ಧಾರವಾಡ : ರಾಜ್ಯದಲ್ಲಿ ಹೃದಯ ಖಾಯಿಲೆ ಪ್ರಕರಣಗಳಲ್ಲಿ ಹೆಚ್ಚಳವಿಲ್ಲ. ಆರೋಗ್ಯ ಇಲಾಖೆಯ ಯಶಸ್ವಿ ಕಾರ್ಯಕ್ರಮಗಳಲ್ಲಿ ಒಂದಾಗಿರುವ ಪುನೀತ ರಾಜ್ಕುಮಾರ ಹೃದಯಜ್ಯೋತಿ ಯೋಜನೆಯನ್ನು ರಾಜ್ಯದ ಎಲ್ಲ ತಾಲೂಕು ಆಸ್ಪತ್ರೆಗಳಿಗೆ ವಿಸ್ತರಿಸಲು ಕ್ರಮಕೈಗೊಳ್ಳಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವ ದಿನೇಶ ಗುಂಡೂರಾವ್ ಅವರು ಹೇಳಿದರು.
ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಬೆಳಗಾವಿ ವಿಭಾಗ ಮಟ್ಟದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ಜರುಗಿಸಿ, ಮಾತನಾಡಿದರು.
ರಾಜ್ಯದ ಒಂಬತ್ತು ತಾಲೂಕು ಸ್ಥಾನದಲ್ಲಿರುವ 10 ಹಾಸಿಗೆಯ ಆಸ್ಪತ್ರೆಗಳನ್ನು 30 ಹಾಸಿಗೆಯ ಆಸ್ಪತ್ರೆಗಳನ್ನಾಗಿ ಉನ್ನತ್ತೀಕರಿಸಿ, ಸಮುದಾಯ ಆರೋಗ್ಯ ಕೇಂದ್ರಗಳನ್ನಾಗಿ ಅಭಿವೃದ್ಧಿಪಡಿಸಲು ಸರ್ಕಾರ ಕ್ರಮಕೈಗೊಂಡಿದೆ. ಅದರಲ್ಲಿ ಧಾರವಾಡ ಜಿಲ್ಲೆಯ ಅಳ್ನಾವರ ಮತ್ತು ಅಣ್ಣಿಗೇರಿ ಆಸ್ಪತ್ರೆಗಳು ಸೇರಿದ್ದು, ಬರುವ ನವೆಂಬರದಿಂದ ಕಾಮಗಾರಿ ಪ್ರಾರಂಭವಾಗಲಿದೆ ಎಂದು ಸಚಿವರು ತಿಳಿಸಿದರು.
ಆರೋಗ್ಯ ಇಲಾಖೆಯು ಯಾವುದೇ ವ್ಯಕ್ತಿಗಳ ಹಿತಾಸಕ್ತಿ ಕಾಪಾಡಲು ಕೆಲಸ ಮಾಡದೇ, ಸಮುದಾಯದ ಆರೋಗ್ಯಕ್ಕಾಗಿ ಪಾರದರ್ಶಕವಾಗಿ ಕೆಲಸ ಮಾಡುತ್ತಿದೆ. ಪ್ರಥಮ ಬಾರಿಗೆ ಇಲಾಖೆಯಲ್ಲಿ ಐದು ಸಾವಿರಕ್ಕೂ ಹೆಚ್ಚು ವೈದ್ಯ, ಸಿಬ್ಬಂದಿಗಳನ್ನು ಕೌನ್ಸಿಲಿಂಗ್ ಮೂಲಕ ವರ್ಗಾವಣೆ ಮಾಡಲಾಗಿದೆ. ಇದಕ್ಕೆ ಎಲ್ಲರೂ ಸ್ಪಂದಿಸಿ, ಸಾರ್ವಜನಿಕ ಹಿತದೃಷ್ಠಿಯಿಂದ ಉತ್ತಮ ಕರ್ತವ್ಯ ನಿರ್ವಹಿಸಬೇಕೆಂದು ಸೂಚಿಸಿದರು.
ಧಾರವಾಡ ಸಿವಿಲ್ ಆಸ್ಪತ್ರೆಯನ್ನು ಬೇರೆಡೆ ಸ್ಥಾಳಾಂತರಿಸುವ ವಿಚಾರ ಸಧ್ಯಕ್ಕೆ ಇಲ್ಲ. ಈಗಾಗಲೇ ಆಸ್ಪತ್ರೆಯ ಅಗತ್ಯ ಉಪಕರಣ ಮತ್ತು ದುರಸ್ತಿಗಾಗಿ ಅನುದಾನ ನೀಡಲಾಗಿದೆ. ಹೃದಯಾಘಾತದಲ್ಲಿ ಯಾವುದೇ ರೀತಿ ಬದಲಾವಣೆ ಆಗಿರುವುದಿಲ್ಲ. ಮೊದಲು ಹೇಗೆ ಇತ್ತೋ ಹಾಗೆ ಈಗಲೂ ಸಹ ಇದೆ. ಹೃದಯಾಘಾತಕ್ಕೆ ಹಲವಾರು ಕಾರಣಗಳು ಇವೆ. ನಮ್ಮ ಜೀವನ ಶೈಲಿ, ಆಹಾರ ಪದ್ಧತಿ, ಒತ್ತಡದ ಜೀವನ. ಆದ್ದರಿಂದ ಹೆಚ್ಚು ಪರೀಕ್ಷೆಗಳನ್ನು ಮಾಡಿಸಿಕೊಳ್ಳಬೇಕು. 40 ರಿಂದ 50 ವರ್ಷದ ವಯಸ್ಕರು ಕನಿಷ್ಠ ಎರಡು ವರ್ಷಕ್ಕೆ ಒಂದು ಸಾರಿಯಾದರೂ ಇಸಿಜಿ, ರಕ್ತದೊತ್ತಡ ಪರೀಕ್ಷೆ ಮಾಡಿಸಬೇಕು. ಅದರಲ್ಲಿ ಏನಾದರೂ ತೊಂದರೆ ಕಂಡು ಬಂದರೆ, ಸುಲಭವಾಗಿ ಚಿಕಿತ್ಸೆಯನ್ನು ಪಡೆದುಕೊಳ್ಳಬಹುದು. ಈ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕೆಂದು ಅವರು ಹೇಳಿದರು.
ಆರೋಗ್ಯ ಇಲಾಖೆಯಿಂದ ಹೊಸದಾಗಿ ಬಂದ ಯೋಜನೆಗಳನ್ನು ಅನುμÁ್ಠನಗೊಳಿಸಲಾಗಿತ್ತಿದೆ. ಕೆಲವು ಜಿಲ್ಲೆಗಳಿಗೆ ಭೇಟಿ ನೀಡಿ, ಅಲ್ಲಿಯ ಆಗು ಹೋಗುಗಳ ಬಗ್ಗೆ ತಿಳಿದು ಮುಂದಿನ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಿದರು.
ಜೂನ್ ಅಲ್ಲಿ ಬಿಡುಗಡೆಯಾದ ಗೃಹ ಆರೋಗ್ಯ ಎಂಬ ಯೋಜನೆಯು ಪ್ರತಿ ಜಿಲ್ಲೆ ಮತ್ತು ತಾಲೂಕುಗಳಲ್ಲಿ ಚಾಲನೆ ನೀಡಲಾಗಿದೆ. ಇದು ನಮಗೆ ಮಹತ್ವಾಕಾಂಕ್ಷೆಯ ಯೋಚನೆಯಾಗಿತ್ತು. ಅದರ ಮಾಹಿತಿ ತಿಳಿದು ಇನ್ನು ಹೆಚ್ಚಾಗಿ ಬೇರೆ ಸುಧಾರಣೆ ತರಲಾಗುತ್ತದೆ ಎಂದು ಹೇಳಿದರು.
ಈ ವರ್ಷದಲ್ಲಿ ಸುತ್ತೋಲೆಯನ್ನು ಹೊರಡಿಸಿ, ಎಂಬಿಬಿಎಸ್ ವೈದ್ಯರ 2 ಸಾವಿರ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗುತ್ತದೆ. ಮತ್ತು ತಜ್ಞ ವೈದ್ಯರ ಹುದ್ದೆಗಳಿಗೆ ಅರ್ಜಿಗಳನ್ನು ಕರೆಯಲಾಗುತ್ತದೆ ಎಂದು ಅವರು ಹೇಳಿದರು.
ಮುಂದಿನ ತಿಂಗಳು ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.
ವೇದಿಕೆಯಲ್ಲಿ ಕರ್ನಾಟಕ ವೈದ್ಯಕೀಯ ಮಹಾ ವಿದ್ಯಾಲಯ ಮತ್ತು ಸಂಶೋಧನ ಸಂಸ್ಥೆಯ ನಿರ್ದೇಶಕ ಡಾ. ಈಶ್ವರ ಹೊಸಮನಿ, ರಾಷ್ಟ್ರೀಯ ಆರೋಗ್ಯ ಅಭಿಯಾನ ನಿರ್ದೇಶಕ ಡಾ. ಅವಿನಾಶ ಮೆನನ್ ರಾಜೇಂದ್ರನ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನಿರ್ದೇಶಕ ಡಾ. ಕೆ.ವಸಂತಕುಮಾರ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ ಇದ್ದರು.
ಬೆಳಗಾವಿ ವಿಭಾಗೀಯ ಸಹನಿರ್ದೇಶಕರಾದ ಡಾ. ಪುಷ್ಪ ಎಚ್.ಆರ್. ಅವರು ಸ್ವಾಗತಿಸಿ, ಸಭೆ ನಿರ್ವಹಿಸಿದರು. ಡಿಎಚ್ಓ ಡಾ. ಎಸ್.ಎಮ್. ಹೊನಕೇರಿ ವಂದಿಸಿದರು.
ಸಭೆಯಲ್ಲಿ ಬೆಳಗಾವಿ ವಿಭಾಗದ ಎಲ್ಲ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು, ಜಿಲ್ಲಾ ಶಸ್ತ್ರಚಿಕಿತ್ಸಕರು, ಎಲ್ಲ ಕಾರ್ಯಕ್ರಮ ಅನುಷ್ಠಾನ ಅಧಿಕಾರಿಗಳು, ಕೆ.ಎಂ.ಸಿ.ಆರ್.ಐ ತಜ್ಞ ವೈದ್ಯರು ಭಾಗವಹಿಸಿದ್ದರು.