ಬೆಂಗಳೂರು: ಸಿವಿಸಿ ಮತ್ತು ಪಿವಿಸಿ ಪೈಪುಗಳ ಉತ್ಪಾದಿಸುವ ಪೊದ್ದಾರ್ ಪ್ಲಂಬಿಂಗ್ ಸಿಸ್ಟಂ ಪ್ರೈವೇಟ್ ಲಿಮಿಟೆಡ್ ರಾಜ್ಯದಲ್ಲಿ 758 ಕೋಟಿ ರೂ. ಹೂಡಿಕೆ ಮಾಡಲು ತೀರ್ಮಾನಿಸಿದೆ. ಕಂಪನಿಗೆ ಕೋಲಾರ ಜಿಲ್ಲೆಯ ವೇಮಗಲ್ ಕೈಗಾರಿಕಾ ಪ್ರದೇಶದ ಹಂತ-2ರಲ್ಲಿ 33 ಎಕರೆ ಜಮೀನು ನೀಡಿದ್ದು, 2026ರ ಆಗಸ್ಟ್ ಹೊತ್ತಿಗೆ ಇದು ತನ್ನ ತಯಾರಿಕಾ ಚಟುವಟಿಕೆ ಆರಂಭಿಸಲಿದೆ. ಮುಂದಿನ ದಿನಗಳಲ್ಲಿ ವಿಜಯಪುರ ಜಿಲ್ಲೆಯಲ್ಲೂ ಇದು ಘಟಕವನ್ನು ತೆರೆಯಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಹೇಳಿದ್ದಾರೆ.
ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ದೀಪಕ್ ಪೊದ್ದಾರ್ ಮತ್ತು ನಿರ್ದೇಶಕ ವರುಣ್ ಪೊದ್ದಾರ್ ಅವರು ಮಂಗಳವಾರ ತಮ್ಮನ್ನು ಇಲ್ಲಿನ ಖನಿಜ ಭವನದಲ್ಲಿ ಭೇಟಿಯಾದ ಬಳಿಕ, ಈ ವಿಚಾರ ತಿಳಿಸಿದ್ದಾರೆ.
ಕಂಪನಿಯು ಈ ಹಿಂದೆ 492 ಕೋಟಿ ರೂ. ಹೂಡಿಕೆ ಮಾಡುವುದಾಗಿ ಹೇಳಿತ್ತು. ಈಗ ಅದನ್ನು 758 ಕೋಟಿ ರೂ.ಗೆ ಏರಿಸಲು ಅದು ಅನುಮೋದನೆ ಕೋರಿದೆ. ಈ ಯೋಜನೆಯಿಂದ 3 ಸಾವಿರ ನೇರ ಉದ್ಯೋಗ ಮತ್ತು 9 ಸಾವಿರ ಪರೋಕ್ಷ ಉದ್ಯೋಗಗಳು ಸೃಷ್ಟಿಯಾಗಲಿವೆ. ಮುಂದಿನ ಹತ್ತು ವರ್ಷಗಳಲ್ಲಿ ತನ್ನ ವಾರ್ಷಿಕ ವಹಿವಾಟನ್ನು 1,500 ಕೋಟಿ ರೂ.ಗಳಿಗೆ ಕೊಂಡೊಯ್ಯುವುದಾಗಿ ಅದು ಹೇಳಿದೆ. ಇದರಿಂದ ಸರಕಾರಕ್ಕೆ 3 ಸಾವಿರ ಕೋಟಿ ರೂಪಾಯಿ ತೆರಿಗೆ ರೂಪದಲ್ಲಿ ಬರಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಸಿವಿಸಿ ಮತ್ತು ಪಿವಿಸಿ ಪೈಪುಗಳು ನಿರ್ಮಾಣ ಕಾಮಗಾರಿ, ಕೃಷಿ ಮತ್ತು ಕೈಗಾರಿಕಾ ವಲಯಗಳಲ್ಲಿ ವ್ಯಾಪಕವಾಗಿ ಬಳಕೆಯಾಗುತ್ತಿವೆ. ಕಂಪನಿಗೆ ವೇಮಗಲ್‌ನಲ್ಲಿ ಈಗಾಗಲೇ 28 ಎಕರೆ ಕೊಡಲಾಗಿದೆ. ಉಳಿದ ಐದು ಎಕರೆಯನ್ನು ಇನ್ನು ಕೆಲವೇ ದಿನಗಳಲ್ಲಿ ಹಸ್ತಾಂತರಿಸಲಾಗುವುದು. ಈ ಕಂಪನಿಯು ಈಗಾಗಲೇ ಆಶೀರ್ವಾದ್ ಬ್ರ್ಯಾಂಡ್ ಹೆಸರಿನ ಪೈಪ್ ಕಂಪನಿಗೆ ಪ್ರವರ್ತಕ ಸ್ಥಾನದಲ್ಲಿತ್ತು. ವಾರ್ಷಿಕ 5 ಸಾವಿರ ಕೋಟಿ ರೂ.ಗಳಿಗೂ ಹೆಚ್ಚಿನ ವಹಿವಾಟು ನಡೆಸುತ್ತಿದ್ದ ಕಂಪನಿಯು 7 ಸಾವಿರಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡಿತ್ತು. ಈಗ ಅವರೇ ಪೊದ್ದಾರ್ ಹೆಸರಿನಲ್ಲಿ ಪ್ರತ್ಯೇಕ ಕಂಪನಿ ಮಾಡಿದ್ದಾರೆ ಎಂದು ಅವರು ವಿವರಿಸಿದ್ದಾರೆ.
ಕಂಪನಿಯು ಭೂಸ್ವಾಧೀನ ಉದ್ದೇಶಕ್ಕೆ 93 ಕೋಟಿ ರೂ, ಕಟ್ಟಡ ಹಾಗೂ ಕೈಗಾರಿಕಾ ಯಂತ್ರೋಪಕರಣಗಳಿಗೆ 578 ಕೋಟಿ ರೂ. ಮತ್ತು ಕೆಪೆಕ್ಸ್ (ಬಂಡವಾಳ ವೆಚ್ಚ) ಮೇಲಿನ ತೆರಿಗೆಯಾಗಿ 87 ಕೋಟಿ ರೂ.ಗಳನ್ನು ವಿನಿಯೋಗಿಸುತ್ತಿದೆ. ಈಗಾಗಲೇ ಕಟ್ಟಡ ಕಾಮಗಾರಿ ಮತ್ತು ಯಂತ್ರೋಪಕರಣಗಳ ಜೋಡಣೆ ಕಾರ್ಯ ವೇಮಗಲ್‌ನಲ್ಲಿ ಆರಂಭವಾಗಿದೆ ಎಂದು ಪಾಟೀಲ ಹೇಳಿದ್ದಾರೆ.
ವೇಮಗಲ್ ಘಟಕದ ಕಾರ್ಯಾರಂಭದ ನಂತರ ವಿಜಯಪುರ ಜಿಲ್ಲೆಯಲ್ಲೂ ಹೂಡಿಕೆ ಮಾಡಲಾಗುವುದು. ಅದಕ್ಕೆ ಪ್ರತ್ಯೇಕವಾದ ಯೋಜನೆ ರೂಪಿಸಲಾಗುತ್ತಿದೆ ಎಂದು ಪೊದ್ದಾರ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ದೀಪಕ್ ಪೊದ್ದಾರ್ ಈ ಸಂದರ್ಭದಲ್ಲಿ ಸಚಿವರಿಗೆ ತಿಳಿಸಿದರು.