ಬೆಂಗಳೂರು : ರಾಜ್ಯ ಸರ್ಕಾರವು ಕಟ್ಟಡ ಮಾಲೀಕರಿಗೆ ಸಿಹಿಸುದ್ದಿ ನೀಡಿದ್ದು, ಶೇ.15 ರಷ್ಟು ಉಲ್ಲಂಘನೆಯಾಗಿದ್ರೆ ಸಕ್ರಮಗೊಳಿಸಲಾಗುತ್ತದೆ ಎಂದು ಸರ್ಕಾರ ಆದೇಶ ಹೊರಡಿಸಿದೆ.
ಹೌದು, ರಾಜ್ಯದಲ್ಲಿ ದೀರ್ಘಕಾಲದಿಂದ ನೆನೆಗುದಿಗೆ ಬಿದ್ದಿದ್ದ ಕಟ್ಟಡ ನಕ್ಷೆ ಉಲ್ಲಂಘನೆ ಪ್ರಕರಣಗಳಿಗೆ ಕರ್ನಾಟಕ ಸರ್ಕಾರ ಮಹತ್ವದ ಪರಿಹಾರ ಮಾರ್ಗವನ್ನು ಕಂಡುಕೊಂಡಿದೆ. ಅನುಮೋದಿತ ಕಟ್ಟಡ ನಕ್ಷೆಗಿಂತ ಸಣ್ಣ ಪ್ರಮಾಣದಲ್ಲಿ ಹೆಚ್ಚುವರಿ ನಿರ್ಮಾಣಗಳನ್ನು ಮಾಡಿಕೊಂಡಿದ್ದ ಸಾವಿರಾರು ಕಟ್ಟಡ ಮಾಲೀಕರಿಗೆ ನೆಮ್ಮದಿ ನೀಡುವಂತಹ ಹೊಸ ತಿದ್ದುಪಡಿ ನಿಯಮವನ್ನು ಜಾರಿಗೆ ತರಲು ಸರ್ಕಾರ ಸಿದ್ಧತೆ ನಡೆಸಿದೆ.
ಈ ಹೊಸ ನಿಯಮವು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ವ್ಯಾಪ್ತಿಯನ್ನು ಹೊರತುಪಡಿಸಿ, ರಾಜ್ಯದ ಇತರೆ ಎಲ್ಲ ಸ್ಥಳೀಯ ಸಂಸ್ಥೆಗಳಿಗೂ ಅನ್ವಯವಾಗಲಿದೆ. ‘ಕರ್ನಾಟಕ ಮುನಿಸಿಪಲ್ ಕಾರ್ಪೊರೇಷನ್ ಮಾಡೆಲ್ ಬಿಲ್ಡಿಂಗ್ (ತಿದ್ದುಪಡಿ) ಬೈ-ಲಾ 2025’ ಅನ್ನು ಜಾರಿಗೆ ತರಲು ಸರ್ಕಾರ ನಿರ್ಧರಿಸಿದ್ದು, ಈ ಕುರಿತ ಕರಡು ಅಧಿಸೂಚನೆಗೆ ಸಾರ್ವಜನಿಕರು ಆಕ್ಷೇಪಣೆಗಳನ್ನು ಸಲ್ಲಿಸಲು 30 ದಿನಗಳ ಕಾಲಾವಕಾಶ ನೀಡಲಾಗಿದೆ.
ಶೇ. 15ರಷ್ಟು ಉಲ್ಲಂಘನೆ ಸಕ್ರಮ
ಕಟ್ಟಡದ ಅನುಮೋದಿತ ನಕ್ಷೆಗಿಂತ ಶೇ. 15ರಷ್ಟು ಹೆಚ್ಚುವರಿ ನಿರ್ಮಾಣವಾಗಿದ್ದರೆ, ಅದನ್ನು ಹೊಸ ಬೈ-ಲಾದ ಅಡಿಯಲ್ಲಿ ಸಕ್ರಮ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
ಎಫ್ಎಆರ್ ಮತ್ತು ಪಾರ್ಕಿಂಗ್ನಲ್ಲಿ ಸಡಿಲಿಕೆ
ಫ್ಲೋರ್ ಏರಿಯಾ ರೇಷಿಯೊ (FAR) ಮತ್ತು ಕಾರ್ ಪಾರ್ಕಿಂಗ್ಗೆ ಸಂಬಂಧಿಸಿದಂತೆ ಶೇ. 5ರಷ್ಟು ಉಲ್ಲಂಘನೆಯಾಗಿದ್ದರೂ, ಅದನ್ನೂ ಸಕ್ರಮಗೊಳಿಸಲು ಈ ಬೈ-ಲಾದಲ್ಲಿ ಅವಕಾಶ ನೀಡಲಾಗಿದೆ.