ಚಿತ್ರದುರ್ಗ : ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಬ್ಯಾಡರಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘವು 1989ರಲ್ಲಿ ಸ್ಥಾಪನೆಯಾಗಿ, ಉತ್ತಮ ಗುಣಮಟ್ಟದ ಹಾಲು ಉತ್ಪಾದನೆ ಮೂಲಕ 4 ಲಕ್ಷ ಲಾಭ ಗಳಿಸಿರುವುದಕ್ಕೆ ಶಿಮುಲ್ ನಿರ್ದೇಶಕ ಬಿಸಿ ಸಂಜೀವಮೂರ್ತಿ ಪ್ರಶಂಸೆ ವ್ಯಕ್ತಪಡಿಸಿದರು.
ಇಂದು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಬ್ಯಾಡರಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಂಘ ಏರ್ಪಡಿಸಿದ್ದ ವಾರ್ಷಿಕ ಸಾಮಾನ್ಯ ಸಭೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇಂದಿನ ದಿನಗಳಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘ ಲಾಭ ಗಳಿಸುವುದು ಕಡಿಮೆ ಅಂತಹುದರಲ್ಲಿ ಈ ಸಂಘವು ಲಾಭಾಂಶ ಪಡೆದಿರುವುದು ಹೆಮ್ಮೆಯ ವಿಷಯವಾಗಿದೆ. ಮುಂದಿನ ದಿನಗಳಲ್ಲಿ ಸಂಘದ ಅಭಿವೃದ್ಧಿಗೆ ಹೆಚ್ಚಿನ ಸಹಕಾರ ನೀಡಲಾಗುವುದು ಎಂದು ತಿಳಿಸಿದರು.
ಹಿರಿಯೂರು ತಾಲ್ಲೂಕಿನಲ್ಲಿ ಹಾಲು ಉತ್ಪಾದನೆ ಸುಧಾರಣೆಯಾಗಿದ್ದು, ಜಿಲ್ಲೆಯಲ್ಲಿ ಎರಡನೇ ಸ್ಥಾನ ಪಡೆಯುವ ಮೂಲಕ ಗುಣಮಟ್ಟದ ಹಾಲು ಉತ್ಪಾದನೆಯಾಗುತ್ತಿದೆ. ಈ ಸಂಘಕ್ಕೆ ಮುಂದಿನ ಮಾರ್ಚ್ ತಿಂಗಳಲ್ಲಿ ಸಂಘಕ್ಕೆ ಚಾಪ್ ಕಟ್ಟರ್ ಹಾಗೂ ಮಿಲ್ಕ್ ಮಿಶನ್ ಕೊಡಲು ವ್ಯವಸ್ಥೆ ಮಾಡಲಾಗುವುದು. ಕೆಎಂಎಫ್ ಕಡೆಯಿಂದ ಸಿಗುವ ಬೂಸಾವನ್ನು ಹಸುಗಳಿಗೆ ಬಳಸಿಕೊಳ್ಳಿ, ಒಕ್ಕೂಟದಿಂದ ಅನುಕೂಲವಾಗುವ ಯೋಜನೆಗಳನ್ನು ಉತ್ಪಾದಕರಿಗೆ ನೀಡಲಾಗುವುದು ಎಲ್ಲರೂ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಹೈನುಗಾರಿಕೆ ಹೆಚ್ಚಿಸಲು ಕೃಷಿ ಇಲಾಖೆ ಸಹಯೋಗದೊಂದಿಗೆ ಪಹಣಿ ಹೊಂದಿರುವ ರೈತರಿಗೆ 20 ಸಾವಿರ ಸಬ್ಸಿಡಿಯೊಂದಿಗೆ ಹಸುಗಳನ್ನು ಕೊಡಲಾಗುವುದು. ಇದರಿಂದ ಉತ್ಪಾದನೆ ಹೆಚ್ಚಳಕ್ಕೆ ಆಧ್ಯತೆ ನೀಡಲಾಗಿದೆ. ಇಲ್ಲಿನ ಉತ್ಪಾದಕರ ಏನೇ ಸಮಸ್ಯೆಗಳಿದ್ದರೆ ಆಡಳಿತ ಮಂಡಳಿಯ ಗಮನಕ್ಕೆ ತನ್ನಿ ನಾವು ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು.
ಸಂಘದ ಅಧ್ಯಕ್ಷ ಬಸವರಾಜ್ ಮಾತನಾಡಿ ನಮ್ಮ ಗ್ರಾಮದ ಹಾಲಿನ ಡೈರಿ ಕಿರಿದಾಗಿದೆ. ಪ್ರತಿದಿನ 1600ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ಸಾಮಾಗ್ರಿಗಳನ್ನು ಶೇಖರಣೆ ಮಾಡಲು ಸ್ಥಳಾವಕಾಶ ಕಡಿಮೆ ಇದೆ. 4 ಕುಂಟೆ ನಿವೇಶನ ಇದ್ದು, ಅಲ್ಲಿಗೆ ಡೈರಿ ನಿರ್ಮಾಣ ಮಾಡಿ, ಪ್ರತ್ಯೇಕ ಬಿಎಂಸಿ ಕೇಂದ್ರ ತೆರೆಯಲು ಅವಕಾಶ ಮಾಡಿ ಕೊಡಿ ಎಂದು ಮನವಿ ಮಾಡಿದರು. ಅಧ್ಯಕ್ಷರ ಮನವಿಗೆ ಸ್ಥಳದಲ್ಲೇ ಸ್ಪಂದಿಸಿದ ನಿರ್ದೇಶಕ ಬಿಸಿ ಸಂಜೀವಮೂರ್ತಿ ಸಂಘದ ಹೆಸರಿಗೆ ಪಹಣಿ ಹಾಗೂ ಈಸ್ವತ್ತು, ದಾಖಲೆಗಳನ್ನು ಸಿದ್ದತೆ ಮಾಡಿಸಿಕೊಳ್ಳಿ ಶಿಮುಲ್ ಆಡಳಿತ ಮಂಡಳಿಯ ಸಭೆಯಲ್ಲಿ ಗಮನಕ್ಕೆ ತಂದು ನಿಮ್ಮ ಬೇಡಿಕೆ ಕೂಡಲೇ ಈಡೇರಿಸಲಾಗುವುದು ಎಂದು ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಹೆಚ್ಚು ಹಾಲು ಉತ್ಪಾದನೆ ಮಾಡಿದ ಮೂವರಿಗೆ ಬಹುಮಾನ ವಿತರಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ವಿಸ್ತರಣಾಧಿಕಾರಿ ಕೃಷ್ಣಕುಮಾರ್, ಪಶುವೈದ್ಯ ಡಾ. ದೀರಾಜ್ ಪ್ರಕಾಶ್ ಜಿ, ಸಂಘದ ಉಪಾಧ್ಯಕ್ಷ ಹರೀಶ್ ಕುಮಾರ್, ಕರ್ನಾಟಕ ಗ್ರಾಮೀಣ ಬ್ಯಾಂಕ್ ವ್ಯವಸ್ಥಾಪಕರಾದ ಹರ್ಷ, ಸಂಘದ ನಿರ್ದೇಶಕರಾದ ಶಿವಮ್ಮ, ಚಂದ್ರಕಲಾ, ಬಿಎಸ್. ಶಿವಕುಮಾರ್, ನರಸಿಂಹಮೂರ್ತಿ, ತಿಪ್ಪೇರುದ್ರಪ್ಪ, ಪಿ. ಶಿವಮೂರ್ತಿ, ಗುಂಡಪ್ಪ, ರಂಗಮ್ಮ, ಕಾರ್ಯದರ್ಶಿ ಗೀತಾ, ಹಾಲು ಪರೀಕ್ಷಕ ಹುಮಾರ್ ಬಿನ್ ಕತಾಬ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ವರದಿ: ಚಿದಾನಂದ ಮಸ್ಕಲ್, ಹಿರಿಯೂರು
ರಾಹುಲ್ ಗಾಂಧಿ ಪಾದಯಾತ್ರೆಗೆ ಅವಕಾಶ ಕೊಟ್ಟರೇ, ಬಿಜೆಪಿ ಪ್ರತಿಭಟನಾ Rally: ಎಸ್.ಸುರೇಶ್ ಕುಮಾರ್ ಎಚ್ಚರಿಕೆ
BREAKING: ಅಲಾಸ್ಕಾ, ಹವಾಯಿಯಲ್ಲಿ ಸುನಾಮಿ: 10 ಅಡಿ ಎತ್ತರದ ಅಲೆಗಳ ಅಬ್ಬರ !