ತುರುವೇಕೆರೆ : ಕೇಂದ್ರದ ನರೇಂದ್ರ ಮೋದಿ ಸರ್ಕಾರ ಕರ್ನಾಟಕ ರಾಜ್ಯದ ರೈತರ ಹಿತದೃಷ್ಟಿಯಿಂದ ಅಗತ್ಯ ರಸಗೊಬ್ಬರ ಪೂರೈಕೆ ಮಾಡಿದ್ದರೂ ಸಹ ರಾಜ್ಯ ಸರ್ಕಾರ ರಸಗೊಬ್ಬರವನ್ನು ಕಾಳಸಂತೆಯಲ್ಲಿ ಮಾರಾಟ ಮಾಡಲು ಅನುವು ಮಾಡಿಕೊಟ್ಟು ರೈತರನ್ನು ಬೀದಿಗೆ ತಳ್ಳಿದೆ ಎಂದು ಬಿಜೆಪಿ ಮುಖಂಡ, ಮಾಜಿ ಶಾಸಕ ಎಂ.ಡಿ.ಲಕ್ಷ್ಮೀನಾರಾಯಣ್ ಆರೋಪಿಸಿದರು.
ಮಾಧ್ಯಮದೊಂದಿಗೆ ಮಾತನಾಡಿದ ಅವರು, ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ರಾಜ್ಯದ ರೈತರಿಗೆ ಕೃಷಿ ಚಟುವಟಿಕೆಗೆ ರಸಗೊಬ್ಬರದ ಅಗತ್ಯತೆಯನ್ನು ಮನಗಂಡು 8.73 ಲಕ್ಷ ಮೆಟ್ರಿಕ್ ಟನ್ ಯೂರಿಯಾವನ್ನು ಪೂರೈಕೆ ಮಾಡಿದೆ. ಆದರೆ ರಾಜ್ಯ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೃಷಿ ಸಚಿವ ಚಲುವರಾಯಸ್ವಾಮಿ ಅವರುಗಳು ರಸಗೊಬ್ಬರವನ್ನು ಸಮರ್ಪಕವಾಗಿ ರೈತರಿಗೆ ವಿತರಿಸದೆ ದುಪ್ಪಟ್ಟು ಬೆಲೆಗೆ ಕಾಳಸಂತೆಯಲ್ಲಿ ಮಾರಾಟ ಮಾಡಲು ಅನುಕೂಲ ಮಾಡಿಕೊಟ್ಟಿದ್ದಾರೆ. ಇದರಿಂದ ರೈತರು ರಸಗೊಬ್ಬರ ಸಿಗದೆ ಕಂಗಾಲಾಗಿದ್ದಾರೆ. ಈಗಾಗಲೇ ರಾಜ್ಯದ ರೈತರೊಬ್ಬರು ರಸಗೊಬ್ಬರ ಸಿಗದ ಕಾರಣ ಮಣ್ಣನ್ನು ತಿಂದು ರಾಜ್ಯ ಸರ್ಕಾರದ ವಿರುದ್ಧ ವಿಭಿನ್ನ ರೀತಿಯ ಪ್ರತಿಭಟನೆಯನ್ನೂ ಸಹ ಮಾಡಿದ್ದಾರೆ. ಆದರೂ ಸಹ ರಾಜ್ಯ ಸರ್ಕಾರಕ್ಕೆ ಮಾನವೀಯತೆ ಎಂಬುದು ಇಲ್ಲವಾಗಿದೆ. ಕೃಷಿಕರಿಗೆ ಅಗತ್ಯವಾದ ನೀರು, ರಸಗೊಬ್ಬರ ಪೂರೈಕೆ ಮಾಡಲಾಗದಂತ ಹೀನಸ್ಥಿತಿಯಲ್ಲಿ ರಾಜ್ಯ ಸರ್ಕಾರವಿದೆ ಎಂದು ಕಿಡಿಕಾರಿದರು.
ಕೇಂದ್ರ ಸರ್ಕಾರ ಪೂರೈಸಿರುವ ರಸಗೊಬ್ಬರದಲ್ಲಿ ಇದುವರೆಗೆ 6.55 ಲಕ್ಷ ಮೆಟ್ರಿಕ್ ಯೂರಿಯಾ ಮಾರಾಟ ಮಾಡಿರುವುದಾಗಿ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಅವರು ಹೇಳಿದ್ದಾರೆ. ಹಾಗಿದ್ದರೆ ಇನ್ನುಳಿದ 1.94 ಮೆಟ್ರಿಕ್ ಟನ್ ಗೊಬ್ಬರ ಎಲ್ಲಿ ಯಾರ ಕೈಸೇರಿದೆ. ಎಂಬುವುದನ್ನು ಸಚಿವರು ಉತ್ತರಿಸಬೇಕಿದೆ ಎಂದ ಅವರು, ಗೋದಾಮಿನಲ್ಲಿ ಗೊಬ್ಬರ ದಾಸ್ತಾನು ಇದ್ದರೆ ರೈತರಿಗೆ ವಿತರಿಸಲು ವಿಳಂಬ ಏಕೆ? ಗೊಬ್ಬರದ ಕೃತಕ ಅಭಾವ ಸೃಷ್ಟಿಸುವ ಅಗತ್ಯತೆ ಏನಿದೆ ? ರಾಜ್ಯಾದ್ಯಂತ ಲಕ್ಷಾಂತರ ಅನ್ನದಾತರು ಯೂರಿಯಾ ಗೊಬ್ಬರಕ್ಕಾಗಿ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದರೂ ಒಂದು ಚೀಲ ಗೊಬ್ಬರ ಪೂರೈಸಲು ಮುಖ್ಯಮಂತ್ರಿಗಳಿಗೆ ಸಾಧ್ಯವಾಗುತ್ತಿಲ್ಲ. ಕೂಡಲೇ ರೈತರಿಗೆ ರಸಗೊಬ್ಬರ ವಿತರಣೆಗೆ ಕ್ರಮ ಕೈಗೊಳ್ಳಬೇಕಾದುದು ಜವಾಬ್ದಾರಿಯುತ ಸರ್ಕಾರದ ಕರ್ತವ್ಯವಾಗಿದೆ. ಕೂಡಲೇ ರೈತರಿಗೆ ರಸಗೊಬ್ಬರ ವಿತರಣೆ ಮಾಡದಿದ್ದರೆ ರಾಜ್ಯದಾದ್ಯಂತ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
BREAKING: ಡಿಸಿಇಟಿ-2025ರ ಎರಡನೇ ಸುತ್ತಿನ ತಾತ್ಕಾಲಿಕ ಫಲಿತಾಂಶ ಪ್ರಕಟಿಸಿದ ಕೆಇಎ
‘ಹೋಂ ಸ್ಟೇ ನಿರ್ಮಾಣ’ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್: ಸಹಾಯಧನಕ್ಕೆ ಅರ್ಜಿ ಆಹ್ವಾನ