ಮಂಡ್ಯ :- ಕಳೆದ ಲೋಕಸಭಾ ಚುನಾವಣೆಯಲ್ಲಿ ಮಹದೇವಪುರ ಮತ್ತು ರಾಜಾಜಿನಗರ ಕ್ಷೇತ್ರಗಳಲ್ಲಿ ನಡೆದಿರುವ ಮತಗಳ್ಳತನ ಪ್ರಕರಣಗಳಲ್ಲಿ ಕಾಂಗ್ರೆಸ್ ಬಹುವಾಗಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಸಿ.ಎನ್.ಅಶ್ವಥ್ ನಾರಾಯಣ್ ಗಂಭೀರ ಆರೋಪ ಮಾಡಿದರು.
ಮದ್ದೂರು ತಾಲೂಕಿನ ನಿಡಘಟ್ಟ ಬಳಿ ಖಾಸಗಿ ಹೋಟೆಲ್ ನಲ್ಲಿ ಮುಖಂಡರು ಹಾಗೂ ಕಾರ್ಯಕರ್ತರಿಂದ ಅಭಿನಂದನೆ ಸ್ವೀಕರಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ರಾಜ್ಯದ ಕಾಂಗ್ರೆಸ್ ಸರ್ಕಾರದ ನಿಯಂತ್ರಣದಡಿಯಲ್ಲಿ ಅಧಿಕಾರಿಗಳೇ ಚುನಾವಣಾಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸಿದ್ದಾರೆ ಸರ್ಕಾರದ ಆದೇಶದಂತೆ ಎರಡು ಕ್ಷೇತ್ರಗಳ ಲೋಕಸಭಾ ಚುನಾವಣೆಯಲ್ಲಿ ಅಧಿಕಾರಿಗಳೇ ಲೋಪ ಎಸಗಿದ್ದಾರೆ ಎಂದು ಕಿಡಿಕಾರಿದರು.
ಈ ಎಲ್ಲಾ ಆರೋಪಗಳ ವಿರುದ್ಧ ಕಾಂಗ್ರೆಸ್ ನಾಯಕರುಗಳಾದ ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಚುನಾವಣಾ ಆಯೋಗಕ್ಕೆ ಮತ್ತು ಸಂವಿಧಾನಕ್ಕೆ ಅಗೌರವ ತೋರುವಂತ ಕೀಳು ಮಟ್ಟದ ರಾಜಕಾರಣ ಮಾಡಿದ್ದಾರೆ ಎನ್ನುವುದಕ್ಕೆ ಈ ಮತಗಳ್ಳತನ ಪ್ರಕರಣ ಸಾಕ್ಷಿಯಾಗಿದೆ ಎಂದು ಆರೋಪಿಸಿದರು.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಎರಡು ವರ್ಷಗಳಿಂದ ಬಹುತೇಕ ಜಿಲ್ಲೆಗಳಲ್ಲಿ ಅನಗತ್ಯವಾಗಿ ರಸಗೊಬ್ಬರ ಅಭಾವ ಸೃಷ್ಟಿ ಮಾಡುತ್ತಿದ್ದಾರೆ. ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಸೇರಿದಂತೆ ಸಂಪುಟದ ಎಲ್ಲಾ ಸಚಿವರುಗಳು ಅನ್ನ ತಿನ್ನುವ ಬದಲು ಗೊಬ್ಬರ ತಿಂದುಕೊಂಡು ಕುಳಿತಿದ್ದಾರೆ. ಈ ಬಾರಿ ರಸಗೊಬ್ಬರಕ್ಕೆ ಯಾವುದೇ ಕೊರತೆಯಾಗದಂತೆ ಕೇಂದ್ರ ಸರ್ಕಾರ 1ಲಕ್ಷ 39 ಸಾವಿರ ಮೇಟ್ರಿಕ್ ಟನ್ ಯೂರಿಯಾ ಸರಬರಾಜು ಮಾಡುತ್ತಿದೆ ಎಂದು ಸ್ಪಷ್ಟಪಡಿಸಿದರು.
ಕಾಂಗ್ರೆಸ್ ಸರ್ಕಾರದಲ್ಲಿ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ಮತ್ತು ಡಿ.ಕೆ.ಶಿವಕುಮಾರ್ ಸೇರಿದಂತೆ ಪ್ರಮುಖ ನಾಯಕರ ಕೈಯಲ್ಲಿದೆ. ಮುಂದೆ ಸರ್ಕಾರದ ಪರಿಸ್ಥಿತಿ ಯಾವ ಪರಿಸ್ಥಿತಿಗಾದರೂ ಹೋಗಬಹುದು ಎಂದು ಅಶ್ವಥ್ ನಾರಾಯಣ್ ಭವಿಷ್ಯ ನುಡಿದರು.
ಇದೇ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ಇಂದ್ರೇಶ್, ರಾಜ್ಯ ಕಾರ್ಯಕಾರಣಿ ಸದಸ್ಯ ಡಾ.ಸಿದ್ದರಾಮಯ್ಯ, ತಾಲೂಕು ಘಟಕದ ಅಧ್ಯಕ್ಷ ಸಿ.ಕೆ.ಸತೀಶ್,
ಮನ್ ಮುಲ್ ಮಾಜಿ ನಿರ್ದೇಶಕಿ ರೂಪ, ಮುಖಂಡರಾದ ಅಶೋಕ್ ಜಯರಾಂ, ಸುನೀಲ್ ಕುಮಾರ್, ಎಂ.ಸಿ. ಸಿದ್ದು, ಕೆಂಪುಬೋರಯ್ಯ ಮತ್ತಿತರರು ಇದ್ದರು.
ವರದಿ : ಗಿರೀಶ್ ರಾಜ್, ಮಂಡ್ಯ