ಗದಗ: ರೈತರ ತ್ಯಾಗ ಬಲಿದಾನ ವ್ಯರ್ಥವಾಗಬಾರದು ಅವರ ತ್ಯಾಗ ಬಲಿದಾನದಲ್ಲಿ ಸ್ಪೂರ್ತಿ ಪಡೆದು, ರೈತರು ಮತ್ತೆ ಸಂಘಟಿತರಾಗಿ ರಾಜ್ಯದಲ್ಲಿ ರೈತ ಸರ್ಕಾರ ತರುವ ಕೆಲಸ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಕರೆ ನೀಡಿದರು.
ಅವರು ಇಂದು ಇಂದು ಗದಗ ತಾಲೂಕಿನ ಸೊರಟೂರ ಗ್ರಾಮದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ಏರ್ಪಡಿಸಿದ 35 ನೇಯ ವರ್ಷದ ರೈತ ಹುತ್ಮಾತ ದಿನಾಚರಣೆಯಲ್ಲಿ ಭಾಗವಹಿಸಿ, ಮಾತನಾಡಿದರು.
ಈ ರಾಜ್ಯದಲ್ಲಿ ರೈತ ಹೋರಾಟಕ್ಕೆ ತನ್ನದೆ ಆದ ಇತಿಹಾಸ ಇದೆ. ಅದರಲ್ಲಿ ಬಗರ್ ಹುಕುಂ ಚಳವಳಿ ತನ್ನದೇ ಆದ ಮಹತ್ವ ಪಡೆದಿದೆ. ರಾಜ್ಯದಲ್ಲಿ ಕಂದಾಯ ಇಲಾಖೆಯಲ್ಲಿ ಭೂ ಸುದಾರಣೆ ಕಾನೂನು ಬಂದು ಉಳುವವನೆ ಭೂ ಒಡೆಯ ಎಂಬ ಘೊಷ ವಾಕ್ಯದಿಂದ ಯಾರು ಉಳುಮೆ ಮಾಡುತ್ತಾರೆ ಅವರೇ ಮಾಲಿಕರು ಎಂಬ ಕಾನೂನು ಬಂದರೂ ಮೂವತ್ತು ನಲವತ್ತು ಐವತ್ತು ವರ್ಷಗಳಾದರೂ ರೈತರಿಗೆ ಹಕ್ಕು ಪತ್ರಕೊಡುವ ಪ್ರಕ್ರಿಯೆಯಿಂದ ರೈತರಿಗೆ ಅನ್ಯಾಯವಾದಾಗ ರಾಜ್ಯ ರೈತ ಸಂಘದ ಹೆಸರಿನಲ್ಲಿ ನಡೆದ ಹೊರಾಟದಲ್ಲಿ ಒಂದು ಸರ್ಕಾರ ರೈತರಿಗೆ ನ್ಯಾಯ ಕೊಡಲಿಲ್ಲ ಭೂಮಿ ಅವರ ಹೆಸರಿಗೆ ಮಾಡಲಿಲ್ಲ. ಉಳುವವನೆ ಒಡೆಯ ಕೇವಲ ಘೋಷಣೆಯಾಯಿತು. ಸೊರಟೂರು ಗ್ರಾಮದಲ್ಲಿ ಮೂವರು ಯುವ ರೈತರನ್ನು ಬಲಿ ತೆಗೆದುಕೊಂಡಿದ್ದು ನಮಗೆಲ್ಲ ಕರಾಳ ಇತಿಹಾಸ ಎಂದು ಬೇಸರ ವ್ಯಕ್ತಪಡಿಸಿದರು.
ರೈತ ಯಾವುದೇ ಪಕ್ಷಕ್ಕೆ ಸೇರಿಲ್ಲ
ರೈತ ಯಾವುದೇ ಪಕ್ಷಕ್ಕೆ ಸೇರಿಲ್ಲ. ಆದರೆ, ಎಲ್ಲ ಪಕ್ಷಗಳೂ ರೈತರಿಗೆ ಸೇರಿವೆ. ಎಷ್ಟು ಮಳೆ ಬರುತ್ತದೆ ಗೊತ್ರಿಲ್ಲ, ಎಷ್ಟು ಬೆಳೆ ಬರುತ್ತದೆ ಗೊತ್ತಿಲ್ಲ. ಅದಕ್ಕೆ ಎಷ್ಟು ಬೆಲೆ ಬರುತ್ತದೆ ಗೊತ್ರಿಲ್ಲ. ರೈತ ಅನಿಶ್ಚಿತತೆಯಲ್ಲಿ ಬದುಕುತ್ತಿದ್ದಾನೆ. ಕರ್ನಾಟಕದಲ್ಲಿ ಅನೇಕ ರೈತ ಸಂಘಟನೆಗಳು ಆಗಿವೆ. ರಾಜ್ಯದ ಎಲ್ಲ ರೈತ ಸಂಘಟನೆಗಳು ಒಂದಾದಾಗ ಮಾತ್ರ ರೈತರಿಗೆ ನ್ಯಾಯ ಕೊಡಲು ಸಾಧ್ಯ. ಎಲ್ಲ ರೈತ ಸಂಘಟನೆಗಳು ಒಂದಾಗಲಿ ಎಂದು ಕರೆ ಕೊಡುತ್ತೇನೆ ಎಂದು ಹೇಳಿದರು.
ಎಪ್ಪತ್ರು ಎಂಭತ್ತರ ದಶಕದ ನವಲಗುಂದ ನರಗುಂದ ಹೋರಾಟ ಆದ ಮೇಲೆ ಸೊರಟೂರು ರೈತರ ಹತ್ಯೆಯಾಗಿದೆ. ಈಗಲೂ ಅದೇ ವ್ಯವಸ್ಥೆ ಇದೆ. ಸರಕಾರಗಳು ಅನ್ನಭಾಗ್ಯ ಯೋಜನೆ ಮಾಡಿವೆ ಆದರೆ ಅನ್ನದಾತನ ಮೂಲೆಗುಂಪು ಮಾಡಿದ್ದಾರೆ. ಯಾರು ಅನ್ನ ಕೊಡುತ್ತಾರೆ ಅವರಿಗೆ ನ್ಯಾಯ ಸಿಗುತ್ತಿಲ್ಲ. ನಾನು ಸಿಎಂ ಆಗಿದ್ದಾಗ ಬೀಜ ಗೊಬ್ಬರ ಪ್ರತಿ ವರ್ಷ ಬಫರ್ ಸ್ಟಾಕ್ ಇಡುವಂತೆ ಸೂಚನೆ ನೀಡಿದ್ದೆ. ಈ ವರ್ಷ ಮಳೆ ಮುಂಚಿತವಾಗಿದೆ. ಮೆಕ್ಕೆಜೋಳ ಬೆಳೆದ ರೈತರು ಯೂರಿಯಾ ಗೊಬ್ಬರಕ್ಕಾಗಿ ಬೇಡುತ್ತಿದ್ದಾರೆ. ಕೇಂದ್ರ ಸರ್ಕಾರ ಅಗತ್ಯ ಯೂರಿಯಾ ಗೊಬ್ಬರ ಕೊಟ್ಟಿದೆ. ಆದರೆ ರಾಜ್ಯದಲ್ಲಿ ಯೂರಿಯಾ ಗೊಬ್ವರದ ಭ್ರಷ್ಟಾಚಾರ ನಡೆದಿದೆ. ದೊಡ್ಡ ದೊಡ್ಡ ಡೀಲರ್ ಗಳು ಬ್ಲಾಕ್ ಮಾರ್ಕೆಟ್ ನಲ್ಲಿ ಮಾರಾಟ ಮಾಡುತ್ತಿದ್ದಾರೆ. ನಾನು ಸೊರಟೂರು ಸೊಸೈಟಿಗೆ ಭೇಟಿ ಕೊಟ್ಟಿದ್ದೆ, ಸೊಸೈಟಿಗೆ ಗೊಬ್ಬರ ಕೊಟ್ಟಿಲ್ಲ. ದೊಡ್ಡ ದೊಡ್ಡ ವ್ಯಾಪಾರಸ್ಥರಿಗೆ ಹೋಗುತ್ತಿದೆ ಎಂದು ಆರೋಪಿಸಿದರು.
ರೈತ ಪರ ಯೋಜನೆಗಳು ಸ್ಥಗಿತ
ರಾಜ್ಯದಲ್ಲಿ ಹಲವಾರು ಯೋಜನೆಗಳು ನಿಂತು ಹೋಗಿವೆ. ಕೇಂದ್ರ ಸರ್ಕಾರ ರೈತರಿಗೆ ಐದು ಲಕ್ಷದವರೆಗೆ ಬಡ್ಡಿ ರಹಿತ ಸಾಲ ನೀಡುವಂತೆ ಹೇಳಿದೆ. ಆದರೆ ಯಾವ ರೈತರಿಗೂ ಐದು ಲಕ್ಷ ಬಡ್ಡಿ ರಹಿತ ಸಾಲ ಸಿಗುತ್ತಿಲ್ಲ. ಯಾಕೆಂದರೆ ರಾಜ್ಯ ಸರ್ಕಾರ ಕೊಡುತ್ತಿಲ್ಲ. ನಾವು ಗೊಬ್ಬರ ಬೀಜಕ್ಕೆ ಸಬ್ಸಿಡಿ ಕೊಟ್ಟಿದ್ದೇವು ಅದು ನಿಂತಿದೆ. ಡಿಸೆಲ್ ಸಬ್ಸಿಡಿ ನಿಂತಿದೆ. ರೈತರ ಮಕ್ಕಳ ಅನುಕೂಲಕ್ಕಾಗಿ ನಾವು ವಿದ್ಯಾನಿಧಿ ಯೋಜನೆ ಮಾಡಿದ್ದೇವು ಅದನ್ನು ನಿಲ್ಲಿಸಿದ್ದಾರೆ. ನೀರಾವರಿಗೆ ಹಣ ನೀಡಿಲ್ಲ ಎಂದು ಆರೋಪಿಸಿದರು.
ರೈತರ ತ್ಯಾಗ ವ್ಯರ್ಥವಾಗಬಾರದು
ಸೊರಟೂರಿನ ಮೂರು ಜನ ಅಣ್ಣಂದಿರಾದ ಮಹಾಲಿಂಗಪ್ಪ ಮಲ್ಲೇಶಪ್ಪ ಗಿಡ್ಡಕೆಂಚಣ್ಣವರ, ಚನ್ನಬಸಪ್ಪ ನಿರ್ವಾಹಣಶೆಟ್ಟರ, ದೇವಲಪ್ಪ ಲಮಾಣಿ ಅವರ ತ್ಯಾಗ ಬಲಿದಾನ ವ್ಯರ್ಥವಾಗಬಾರದು ಅವರ ತ್ಯಾಗ ಬಲಿದಾನದಲ್ಲಿ ಸ್ಪೂರ್ತಿ ಇದೆ, ರೈತರು ಮತ್ತೆ ಸಂಘಟಿತರಾಗಿ ಮತ್ತೆ ರಾಜ್ಯದಲ್ಲಿ ರೈತ ಸರ್ಕಾರ ತರುವ ಕೆಲಸ ಮಾಡಬೇಕು. ರೈತನ ಪರವಾಗಿ ಕೈಜೋಡಿಸುವ ಕಾಲ ಬಂದಿದೆ. ರೈತ ಉಳಿದರೆ ದೇಶ ಉಳಿಯುತ್ತದೆ. ಯಾವ ದೇಶ ಆಹಾರದಲ್ಲಿ ಸ್ವಾವಲಂಬನೆ ಯಾಗುತ್ತದೆ. ಅಂದರೆ ನಮ್ಮ ದೇಶಕ್ಕೆ ಬೇಕಾದಷ್ಟು ಆಹಾರ ಬೆಳೆದುಕೊಳ್ಳುವುದು. ಸ್ವಾತಂತ್ರ್ಯ ಬಂದಾಗ 33 ಜನ ಇದ್ದರೂ ಆಹಾರ ಆಮದು ಮಾಡಿಕೊಳ್ಳುತ್ತಿದ್ದೆವು. ಈಗ ನೂರಾ ನಲವತ್ತು ಕೋಟಿ ಜನಸಂಖ್ಯೆ ಇದ್ದರೂ ನಾವು ಸ್ವಾವಲಂಬಿಯಾಗಿದ್ದೇವೆ. ಅದಕ್ಕೆ ಕಾರಣ ನಮ್ಮ ರೈತರು. ಕೃಷಿಯಲ್ಲಿ ಹಸಿರು ಕ್ರಾಂತಿಯನ್ನೇ ಮಾಡಿ ಈ ದೇಶಕ್ಕೆ ಅನ್ನ ಕೊಟ್ಟಿದ್ಸಾನೆ. ಯಾವ. ದೇಶ ಆಹಾರದಲ್ಲಿ ಸ್ವಾವಲಂಬಿಯಾಗಿರುತ್ತದೊ ಅದು ಸ್ವಾಭಿಮಾನಿಯಾಗಿರುತ್ತದೆ. ಇವತ್ತು ರೈತರ ಮಕ್ಜಳಿಗೆ ಹೆಣ್ಣು ಕೊಡುತ್ತಿಲ್ಲ. ಒಂದು ನಿಜವಾದ ಘಟನೆ ಹೇಳುತ್ರೇನೆ ಚನ್ನಪಟ್ಟಣ ತಾಲೂಕಿನಲ್ಲಿ ಪಿಎಲ್ ಡಿ ಬ್ಯಾಂಕ್ ಅಧ್ಯಕ್ಣ ಇದ್ದ, ಆತನಿಗೆ ಹೆಣ್ಣು ನೋಡಿದ್ದರು ಮಾತುಕತೆಯಾಗಿತ್ತು. ಹೆಣ್ಣಿನ ಕಡೆಯವರು ಆ ಬ್ಯಾಂಕಿನ ಗುಮಾಸ್ತನಿ ಗೆ ಹೆಣ್ಣು ಕೊಟ್ಟರು ಅದರ ಅಧ್ಯಕ್ಷನಿಗೆ ಹೆಣ್ಣು ಕೊಡಲಿಲ್ಲ ಇಂತಹ ಪರಿಸ್ಥಿತಿ ಇದೆ. ಎಂದು ಬೇಸರ ವ್ಯಕ್ತಪಡಿಸಿದರು.
ಹೋರಾಟಕ್ಕೆ ಸಂಕಲ್ಪ
ನಮ್ಮ ಸ್ವಾಭಿಮಾನಕ್ಕೆ ದಕ್ಕೆ ಬಂದಾಗ ನಾವೆಲ್ಲ ಒಂದಾಗಬೇಕು ನಾವೆಲ್ಲ ಸೇರಿ ಸಂಕಲ್ಪ ಮಾಡಿ ರೈತ ಜಾಗೃತಿ ಮಾಡಿ, ಮತ್ತೊಮ್ಮೆ ರಾಜ್ಯದಲ್ಲಿ ರೈತರ ಸರ್ಕಾರ ತರೋಣ.
ನಾನು ಸೊರಟೂರು ಗ್ರಾಮದಲ್ಲಿ ಒಂದು ಸಂಕಲ್ಪ ಮಾಡುತ್ತೇನೆ. ರೈತ ಹೋರಾಟಕ್ಕೆ ಮುಂಚೂಣಿಯಲ್ಲಿ ನಿಂತು ನಾನು ಹೋರಾಟ ಮಾಡುತ್ತೇನೆ ಎಂದು ಸಂಕಲ್ಪ ಮಾಡುತ್ತೇನೆ. ಹುತಾತ್ಮರ ಸ್ಮಾರಕಕ್ಕೆ ಪುಣ್ಯಾತ್ಮರು ಜಾಗ ಕೊಟ್ಟಿದ್ದಾರೆ. ಅದನ್ನು ನಾನೂ ಯೋಗ್ಯ ರೀತಿಯಲ್ಲಿ ತೋರಣ ಮಾಡಿ ಅಭಿವೃದ್ಧಿ ಪಡಿಸುತ್ತೇನೆ. ನಮ್ಮನ್ನು ಯಾರು ಬೆಳೆಸಿದ್ದರೋ ಯಾರು ತ್ಯಾಗ ಮಾಡಿದ್ದಾರೊ ಅವರನ್ನು ಮರೆಯುತ್ತೇವೆ.
ಕರ್ನಾಟಕದಲ್ಲಿ ಮೊದಲನೆ ಸಹಕಾರ ಸಂಘ ಮಾಡಿದವರು ಎಸ್. ಎಸ್. ಪಾಟೀಲರು ಎಲ್ಲ ಕಡೆ ಸಂಘಟನೆ ಮಾಡಿದ್ದರು. ನಾನು ಕಣಗಿಣಹಾಳಕ್ಕೆ ಹೋಗಿದ್ದೆ. ಅವರಿಗೆ ನೂರು ವರ್ಷ ಆಗಿತ್ತು. ಅವರ ಸ್ಮಾರಕ ಮಾಡಲು ನಾವು ಸರ್ಕಾರಕ್ಕೆ ಕೇಳಿದೆವು ಸರ್ಕಾರ ಮಾಡಲಿಲ್ಲ. ಕೊನೆಗೆ ನಾನೇ ಅವರ ಸ್ಮಾರಕ ಮಾಡಿದೆ. ಇದನ್ನು ಅತ್ಯಂತ ಹೆಮ್ಮೆಯಿಂದ ಹೇಳುತ್ತೇನೆ ಎಂದರು.
ಸೊರಟೂರು ಹೋರಾಟದ ಭೂಮಿ ಇಲ್ಲಿ ಗೊಲಿಬಾರ್ ಆದಾಗ ನಮ್ಮ ನೆಚ್ಚಿನ ನಾಯಕರಾದ ಯಡಿಯೂರಪ್ಪ ಮತ್ತು ಎಸ್. ಆರ್ ಬೊಮ್ಮಾಯಿ ಅವರು ಬಂದು ಮನೆ ಮನೆಗೆ ಹೋಗಿ ಜನರಿಗೆ ಧೈರ್ಯ ಹೇಳಿ ಜನರಿಗೆ ಆಸ್ಪತ್ರೆಗೆ ಹೋಗಲು ತಮ್ಮದೇ ಗಾಡಿ ಕಳಿದವರು ಯಡಿಯೂರಪ್ಪ ಮತ್ತು ಎಸ್ ಆರ್ ಬೊಮ್ಮಾಯಿಯವರು. ಅಂತಹ ಹೋರಾಟದ ಛಲಗಾರರ ಗರಡಿಯಲ್ಲಿ ನಾವು ಬೆಳೆದಿದ್ದೇವೆ. ನಮ್ಮಲ್ಲೂ ಕಿಚ್ಷಿದೆ.. ಕೇವಲ ಮಾತಿನಿಂದ ಭಾಷಣದಿಂದ ರಾಜಕಾರಣ ಆಗುವುದಿಲ್ಲ, ಇನ್ನು ಮುಂದೆ ನಿಮ್ಮ ಪರವಾಗಿ ಯಾವ ರೀತಿ ಕಳಸಾ ಬಂಡೂರಿ ಹೋರಾಟ ಮಾಡಿದ್ದೇವೊ ಅದೇ ರೀತಿ ರೈತರ ಪರವಾಗಿ ನೀರಾವರಿ ಪರವಾಗಿ ಅವರ ಬದುಕಿನ ಪರವಾಗಿ ಅವರ ಹಕ್ಕಿನ ಪರವಾಗಿ ಮತ್ತೊಮ್ಮೆ ಇನ್ನೊಂದು ಸಂಗ್ರಾಮ ನಾವು ಸಾರುತ್ತೇವೆ ಎಂಬ ಸಂಕಲ್ಪ ಮಾಡಿ, ಇಂದು ನಾನು ನಿಜವಾಗಿ ಧನ್ಯನಾಗಿದ್ದೇನೆ. ಹೋರಾಟ ಮಾಡುತ್ತೇನೆ ಎಂದು ಸಂಕಲ್ಪ ಮಾಡುತ್ತೇನೆ ಅವರ ತ್ಯಾಗ ಬಲಿದಾನ ವ್ಯರ್ಥವಾಗದಂತೆ ನೋಡಿ ಕೊಳ್ಳುವ ಜವಾಬಮಬ್ದಾರಿ ನನ್ನ ಮೇಲಿದೆ ಆ ಜವಾಬ್ದಾರಿ ಹೊತ್ತುಕೊಳ್ಳುತ್ತೇನೆ. ಬಿಜಾಪುರದ ಶ್ರೀ ಸಿದ್ದೆಶ್ವರ ಸ್ವಾಮೀಜಿ ಒಂದು ಮಾತು ಹೇಳುತ್ತಿದ್ದರು. ರೈತ ರೇಷ್ಮೆ ಅಂಗಿ ಹಾಕಬೇಕು, ಜುರಕಿ ಚಪ್ಪಲ್ ಹಾಕಬೇಕು ರುಮಾಲ್ ಸುತ್ತಿ ಕಿಸೆ ತುಂಬ ರೊಕ್ಕಾ ಇಟಗೊಂಡು ಸಂತಿಗೆ ಹೋಗ ಬೇಕು ಆಗ ದೇಶ ಅಭಿವೃದ್ಧಿ ಆಗುತ್ತದೆ ಅಂತ ಸಿದ್ದೇಶ್ವರ ಸ್ವಾಮೀಜಿ ಹೇಳುತ್ತಿದ್ದರು. ಅವರು ಹೇಳಿದಂತ ದಿನಗಳು ಬರಲಿ ಎಂದು ಆಶಿಸುತ್ತೇನೆ ಎಂದು ಹೇಳಿದರು.
ಈ ಸಂಧರ್ಭದಲ್ಲಿ ದಿನಾಂಕ 27/07/1990 ರಂದು ಬಗರ್ ಹುಕುಂ ಚಳುವಳಿಯಲ್ಲಿ ಹುತಾತ್ಮರಾದ ದಿವಂಗತ ಶ್ರೀ ಮಹಾಲಿಂಗಪ್ಪ ಮಲ್ಲೇಶಪ್ಪ ಗಿಡ್ಡಕೆಂಚಣ್ಣವರ, ಶ್ರೀ ಚನ್ನಬಸಪ್ಪ ನಿರ್ವಾಹಣಶೆಟ್ರ, ಶ್ರೀ ದೇವಲಪ್ಪ ಲಮಾಣಿ ಅವರ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಮಾಜಿ ಸಚಿವರಾದ ಎಸ್.ಎಸ್ ಪಾಟೀಲ್, ವಿಧಾನ ಪರಿಷತ್ ಸದಸ್ಯರಾದ ಎಸ್.ವಿ ಸಂಕನೂರ, ಶಾಸಕರಾದ ಡಾ. ಚಂದ್ರು ಲಮಾಣಿ, ಭಾರತೀಯ ಜನತಾ ಪಕ್ಷದ ಜಿಲ್ಲಾಧ್ಯಕ್ಷರಾದ ರಾಜು ಕುರಡಗಿ, ಕೆ.ಸಿ.ಸಿ ಬ್ಯಾಂಕ್ ಅಧ್ಯಕ್ಷರಾದ ಶಿವಕುಮಾರಗೌಡ ಪಾಟೀಲ್, ಮುಖಂಡರಾದ ರವಿ ದಂಡಿನ, ರೈತ ಸಂಘದ ಅಧ್ಯಕ್ಷರಾದ ರಾಮಣ್ಣ ಕಮ್ಮಾರ ಸೇರಿದಂತೆ ಗ್ರಾಮ ಪಂಚಾಯತಿ ಅಧ್ಯಕ್ಷರು , ಉಪಾಧ್ಯಕ್ಷರು, ಮುಖಂಡರು ಉಪಸ್ಥಿತರಿದ್ದರು.