ಧಾರವಾಡ: ಕೇಂದ್ರ ಪರಿಸರ ಖಾತೆ ಸಚಿವರನ್ನು ಭೇಟಿಯಾಗಿ ಮಹದಾಯಿ ಯೋಜನೆಗೆ ವನ್ಯ ಜೀವಿ ಮಂಡಳಿ ಅನುಮತಿ ಪಡೆಯಲು ಪ್ರಯತ್ನಿಸಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಅವರು ಇಂದು ಧಾರವಾಡ ಜಿಲ್ಲೆಯ ನವಲಗುಂದ ಪಟ್ಟಣದಲ್ಲಿ ಮಲಪ್ರಭಾ – ಮಹದಾಯಿ – ಕಳಸಾಬಂಡೂರಿ ರೈತ ಹೋರಾಟ ಸಮಿತಿ ಸದಸ್ಯರು ನಡೆಸುತ್ತಿರುವ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಅವರಿಂದ ಮನವಿ ಸ್ವೀಕರಿಸಿ, ಮಾತನಾಡಿದರು.
ರಾಜ್ಯದ ನೆಲ ಜಲದ ವಿಷಯ ಬಂದಾಗ ನಾವು ರಾಜಕಾರಣ ಮಾಡಿಲ್ಲ. ಬೇರೆಯವರು ರಾಜಕಾರಣ ಮಾಡಿದರೂ ನಾವು ಅದನ್ನು ತೆಲೆಗೆ ತೆಗೆದುಕೊಂಡಿಲ್ಲ. ಮಹದಾಯಿ ವಿಚಾರದಲ್ಲಿ ಗೋವಾ ಮುಖ್ಯಮಂತ್ರಿ ನೀಡಿರುವ ಹೇಳಿಕೆ ಸರಿಯಲ್ಲ. ನಮ್ಮ ರಾಜ್ಯದ ಹಿತ ಕಾಪಾಡುವ ಸಲುವಾಗಿ ನಾವು ಏನು ಕ್ರಮ ತೆಗೆದುಕೊಳ್ಳಬೇಕೊ ಅದನ್ನು ತೆಗೆದುಕೊಳ್ಳುತ್ತೇವೆ. ನಮ್ಮ ರಾಜ್ಯದ ಬಗ್ಗೆ ಮಾತನಾಡುವ ಹಕ್ಕು ಅವರಿಗೆ ಇಲ್ಲ. ಅವರ ಹೇಳಿಕೆಯನ್ನು ಸಂಪೂರ್ಣವಾಗಿ ಖಂಡಿಸುತ್ತೇನೆ. ಮಹದಾಯಿ ಹೋರಾಟ ಅಂತಿಮ ಘಟ್ಟಕ್ಕೆ ಬಂದಿದೆ ಎಂದು ಹೇಳಿದರು.
ಕಳಸಾ ಬಂಡೂರಿ ನೀರು ಪಡೆಯಬೇಕೆಂದು ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ಈಶ್ವರಪ್ಪ ಅವರು ನೀರಾವರಿ ಸಚಿವರಾಗಿದ್ದಾಗ ಆರಂಭಿಸಿ, ನಾನು ನೀರಾವರಿ ಸಚಿವನಾಗಿದ್ದಾಗ 300 ಕೋಟಿ ರೂ. ಇಟ್ಟು ಕೆನಾಲ್ ಲಿಂಕ್ ಕಾಮಗಾರಿ ಮಾಡಿದ್ದೇವೆ. ಮಹದಾಯಿಯಿಂದ ಮಲಪ್ರಭಾ ನದಿಗೆ ನೀರು ಹೇಗೆ ಬರಬೇಕೆಂದು ಕಳಸಾ ಲಿಂಕ್ ಕೆನಾಲ್ ಮಾಡಿದ್ದೇವೆ. ಬಂಡೂರಿ ನಾಲಾಗೆ ಲಿಂಕ್ ಕೆನಾಲ್ ಮಾಡುವುದು ಉಳಿದಿದೆ. ಈಗಿನ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕಿದೆ ಎಂದರು.
ಯುಪಿಎ ಸರ್ಕಾರದ ಅವಧಿಯಲ್ಲಿ ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ನ್ಯಾಯಮಂಡಳಿ ಆದೇಶ ಆಯಿತು. ಟ್ರಿಬ್ಯುನಲ್ ಆದೇಶ ಆಗಿ ನಾಲ್ಕು ವರ್ಷ ಕಳೆದರೂ ಅಧ್ಯಕ್ಷರಿಗೆ ಕಚೇರಿ ಕೊಡಲಿಲ್ಲ. ಮತ್ತೆ ಅದಕ್ಕಾಗಿ ಹೋರಾಟ ಮಾಡಬೇಕಾಯಿತು. ನ್ಯಾಯಮಂಡಳಿ ಆದೇಶ ಬಂದ ಮೂರು ವರ್ಷದ ನಂತರ ಕೆಲಸ ಆರಂಭವಾಯಿತು.
ನಾನು ಮುಖ್ಯಮಂತ್ರಿ ಆಗುವ ಮುನ್ನ ಗೃಹ ಸಚಿವನಾಗಿದ್ದಾಗ ಕೇಂದ್ರ ಸರ್ಕಾರದ ಬಳಿ ಹೋಗಿ ಟ್ರಿಬ್ಯುನಲ್ ಆದೇಶವನ್ನು ಗೆಜೆಟ್ ನೊಟಿಫಿಕೇಶನ್ ಮಾಡಿಸಿದೇವು. ಎರಡನೇಯದಾಗಿ ಡಿಪಿಆರ್ ಮಾಡಿಸಿ ಕೇಂದ್ರ ಸರ್ಕಾರದ ಒಪ್ಪಿಗೆ ಪಡೆದೆವು, ಮೂರನೆಯದಾಗಿ ಪರಿಸರ ಇಲಾಖೆಯ ಅನುಮತಿ ಬೇಕಿತ್ತು, ನಾನು ಮುಖ್ಯಮಂತ್ರಿ ಆಗಿದ್ದಾಗ ಪರಿಸರ ಇಲಾಖೆಯ ಅನುಮತಿ ಪಡೆದಿದ್ದೇವೆ. ಪರಿಸರ ಇಲಾಖೆ ಅನುಮತಿ ಪಡೆದ ಮೇಲೆ ಮುಗಿಯಿತು. ಗೋವಾದವರು ವನ್ಯ ಜೀವಿ ನೆಪ ಹೇಳುತ್ತಿದ್ದಾರೆ. ನಮ್ಮ ರಾಜ್ಯದ ವನ್ಯ ಜೀವಿ ರಕ್ಷಣೆ ಮಾಡುವುದು ನಮ್ಮ ಹಕ್ಕು ಅದನ್ನು ಕೇಳುವ ಹಕ್ಕು ಗೋವಾದವರಿಗಿಲ್ಲ. ಅದನ್ನೂ ಕೇಂದ್ರ ಸಚಿವರಿಗೆ ತಿಳಿಸಿದ್ದೇನೆ. ಅವರು ಈ ವಾರದಲ್ಲಿ ಸಮಯ ಕೊಡುವುದಾಗಿ ಹೇಳಿದ್ದಾರೆ. ಮಹದಾಯಿ ವ್ಯಾಪ್ತಿಯಲ್ಲಿ ಬರುವ ಸಂಸದರಾದ ನಾನು, ಜಗದೀಶ್ ಶೆಟ್ಟರ, ಪಿ.ಸಿ. ಗದ್ದಿಗೌಡರ ಹಾಗೂ ಇನ್ನೂ ಅನೇಕ ಸಂಸದರು ಸೇರಿ ಅವರಿಗೆ ಇನ್ನಷ್ಟು ವಿಷಯಗಳನ್ನು ಮನವರಿಕೆ ಮಾಡಿ ವನ್ಯ ಜೀವಿ ಮಂಡಳಿ ಅನುಮತಿ ಪಡೆಯಲು ಪ್ರಯತ್ನಿಸುವುದಾಗಿ ತಿಳಿಸಿದರು.
ಈ ಸಂಧರ್ಭದಲ್ಲಿ ಮಾಜಿ ಸಚಿವರಾದ ಶಂಕರ ಪಾಟೀಲ್ ಮುನೇನಕೊಪ್ಪ ಸೇರಿದಂತೆ ರೈತ ಮುಖಂಡರು ಉಪಸ್ಥಿತರಿದ್ದರು.
Rain In Karnataka: ಜುಲೈ.31ರವರೆಗೆ ರಾಜ್ಯಾಧ್ಯಂತ ಭಾರೀ ಮಳೆ: ಈ ಜಿಲ್ಲೆಗಳಲ್ಲಿ ಆರೇಂಜ್ ಅಲರ್ಟ್ ಘೋಷಣೆ
ನನ್ನ, ಪ್ರಿಯಕರನ ಖಾಸಗಿ ವೀಡಿಯೋ ಪೋನಿನಲ್ಲಿವೆ ನೋಡಿ: ಆತ್ಮಹತ್ಯೆಗೆ ಶರಣಾದ ವಿವಾಹಿತೆ!