ಬೀದರ್ : ಮಹರಾಷ್ಟ್ರ ಮೂಲದ ಯುವತಿಯೊಬ್ಬರು ನನ್ನ ಪುತ್ರನ ವಿರುದ್ಧ ಮಹಿಳಾ ಆಯೋಗಕ್ಕೆ ದೂರು ನೀಡಿರುವುದು ವಿರೋಧಿಗಳ ರಾಜಕೀಯ ಷಡ್ಯಂತ್ರವಾಗಿದೆ ಎಂದು ಮಾಜಿ ಸಚಿವರು ಹಾಗೂ ಔರಾದ(ಬಿ) ಶಾಸಕರಾದ ಪ್ರಭು ಬಿ.ಚವ್ಹಾಣ ಅವರು ತಿಳಿಸಿದ್ದಾರೆ
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ನನ್ನ ಮಗನೊಂದಿಗೆ ವರ್ಷದ ಹಿಂದೆ ನಿಶ್ಚಿತಾರ್ಥವಾಗಿರುವುದು ನಿಜ. ನಂತರ ಯುವತಿಯ ಪೋಷಕರು ಮತ್ತು ಸಮಾಜದ ಪಂಚರ ಸಮ್ಮುಖದಲ್ಲಿ ಪರಸ್ಪರ ಒಪ್ಪಿಗೆಯೊಂದಿಗೆ ಸಂಬಂಧ ಮುರಿದು ಬಿದ್ದಿದೆ. ಯಾವ ಕಾರಣಕ್ಕಾಗಿ ಸಂಬಂಧ ಮುರಿದು ಬಿತ್ತು ಎನ್ನುವುದನ್ನು ಯುವತಿಯ ಭವಿಷ್ಯದ ಹಿತದೃಷ್ಟಿಯಿಂದ ಮಾಧ್ಯಮಗಳಲ್ಲಿ ಬಹಿರಂಗ ಪಡಿಸುವುದಿಲ್ಲ. ಕಾರಣಗಳು ಮತ್ತು ಸಾಕ್ಷ್ಯವನ್ನು ಈಗಾಗಲೇ ಯುವತಿಯ ಪಾಲಕರಿಗೆ ಮನವರಿಕೆ ಮಾಡಿಕೊಡಲಾಗಿದೆ ಎಂದಿದ್ದಾರೆ.
ನಾಲ್ಕು ಗೋಡೆಗಳ ಮಧ್ಯ ಬಗೆಹರಿಯುವಂತಹ, ಬಗೆಹರಿಯಬೇಕಿದ್ದ ಕೌಟುಂಬಿಕ ಸಮಸ್ಯೆಯನ್ನು ವ್ಯವಸ್ಥಿತವಾಗಿ ಷಡ್ಯಂತ್ರದ ರೂಪ ನೀಡಿ ಆ ಕುಟುಂಬವನ್ನು ಬಳಕೆ ಮಾಡಿಕೊಂಡು ಸಮಸ್ಯೆ ಸೃಷ್ಟಿಸುತ್ತಿರುವುದು ನಿಜಕ್ಕೂ ದೌರ್ಭಾಗ್ಯದ ಸಂಗತಿ. ಮೂರನೇಯವರು ಈ ಕುಟುಂಬವನ್ನು ಬಳಕೆ ಮಾಡಿಕೊಂಡು ಅವರ ಕುಟುಂಬಕ್ಕೆ ಮಸಿ ಬಳಿಯುವುದರ ಮೂಲಕ ನಮ್ಮ ಕುಟುಂಬದ ಗೌರವಕ್ಕೆ ನನ್ನ ರಾಜಕೀಯ ಜೀವನಕ್ಕೆ ಧಕ್ಕೆ ತರುವ ಹುನ್ನಾರ ನಡೆಸಿದ್ದಾರೆ.
ನನ್ನನ್ನು ತೇಜೋವಧೆ ಮಾಡಬೇಕು ಮತ್ತು ಮಾನಸಿಕವಾಗಿ ಕುಗ್ಗಿಸಬೇಕೆಂಬ ಉದ್ದೇಶದಿಂದ ನನ್ನ ವಿರೋಧಿ ತಂಡವು ಸುಮಾರು 10 ವರ್ಷಗಳಿಂದ ನಿರಂತರ ಪ್ರಯತ್ನಿಸುತ್ತಿದೆ. ಜುಲೈ 6ರಂದು ಕ್ಷೇತ್ರದ ಮಹಾಜನತೆ ನನ್ನ ಹುಟ್ಟುಹಬ್ಬ ಆಚರಣೆ ಕಾರ್ಯಕ್ರಮ ಏರ್ಪಡಿಸಿದ್ದರು. ಇದನ್ನು ಅರಿತ ವಿರೋಧಿಗಳು ಯುವತಿಯ ಮನೆಗೆ ಹೋಗಿ ಅವರೆಲ್ಲ ನನ್ನ ಮನೆಗೆ ಬಂದು ಗಲಾಟೆ ಮಾಡುವಂತೆ ಮತ್ತು ದೂರುಗಳನ್ನು ನೀಡುವಂತೆ ಪ್ರಚೋದನೆ ನೀಡಿದ್ದರು.
ರಾಜಕೀಯ ಏಳಿಗೆ ಸಹಿಸದ ವಿರೋಧಿಗಳು ದುರುದ್ದೇಶದಿಂದ ನನ್ನ ಕೌಟುಂಬಿಕ ವಿಚಾರಗಳನ್ನು ಸಾರ್ವಜನಿಕ ಗೊಳಿಸುವ ಪ್ರಯತ್ನ ಪದೆ ಪದೇ ಮಾಡುತ್ತಿದ್ದಾರೆ. 2023ರ ವಿಧಾನಸಭೆ ಚುನಾವಣೆಯಲ್ಲಿ ನನ್ನನ್ನು ಸೋಲಿಸಲು ಯತ್ನಿಸಿದ್ದರು. ನಿಶ್ಚಿತಾರ್ಥ ಕಾರ್ಯಕ್ರಮವನ್ನು ಅಡ್ಡಿಪಡಿಸಲು ಹರಸಾಹಸ ಮಾಡಿದ್ದರು. ಈಗ ಮಹಿಳಾ ಆಯೋಗಕ್ಕೆ ದೂರು ನೀಡುವ ಮೂಲಕ ಮತ್ತೊಮ್ಮೆ ಕಿರುಕುಳ ನೀಡುವ ಪ್ರಯತ್ನ ಮಾಡಿದ್ದಾರೆ. ನನ್ನನ್ನು ರಾಜಕೀಯವಾಗಿ ಎದುರಿಸಲಾಗದೇ ಈ ರೀತಿಯ ಷಡ್ಯಂತ್ರ ನಡೆಸುತ್ತಿದ್ದಾರೆ ಎಂದಿದ್ದಾರೆ.
ಅದೆಷ್ಟೋ ಹೆಣ್ಣು ಮಕ್ಕಳ ಮದುವೆಯನ್ನು ಮುಂದೆ ನಿಂತು ಮಾಡುವ ನಾನು ಯಾರೊಬ್ಬರ ಕೇಡು ಬಯಸುವುದಿಲ್ಲ. ಈ ಯುವತಿ ಕೂಡ ನನಗೆ ಮಗಳಿದ್ದಂತೆ. ನನ್ನ ಬಗ್ಗೆ ಕ್ಷೇತ್ರ ಮತ್ತು ಜಿಲ್ಲೆಯ ಜನತೆಗೆ ಸರಿಯಾಗಿ ಗೊತ್ತಿದೆ ಎಂದು ಹೇಳಿದ್ದಾರೆ.
ಮಹಿಳಾ ಆಯೋಗದಿಂದ ನೋಟಿಸ್ ಬಂದಲ್ಲಿ ಅದಕ್ಕೆ ಸಾಕ್ಷಿ ಸಮೇತವಾಗಿ ಮಾಹಿತಿಯನ್ನು ಆಯೋಗಕ್ಕೆ ಒದಗಿಸಲಾಗುತ್ತದೆ. ಯುವತಿಯ ಮತ್ತು ಅವರ ಹಿಂದಿರುವ ಕಾಣದ ಕೈಗಳ ಎಲ್ಲ ಆರೋಪಗಳಿಗೂ ಕಾನೂನಾತ್ಮಕವಾಗಿಯೇ ಉತ್ತರ ನೀಡಲಾಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.
ನಾಳೆ ಬೆಂಗಳೂರಿನ ಈ ಏರಿಯಾಗಳಲ್ಲಿ ವಿದ್ಯುತ್ ವ್ಯತ್ಯಯ: ಸಹಕರಿಸುವಂತೆ ಬೆಸ್ಕಾಂ ಮನವಿ | Power Cut
ರಾಜ್ಯದ ಎಲ್ಲ ಶಾಲೆಗಳಲ್ಲಿ ‘ಹಳೇ ವಿದ್ಯಾರ್ಥಿಗಳ ಸಂಘ ಸ್ಥಾಪನೆ’ ಕಡ್ಡಾಯ ಆದೇಶ: ಡಿಸಿಎಂ ಡಿ.ಕೆ. ಶಿವಕುಮಾರ್