ಶಿವಮೊಗ್ಗ : ಭಾರಿ ಮಳೆಗೆ ಶಿವಮೊಗ್ಗ ಜಿಲ್ಲೆಯಲ್ಲಿ ವಿವಿಧ ಕಡೆ ಅವಾಂತರ ಸೃಷ್ಟಿ ಆಗುತ್ತಿವೆ. ಸೊರಬ ತಾಲ್ಲೂಕಿನ ದೇವತಿ ಕೊಪ್ಪ ಉರಗನಹಳ್ಳಿಯ ದೊಡ್ಡ ಕೆರೆ ಏರಿ ಕುಸಿತಗೊಂಡಿದೆ. ಹೀಗಾಗಿ ಕರೆಯ ಅಕ್ಕಪಕ್ಕದ ಜಮೀನಿನ ರೈತರಲ್ಲಿ ಆತಂಕ ಹೆಚ್ಚಾಗಿದೆ.
ಶಿವಮೊಗ್ಗದಲ್ಲಿ ಜಿಲ್ಲೆಯ ಸೊರಬ ತಾಲ್ಲೂಕಿನ ಉರಗನಹಳ್ಳಿ ದೊಡ್ಡ ಕೆರೆ ಏರಿ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ಕುಸಿದಿದೆ. ಇದರಿಂದ ಅಪಾರ ಪ್ರಮಾಣದ ಕೃಷಿ ಭೂಮಿಗೆ ನೀರು ನುಗ್ಗುವ ಸಾಧ್ಯತೆಯಿದ್ದು, ಗ್ರಾಮಸ್ಥರು, ರೈತರಲ್ಲಿ ಆತಂಕ ಮನೆ ಮಾಡಿದೆ.
ಬೇಸಿಗೆಯ ಸಮಯದಲ್ಲಿ ಈ ಭಾಗದ ಕೃಷಿ ಜಮೀನಿಗೆ ಈ ಕೆರೆಯು ಪ್ರಮುಖ ನೀರಾವರಿ ಮೂಲವಾಗಿದೆ. ಇದೀಗ ಏರಿ ಕುಸಿದಿರುವುದರಿಂದ ಕೆರೆ ಒಡೆದು ನೀರು ಪೋಲಾಗುವ ಆತಂಕವನ್ನು ರೈತರಲ್ಲಿ ಹುಟ್ಟು ಹಾಕಿದೆ. ಈ ತಕ್ಷಣವೇ ಸಂಬಂಧಿಸಿದ ಅಧಿಕಾರಿಗಳು ಇತ್ತ ಗಮನಹರಿಸಿ, ಶಾಶ್ವತ ಪರಿಹಾರ ಒದಗಿಸುವತ್ತ ಕಾರ್ಯೋನ್ಮುಖವಾಗಬೇಕು ಎಂದು ರೈತರ ಒತ್ತಾಯಿಸಿದ್ದಾರೆ.
ಈ ಹಿಂದಿನ ಶಾಸಕರ ಅವಧಿಯಲ್ಲಿ 46 ಲಕ್ಷ ರೂ ವೆಚ್ಚದಲ್ಲಿ ಕಾಮಗಾರಿ ಮಾಡಿದ್ದು ಉಪಯೋಗಕ್ಕೆ ಬಾರದಂತಾಗಿದೆ. ಕೇವಲ ದಾಖಲೆಗಳಲ್ಲಿ ಮಾತ್ರ ಕಾಮಗಾರಿಯಾಗಿದ್ದು ವಾಸ್ತವವಾಗಿ ಯಾವುದೇ ಉಪಯೋಗವಾಗಿಲ್ಲ ಎಂದು ಬ್ಲಾಕ್ ಯುವ ಕಾಂಗ್ರೆಸ್ ಉಪಾಧ್ಯಕ್ಷರಾದ ಸಂಜಯ್ ದೇವತಿಕೊಪ್ಪ ಆರೋಪಿಸಿದ್ದಾರೆ.
ವರದಿ: ವಿಕಾಸ್, ಕ್ಯಾಸನೂರು, ಸೊರಬ