ಶಿವಮೊಗ್ಗ : ರೈತ ಸಮಸ್ಯೆಗೆ ಸ್ಪಂದಿಸದಿರುವುದು ಮತ್ತು ಕೃಷಿಕೂಲಿ ಕಾರ್ಮಿಕರ ಸಂಕಷ್ಟಗಳಿಗೆ ಪರಿಹಾರ ಕಲ್ಪಿಸದ ಆಡಳಿತದ ಕ್ರಮ ವಿರೋಧಿಸಿ ರೈತ ಸಂಘದ ವತಿಯಿಂದ ಆ. 15ರಂದು ಭೂಹೋರಾಟದ ನೆಲ ಕಾಗೋಡಿನಿಂದ ರೈತ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗುತ್ತಿದೆ ಎಂದು ಸಂಯುಕ್ತ ರೈತ ಸಂಘದ ಅಧ್ಯಕ್ಷ ಎಂ.ಬಿ.ಮಂಜಪ್ಪ ಹಿರೇನೆಲ್ಲೂರು ತಿಳಿಸಿದರು.
ಇಂದು ಶಿವಮೊಗ್ಗ ಜಿಲ್ಲೆಯ ಸಾಗರದ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕಾಗೋಡು ಪರಿಶಿಷ್ಟ ಕಾಲೋನಿಯಲ್ಲಿ ಮಧ್ಯಾಹ್ನ 2-30ಕ್ಕೆ ಜಾಗೃತಿ ಅಭಿಯಾನಕ್ಕೆ ಸ್ಥಳೀಯ ಗ್ರಾಮ ಸಮಿತಿ ಅಧ್ಯಕ್ಷರು ಚಾಲನೆ ನೀಡಲಿದ್ದು, ಮುಂದಿನ ಒಂದು ವರ್ಷ ತಾಲ್ಲೂಕಿನ ಎಲ್ಲಾ ಗ್ರಾಮಗಳಲ್ಲೂ ಜಾಗೃತಿ ಅಭಿಯಾನ ನಡೆಸಲಾಗುತ್ತದೆ ಎಂದರು.
ದೇಶಕ್ಕೆ ಸ್ವಾತಂತ್ರ್ಯ ಬಂದು 79 ವರ್ಷವಾಯಿತು. ಈತನಕ ಕೃಷಿಕೂಲಿ ಕಾರ್ಮಿಕರ ಮೇಲಿನ ಶೋಷಣೆ ತಪ್ಪಿಲ್ಲ. ಜಿಎಸ್ಟಿ ಸಂಗ್ರಹದಿಂದ ದೇಶದ ಆರ್ಥಿಕ ಸ್ಥಿತಿ ಭದ್ರವಾಗಿದೆ. ಆದರೆ ಕೃಷಿಕೂಲಿ ಕಾರ್ಮಿಕರು, ರೈತರ ಸ್ಥಿತಿ ಸುಧಾರಣೆಯಾಗಿಲ್ಲ. ಸರ್ಕಾರದ ಯೋಜನೆಗಳು ತಳಮಟ್ಟದ ಜನರಿಗೆ ತಲುಪುತ್ತಿಲ್ಲ. ಪ್ರತಿ ಕಚೇರಿಯಲ್ಲಿ ಲಂಚ ಕೊಡದೆ ಯಾವುದೇ ಕೆಲಸವಾಗುತ್ತಿಲ್ಲ. ಬಡಜನರ ಬದುಕು ಹಸನಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ರಾಜಕೀಯಸ್ತರ ಕೈನಲ್ಲಿ ಅಧಿಕಾರಿ ವರ್ಗವಿದೆ. ಕೇಂದ್ರ ಸರ್ಕಾರ ಉದ್ಯೋಗಖಾತ್ರಿ ಯೋಜನೆ ಜಾರಿಗೆ ತಂದು ಗ್ರಾಮೀಣ ಭಾಗದ ನಿರುದ್ಯೋಗ ಸಮಸ್ಯೆ ನಿವಾರಣೆಗೆ ಒತ್ತು ನೀಡಿದೆ. ಕೃಷಿಕೂಲಿ ಕಾರ್ಮಿಕರಿಗೆ ಸರಿಯಾದ ಮಾಹಿತಿಯನ್ನು ಅಧಿಕಾರಿಗಳು ನೀಡುತ್ತಿಲ್ಲ. ಈ ಹಿನ್ನೆಲೆಯಲ್ಲಿ ಒಂದು ವರ್ಷಗಳ ಕಾಲ ರೈತ ಸಂಘ ಮನೆಮನೆ ಭೇಟಿ ನೀಡಿ ಜಾಗೃತಿ ಮೂಡಿಸುತ್ತದೆ. ನಿಮ್ಮ ಹೋರಾಟ ನಮ್ಮ ಬೆಂಬಲ ಘೋಷವಾಕ್ಯದಡಿ ನೆರವು ನೀಡಲಾಗುತ್ತದೆ ಎಂದು ತಿಳಿಸಿದರು. ಗೋಷ್ಟಿಯಲ್ಲಿ ಪ್ರತಾಪ್ ಚಿಪ್ಪಳಿ ಹಾಜರಿದ್ದರು.
ಸಾಗರದಲ್ಲಿ ಅರಣ್ಯದಲ್ಲಿ ಜಾನುವಾರು ಮೇಯಿಸಲು ನಿಷೇಧ ಆದೇಶಕ್ಕೆ ಖಂಡನೆ: ವಿನೂತನ ರೀತಿಯಲ್ಲಿ ಪ್ರತಿಭಟನೆ
‘ಹೋಂ ಸ್ಟೇ ನಿರ್ಮಾಣ’ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್: ಸಹಾಯಧನಕ್ಕೆ ಅರ್ಜಿ ಆಹ್ವಾನ