ಕಲಬುರ್ಗಿ: ಅಕ್ರಮ ಚಟುವಟಿಕೆಗಳ ವಿಚಾರದಲ್ಲಿ ಸರ್ಕಾರ ಶೂನ್ಯ ಸಹಿಷ್ಣುತೆ ಹೊಂದಿದ್ದು, ಕಟ್ಟುನಿಟ್ಟಿನ ಕ್ರಮ ಜರುಗಿಸುವಂತೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಸೂಚಿಸಿದರು.
ಕಲಬುರಗಿ ಪೊಲೀಸ್ ಕಮೀಷನರ್ ಕಚೇರಿಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಆನ್ ಲೈನ್ ದಂಧೆ, ಬೆಟ್ಟಿಂಗ್, ಮಟ್ಕಾ, ಇಸ್ಪೀಟ್, ಗಾಂಜಾ ಹಾಗೂ ಡ್ರಗ್ಸ್ ಸೇರಿದಂತೆ ಇತರೆ ಅಕ್ರಮ ಚಟುವಟಿಕೆಗಳ ಬಗ್ಗೆ ವರದಿಗಳಿದ್ದು ಅಂತಹ ಕಾನೂನು ಬಾಹಿರ ಚಟುವಟಿಕೆಗಳನ್ನು ನಿಗ್ರಹಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಕೇಂದ್ರ ಕಾರಾಗೃಹದಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತಿರುವ ಬಗ್ಗೆ ವರದಿ ಪ್ರಸ್ತಾಪಿಸಿದ ಸಚಿವರು ನಗರ ಪೊಲೀಸ್ ಆಯುಕ್ತ ಡಾ ಶರಣಪ್ಪ ಢಗೆ ಹಾಗೂ ಜಿಲ್ಲಾ ಎಸ್ ಪಿ ಶ್ರೀನಿವಾಸಲು ಅಡ್ಡೂರು ಅವರಿಗೆ ಕಾರಾಗೃಹಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುವಂತೆ ಸೂಚಿಸಿದರು
ಗ್ರಾಮೀಣ ಭಾಗದ ಬಹುತೇಕ ಜನರು ಒಮ್ಮೆ ಕೂಡಾ ಪೊಲೀಸ್ ಠಾಣೆಗೆ ಬಂದಿರುವುದಿಲ್ಲ. ಸಮಸ್ಯೆ ಹೇಳಿಕೊಂಡು ಬರುವ ಅಂತಹ ಸಾರ್ವಜನಿಕರೊಂದಿಗೆ ಸೌಜನ್ಯದೊಂದಿಗೆ ವರ್ತಿಸುವಂತೆ ಸಲಹೆ ನೀಡಿದ ಪ್ರಿಯಾಂಕ್ ಖರ್ಗೆ ಪೋಕ್ಸೋ ದಂತ ಗಂಭೀರ ಪ್ರಕರಣಗಳಲ್ಲಿ ಸುಪ್ರಿಂ ಕೋರ್ಟ್ ನಿರ್ದೇಶನವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಿದರು.
ಸಿವಿಲ್ ಸ್ವರೂಪದ ಪ್ರಕರಣಗಳಲ್ಲಿ ಪೊಲೀಸ್ ಅಧಿಕಾರಿಗಳು ಮಧ್ಯೆ ವರ್ತಿಗಳಂತೆ ವರ್ತಿಸುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳಿದ್ದು, ಸರಿಪಡಿಸಿಡಿಕೊಳ್ಳುವಂತೆ ಸಲಹೆ ನೀಡಿದ ಸಚಿವರು ಈ ತರಹದ ಪ್ರಕರಣಗಳಲ್ಲಿ ಪೊಲೀಸರು ಮೂಗು ತೂರಿಸುವಂತಿಲ್ಲ ಎಂದರು.
ಸರ್ಕಾರದ ಕಾರ್ಯಕ್ರಮಗಳ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಸಾರ್ವಜನಿಕರಿಗೆ ತಪ್ಪು ಮಾಹಿತಿ ನೀಡುತ್ತಿರುವವರ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಅವರು ಇದೇ ಸಂದರ್ಭದಲ್ಲಿ ಹೇಳಿದರು.
ಇತ್ತೀಚಿಗೆ ಕಲಬುರಗಿಯಲ್ಲಿ ನಡೆದ ಬಂಗಾರದ ಅಂಗಡಿಯ ದರೋಡೆ ಹಾಗೂ ಅಕ್ರಮ ನೇಮಕಾತಿ ಪ್ರಕರಣ ಬೇಧಿಸಿದನ್ನು ಶ್ಲಾಘಿಸಿದ ಸಚಿವರು, ಪೊಲೀಸರು ದಕ್ಷತೆಯಿಂದ ಕಾರ್ಯನಿರ್ವಹಿಸಿದಾಗ ಮಾತ್ರ ಜಿಲ್ಲೆಗೆ ಹೆಸರು ಬರುತ್ತದೆ ಎಂದರು.
ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ದಿ ಸಚಿವ ಡಾ ಶರಣಪ್ರಕಾಶ್ ಪಾಟೀಲ್ ಮಾತನಾಡಿ ಗ್ರಾಮೀಣ ಭಾಗದಲ್ಲಿ ರಾತ್ರಿ ವೇಳೆಯ ಪೊಲೀಸ್ ಗಸ್ತು ಹೆಚ್ಚಿಸಬೇಕು. ಗುಪ್ತಚರ ಇಲಾಖೆಯನ್ನು ಮತ್ತಷ್ಟು ಬಲಿಷ್ಠಗೊಳಿಸಿ ಕಾನೂನು ಸುವ್ಯವಸ್ಥೆ ಯನ್ನು ಕಾಪಾಡಬೇಕು. ರಸ್ತೆಯ ಬದಿಯಲ್ಲಿ ನಿಂತು ವಾಹನ ಸವಾರರಿಗೆ ಹಣ ವಸೂಲಿ ಮಾಡುತ್ತಿರುವ ಬಗ್ಗೆ ಸಾರ್ವಜನಿಕರಿಂದ ಪದೇ ಪದೇ ದೂರುಗಳು ಬರುತ್ತಿದ್ದು ಈ ಬಗ್ಗೆ ಗಮನಹರಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಮೈಕ್ರೋ ಫೈನಾನ್ಸ್ ಸಿಬ್ಬಂದಿಗಳ ಕಿರುಕುಳ ಗ್ರಾಮೀಣ ಭಾಗದಲ್ಲಿ ಹೆಚ್ಚಾಗುತ್ತಿದ್ದು ಅಂತವರ ವಿರುದ್ದ ಕಾನೂನು ಕ್ರಮ ಜರುಗಿಸಬೇಕು ಎಂದು ಸೂಚಿಸಿದ ಸಚಿವರು, ಹೆಚ್ಚಿನ ಬಡ್ಡಿದರಲ್ಲಿ ವಿದ್ಯಾರ್ಥಿಗಳಿಗೆ ಸಾಲ ನೀಡಿ ಅವರ ಮನೆಯವರಿಗೆ ಕಿರುಕುಳ ನೀಡುತ್ತಿರುವ ಬಗ್ಗೆ ವರದಿಗಳಿವೆ, ಆ ಬಗ್ಗೆ ಗಮನಹರಿಸಬೇಕು ಎಂದರು.
ಹಿರಿಯ ಶಾಸಕರಾದ ಎಂ ವೈ ಪಾಟೀಲ್ ಮಾತನಾಡಿ ಗಾಣಗಾಪುರ ದತ್ತಾತ್ರೇಯ ದೇವಸ್ಥಾನದ ಬಳಿ ವ್ಯವಸ್ಥಿತ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸುವ ಕುರಿತಂತೆ ಪೊಲೀಸರಿಗೆ ಹೇಳಿದರು.
ಶಾಸಕರಾದ ಅಲ್ಲಮಪ್ರಭು ಪಾಟೀಲ್ ಮಾತನಾಡಿ, ನಗರದ ಎಸ್ ಬಿ ಕಾಲೇಜ್ ಹಾಗೂ ಕೇಂದ್ರ ಬಸ್ ನಿಲ್ದಾಣ ಬಳಿ ಉಂಟಾಗುತ್ತಿರುವ ಟ್ರಾಫಿಕ್ ಜಾಮ್ ಬಗ್ಗೆ ಕ್ರಮವಹಿಸುವಂತೆ ಸೂಚಿಸಿದರು.
ಇದೇ ಸಂದರ್ಭದಲ್ಲಿ ಡಾ ಶರಣಪ್ಪ ಢಗೆ ಹಾಗೂ ಅಡ್ಡೂರು ಶ್ರೀನಿವಾಸಲು ಅವರು ತಮ್ಮ ವ್ಯಾಪ್ತಿಯಲ್ಲಿ ಕೈಗೊಂಡ ಪೊಲೀಸ್ ಕಾರ್ಯಾಚರಣೆಗಳು, ಬಂದೋಬಸ್ತ್, ಹಾಗೂ ಅಪರಾಧ ಪ್ರಕರಣಗಳನ್ನು ಬೇಧಿಸಿದ ಬಗ್ಗೆ ಸಚಿವರಿಗೆ ಮಾಹಿತಿ ನೀಡಿದರು.
ನಗರದ ರಾಷ್ಟ್ರಪತಿ ಚೌಕ್, ವಲ್ಲಭಭಾಯಿ ಚೌಕ್, ಸೇಡಂ ವೃತ್ತ, ಹುಮಾನಾಬಾದ್ ರಿಂಗ್ ರಸ್ತೆ ವೃತ್ತ, ಸೇರಿದಂತೆ ನಗರದ ಪ್ರಮುಖ ವೃತ್ತಗಳಲ್ಲಿ ನೂತನ ಟ್ರಾಫಿಕ್ ಲೈಟ್ ಅಳವಡಿಸುವ ಕುರಿತು ಇಲಾಖೆಯ ಹಿರಿಯ ಅಧಿಕಾರಿಗಳು ಸಚಿವರಿಗೆ ಪ್ರಸ್ತಾವನೆ ಸಲ್ಲಿಸಿದರು.
ವೇದಿಕೆಯ ಮೇಲೆ ಶಾಸಕರಾದ ಎಂ ವೈ. ಪಾಟೀಲ, ಅಲ್ಲಮಪ್ರಭು ಪಾಟೀಲ, ಅವಿನಾಶ ಜಾಧವ, ಎಂ ಎಲ್ ಸಿ ಜಗದೇವ ಗುತ್ತೇದಾರ, ಡಿಐಜಿ ಶಂತನು ಸಿನ್ಹಾ, ನಗರ ಪೊಲೀಸ್ ಆಯುಕ್ತ ಡಾ ಶರಣ್ಪ ಢಗೆ, ಎಸ್ ಪಿ ಅಡ್ಡೂರು ಶ್ರೀನಿವಾಸಲು, ಡಿಸಿಪಿ ಕನ್ನಿಕಾ ಸಿಕ್ರೀವಾಲ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಇದ್ದರು.
ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳಿಂದ ಮಹಿಳಾ ಸಬಲೀಕರಣ: ಸಚಿವ ಪ್ರಿಯಾಂಕ್ ಖರ್ಗೆ
BREAKING: ಕೊಲೆ ಬೆದರಿಕೆ: ದರ್ಶನ್ ಅಭಿಮಾನಿಗಳ ವಿರುದ್ಧ ನಟ ಪ್ರಥಮ್ ಪೊಲೀಸರಿಗೆ ದೂರು