ಬೆಂಗಳೂರು: ಧರ್ಮಸ್ಥಳ ಶ್ರೀಕ್ಷೇತ್ರವನ್ನು ರಾಜ್ಯದ ಬಹುತೇಕ ಮಂದಿ ನಂಬಿ ಪೂಜೆ, ಹರಕೆ ಮಾಡಿಕೊಂಡು ಬಂದಿದ್ದಾರೆ. ಕೆಲವು ವಿಚಾರಗಳು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಮಾಡುತ್ತಲೇ ಬಂದಿದೆ. ಈ ವಿಚಾರದಲ್ಲಿ ಜನರ ಅನುಮಾನಗಳನ್ನು ನಿವಾರಣೆ ಮಾಡುವುದು ಸರ್ಕಾರದ ಕರ್ತವ್ಯ ಎಂಬುದಾಗಿ ಬಮುಲ್ ಅಧ್ಯಕ್ಷ ಹಾಗೂ ಮಾಜಿ ಸಂಸದ ಡಿ.ಕೆ ಸುರೇಶ್ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ರಚಿಸಲಾಗಿದ್ದು, ಕೆಲವರನ್ನು ರಕ್ಷಣೆ ಮಾಡಲು ಧರ್ಮ ಕ್ಷೇತ್ರವನ್ನು ಗುರಿಯಾಗಿಸಲು ಪ್ರಯತ್ನವಿದೆ ಎಂಬ ಚರ್ಚೆ ನಡೆಯುತ್ತಿದೆ ಎಂದು ಕೇಳಿದಾಗ, “ಧರ್ಮಸ್ಥಳ ಶ್ರೀಕ್ಷೇತ್ರವನ್ನು ರಾಜ್ಯದ ಬಹುತೇಕ ಮಂದಿ ನಂಬಿ ಪೂಜೆ, ಹರಕೆ ಮಾಡಿಕೊಂಡು ಬಂದಿದ್ದಾರೆ. ಕೆಲವು ವಿಚಾರಗಳು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಮಾಡುತ್ತಲೇ ಬಂದಿದೆ. ಈ ವಿಚಾರದಲ್ಲಿ ಜನರ ಅನುಮಾನಗಳನ್ನು ನಿವಾರಣೆ ಮಾಡುವುದು ಸರ್ಕಾರದ ಕರ್ತವ್ಯ. ಇದರಿಂದ ಶ್ರೀಕ್ಷೇತ್ರಕ್ಕೂ ಒಳ್ಳೆಯದು ಎಂದರು.
ಕೆಲವರು ಇದನ್ನು ಹಿಂದೂ ವಿರೋಧಿ ನೀತಿ ಎಂಬ ರೀತಿ ಬಿಂಬಿಸುತ್ತಿದ್ದಾರೆ. ಇದು ಹಿಂದೂ ವಿರೋಧಿ ನೀತಿ ಅಲ್ಲ. ಇದು ಹಿಂದೂಗಳ ಪರವಾದ ನೀತಿ. ಹಿಂದೂಗಳಿಗೆ ಅನ್ಯಾಯ ಆಗಿದ್ದರೆ ಅದನ್ನು ಸರಿಪಡಿಸಬೇಕಾಗಿದೆ. ಈ ಜವಾಬ್ದಾರಿ ಮಾತನಾಡುತ್ತಿರುವವರು ಸೇರಿದಂತೆ ಎಲ್ಲರ ಮೇಲಿದೆ. ಇದು ಶ್ರೀಕ್ಷೇತ್ರದ ಪಾವಿತ್ರ್ಯತೆ ನಂಬಿಕೆ ಉಳಿಸಿಕೊಳ್ಳುವ ಕೆಲಸವಾಗಿದೆ. ಇದು ರಾಜಕೀಯ ಕೆಸರೆರೆಚಾಟದಿಂದ ಹೊರಗೆ ಬರಬೇಕು. 40 ವರ್ಷಗಳಿಂದ ಪ್ರತಿ ವರ್ಷ ನಾನು ಶ್ರೀಕ್ಷೇತ್ರಕ್ಕೆ ಹೋಗಿ ಮಂಜುನಾಥನ ದರ್ಶನ ಪಡೆಯುತ್ತೇನೆ. ಇಲ್ಲಿ ನಂಬಿಕೆ ಎಂಬುದು ಬಹಳ ಮುಖ್ಯ ಎಂದರು.
ಇಲ್ಲಿ ಯಾರು ತಪ್ಪು ಮಾಡಿದ್ದಾರೆ, ಯಾರಿಂದ ತಪ್ಪಾಗಿದೆ ಎಂದು ಯಾರಿಗೂ ಗೊತ್ತಿಲ್ಲ. ಶ್ರೀಕ್ಷೇತ್ರದ ಹೆಸರಿನಲ್ಲಿ ಏನಾದರೂ ಅಪಮಾನ ಆಗಿದ್ದರೆ ಇದನ್ನು ಸರಿಪಡಿಸುವ ಜವಾಬ್ದಾರಿ ಇದರ ಉಸ್ತುವಾರಿಗಳ ಮೇಲೆ ಇದೆ. ಇದರಲ್ಲಿ ಯಾರನ್ನೂ ರಕ್ಷಣೆ ಮಾಡುವ ಅಥವಾ ಅಪಮಾನ ಮಾಡುವ ಪ್ರಶ್ನೆಯಲ್ಲ. ಶ್ರೀಕ್ಷೇತ್ರ ಯಾವುದೇ ಒಂದು ಕುಟುಂಬದ ಆಸ್ತಿಯಲ್ಲ. ಇದನ್ನು ಒಂದು ಕುಟುಂಬ ನೋಡಿಕೊಳ್ಳುತ್ತಿದ್ದರೂ ಎಲ್ಲಾ ಭಕ್ತರಿಗೂ ಸೇರಿದ ಸ್ವತ್ತು. ಶ್ರೀ ಮಂಜುನಾಥನಿಗೆ ಅಪಮಾನವಾದರೆ ನಮಗೂ ಅಪಮಾನವಾದಂತೆ” ಎಂದು ತಿಳಿಸಿದರು.
ED ರಾಜಕೀಯ ಅಸ್ತ್ರವಾಗಿ ಬಳಕೆ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ತೀರ್ಪು ಮಹತ್ವದ್ದು: ಬಮುಲ್ ಅಧ್ಯಕ್ಷ ಡಿ.ಕೆ. ಸುರೇಶ್