ಶಿವಮೊಗ್ಗ : ಕ್ರಿಯಾಶೀಲ ಪತ್ರಕರ್ತರು ಸಮಾಜದ ಆಸ್ತಿ. ಪತ್ರಕರ್ತರು ನಿರ್ಭೀತಿಯಿಂದ ತಮ್ಮ ಬರವಣಿಗೆ ಮುಂದುವರೆಸಲು ಎಲ್ಲ ರೀತಿಯ ಸಹಕಾರ ನೀಡಲಾಗುತ್ತದೆ ಎಂದು ಶಾಸಕ ಹಾಗೂ ಅರಣ್ಯ ಕೈಗಾರಿಕಾ ಅಭಿವೃದ್ದಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ತಿಳಿಸಿದರು.
ಇಂದು ಅಣಲೆಕೊಪ್ಪದಲ್ಲಿ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಸಾಗರ ಶಾಖೆಯ ನೂತನ ಕಚೇರಿ ಲೋಕಾರ್ಪಣೆಗೊಳಿಸಿ, ಪತ್ರಿಕಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದಂತ ಅವರು, ನೈಜಸುದ್ದಿ ಬಿತ್ತರಿಸಿ ಸಮಾಜವನ್ನು ಸರಿದಾರಿಗೆ ತರುವ ಜೊತೆಗೆ ಜನಪ್ರತಿನಿಧಿಗಳು ತಪ್ಪು ಮಾಡಿದಾಗ ಅದನ್ನು ತಮ್ಮ ಬರವಣಿಗೆ ಮೂಲಕ ತೋರಿಸಿ ಸರಿಪಡಿಸುವ ಕೆಲಸ ಪತ್ರಕರ್ತರು ಮಾಡಿಕೊಂಡು ಬರುತ್ತಿದ್ದಾರೆ. ಪತ್ರಕರ್ತರಿಗೆ ಬರೆಯುವ ಹಕ್ಕು ಇರುತ್ತದೆ. ಸಮಾಜವನ್ನು ಸನ್ಮಾರ್ಗದಲ್ಲಿ ತೆಗೆದುಕೊಂಡು ಹೋಗುವಲ್ಲಿ ಮಾಧ್ಯಮಗಳ ಪಾತ್ರ ಅತ್ಯಂತ ಪ್ರಮುಖವಾಗಿರುತ್ತದೆ. ನನ್ನ ವಿರುದ್ದ ಸುದ್ದಿ ಬಂದಾಗಲೂ ನಾನು ಅದನ್ನು ಸಮಚಿತ್ತದಿಂದ ನೋಡಿದ್ದೇನೆ. ತಪ್ಪನ್ನು ಸರಿಪಡಿಸಿಕೊಂಡಿದ್ದೇನೆ ಎಂದರು.
ಪತ್ರಕರ್ತರು ಆರ್ಥಿಕವಾಗಿ ಶ್ರೀಮಂತರಾಗಿರುವುದಿಲ್ಲ. ರಾಜ್ಯ ಸರ್ಕಾರ ಪತ್ರಕರ್ತರ ಶ್ರೇಯೋಭಿವೃದ್ದಿಗೆ ವಿಶೇಷ ಒತ್ತು ನೀಡಿದೆ. ಈಗಾಗಲೆ ಮಾಧ್ಯಮ ಸಂಜೀವಿನಿ ಯೋಜನೆ ಮೂಲಕ ಆರೋಗ್ಯ ರಕ್ಷಣೆಗೆ ಒತ್ತು ನೀಡಿದೆ. ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್ ನೀಡಿದೆ. ಪತ್ರಕರ್ತರ ಬೇಡಿಕೆಯನ್ನು ಮುಖ್ಯಮಂತ್ರಿಗಳು ಹಂತಹಂತವಾಗಿ ಈಡೇರಿಸಿದ್ದಾರೆ. ಸಾಗರದಲ್ಲಿ ಸಹ ಪತ್ರಕರ್ತರ ಕಚೇರಿ ನೀಡುವ ಭರವಸೆಯನ್ನು ನೀಡಲಾಗಿತ್ತು. ನಗರಸಭೆ ಸಹಯೋಗದೊಂದಿಗೆ ನೂತನ ಕಚೇರಿ ನಿರ್ಮಿಸಿ ಕೊಡಲಾಗಿದೆ. ಇದರ ಜೊತೆಗೆ ಪತ್ರಕರ್ತರ ನಿವೇಶನ ಬೇಡಿಕೆಯನ್ನು ಸದ್ಯದಲ್ಲಿಯೆ ಈಡೇರಿಸಲಾಗುತ್ತದೆ ಎಂದು ಹೇಳಿದರು.
ಹಿರಿಯ ಪತ್ರಕರ್ತರನ್ನು ಸನ್ಮಾನಿಸಿ ಮಾತನಾಡಿದ ನಗರಸಭೆ ಅಧ್ಯಕ್ಷೆ ಮೈತ್ರಿ ಪಾಟೀಲ್, ಸವಾಲುಗಳ ನಡುವೆ ಪತ್ರಕರ್ತರು ಕೆಲಸ ಮಾಡುತ್ತಿದ್ದಾರೆ. ಅವರ ಬರವಣಿಗೆಯನ್ನು ಅವಮಾನಿಸುವ ಕೆಲಸವಾಗಬಾರದು. ಪತ್ರಕರ್ತರಿಗೆ ಬೆದರಿಕೆ ಹಾಕುವಂತಹ ಕೆಲಸ ಮಾಡಿದರೆ ಅದು ಮಾಧ್ಯಮಗಳಿಗೆ ಮಾಡಿದ ಅವಮಾನವಾಗುತ್ತದೆ. ನಗರಸಭೆ ವತಿಯಿಂದ ಸುಮಾರು 20 ಲಕ್ಷ ರೂ. ಅನುದಾನದಲ್ಲಿ ಶಾಸಕರ ಮಾರ್ಗದರ್ಶನದಲ್ಲಿ ನೂತನ ಕಚೇರಿ ನಿರ್ಮಿಸಿ ಕೊಡಲಾಗಿದೆ. ನಗರಸಭೆಯಿಂದ ಪತ್ರಕರ್ತರಿಗೆ ಬೇಕಾದ ಸಹಕಾರ ನೀಡಲಾಗುತ್ತದೆ ಎಂದರು.
ನಗರಸಭೆ ಉಪಾಧ್ಯಕ್ಷೆ ಸವಿತಾ ವಾಸು ಮಾತನಾಡಿ, ಇತ್ತೀಚೆಗೆ ನಿರ್ಭೀತಿಯಿಂದ ಬರೆಯುವ ಪತ್ರಕರ್ತರನ್ನು ಬೆದರಿಸಿ ಮಣಿಸುವ ಕೆಲಸ ಮಾಡಲಾಗುತ್ತಿದೆ. ವರದಿಗಾರ ಮಹೇಶ್ ಹೆಗಡೆ ಅವರನ್ನು ಬೆದರಿಸುವ ಕೆಲಸ ಮಾಡಲಾಗಿತ್ತು. ಸಮಾಜ ನಿಮ್ಮ ಜೊತೆಗೆ ಇದ್ದು, ಸತ್ಯವನ್ನು ಮಾಧ್ಯಮದ ಮೂಲಕ ಬಯಲಿಗೆ ತರುವ ಕೆಲಸ ಮಾಡಲು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತರಾದ ಸಂತೋಷ್ ಕುಮಾರ್ ಕಾರ್ಗಲ್, ಗಿರೀಶ್ ರಾಯ್ಕರ್ ಅವರನ್ನು ಸನ್ಮಾನಿಸಲಾಯಿತು. ಎಸ್.ಎಸ್.ಎಲ್.ಸಿ.ಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿನಿ ಶರಣ್ಯ ಆರ್. ರಾಯರ್ ಅವರನ್ನು ಪುರಸ್ಕರಿಸಲಾಯಿತು.
ಸಾಗರ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಿ.ನಾಗೇಶ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ನಗರಸಭೆ ಸದಸ್ಯ ಆರ್.ಶ್ರೀನಿವಾಸ್, ಜಿಲ್ಲಾಧ್ಯಕ್ಷ ಶಿವಕುಮಾರ್ ಕೆ.ವಿ., ರಾಜ್ಯ ಸಮಿತಿ ಸದಸ್ಯ ಎನ್.ರವಿಕುಮಾರ್, ಪ್ರಮುಖರಾದ ಅರುಣ್ ವಿ.ಟಿ., ಎಂ.ಜಿ.ರಾಘವನ್, ಸಾಗರ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಮಹೇಶ್ ಹೆಗಡೆ, ಇನ್ನಿತರರು ಹಾಜರಿದ್ದರು.
ಈ ವೇಳೆ ಸತ್ಯನಾರಾಯಣ ಕೆ.ಬಿ. ಪ್ರಾರ್ಥಿಸಿದರು. ಲೋಕೇಶಕುಮಾರ್ ಸ್ವಾಗತಿಸಿದರು. ಮಹೇಶ್ ಹೆಗಡೆ ಪ್ರಾಸ್ತಾವಿಕ ಮಾತನಾಡಿದರು. ರವಿನಾಯ್ಡು ವಂದಿಸಿದರು. ದೀಪಕ್ ಸಾಗರ್ ನಿರೂಪಿಸಿದರು.