ಮೈಸೂರು : ಮನೆ ಬಳಿಯ ರಸ್ತೆಯಲ್ಲಿ ಬಿದ್ದಿದ್ದ ಅಡಕೆ ಮಾದರಿಯ ವಸ್ತುವನ್ನು ಅಡಿಕೆ ಎಂದು ಭಾವಿಸಿ ಕಲ್ಲಿನಿಂದ ಚೂರು ಮಾಡುತ್ತಿದ್ದ ವೇಳೆ ಸಿಡಿಮದ್ದು ಸ್ಫೋಟಗೊಂಡು ಮಹಿಳೆಯೊಬ್ಬರು ತೀವ್ರ ಗಾಯಗೊಂಡಿರುವ ಘಟನೆ ತಾಲೂಕಿನ ಹುಲ್ಯಾಳು ಗ್ರಾಮದಲ್ಲಿ ನಡೆದಿದೆ.
ಕಾಡು ಹಂದಿ ಬೇಟೆಗೆ ಇಡುವ ಸಿಡಿಮದ್ದು ಸ್ಫೋಟಗೊಂಡು ತಾಲೂಕಿನ ಗಾವಡಗೆರೆ ಹೋಬಳಿಯ ಹುಲ್ಯಾಳು ಗ್ರಾಮದ ಲೋಕೇಶ್ರ ಪತ್ನಿ ಕಮಲಮ್ಮ ತೀವ್ರ ಗಾಯಗೊಂಡಿದ್ದಾರೆ.
ಶುಕ್ರವಾರ ಜಮೀನಿನಿಂದ ಮನೆಗೆ ಬರುತ್ತಿದ್ದ ವೇಳೆ ರಸ್ತೆಯಲ್ಲಿ ಬಿದ್ದಿದ್ದ ವಸ್ತುವನ್ನು ಅಡಿಕೆ ಎಂದು ಭಾವಿಸಿ ಮನೆ ಮುಂದೆಯೇ ಕಲ್ಲಿನಿಂದ ಜಜ್ಜುತ್ತಿದ್ದಂತೆ ಸಿಡಿಮದ್ದು ಏಕಾಏಕಿ ಸ್ಫೋಟಗೊಂಡು ಮುಖ, ಕೈ, ಹೊಟ್ಟೆ ಭಾಗಕ್ಕೆ ತೀವ್ರ ಪೆಟ್ಟು ಬಿದ್ದು ಅಸ್ವಸ್ಥಗೊಂಡಿದ್ದಾರೆ.
ಜೋರಾದ ಶಬ್ದ ಕೇಳಿದ ಅಕ್ಕಪಕ್ಕದವರು ಧಾವಿಸಿ ತಕ್ಷಣವೇ ಕೆ.ಆರ್.ನಗರ ತಾಲೂಕು ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿದೆ.