ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಹೂವಿನಹೊಳೆ ಸರ್ಕಾರಿ ಶಾಲೆಯಲ್ಲಿ ಹೂವಿನಹೊಳೆ ಪ್ರತಿಷ್ಠಾನದಿಂದ ಕಂಪ್ಯೂಟರ್ ಕೌಶಲ್ಯ ಕೇಂದ್ರ ನಡೆಸಲಾಗುತ್ತಿದೆ. ಈ ಕೌಶಲ್ಯ ಕೇಂದ್ರದಲ್ಲಿ ಕಳೆದ ರಾತ್ರಿ ವಿದ್ಯುತ್ ಅವಘಡ ಉಂಟಾಗಿ ಕಂಪ್ಯೂಟರ್ ಉಪಕರಣಗಳು ಸುಟ್ಟ ಭಸ್ಮವಾಗಿ ಅಪಾರ ಹಾನಿ ಉಂಟಾಗಿದೆ.
ಚಿತ್ರದುರ್ಗ ಜಿಲ್ಲೆ, ಹಿರಿಯೂರು ತಾಲ್ಲೂಕಿನ ಹೂವಿನಹೊಳೆ ಗ್ರಾಮದಲ್ಲಿ ಹೂವಿನಹೊಳೆ ಪ್ರತಿಷ್ಠಾನದ ವತಿಯಿಂದ ನಿರ್ವಹಿಸಲಾಗುತ್ತಿರುವ ಹೂವಿನಹೊಳೆ ಕೌಶಲ್ಯ ಕೇಂದ್ರದ ಕಾರ್ಯಚಟುವಟಿಕೆ ನಡೆಸಲಾಗುತ್ತಿದೆ.
ದುರದೃಷ್ಟವಶಾತ್, ಕಳೆದ ರಾತ್ರಿ ಸುಮಾರು 8 ಗಂಟೆ ಸುಮಾರಿಗೆ ಹೂವಿನಹೊಳೆ ಗ್ರಾಮದಲ್ಲಿ ವಿದ್ಯುತ್ ಲೈನ್‌ನಲ್ಲಿ ನ್ಯೂಟ್ರಲ್ ಕಟ್ ಆಗಿದ್ದ ಪರಿಣಾಮವಾಗಿ ಸ್ಕಿಲ್ ಸೆಂಟರ್‌ಗೆ ಅಳವಡಿಸಲಾಗಿದ್ದ ಎಸಿ ಉಪಕರಣಕ್ಕೆ ಸಂಪರ್ಕವಿದ್ದ ಸ್ಟೆಬಿಲೈಜರ್‌ನಲ್ಲಿ ಹೈವೋಲ್ಟೇಜ್ ಸ್ಫೋಟ ಸಂಭವಿಸಿ ಬೆಂಕಿ ಹೊತ್ತಿಕೊಂಡಿತ್ತು. ಈ ಬೆಂಕಿಯಿಂದ ಸ್ಕಿಲ್ ಸೆಂಟರ್‌ನಲ್ಲಿದ್ದ ಹಲವಾರು ಉಪಕರಣಗಳು ಸುಟ್ಟ ಭಸ್ಮವಾಗಿ ಸಂಪೂರ್ಣ ನಾಶವಾಗಿವೆ.
ಹೂವಿನಹೊಳೆ ಸ್ಥಳೀಯ ಗ್ರಾಮಸ್ಥರು ತಕ್ಷಣದ ಸಮಯಪ್ರಜ್ಞೆ ತೋರಿಸಿ ಬೆಂಕಿಯನ್ನು ನಿಯಂತ್ರಣಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಗ್ರಾಮಸ್ಥರ ಸಹಕಾರದಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಈ ಕಾರಣದಿಂದ ತಾತ್ಕಾಲಿಕವಾಗಿ ಹೂವಿನಹೊಳೆ ಪ್ರತಿಷ್ಠಾನದಿಂದ ನಡೆಸುತ್ತಿರುವ ಕಂಪ್ಯೂಟರ್ ತರಗತಿಗಳನ್ನು ಸ್ಥಳಾಂತರಿಸಲಾಗಿದೆ. ಈ ಕಂಪ್ಯೂಟರ್ ತರಗತಿಗಳನ್ನು ಕೆಲ ಕಾಲ ಮುಂದೂಡಲಾಗಿದೆ. ವಿದ್ಯುತ್ ಅವಘಡದ ನಂತರ ಉಂಟಾದ ಬೆಂಕಿಯಿಂದ ಸುಮಾರು ₹1,00,000 ಮೌಲ್ಯದ ಉಪಕರಣಗಳು ಹಾನಿಯಾಗಿರುವುದಾಗಿ ಪ್ರಾಥಮಿಕವಾಗಿ ಅಂದಾಜಿಸಲಾಗಿದೆ ಎಂದು ಹೂವಿನಹೊಳೆ ಪ್ರತಿಷ್ಠಾನ ಸಂಸ್ಥಾಪಕ ಅಧ್ಯಕ್ಷ ನಂದಿ ಜೆ ಹೂವಿನಹೊಳೆ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಅತ್ಯಂತ ಕಾಳಜಿ ವಹಿಸಿದ ಬೆಂಕಿಯಿಂದ ಸ್ಕಿಲ್ ಸೆಂಟರ್ ಗೆ ಉಂಟಾಗುತ್ತಿದ್ದ ಮತ್ತಷ್ಟು ಹಾನಿ ತಪ್ಪಿಸಿದಂತ ಹೂವಿನಹೊಳೆ ಗ್ರಾಮದ ಮಹೇಶ್, ವೀರಣ್ಣ, ಯಶವಂತ್, ರಾಘು ಹಾಗೂ ಇತರರಿಗೆ ನಂದಿ ಜೆ ಹೂವಿನಹೊಳೆ ಕೃತಜ್ಞತೆ ಸಲ್ಲಿಸಿದ್ದಾರೆ. ಅಲ್ಲದೇ ಹಾನಿಗೆ ಬೆಸ್ಕಾಂ ಇಲಾಖೆ, ಸರ್ಕಾರದಿಂದ ನೆರವು ನೀಡಿ, ಉಪಕರಣ ದುರಸ್ತಿಗೆ ಸಹಕಾರ ನೀಡುವಂತೆ ಮನವಿ ಮಾಡಿದ್ದಾರೆ.
ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು