ಬೆಂಗಳೂರು : ಸಿಎಂ ಸಿದ್ದರಾಮಯ್ಯ ಅವರು ಬೆಂಗಳೂರಿನಲ್ಲಿ ನಿನ್ನೆ ನಿಧನರಾದ ಬಹುಭಾಷಾ ತಾರೆ, ಹಿರಿಯ ನಟಿ ಬಿ.ಸರೋಜಾದೇವಿ ಅವರ ಪಾರ್ಥಿವ ಶರೀರದ ದರ್ಶನ ಪಡೆದು, ಅಂತಿಮ ನಮನ ಸಲ್ಲಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿ.ಸರೋಜಾದೇವಿ ಒಬ್ಬ ಮೇರು ನಟಿ. ಪಂಚಭಾಷೆ ತಾರೆಯಾಗಿ ಕನ್ನಡ, ತಮಿಳು, ತೆಲುಗು, ಹಿಂದಿ ಭಾಷೆಗಳಲ್ಲಿ ಪಾತ್ರಗಳನ್ನು ಮಾಡಿ ಸೈ ಎನಿಸಿಕೊಂಡಿದ್ದ ಅದ್ಭುತ ನಟಿ. ಅನೇಕ ಬಾರಿ ಸರೋಜಾದೇವಿಯವರನ್ನು ಭೇಟಿ ಮಾಡಿದ್ದೇನೆ. ಎಲ್ಲರೊಂದಿಗೆ ಆತ್ಮೀಯವಾಗಿ, ಪ್ರೀತಿಯಿಂದ ಮಾತನಾಡುತ್ತಿದ್ದರು. ದೊಡ್ಡ ವ್ಯಕ್ತಿತ್ವವಿದ್ದ ನಟಿ ಅವರು. ಅವರ ಸಿನಿಮಾಗಳಲ್ಲಿ ಮಲ್ಲಮ್ಮನ ಪವಾಡ, ಕಿತ್ತೂರು ಚೆನ್ನಮ್ಮ, ಭಾಗ್ಯವಂತರು, ಬಬ್ರುವಾಹನ, ನ್ಯಾಯವೇ ದೇವರು ಸೇರಿದಂತೆ ಅನೇಕ ಚಿತ್ರಗಳನ್ನು ನಾನು ನೋಡಿದ್ದೇನೆ ಎಂದು ಹೇಳಿದ್ದಾರೆ.
ಬಹುಭಾಷಾ ನಟಿ ಬಿ.ಸರೋಜಾದೇವಿ ಅವರ ನಿಧನ ಇಡೀ ಚಿತ್ರರಂಗಕ್ಕೆ ದೊಡ್ಡ ಆಘಾತವನ್ನುಂಟು ಮಾಡಿದೆ. ಚಿಕ್ಕವಯಸ್ಸಿನಲ್ಲಿಯೇ ಸಿನಿಮಾರಂಗವನ್ನು ಪ್ರವೇಶಿಸಿ ಏಳು ದಶಕಗಳ ಕಾಲ ಕಲಾವಿದೆಯಾಗಿದ್ದವರು. ಅಭಿನವ ಸರಸ್ವತಿ ಎಂಬ ಬಿರುದು ಚಿಕ್ಕವಯಸ್ಸಿಗೆ ದೊರೆತಿತ್ತು. ಎಲ್ಲಾ ಭಾಷೆಯ ಹೆಸರಾಂತ ನಟರೊಂದಿಗೆ ನಟಿಸಿದ್ದರು. ದಿಲೀಪ್ ಕುಮಾರ್, ರಾಜೇಂದ್ರ ಕುಮಾರ್, ದೇವ್ ಆನಂದ್, ಎಂ.ಜಿ.ಆರ್, ಎನ್.ಟಿ.ಆರ್, ಶಿವಾಜಿ ಗಣೇಶನ್, ರಾಜ್ ಕುಮಾರ್ ಅವರೊಂದಿಗೂ ಅನೇಕ ಚಿತ್ರಗಳಲ್ಲಿ ನಟಿಸಿದ್ದರು.
ಸರೋಜಾದೇವಿಯವರು ಯಾವುದೇ ಪಾತ್ರಕ್ಕೂ ಜೀವ ತುಂಬುತ್ತಿದ್ದರು. ಖಾಸಗಿ ಜೀವನದಲ್ಲಿಯೂ ಶಿಸ್ತುಬದ್ಧ ಜೀವನವನ್ನು ನಡೆಸಿದವರು. ಕನ್ನಡ ಚಿತ್ರರಂಗ ಬೆಳೆಯಲು ಅಪಾರ ಕೊಡುಗೆಯನ್ನು ಕೊಟ್ಟಿದ್ದಾರೆ. ಅವರ ಸಾವಿನಿಂದ ಚಿತ್ರರಂಗಕ್ಕೆ ಅಪಾರವಾದ ನಷ್ಟವಾಗಿದೆ. ಅವರ ಆತ್ಮಕ್ಕೆ ಚಿರಶಾಂತಿ ದೊರಕಲಿ ಹಾಗೂ ಅವರ ಕುಟುಂಬ ವರ್ಗದವರಿಗೆ ಅವರ ಸಾವಿನಿಂದಾದ ದುಃಖವನ್ನು ಭರಿಸುವ ಶಕ್ತಿ ದೊರೆಯಲಿ ಎಂದು ಪ್ರಾರ್ಥಿಸುತ್ತೇನೆ.
ಮೃತರ ಅಂತ್ಯಸಂಸ್ಕಾರವನ್ನು ಸಕಲ ಸರ್ಕಾರಿ ಗೌರವದೊಂದಿಗೆ ನೆರವೇರಿಸಲಾಗುವುದು. ಅವರ ಹುಟ್ಟೂರಿನಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಸರೋಜಾದೇವಿಯವರ ಹೆಸರನ್ನು ಅವರು ವಾಸಿಸುತ್ತಿದ್ದ ರಸ್ತೆಗೆ ಇಡುವ ಬಗ್ಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಜೊತೆ ಚರ್ಚಿಸುತ್ತೇನೆ.
Bengaluru | Karnataka CM Siddaramaiah says, "I had met her several times in the past. Wherever we met, she always spoke with great affection and warmth. She was an actress with a wonderful personality. May her soul rest in peace. She acted in numerous films. There is a proposal… https://t.co/BARD9NrN7k pic.twitter.com/zBcQOAcOT6
— ANI (@ANI) July 15, 2025