿಕೊಡುವಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ವಿಳಂಬ ಮಾಡುತ್ತಿದ್ದಾರೆ. ಎಂಬ ಬಗ್ಗೆ ಜನಪ್ರತಿನಿಧಿಗಳು ಮತ್ತು ಸಾರ್ವಜನಿಕರಿಂದ ದೂರುಗಳು ಸಾಮಾನ್ಯವಾಗಿವೆ.
ಸರ್ವರ್ ಸಮಸ್ಯೆಯಿಂದ ಎ ಮತ್ತು ಬಿ ಖಾತಾ ನೀಡಲು ಅಧಿಕಾರಿಗಳು ವಿಳಂಬವಾಗುತ್ತಿದೆ ಎಂಬ ಕಾರಣ ನೀಡುತ್ತಿದ್ದಾರೆ. ಇನ್ನು 10 ದಿನಗಳ ಬಳಿಕ ಮತ್ತೆ ಪುರಸಭಾ ಕಛೇರಿಗೆ ಅನಿರೀಕ್ಷಿತವಾಗಿ ಭೇಟಿ ನೀಡಲಾಗುವುದು ಆಗಲೂ ಸಮಸ್ಯೆಗಳು ಕಂಡು ಬಂದರೇ ಸಂಬಂಧ ಪಟ್ಟ ಸಿಬ್ಬಂದಿ ಹಾಗೂ ಅಧಿಕಾರಿಗಳ ವಿರುದ್ಧ ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.
ಈಗಾಗಲೇ ಪುರಸಭೆ ಕಛೇರಿಗೆ ಸಾರ್ವಜನಿಕರು ರಸ್ತೆ, ಒಳಚರಂಡಿ, ಕುಡಿಯುವ ನೀರು, ನಾಲೆಗಳ ಹೂಳು, ಸೇರಿದಂತೆ ವಿವಿಧ ದೂರುಗಳನ್ನು ಸಲ್ಲಿಸಿದ್ದಾರೆ. ಪಟ್ಟಣದ ವಿವಿಧೆಡೆ ಒಳಚರಂಡಿ ಮತ್ತು ಆಶ್ರಯ ಬಡಾವಣೆಯ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಅಲ್ಪ ಸಂಖ್ಯಾತರ ಇಲಾಖೆಯಿಂದ 10 ಕೋಟಿ ಹಾಗೂ ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ ಕ್ರಿಯಾ ಯೋಜನೆ ರೂಪಿಸಲಾಗುತ್ತಿದ್ದು, ಆದಷ್ಟು ಬೇಗ ಈ ಎಲ್ಲಾ ಸಮಸ್ಯೆಗಳನ್ನು ಹಂತ ಹಂತವಾಗಿ ಬಗೆಹರಿಸಲಾಗುವುದು ಎಂದು ತಿಳಿಸಿದರು.
ಪಟ್ಟಣದ ಒಳಚರಂಡಿ ನೀರು ಶಿಂಷಾ ನದಿಗೆ ಸೇರುತ್ತಿದೆ. ಒಳಚರಂಡಿ ನೀರನ್ನು ಬಾಕ್ಸ್ ಚರಂಡಿ ಮೂಲಕ ನೀರನ್ನು ಶುದ್ದಿಕರಣಗೊಳಿಸಿ ನದಿಗೆ ಬೀಡುವ ಮಹತ್ವದ ಯೋಜನೆ ರೂಪಿಸಲಾಗುತ್ತಿದೆ ಎಂದರು.
ಇದೇ ವೇಳೆ ಪುರಸಭೆ ಅಧ್ಯಕ್ಷೆ ಕೋಕಿಲ ಅರುಣ್, ಉಪಾಧ್ಯಕ್ಷ ಟಿ.ಆರ್. ಪ್ರಸನ್ನಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷೆ ವನಿತಾ, ಪ್ರಭಾರ ಮುಖ್ಯಾಧಿಕಾರಿ ಶ್ರೀಧರ್, ಸದಸ್ಯರಾದ ಮಹೇಶ್, ಸಚಿನ್, ಸಿದ್ದರಾಜು, ಲತಾ ರಾಮು ಪುರಸಭೆ ಅಧಿಕಾರಿಗಳು, ಸಿಬ್ಬಂದಿಗಳು ಇತರರು ಇದ್ದರು.
ವರದಿ : ಗಿರೀಶ್ ರಾಜ್, ಮಂಡ್ಯ